ಚಿತ್ರ – ಶಾಪ – ೨೦೦೧
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಹೇಮಂತ್
ಲೇ ಲೇ ಮರುಳಾ….ಮರುಳಾ….
ಮರುಳಾದೀಯೋ ಮರುಳಾ
ನಿಂತಲ್ಲೇ ನೀನು ನಿಲುವೆ
ನೀನಿನ್ನೆಲ್ಲೋ ಗೆಲುವೆ?
ಹುಟ್ಟುಗುರುಡ ಹುಟ್ಟುಗುರುಡ
ಬಣ್ಣ ಕಾಣನು
ಹೆಣ್ಣ ಕಣ್ಣ ಕಾಣನು ||ಪ||
ನಿನ್ನ ಹೊಟ್ಟೆಗೆ ಹಿಟ್ಟಿಲ್ಲ
ಇನ್ನು ಜುಟ್ಟಿಗೆ ಮಲ್ಲಿಗೆ ಯಾಕೋ?
ಕಾಲಿಗೆಟುಕದ ಚಿಂದಿ ಚಾಪೆ
ಅಲ್ಲಿ ತಿರುಕನ ಕನಸುಗಳ್ಯಾಕೋ?
ಗಾಳಿಯಲೇ ಹಾರುತಿರುವೆ
ನೀನಿಲ್ಲೆನ್ನೋ ನಡೆವೆ?
ಹುಟ್ಟು ತಿರುಕ ಹುಟ್ಟು ತಿರುಕ
ಬೆವರ ಬಸಿಯನು
ಬೇರೆ ಹೆಸರು ಗಳಿಸನು ||೧||
ನಿನ್ನ ನೆನಪೇ ನಿನಗುರುಳೋ
ನಿನ್ನ ಕನಸ ಕದಿಯೋ ಶಾಪ!
ನಾನು ಇರುವೆ ನಿನ್ನೊಳಗೇ
ನಿನ್ನ ನುಂಗೋ ಭಯದ ಭೂತ!
ನಿನ್ನವರನೇ ನೀನು ತಿನುವೆ
ನೀನಿನ್ನೇನೋ ಬಿಡುವೆ?
ಹುಟ್ಟು ಪಾಪಿ ಹುಟ್ಟು ಪಾಪಿ
ತಾನೂ ಬಾಳನು
ಯಾರ ಬಾಳ ಬಿಡನು ||೨||
***
ಹಂಸಲೇಖ ಕುರಿತ ಚರ್ಚೆಯನ್ನು ಈ ಪುಟದಲ್ಲಿ ಮುಂದುವರೆಸಬಹುದು 🙂
sritri ಅವರೇ,
ಸಿನಿಮಾ ಹಾಡುಗಳನ್ನು ಕೇಳುವಾಗ ಭಾವಗೀತೆಗಳಿಗಿರುವಷ್ಟು ವಿಸ್ತಾರ ಅವುಗಳಿಗಿರೋದಿಲ್ಲ, ಸಿನಿಮಾ ಹಾಡುಗಳು ಚಿತ್ರಕಥೆಯ ಸನ್ನಿವೇಶಕ್ಕೆ ತಕ್ಕಂತೆ ನಿರ್ಮಿತವಾದದ್ದು ಎಂಬುದನ್ನು ಮನದಲ್ಲಿಟ್ಟುಕೊಂಡು ಯೋಚಿಸಿದಾಗ ನಾವು ಸಿನಿಮಾ ನೋಡದೇ ಬರೀ ಹಾಡುಗಳನ್ನು ಕೇಳಿದರೆ ನಮಗೆ ಪದಗಳ, ಸಾಲುಗಳ ಹಿನ್ನೆಲೆ ಪೂರ್ತಿ ತಿಳಿಯದಿರುವ ಸಾಧ್ಯತೆ ಹೆಚ್ಚು. ನೀವು ಒದಗಿಸುತ್ತಿರುವ ಸಾಹಿತ್ಯವನ್ನು ನಾನು ಒಂದು ‘ಕವನ’ ಅಥವಾ ‘ಭಾವಗೀತೆ’ಯಂತೆ ಓದಿಕೊಳ್ಳುತ್ತೇನೆ, ಕೆಲವೊಮ್ಮೆ ಸಿನಿಮಾ ನೋಡಿದ್ದರೆ ಆಗ ಹೆಚ್ಚು ಅರ್ಥವಾಗುತ್ತದೆ, ಇಲ್ಲವೆಂದರೆ ಇಲ್ಲ.
ಉದಾಹರಣೆಗೆ:
೧) ‘ಒಂದಾಗೋಣ ಬಾ’ ಪದ್ಯದಲ್ಲಿ ‘ಪೈರಿಗೂ ಪೈರಿಗೂ ದ್ವೇಷವೇ, ಕಾಳಿಗೂ ಕಾಳಿಗೂ ಕದನವೇ’ ಎಂಬ ಸಾಲುಗಳು ನನಗೆ ಯಾವ ರೀತಿಯ ಅರ್ಥವನ್ನೂ ಕೊಟ್ಟಿಲ್ಲ (ಬೆಳೆದ ಪೈರು, ಕಾಳುಗಳಲ್ಲಿ ದ್ವೇಷ, ಹೊಡೆದಾಟ ಏಕೆ ಎಂಬ ಅರ್ಥದಲ್ಲೋ ಏನೋ?)
೨) ‘ನೆನಪಿರಲಿ’ ಸಿನಿಮಾದಲ್ಲಿ ನಾಯಕ ತಾನೇ ಲವ್ ಮಾಡಬೇಕೆಂದು ಪರದಾಡುತ್ತಿದ್ದು, ಹಳೆ ಸಿನಿಮಾ ನೋಡಿ, ಪುಸ್ತಕಗಳನ್ನು ಓದಿ ಸ್ಪೂರ್ತಿಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಹಂಸ್ ‘ಬನ್ರೀ, ನೋಡ್ರೀ, ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ…’ ಎಂದು ಅದೇ ನಾಯಕನಿಂದ ಹೇಗೆ ಹಾಡಿಸುತ್ತಾರೆ?
ಇನ್ನು ಅಸಹ್ಯವೆಂದದ್ದು ಹಂಸ್‌ರ ಕೆಲವು ಹಾಡುಗಳನ್ನು ಕುರಿತು, ಅಲ್ಲಿಯ ಪದಗಳು, ಸಾಲುಗಳು ಎಲ್ಲವೂ ಕೃತಕ ಎನ್ನಿಸಿದ್ದರಿಂದ. ಆ ಹಾಡುಗಳಲ್ಲಿ ಕೆಲವನ್ನು ನಿಮಗೆ ಪುರುಸೊತ್ತಾದಾಗ ಕಳಿಸುತ್ತೇನೆ.
ಸಾರಥಿಯವರೇ,
ಹಂಸ್‌ರಿಂದ ಒಳ್ಳೆಯ ‘ಕವನ’ಗಳನ್ನು ನಿರೀಕ್ಷಿಸುವುದು ನನ್ನ ತಪ್ಪು ಅಥವಾ ಮಿತಿಯಾಗಬಹುದು. ಗುಣಮಟ್ಟ ನೀವು ಹೇಳಿದಂತೆ ಕೇಳುಗರ ಮೇಲೆ ಅವಲಂಭಿಸುತ್ತದೆ – ಅದನ್ನು ‘ದೃಷ್ಟಿ’ಕೋನ ಅಥವಾ ‘ಶ್ರವ್ಯ’ಕೋನವೆಂದು ಕರೆಯುವುದನ್ನು ಜೋಶಿಗೋ ಅನ್ವೇಷಿಗೋ ಬಿಟ್ಟರೇ ಒಳ್ಳೆಯದು. ನಾನು ಭಾರತದಿಂದ ತಂದಿದ್ದ ಶಬ್ಧ ಭಂಡಾರವನ್ನು ಒರಲೆ ತಿಂದು ಹಾಕಿದೆ!
ಹೌದು. ಸಿನಿಮಾ ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ರಚನೆಯಾಗಿರುತ್ತದೆ. ಅದೇ ಮಾತು ಈಗ ನಾನು ಬರೆದಿರುವ “ಮರುಳಾ..” ಹಾಡಿಗೂ ಅನ್ವಯವಾಗುತ್ತದೆ. ಸಿನಿಮಾದಲ್ಲಿರುವ “ಶಾಪಗ್ರಸ್ತ ” ಪಾತ್ರದ ತಲ್ಲಣ ಅರಿವಾಗದೆ, ಹಾಡಿನ ಭಾವ ಮನಸ್ಸಿನ ಒಳಹೋಗದು.
ಕೆಲವೊಂದು ಭಾವಗೀತೆಗಳೂ ಕೂಡ ಚಿತ್ರದಲ್ಲಿ ಬಳಕೆಯಾದಾಗ , ಅದರ ವ್ಯಾಪ್ತಿ ಸೀಮಿತವಾದಂತೆ ನನಗನ್ನಿಸುತ್ತದೆ. ಉದಾಹರಣೆಗೆ – “ನೀ ಹೀಂಗ ನೋಡಬ್ಯಾಡ ನನ್ನ..” ಈ ಹಾಡನ್ನು ಕಾಲೇಜಿನ ಸಮಾರಂಭದಲ್ಲಿ ನಾಯಕ (ಯಾರೋ ಗೊತ್ತಿಲ್ಲ) ಹಾಡುತ್ತಿದ್ದರೆ, ಬೇಂದ್ರೆಯವರ ಈ ಕವನದ ಅಗಾಧತೆಯನ್ನು ಕಲ್ಪಿಸಿಕೊಳ್ಳುವುದಂತೂ ಸಾಧ್ಯವೇ ಇಲ್ಲ.
‘ನೆನಪಿರಲಿ’ ನೋಡಿಲ್ಲ – “ಬರ್ರಿ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ..”ಅಂತ ನಾಯಕನಿಂದ ಯಾಕೆ /ಹೇಗೆ ಹಾಡಿಸಿದ್ದಾರೋ ಗೊತ್ತಿಲ್ಲ. ಆದರೆ ಫುಲ್ ಜೋಶ್‍ನಲ್ಲಿ, ಎಸ್.ಪಿ.ಬಿ ಈ ಹಾಡನ್ನು ಹಾಡಿರುವ ಸ್ಟೈಲ್‍ನಂತೂ ಲವ್ ಮಾಡದೇ ಇರೋದು ಸಾಧ್ಯವಾಗಲಿಲ್ಲ 🙂
ಅಂತರಂಗಿ: ರಸಿಕತೆಯಿಂದ ಕೂಡಿದ ಆ ಕೆಲವು ಹಾಡುಗಳು ನಿಮಗೆ ಅಸಹ್ಯ ಎನಿಸಿರಬಹುದು. ಆದರೆ ಚಲನಚಿತ್ರ ಮಾಧ್ಯಮ ಕಾಲಕಾಲಕ್ಕೆ ಬದಲಾಗುತ್ತಿರಲೇಬೇಕು, ಹಾಗು ಚಿತ್ರಸಂಗೀತ ಎಲ್ಲರನ್ನೂ ಮುಟ್ಟಬೇಕು ಕೂಡ, ಕೇವಲ ಕಾವ್ಯಾಸಕ್ತರನ್ನು ಮಾತ್ರವಲ್ಲ. ನಿಮಗೆ ಅಸಹ್ಯ ಮೂಡಿಸುವಷ್ಟು ಗೀತೆಗಳನ್ನು ಹಂಸಲೇಖ ರಚಿಸಿದ್ದಾರೆಯೇ ? ಆದರೆ ಅವರನ್ನು ಆರಾಧಿಸುವ ಮಟ್ಟಕ್ಕೆ ಅಸಂಖ್ಯಾತ ಗೀತೆಗಳನ್ನು ಸಹ ರಚಿಸಿದ್ದಾರೆ. ಅಷ್ಟಿಲ್ಲದೆ ಅವರನ್ನು ನನ್ನಂತವರು “God of Kannada Film Music” ಎಂದು ಕರೀತೇವೆಯೇ 🙂 ? (ಬಹು ಮಂದಿ ಇದ್ದಾರೆ, ಒಮ್ಮೆ Project Hamsalekha @ KA Forum ಕಡೆ ಕಣ್ಣು ಹಾಯಿಸಿ)
“ಬಂದೆ, ಹೋದೆ, ಎದ್ದೆ, ಕೋರಿದೆ, ತಂದಿದೆ, ಬಂದೈತೆ, ಹೋಗೈತೆ” ಈ ಪದಗಳ ಸುತ್ತ ಗಿರಕಿ ಹೊಡೀತಿದ್ದ ಕನ್ನಡ ಚಿತ್ರ ಸಾಹಿತ್ಯಕ್ಕೆ ಚೈತನ್ಯ ತುಂಬಿಸಿದವರು ಹಂಸಲೇಖ. ಅವರ ಅತ್ಯಂತ ಉತ್ತಮ ಸಾಲುಗಳ ಬಗ್ಗೆ ಪುಟಗಟ್ಟಲೇ ಚರ್ಚೆಯಾಗಿದೆ, ಚರ್ಚೆ ಮಾಡಲೂಬಹುದು. Well, ಇದು ಹಂಸಾಭಿಮಾನಿಗಳ ಶ್ರವ್ಯಕೋನವೆಂದೇ ಅಂದುಕೊಳ್ಳಿ. ಆದರೆ ಅವರೇ Majorityಯಲ್ಲಿರುವುದು 🙂