ನಾನು ನಮ್ಮ ತಂದೆಯನ್ನು ‘ಅಣ್ಣ’ ಎನ್ನುತ್ತಿದ್ದೆ. ನಾನೇನು, ನಮ್ಮ ಶಾಲೆಯಲ್ಲಿ ಓದುತ್ತಿದ್ದ ಮುಕ್ಕಾಲು ಪಾಲು ಹುಡುಗಿಯರೆಲ್ಲಾ ತಮ್ಮ ತಂದೆಯನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ಒಬ್ಬಿಬ್ಬರು, ‘ಅಪ್ಪಾಜಿ’ ಅನ್ನುತ್ತಿದ್ದರು. ನನ್ನೊಂದಿಗೆ ಓದುತ್ತಿದ್ದ ಕೆಲವು ಮಾರವಾಡಿ ಮನೆಯ ಹುಡುಗಿಯರು ಮಾತ್ರ ‘ದಾದಾಜಿ’, ‘ಬಾಬೂಜಿ’ ಇತ್ಯಾದಿ ನಾವು ಕೇಳೇ ಇಲ್ಲದ ರೀತಿಯಲ್ಲಿ ತಮ್ಮ ತಂದೆಯರನ್ನು ಸಂಬೋಧಿಸುತ್ತಿದ್ದರು. ಇವರೆಲ್ಲರೂ, ವ್ಯಾಪಾರಕ್ಕೆಂದು ಉತ್ತರಭಾರತದ ಯಾವುದೋ ಊರಿನಿಂದ ನಮ್ಮೂರಿಗೆ ಬಂದಿಳಿದವರು. ಇವರನ್ನು ‘ಸೇಟುಗಳು’ ಎನ್ನುತ್ತಿದ್ದರು. ಒಬ್ಬಳಂತೂ, ತನ್ನ ತಂದೆಯ ಮೇಲೆ ಅಕ್ಕರೆ ಉಕ್ಕಿದಾಗ ‘ನೇತಾಜಿ’ ಅನ್ನುತ್ತಿದ್ದಳು. ‘ನೇತಾಜಿ’ ಎಂದರೆ, ಸುಭಾಷ್ ಚಂದ್ರ ಭೋಸ್ ಮಾತ್ರ ಎಂದು ತಿಳಿದಿದ್ದ ನಮಗೆ ಅವಳು ಹೀಗೆ ಕರೆದಾಗೆಲ್ಲಾ ತುಂಬು ನಗು! ಒಬ್ಬಿಬ್ಬರು ತಮ್ಮ ತಾಯಿ-ತಂದೆಯನ್ನು ‘ಅಕ್ಕ-ಬಾವ’ ಎಂದೂ ಕರೆಯುತ್ತಿದ್ದರು. ‘ಡ್ಯಾಡಿ, ಮಮ್ಮಿ’ ಎಂಬ ಪದ ನಮ್ಮ ಸರಹದ್ದಿನಲ್ಲೂ ಸುಳಿದಿರಲಿಲ್ಲ. ಆ ಪದವನ್ನು ನಾವು ಮೊದಲು ಕೇಳಿದ್ದು, ಸಿನಿಮಾದಲ್ಲೇ! ತಂದೆಯ ಅತಿ ಮುದ್ದಿನಿಂದ ಹಾಳಾಗಿ ಹೋಗಿ, ಎಲ್ಲರ ಮೇಲೂ ದರಬಾರು ಮಾಡುವ ಜಂಭದ ಕೋಳಿ, ಸಿರಿವಂತ ಹುಡುಗಿಯರು ಮಾತ್ರ ಹಾಗೆ ಕರೆಯುತ್ತಾರೆಂದು ನಮ್ಮ ಆಗಿನ ತಿಳುವಳಿಕೆ!
ನಮ್ಮೂರು ತಾಲೂಕು ಕೇಂದ್ರವಾದ್ದರಿಂದ, ಸುತ್ತಮುತ್ತಲಿನ ಹಳ್ಳಿಯ ಮಕ್ಕಳೆಲ್ಲಾ ನಮ್ಮ ಶಾಲೆಗೇ ಓದಲು ಬರಬೇಕಿತ್ತು. ಅವರೆಲ್ಲರೂ ತಮ್ಮ ತಂದೆಯನ್ನು, ಬಹಳ ಮುದ್ದಾಗಿ ‘ಅಯ್ಯ’ ಅನ್ನುತ್ತಿದ್ದರು. ‘ನೋಡ್ರೆ, ಇದನ್ನು ಸೋಮವಾರ ಸಂತೆಯಿಂದ ನಮ್ಮಯ್ಯ ತಂದು ಕೊಡ್ತು.’ ಎಂದು ಬಣ್ಣ ಬಣ್ಣದ ಬಳೆ, ಟೇಪು, ಸರಗಳನ್ನು ನಮಗೆಲ್ಲಾ ತೋರಿಸುತ್ತಿದ್ದರು. ‘ಅಯ್ಯ ಬಂತು, ಅಯ್ಯ ಹೋಯ್ತು, ಅಯ್ಯ ಹೇಳ್ತು, ಅಯ್ಯ ಬೈತು’ – ಅವರ ಮಾತಿನಲ್ಲಿ ‘ಅಯ್ಯ’ ಸುಳಿಯುತ್ತಿದ್ದುದೇ ಹೀಗೆ. ಆ ಅಯ್ಯನಿಗೆಂದೂ ಬಹುವಚನ ಪ್ರಯೋಗವಾಗಿದ್ದು ನಾ ಕೇಳೆ! ಕಾಣೆ! ಆ ಅಯ್ಯಂದಿರೋ ಮಹಾ ಸಂಕೋಚದ ಮುದ್ದೆಗಳು. ಎಂದಾದರೂ, ಅಪರೂಪಕ್ಕೆ ತಮ್ಮ ಮಕ್ಕಳನ್ನು, ನೋಡಲು ಶಾಲೆಗೆ ಬಂದಾಗ, ಎಂದೂ ಶಾಲೆಯೊಳಗೆ ಬರುತ್ತಿರಲಿಲ್ಲ. ಶಾಲೆಯ ಗೇಟಿನಿಂದ ನಾವೆಲ್ಲರೂ ಒಳಬಂದೊಡನೆ ಕಾಣುವಂತಿದ್ದ ತೆಂಗಿನ ಮರದಡಿ ಅಡಗಿದಂತೆ ನಿಂತಿರುತ್ತಿದ್ದರು. ನಮ್ಮ ಮುಖ ಕಣ್ಣಿಗೆ ಬಿದ್ದ ಕೂಡಲೇ, ‘ಅವ್ವಾ, ನಮ್ ಕಮಲಿನೂ ನಿಮ್ಮ ಕ್ಲಾಸೇ ಅಲ್ವೇನವಾ? ವಸಿ ಬರಾಕ್ ಹೇಳ್ತ್ಯಾ ಅವಳನ್ನ? ಏನೂ ತಿನ್ದೆ ಬಂದುಬಿಟ್ಟವಳೆ ಇವತ್ತು…’. ಎಂದು ಮೆಲುದನಿಯಲ್ಲಿ ವಿನಂತಿಸುತ್ತಿದ್ದರು. ಬಹುಶಃ ಅವರು, ಉಪವಾಸ ಬಂದಿರುವ ಮಗಳಿಗೆ ಕೊಟ್ಟುಹೋಗಲು ಏನೋ ತಿಂಡಿ-ತಿನಿಸು ತಂದಿರುತ್ತಿದ್ದರು. ನಾವು ಯಾರಾದರೂ ಕಮಲಿಯ ಕಿವಿಯಲ್ಲಿ, ಈ ವಿಷಯ ಅರುಹಿದ ನಂತರ, ಅವಳು ಶಿಕ್ಷರ ಅನುಮತಿ ಪಡೆದು, ಅಯ್ಯನನ್ನು ಭೇಟಿಯಾಗಿ, ಪುಟ್ಟ ಗಂಟು ಹಿಡಿದು ಒಳಬರುತ್ತಿದ್ದಳು.
ನಮ್ಮದಂತೂ, ಮೂವತ್ತಕ್ಕೂ ಹೆಚ್ಚು ಜನರಿದ್ದ ಅವಿಭಕ್ತ ಕುಟುಂಬ. ನನ್ನ ಅಕ್ಕ, ಅಣ್ಣಂದಿರಿಂದ ಹಿಡಿದು, ದೊಡ್ಡಪ್ಪ-ಚಿಕ್ಕಪ್ಪಂದಿರ ಮಕ್ಕಳೆಲ್ಲಾ ಅವರ ತಂದೆಯನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರಿಂದ ನನಗೂ ‘ಅಣ್ಣಾ’ ಎಂಬ ಪದವೇ ಅಭ್ಯಾಸವಾಗಿರಬೇಕು. ಹಾಗಿದ್ದೂ, ನನಗೆ ‘ಅಪ್ಪ’ ಅನ್ನುವ ಪದದ ಮೇಲೆ ಅದೇನೋ ವ್ಯಾಮೋಹ! ಆ ಪದವನ್ನು ಮಮತೆಯಲ್ಲಿ ಅದ್ದಿ ತೆಗೆದಂತಿರುವಂತಹ ಹಿತವಾದ ಭಾವ! ಒಂದು ಸಮಾಧಾನವೆಂದರೆ ನನ್ನನ್ನು, ಅಣ್ಣನನ್ನು ತುಂಬಾ ಹಚ್ಚಿಕೊಂಡಿದ್ದ ನಮ್ಮ ದೊಡ್ಡಪ್ಪನನ್ನು ನಾವು ‘ಅಪ್ಪಾ…’ ಎಂದು ಕರೆಯುತ್ತಿದ್ದೆವು. ನಾವು ದೊಡ್ಡಪ್ಪ ಎಂದರೆ ಅವರು ಇಷ್ತಪಡುತ್ತಿರಲಿಲ್ಲ. ಮದುವೆಯಾದ ಮೇಲೆ, ನನ್ನ ಗಂಡ, ಮೈದುನ ಕೂಡ ನಮ್ಮ ಮಾವನವರನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ನನ್ನ ಮಕ್ಕಳ ಮೇಲೂ ‘ಅಣ್ಣ’ ಪದದ ಪ್ರಭಾವವಾಗುವ ಸಾಧ್ಯತೆ ಹೆಚ್ಚಾಗಿಯೇ ಇತ್ತು. ಮಕ್ಕಳು ಮಾತು ಕಲಿಯಲು ಶುರುಮಾಡಿ, ‘ಅಮ್ಮಾ, ತಾತ, ಅಜ್ಜಿ… ಇತ್ಯಾದಿ ಪದಗಳನ್ನು ಕಲಿತು, ಇನ್ನೇನು ‘ಅಣ್ಣಾ’ ಎನ್ನುವ ಸ್ವರ ಹೊರಡುವ ಮೊದಲೇ, ಅವರ ಪುಟ್ಟ ನಾಲಿಗೆಯಲ್ಲಿ ಒತ್ತಾಯಪೂರ್ವಕವಾಗಿ ನಾನಿಟ್ಟ ಈ ಅಕ್ಕರೆಯ ಪದವೇ… ‘ಅಪ್ಪಾ!’
ನಮ್ಮೆಲ್ಲರನ್ನು ಹೊತ್ತು ಮುನ್ನಡೆಯುತ್ತಿರುವ, ಮುನ್ನಡೆಸುತ್ತಿರುವ ‘ಅಪ್ಪ’ ಎಂಬ ಮಮತೆಯ ಹಡಗಿಗೆ, ಪ್ರೀತಿಯ ಕಡಲಿಗೆ ಒಲುಮೆಪೂರ್ವಕ ಶುಭಾಶಯಗಳು!
ಎಲ್ಲರ ಮನೆಯಲ್ಲಿರುವ, ಅಪ್ಪಂದಿರಿಗೂ ‘ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು!’
ತುಂಬಾ ಹಿಂದೆ ಅಪ್ಪಂದಿರ ದಿನಕ್ಕೆಂದು ಬರೆದಿದ್ದ ಲೇಖನ:-
http://kannada.oneindia.in/column/triveni/2005/220605appa.html
ನಿಮ್ಮ ಲೇಖನ ಓದಿ, ನನ್ನ ಗತಿಸಿದ ಅಪ್ಪನ ನೆನಪಾಯಿತು!
ಸೊಗಸಾದ ಬರಹ! ಅಪ್ಪ ನನಗೂ ತುಂಬ ಇಷ್ಟ. ಹಾಗಾಗಿ ನಿಮ್ಮ ಲೇಖನ ಮನಸಿಗೆ ತುಂಬ ಆಪ್ತವೆನಿಸಿತು. ಇನ್ನಷ್ಟು ಬರೆಯಿರಿ..
ಧನ್ಯವಾದಗಳು ಶುಭಧಾ ಮತ್ತು ಸುನಾಥ ಕಾಕಾ!