ರಚನೆ: ಗೋಪಾಲದಾಸರು
ಏನು ಬೇಡಲಿ ನಿನ್ನ ಬಳಿಗೆ ಬಂದು
ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ||
ಜನನಿಯನು ಕೊಡು ಎಂದು ಜಯವಂತ ಬೇಡುವೆನೆ
ಜನನಿ ಏನಿತ್ತಳಾ ಧ್ರುವರಾಯಗೆ
ಜನಕನ ಕೊಡು ಎಂದು ಜಗದೀಶ ಬೇಡುವೆನೆ
ಜನಕನೇನಿತ್ತನಾ ಪ್ರಹ್ಲಾದಗೆ ||೧||
ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ
ಅನುಜನೇನಿತ್ತನೈ ಆ ವಾಲಿಗೆ
ಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೆ
ಧನವ ಗಳಿಸಿದ ಸುಯೋಧನನೇನಾದನು ||೨||
ಸತಿಯಳ ಕೊಡು ಎಂದು ಮತಿವಂತ ಬೇಡುವೆನೆ
ಸತಿಯಿಂದ ದ್ಯುನಾಮ ವಸು ಏನಾದನಯ್ಯ
ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ
ಸುತರಿಂದ ದೃತರಾಷ್ಟ್ರ ಗತಿಯೆಷ್ಟು ಪಡೆದ ||೩||
ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೆ
ಬಂದುಗಳು ಸಲಹಿದರೆ ಗಜರಾಜನ
ಅಂದಣವ ಕೊಡು ಎಂದು ಅಂದದಲಿ ಬೇಡುವೆನೆ
ಅಂದಣೇರಿದ ನಹುಷನೇನಾದನಯ್ಯ ||೪||
ಬೇಡುವೆನು ನಾ ನಿನ್ನ ಬೇಡತಕ್ಕುದ ದೇವ
ನೀಡೆನೆಂಬುದು ನಿನ್ನ ಮನದೊಳಿತ್ತೆ
ಮೂಡಲಗಿರಿವಾಸ ಗೋಪಾಲವಿಠಲ ಪರರ
ಬೇಡದಂತೆ ಎನ್ನ ಮಾಡೈಯ್ಯ ಹರಿಯೆ ||೫||
************************
ಈ ಹಾಡಿನ ಯೂಟ್ಯೂಬ್ ಲಿಂಕ್ ಇಲ್ಲಿದೆ:-
ಈ ಹಾಡಿನ ಅರ್ಥ, ವಿವರಣೆ ಇಲ್ಲಿದೆ:- http://xa.yimg.com/kq/groups/18148253/1671509139/name/enubedalininnabaligebandu.pdf
ತ್ರಿವೇಣಿ ಅಕ್ಕಾ.ಒಳ್ಳೆಯ ಹಾಡು ನೆನಪಿಸಿದ್ದೀರಿ. ದ್ಯುನಾಮಕವಸು ಎಂದರೆ ಗೊತ್ತಾಗಿಲ್ಲ.
@ಈಶ್ವರ ಕಿರಣ, ದ್ಯುನಾಮಕ ವಸು ಎಂದರೆ, ದ್ಯು ಎನ್ನುವ ಒಬ್ಬ ವಸುವಿನ ಹೆಸರು. ಅವನಿಗೆ ಸತಿಯಿಂದ ಒದಗಿದ ಸಂಕಟವೇನು? ತಿಳಿಯಲು ಮೇಲೆ ಕೊಟ್ಟಿರುವ PDF linkನಲ್ಲಿ ವಿವರವಿದೆ.