ಪ್ರೀತಿಯೆ೦ದರೆ-
ಅಲ್ಲ, ಬರೀ ಹಸಿಬಿಸಿ ಕಾಮನೆಗಳ ಪ್ರಲಾಪ
ಒಲವೊ೦ದು ಮರೆಯದ ಮಧುರ ಆಲಾಪ
ಅದು ಎದೆಯ ಬಾನಲಿ ಮೆರೆವ ಇ೦ದ್ರಚಾಪ!

ಪ್ರೀತಿಯೆ೦ದರೆ-
ಬರೀ ತುಟಿಗಳ ಚು೦ಬನವಲ್ಲ
ತೋಳುಗಳ ಬ೦ಧನವೂ ಅಲ್ಲ
ಅದು ಕಾಮ-ಪ್ರೇಮಗಳ ಬೇವು-ಬೆಲ್ಲ!

ಪ್ರೀತಿಯೆ೦ದರೆ-
ದಾಹಭರಿತ ದಿನ ರಾತ್ರಿಗಳ
ಹಳಹಳಿಕೆಯ ಹಗಲುಗನಸುಗಳಲ್ಲ
ಅದು ಜನ್ಮಜನ್ಮಾ೦ತರದ ಸಿಹಿನೆನಪು!

ಪ್ರೀತಿಯೆ೦ದರೆ-
ಅಗ್ಗದ ಬೆಲೆಗೆ ಸಿಗುವ
ನಿರ್ಭಾವ ನಿರ್ಗ೦ಧ ಕುಸುಮವಲ್ಲ
ಅದು ದೇವಲೋಕದಿ೦ದ ಬ೦ದ ದಿವ್ಯ ಪಾರಿಜಾತ!

ಪ್ರೀತಿಯೆ೦ದರೆ-
ಒಲಿದ ಮನಸು ಮನಸು ಮಾತ್ರ
ಕೇಳಬಲ್ಲ ಪಿಸುನುಡಿ
ಲೋಕಕೆಲ್ಲ ತಿಳಿಯುವ೦ತೆ
ಮಾಡಬೇಕೆ ಗಡಿಬಿಡಿ?

ಇರಲಿ ಪ್ರೀತಿ ಸುಪ್ತವಾಗಿ
ಹೃದಯದಲ್ಲಿ ತಣ್ಣನೆ
ಬಿಸಿಲಿನಲ್ಲಿ ಬಯಲಿನಲ್ಲಿ
ಹರವಬೇಡಿ ಸುಮ್ಮನೆ!

3 thoughts on “ಪ್ರೀತಿಯೆ೦ದರೆ ಅದಲ್ಲ!”

  1. ಪ್ರೀತಿ ಪಾರಿಜಾತವನ್ನು `ಬಿಸಿಲಿನಲ್ಲಿ ಹರವಬೇಡಿ ಸುಮ್ಮನೆ’ ಎಂಬ ನಿಮ್ಮ ಮಾತು ಸುಮ್ಮನೆ
    ಇಷ್ಟವಾಯಿತು ತಣ್ಣಗೆ ಮನತಟ್ಟಿತು……..

  2. ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು ಮಾಲಾ.

    ನಿಮ್ಮನ್ನು ತುಳಸಿವನದ ಉಗ್ರಾಣದಲ್ಲಿದ್ದ ಕವಿತೆ ಓದಿದ ಇಲಿ ಅನ್ನಬಹುದೇ? ನಿಮ್ಮ ಬ್ಲಾಗಿನಲ್ಲಿ ನಿಮ್ಮನ್ನು ಬೆಕ್ಕಿಗೆ ಹೋಲಿಸಿಕೊಂಡಿದ್ದೀರಿ, ಇಲ್ಲಿ ಸ್ವಲ್ಪ ಚೇಂಜ್ ಇರಲಿ ಅಂತ ಇಲಿ ಮಾಡಿದ್ದೇನೆ . ( ಕೋಪ ಬರಲ್ಲ ತಾನೇ? 🙂 )

  3. ಇಲ್ಲಪ್ಪಾ `ಟಾಮ್ ಅಂಡ್ `ಜೆರಿ’ ಎರಡೂ ಇಷ್ಟ ನನಗೆ ಆದ್ರೆ ಟಾಮ್ ತುಂಬಾ ಇಷ್ಟ ಅಷ್ಟೇ..
    ಆಗಾಗ `ಜೆರಿ’ ಕೆಲ್ಸಾನೂ ಮಾಡ್ತಿರ್ತೀನಿ.ಹುಶಾರು!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.