ಸಂನ್ಯಾಸಿ ಗೀತೆ
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ದೂರದಡವಿಯೊಳೆಲ್ಲಿ ಲೌಕಿಕವಿಷಯವಾಸನೆ ಮುಟ್ಟದೊ,
ಎಲ್ಲಿ ಗಿರಿಗುಹೆಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ,
ಎಲ್ಲಿ ಕಾಮವು ಸುಳಿಯದೊ,-ಮೇಣ್
ಎಲ್ಲಿ ಜೀವವು ತಿಳಿಯದೊ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ,
ನನ್ನಿಯರಿವಾನಂದವಾಹಿನಿಯಲ್ಲಿ ಸಂತತ ಹರಿವುದೊ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ-
ಓಂ!ತತ್!ಸತ್!ಓಂ!
‘ಬೆಳೆಯ ಕೊಯ್ವನು ಬಿತ್ತಿದಾತನು; ಪಾಪ ಪಾಪಕೆ ಕಾರಣ;
ವೃಕ್ಷ ಕಾರ್ಯಕೆ ಬೀಜ ಕಾರಣ; ಪುಣ್ಯ ಪುಣ್ಯಕೆ ಕಾರಣ;
ಹುಟ್ಟಿ ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು;
ಕಟ್ಟು ಮೀರಿಹನಾವನಿರುವನು? ಕಟ್ಟು ಕಟ್ಟನೆ ಹೆರುವುದು!”
ಎಂದು ಪಂಡಿತರೆಂಬರು-ಮೇಣ್
ತತ್ತ್ವದರ್ಶಿಗಳೆಂಬರು!
ಆದೊಡೇನಂತಾತ್ಮವೆಂಬುದು ನಾಮರೂಪಾತೀತವು;
ಮುಕ್ತಿ ಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!
ತತ್ತ್ವಮಸಿ ಎಂದರಿತು, ಸಾಧುವೆ ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು ಸಿದ್ಧನೆ, ವಿಶ್ವವರಿಯಲಿ! ಹಾಡು ಸಂನ್ಯಾಸಿ-
ಓಂ!ತತ್!ಸತ್!ಓಂ!
“ಶಾಂತಿ ಸರ್ವರಿಗಿರಲಿ” ಉಲಿಯೈ, “ಜೀವಜಂತುಗಳಾಳಿಗೆ
ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!
ಬಾನೊಳಾಡುವ, ನೆಲದೋಳೋಡುವ ಸರ್ವರಾತ್ಮನು ನಾನಹೆ;
ನಾಕ ನರಕಗಳಾಸೆಭಯಗಳೆನೆಲ್ಲ ಮನಿದಿಂ ದೂಡುವೆ!”
ದೇಹ ಬಾಳಲಿ ಬೀಳಲಿ;- ಅದು
ಕರ್ಮ ನದಿಯಲಿ ತೇಲಲಿ
ಕೆಲರು ಹಾರಗಳಿಂದ ಸಿಂಗರಸಿದನು ಪೂಜಿಸಿ ಬಾಗಲಿ!
ಕೆಲರು ಕಾಲಿಂದೊದೆದು ನೂಕಲಿ! ಹುಡಿಯು ಹುಡೆಯೊಳೆ ಹೋಗಲಿ!
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?
ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?
ಪಾಶಗಳ ಕಡಿ! ಬಿಸುಡು, ಕಿತ್ತಡಿ! ಹಾಡು ಸಂನ್ಯಾಸಿ-
ಓಂ!ತತ್!ಸತ್!ಓಂ!
ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವದೊ,
ಸತ್ಯವೆಂಬುವುದಲ್ಲಿ ಸುಳಿಯದು! ಎಲ್ಲಿ ಕಾಮವು ಇರುವುದೊ,
ಅಲ್ಲಿ ಮುಕ್ತಿಯು ನಾಚಿ ತೋರದು! ಎಲ್ಲಿ ಸುಳಿವುದೊ ಭೋಗವು
ಅಲ್ಲಿ ತೆರೆಯದು ಮಾಯೆ ಬಾಗಿಲನಲ್ಲಿಹುದು ಭವರೋಗವು;
ಎಲ್ಲಿ ನೆಲಸದೊ ಚಾಗವು-ದಿಟ
ವಲ್ಲಿ ಸೇರದು ಯೋಗವು!
ಗಗನವೇ ಮನೆ! ಹಸುರೆ ಹಾಸಿಗೆ! ಮನೆಯು ಸಾಲ್ವುದೆ ಚಾಗಿಗೆ?
ಹಸಿಯೊ, ಬಿಸಿಯೊ? ಬಿದಿಯು ಕೊಟ್ಟಾಹಾರವನ್ನವು ಯೋಗಿಗೆ
ಏನು ತಿಂದರೆ, ಏನು ಕುಡಿದರೆ ಏನು? ಆತ್ಮಗೆ ಕೊರತೆಯೆ?
ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ ಕೊರತೆಯೆ?
ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸಂನ್ಯಾಸಿ-
ಓಂ!ತತ್!ಸತ್!ಓಂ!
ನಿಜವನರಿತವರೆಲ್ಲೊ ಕೆಲವರು; ನಗುವರುಳಿದವರೆಲ್ಲರೂ
ನಿನ್ನ ಕಂಡರೆ ಹೇ ಮಹಾತ್ಮನೆ! ಕುರುಡರೇನನು ಬಲ್ಲರು?
ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ
ಸೊಗವ ಬಯಸದೆ, ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ
ನಿನ್ನ ಬೆಳಕನು ನೀಡೆಲೈ;-ಸಂ
ಸಾರ ಮಾಯೆಯ ದೂಡೆಲೈ
ಇಂತು ದಿನದಿನ ಕರ್ಮ ಶಕ್ತಿಯು ಮುಗಿವವರೆಗೂ ಸಾಗೆಲೈ!
ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ತತ್ತ್ವಮಸಿ ಎಂದರಿತು ಹಾಡೈ, ಧೀರ ಸಂನ್ಯಾಸಿ-
ಓಂ!ತತ್!ಸತ್!ಓಂ!
(ಅಗ್ನಿಹಂಸ ಕವನ ಸಂಕಲನದಿಂದ)
(ಸ್ವಾಮಿ ವಿವೇಕಾನಂದರಿಂದ ಭಾಷಾಂತರಿಸಿದ್ದು)
ಈ ಗೀತೆಯ ಯೂಟ್ಯೂಬ್ ಲಿಂಕ್ ಇಲ್ಲಿದೆ ;-
ಸಂನ್ಯಾಸಿ ಹೇಗ್ ಬರಿಯೋದಂತ ನಿಮ್ಮಿಂದ್ಲೆ ಕಲ್ತಿದ್ದು. ಹೆಚ್ಚಿನವ್ರು ಸನ್ಯಾಸಿ ಅಂತ ಬರಿತಾರೆ, ನಾನು ಕೂಡ.
ಶಾಂತಲಾ, ನಾನೂ `ಸನ್ಯಾಸಿ’ ಎಂದೇ ಬರೆಯೋದು 🙂
ಕುವೆಂಪು ಅವರ ಈ ಕವನದ ಹೆಸರೇ ‘ ಸಂನ್ಯಾಸಿ ಗೀತೆ’ ಎಂದಿದೆ!
ಹಿಂದಿನ ಕನ್ನಡ (ಕಂನಡ)ದಲ್ಲಿ ಹೀಗೆ ಅನುಸ್ವಾರ ಸಹಿತ ಬರೆಯುತ್ತಿದ್ದರಂತೆ, ನನ್ನ ಹಿರಿ ಸೋದರ ಮಾವ, ಕನ್ನಡ ಪಂಡಿತರಾಗಿ ಹೈಸ್ಕೂಲ್ ಮೇಷ್ಟ್ರಾಗಿದ್ದವರು ಹೇಳ್ತಿದ್ದರು. ಹೊಸಗನ್ನಡದಲ್ಲಿ ಕೆಲವಷ್ಟು ಅನುಸ್ವಾರಗಳನ್ನು ವಿಸರ್ಗ (ಃ)ಗಳನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಬಹುಶಃ ಮಹಾಪ್ರಾಣಗಳ ಪ್ರಾಣಕ್ಕೆ ಸಂಚಕಾರವೇನೋ! ಕಾದುನೋಡಬೇಕು.
ಆಹಾ.. ಓಳ್ಳೇ ಕವನವನ್ನು ಹಾಕಿದ್ದೀರಿ ತ್ರಿವೇಣಕ್ಕ.. ಧನ್ಯವಾದ.
@ Ishwra Bhat , ನನಗೂ ತುಂಬಾ ಇಷ್ಟ ಇದು! 🙂
https://youtu.be/Ne_I8s1O-N0
A simple rendition of ಸಂನ್ಯಾಸಿಗೀತೆ