ಯಾವುದೋ ಪುಸ್ತಕ ಬೇಕೆಂದು ಹುಡುಕುತ್ತಾ, ಬೇಸ್‌ಮೆಂಟಿನಲ್ಲಿದ್ದ ನನ್ನ ಪುಸ್ತಕ ಸಂಗ್ರಹದ ಮುಂದೆ ನಿಂತಿದ್ದೆ. ಹಿಂದೆಂದೋ ಹುಡುಕಿದಾಗ ತಿಪ್ಪರಲಾಗ ಹೊಡೆದರೂ ಸಿಗದಿದ್ದ ಪುಸ್ತಕಗಳೆಲ್ಲಾ ಈಗ ನಾನು ತಾನೆಂದು ಸಿಕ್ಕವು! ಆದರೆ ನನಗೆ ಆಗ ಬೇಕಾಗಿದ್ದ ಪುಸ್ತಕ ಮಾತ್ರ ಕೊನೆಗೂ ಸಿಗಲಿಲ್ಲ. ಮಹಾಭಾರತದಲ್ಲಿ ಕರ್ಣನಿಗೆ ಸಿಕ್ಕ ಶಾಪವನ್ನು ಸ್ವಲ್ಪ ಆಲ್ಟರ್ ಮಾಡಿ, ನನಗೂ ಯಾರೋ ಅದೇ ಶಾಪ ಕೊಟ್ಟಿರಬಹುದೇ ಅಂದುಕೊಂಡೆ. ಅಂದರೆ, ಬೇಕೆನ್ನಿಸಿದಾಗ ಬೇಕಾದ ಪುಸ್ತಕ ಸಿಗದಿರುವುದು! ಶಾಪ-ಕೋಪದ ಮಾತಿರಲಿ, ಪುಸ್ತಕಗಳನ್ನು ನೀಟಾಗಿ ಜೋಡಿಸಿಡದಿದ್ದರೆ ಏಳೇಳು ಜನುಮಕ್ಕೂ ನನಗೆ ಇದೇ ಗತಿಯೆನ್ನಿಸಿತು.
ಪುಸ್ತಕಗಳಿಗೆಂದು ನಾನು ಮೀಸಲಿಟ್ಟಿದ್ದ ಜಾಗ ಎಂದೋ ಭರ್ತಿಯಾಗಿ ಹೋಗಿದ್ದರಿಂದ, ಅವು ಸುತ್ತಮುತ್ತಲಿದ್ದ ಜಾಗಗಳಲ್ಲೆಲ್ಲಾ ವ್ಯಾಪಿಸಿಕೊಂಡಿದ್ದವು. ದೊಡ್ಡ ಟಿವಿ ಬದಿಯಿದ್ದ ಡಿವಿಡಿ ಸ್ಟಾಂಡಿನಲ್ಲಿ ಕೆಲವು, ನನ್ನವನ ಕಂಪ್ಯೂಟರ್ ಟೇಬಲ್ಲಿನ ಕಾಲಿನ ಕೆಳಗೆ ‘ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ’ ಎಂದು ಆಶ್ರಯ ಪಡೆದಿರುವ ಮತ್ತೆ ಕೆಲವು, ಅಡುಗೆ ಮನೆಯ ಕೌಂಟರ್ ಟಾಪಿನಲ್ಲಿ ಕೆಲವು, ಭಾರತ ಪ್ರವಾಸ ಮುಗಿಸಿಕೊಂಡು ಬಂದು ಬಿಸಾಕಿದ ಖಾಲಿ ಸೂಟುಕೇಸುಗಳಲ್ಲಿ ಹಲವು. ಆ ಸೂಟ್‌ಕೇಸುಗಳನ್ನು ನಾನು ತೆರೆದು ನೋಡುವುದು ಮುಂದಿನ ಟ್ರಿಪ್ಪಿಗೆ ನಾನು ಟಿಕೆಟ್ ಬುಕ್ ಮಾಡಿದ ನಂತರವೇ ಆದ್ದರಿಂದ ಅಲ್ಲಿಯವರೆಗೆ ಅದರಲ್ಲಿರುವ ಪುಸ್ತಕಗಳೆಲ್ಲ ನನ್ನ ಪಾಲಿಗೆ ಇದ್ದೂ ಇಲ್ಲದವು. ಅವರದೇ ಆದ ಹೆಸರಿದ್ದರೂ ನಮಗೆಂದೂ ತಿಳಿದಿರದ ಅನಾಮಿಕರಂತೆ. ಕೆಲವು ಪುಸ್ತಕಗಳನ್ನು ನಾನು ನಮ್ಮ ಕಾರಿನಲ್ಲಿಯೂ ಇರಿಸಿಕೊಂಡಿದ್ದೇನೆ. ಅವು ಎಲ್ಲಿಗಾದರೂ ಲಾಂಗ್ ಡ್ರೈವ್ ಹೋಗುವಾಗ, ಮಾರ್ಗ ಮಧ್ಯೆ ಓದಿ ಮುಗಿಸುವುದೆಂದು ದೂರಾಲೋಚನೆಯಿಂದ ಇಟ್ಟಂಥವು! ಪ್ರಯಾಣದಲ್ಲಿ ಹರಟುತ್ತ, ಹಾಡು ಕೇಳುತ್ತಾ, ಐಫೋನ್, ಐಪ್ಯಾಡುಗಳ ಜಾಲಜಾಲಾಟಗಳಲ್ಲಿ ನನ್ನ ಬಹುಪಾಲು ಸಮಯ ಕಳೆದುಹೋಗುವುದರಿಂದ ಆ ಪುಸ್ತಕಗಳೆಲ್ಲ ರಾಮಪಾದ ಸ್ಪರ್ಶಕ್ಕಾಗಿ ಕಾದಿದ್ದ ಅಹಲ್ಯೆಯಂತೆ ತಮ್ಮ ಶಾಪ ವಿಮೋಚನೆಗಾಗಿ ಇನ್ನೂ ಕಾಯುತ್ತಲೇ ಇವೆ.
ಇದಲ್ಲದೆ, ನನ್ನ ಮಕ್ಕಳು ತಮ್ಮ ಟೆಕ್ಟ್ ಬುಕ್ಕುಗಳ ನಡುವೆ ಅಡಗಿಕೊಂಡಿರುವ ನನ್ನ ಪುಸ್ತಕಗಳನ್ನು ಆಗಾಗ ಪತ್ತೆ ಮಾಡಿ ಕೊಡುವುದುಂಟು. ‘ಅಮ್ಮಾ… ನಿನ್ನ ಪುಸ್ತಕ ಇಲ್ಲಿದೆ ನೋಡು… ‘ಸ…ಮ…ಗ್ರ… ಕಥೆಗಳು – ಎಚ್. ಎಸ್. ವೆಂಕಟೇಶಮೂರ್ತಿ, ಹಸಿರು ಹೊನ್ನು – ಬಿ. ಜಿ. ಎಲ್. ಸ್ವಾಮಿ,.,’ ಎಂದು ಜೋರಾಗಿ ಓದಿ, ನನ್ನಲ್ಲಿ ಇದೆಯೆಂದು ನೆನಪಿನಲ್ಲೇ ಇರದ ಪುಸ್ತಕಗಳನ್ನು ತಂದು ಕಣ್ಣೆದುರು ಹಿಡಿಯುವುದಿದೆ. ‘ಇರವು ಮುಖ್ಯವಲ್ಲ, ಇರವಿನ ಅರಿವು ಮುಖ್ಯ’ ಅನ್ನುವ ಬನ್ನಂಜೆಯವರ ನುಡಿ ಅದೆಷ್ಟು ಸತ್ಯ! ಪುಸ್ತಕಗಳ ಶೀರ್ಷಿಕೆಗಳನ್ನು ಮಾತ್ರ ಓದಬಲ್ಲಷ್ಟು ಕನ್ನಡ ಜ್ಞಾನವಿರುವ ಮಕ್ಕಳು ಹೀಗೆ ಅಕ್ಷರಗಳನ್ನು ಕೂಡಿಸಿಕೊಂಡು ಓದುವಾಗ ಕೇಳಲು ಬಹಳ ಖುಷಿ ನನಗೆ. ಒಮ್ಮೆ, ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ. ಮಗಳು, ‘ಅಮ್ಮಾ… ನೋಡಿಲ್ಲಿ, ‘ನಾಗರ… ಹಾವು…’ ಎಂದು ಜೋರಾಗಿ ಕೂಗಿಕೊಂಡಳು. ಹಾವು ಎಂದರೆ ಹುಲಿಗಿಂತಲೂ ಹೆಚ್ಚು ಹೆದರುವ ನಾನು ‘ಎಲ್ಲಿ… ಎಲ್ಲಿ?…’ ಎಂದು ಕಂಗಾಲಾಗಿ ಓಡಿ ಬಂದರೆ, ಗೆಳೆಯರೊಬ್ಬರ ಮನೆಯಲ್ಲಿ ಅಂದು ಕಾಣಿಸಿದ್ದ ‘ನಾಗರಹಾವು’ ಅಲ್ಲಿತ್ತು!
‘ಇರಲಾರದೆ ಇರುವೆ ಬಿಟ್ಟುಕೊಂಡರು’ ಅನ್ನುತ್ತಾರಲ್ಲ ಹಾಗೆ, ನಮ್ಮೂರಿನಲ್ಲಿದ್ದ ಪುಟ್ಟ ಲೈಬ್ರರಿಯಿಂದ ತಂದು, ಎಂದೋ ಓದಿದ್ದ ತರಾಸು ಅವರ ಈ ಪುಸ್ತಕವನ್ನು ಗೆಳೆಯರೊಬ್ಬರ ಮನೆಯಲ್ಲಿ ಕಂಡೆ. ಅದನ್ನು ನೋಡಿ ಮನಸ್ಸಿನಲ್ಲಿದ್ದ ಹಳೆಯ ಮಧುರ ನೆನಪುಗಳೆಲ್ಲಾ ಮೇಲೆದ್ದುಬಂದು, ಅದನ್ನು ಮತ್ತೆ ಓದಬೇಕೆನ್ನುವ ಆಸೆಯಿಂದ ಅವರಿಂದ ಕಡ ತಂದು ಇಟ್ಟಿದ್ದಷ್ಟೆ. ಆಮೇಲೆ ಅದನ್ನು ಎಲ್ಲಿಟ್ಟಿದ್ದೆನೊ ಏನೋ ಆ ಕ್ಷಣದವರೆಗೂ ಕೈಗೂ ಸಿಕ್ಕಿರಲಿಲ್ಲ, ಓದಿರಲೂ ಇಲ್ಲ. ಗೆಳೆಯರು ಕಂಡಾಗಲೆಲ್ಲ, ಇನ್ನೂ ನಾನು ಆ ಪುಸ್ತಕ ಹಿಂತಿರುಗಿಸಿಲ್ಲವೆಂದು ನೆನಪಿಸುತ್ತಿದ್ದರು. ನನ್ನ ಗ್ರಹಚಾರಕ್ಕೆ, ವರ್ಷಗಳಿಂದ ಮುಟ್ಟಿಯೂ ನೋಡದ ಆ ಪುಸ್ತಕವನ್ನು ಈಗಲೇ ಓದುವ ಬಯಕೆ ಅವರಿಗೂ. ನಾನು ಏನೇನೋ ಸಬೂಬುಗಳನ್ನು ಹೇಳಿಕೊಂಡು ಕಾಲಕಳೆದೆ. ಕೊನೆಗೆ, ‘ಆ ಪುಸ್ತಕ ನಮ್ಮ ಮನೆಯಲ್ಲಿ ಇದ್ದಿದ್ದರೆ ಖಂಡಿತ ನನಗೆ ಕಾಣಿಸಿರುತ್ತಿತ್ತು, ಇಲ್ಲ ಎಂದರೆ, ಅದನ್ನು ನಿಮಗೆ ಎಂದೋ ನಾನು ವಾಪಸ್ ಕೊಟ್ಟಿರಬೇಕು. ನಿಮ್ಮ ಮನೆಯಲ್ಲೇ ಒಮ್ಮೆ ಹುಡುಕಿ ನೋಡಿ.’ ಎಂದು ದಬಾಯಿಸಿದೆ. ಪಾಪ! ಅವರೂ ನನ್ನಂತೆ ಮರೆವಿನ ಆಸಾಮಿಯೇ ಇರಬಹುದು, ‘ಓಹೋ ಹೌದಾ! ಇರಬಹುದು, ಇರಬಹುದು. ನನ್ನ ನೆನಪಿನ ಶಕ್ತಿ ನಿಮ್ಮಷ್ಟು ಚೆನ್ನಾಗಿಲ್ಲ ಬಿಡಿ.’ ಅಂದುಕೊಂಡು ಸುಮ್ಮನಾಗಿಬಿಟ್ಟಿದ್ದರು. ಈಗ ನೋಡಿದರೆ ಅದೇ ‘ನಾಗರಹಾವು’ ಇಲ್ಲಿ, ಪ್ರತ್ಯಕ್ಷವಾಗಿತ್ತು. ಆಮೇಲೆ ಅವರಿಗೆ ಇನ್ನೇನೋ ಸಮಜಾಯಿಷಿ ಕೊಟ್ಟು ಅದನ್ನು ಹಿಂತಿರುಗಿಸಿದ್ದಾಯಿತು.
ಹೀಗೆ, ಅಲ್ಲಷ್ಟು ಇಲ್ಲಷ್ಟು ಎಂದು ಜಾಗ ಸಿಕ್ಕಲ್ಲೆಲ್ಲಾ ನನ್ನ ಪುಸ್ತಕಗಳು ಅಕ್ರಮ ವಲಸೆಗಾರರಂತೆ ಹರಡಿಹೋಗಿಬಿಟ್ಟಿವೆ. ಕರ್ನಾಟಕ ಸರಕಾರದ ‘ಅಕ್ರಮ-ಸಕ್ರಮ’ ಯೋಜನೆಯಂತೆ, ನಾನೂ ಕೂಡ ಏನಾದರೂ ಯೋಜನೆ ಕೈಗೊಂಡು ಇವುಗಳನ್ನು ಒಂದು ಕ್ರಮದಲ್ಲಿರಿಸಲೇ ಎಂದುಕೊಂಡೆ. ಹಾಗಂದುಕೊಳ್ಳುತ್ತಿದಾಗಲೇ, ಅರೆ… ಇಷ್ಟೊಂದು ಪುಸ್ತಕಗಳು ಅದೆಲ್ಲಿಂದ ಬಂದವು? ನಾನು ಯಾವಾಗ, ಹೇಗೆ ತಾನೇ ಇಷ್ಟೊಂದು ಪುಸ್ತಕಗಳನ್ನು ಸಂಗ್ರಹಿಸಿದೆ? ವಿಮರ್ಶಕರ ಮನೆಯಂತೆ ನನ್ನ ಮನೆಯಲ್ಲೇಕೆ ಇಷ್ಟೊಂದು ಪುಸ್ತಕಗಳು ಬಂದು ಬಿದ್ದುಕೊಂಡಿವೆ? ಪತ್ರಿಕಾ ಕಛೇರಿಗಳಲ್ಲಿ, ಸಾದರ ಸ್ವೀಕಾರಕ್ಕೆಂದು ಕಳಿಸಿ ರಾಶಿ ಬಿದ್ದಿರುವ ಪುಸ್ತಕಗಳಂತೆ ನನ್ನ ಮನೆಗೆ ಇಷ್ಟೊಂದು ಪುಸ್ತಕಗಳು ಅದೆಲ್ಲಿಂದ, ಯಾವಾಗ ಬಂದು ದಾಂಗುಡಿಯಿಟ್ಟವು? ಯಾರು ಜೀವವೇ? ಯಾರು ತಂದವರು? ಇವುಗಳನ್ನೆಲ್ಲಾ ಎಂದಿಗಾದರೂ ಓದಿ ಮುಗಿಸಿಯೇನೇ? ಎಂಬೆಲ್ಲಾ ಯೋಚನೆಗಳು ಮುತ್ತಿಕೊಂಡವು.
ಈ ಪುಸ್ತಕ ಸಂತೆಯಲ್ಲಿ ಏನುಂಟು ಏನಿಲ್ಲ? ಗೆಳೆಯರು ತಮ್ಮ ಪುಸ್ತಕ ಪ್ರಕಟಿಸಿದಾಗ, ತಮ್ಮ ಸಹಿಯೊಂದಿಗೆ ಸಂದೇಶ ಬರೆದು ಕಳಿಸಿಕೊಟ್ಟಿರುವ ಪ್ರೀತಿ ತುಂಬಿದ ಪುಸ್ತಕಗಳು, ನಮ್ಮ ಪೆಜತ್ತಾಯರು ನನಗೆಂದೇ ಆರಿಸಿ ಕಳಿಸಿಕೊಟ್ಟಿರುವ ಕೆಲವು ಅಪರೂಪದ ಪುಸ್ತಕಗಳು, ದೇಶಕಾಲದ ಸಂಚಿಕೆಗಳು, ನಾನೇ ಪ್ರತಿಬಾರಿ ಭಾರತಕ್ಕೆ ಹೋದಾಗ, ‘ಅಂಕಿತ’, ‘ಸ್ವಪ್ನ’ದಲ್ಲಿ ಜಾಲಾಡಿ ತಂದೊಟ್ಟಿಕೊಂಡಿರುವ ನನ್ನದೇ ಆಯ್ಕೆ, ಅಭಿರುಚಿಯ ಪುಸ್ತಕಗಳು, ಅಕ್ಕ ಸಮ್ಮೇಳನ, ವಿವಿಧ ಜಾತಿ, ಧರ್ಮಗಳು ನಡೆಸುವ ಸಮ್ಮೇಳನಗಳ ಸ್ಮರಣ ಸಂಚಿಕೆಗಳು. ವಿವಿಧ ಕನ್ನಡಕೂಟಗಳ ಸಂಚಿಕೆಗಳು.., ಇದರ ಜೊತೆಗೆ ನನ್ನದೇ ಸಂಪಾದಕತ್ವದಲ್ಲಿ ಹೊರಬಂದಿರುವ ‘ಸಂಗಮ’ ಸಂಚಿಕೆಗಳ ಬಹುದೊಡ್ಡ ದಾಸ್ತಾನೇ ಇಲ್ಲಿದೆ. ಇದಲ್ಲದೆ, ಈ ಊರು ಬಿಟ್ಟು ಬೇರೆ ರಾಜ್ಯ ಅಥವಾ ದೇಶಕ್ಕೆ ನೆಲೆಸಲು ಹೋಗುವ ನಮ್ಮ ಅನೇಕ ಕನ್ನಡಿಗ ಮಿತ್ರರು, ಮನೆಯ ಎಲ್ಲಾ ಸಾಮಾನುಗಳನ್ನು ಸಾಗಿಸಿ, ಕೊನೆಗೆ ವಿಲೇವಾರಿಯಾಗದೆ ಉಳಿಯುವ ಕನ್ನಡ ಪುಸ್ತಕಗಳನ್ನು ಹೊತ್ತೊಯ್ಯಲು ಸಾಧ್ಯವಾಗದೆ, ಬಿಸಾಡಲೂ ಮನಸ್ಸಾಗದೆ, ಆ ಪುಸ್ತಕಗಳಿಗೆ ನಾನೇ ಯೋಗ್ಯ ವಾರಸುದಾರಳೆಂದು ನಿರ್ಧರಿಸಿ, ಕರೆದು ದಾನವಾಗಿ ಕೊಟ್ಟವೂ ಹಲವಾರಿವೆ. ಇಲ್ಲಿಂದ ರಜೆಗೆಂದು ಭಾರತಕ್ಕೆ ಹೋಗುವ ನನ್ನ ಆತ್ಮೀಯ ಸ್ನೇಹಿತರು ಅಲ್ಲಿಂದ ಬರುವಾಗ, ನನಗೆ ಉಡುಗೊರೆಯಾಗಿ ಪುಸ್ತಕಗಳನ್ನು ತಂದುಕೊಡುವುದಿದೆ. ಭೈರಪ್ಪನವರ ‘ಕವಲು, ಆವರಣ’ ಬಿಡುಗಡೆಯಾದಾಗ, ಅವುಗಳ ಕೆಲವಾರು ಪ್ರತಿಗಳು ಈರೀತಿಯಾಗಿ ನನಗೆ ದೊರಕಿದವು. ಭೈರಪ್ಪನವರ ಈ ಪುಸ್ತಕಗಳು ಬಹು ಮುದ್ರಣ ಕಂಡಿರುವುದರ ಹಿಂದೆ ನನ್ನ ಅಳಿಲು ಸೇವೆಯ ಪಾಲು ಇರುವುದು ಖಂಡಿತ ಅವರಿಗೂ ಗೊತ್ತಿರಲಿಕ್ಕಿಲ್ಲ!
ನನ್ನ ಆಶ್ಚರ್ಯಕ್ಕೆ ಕಾರಣವೂ ಇದೆ. ಹದಿಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದ ಮನೆಯನ್ನು ಅವಸರದಲ್ಲಿ ಖಾಲಿ ಮಾಡಿಕೊಂಡು, ಇಬ್ಬರು ಪುಟ್ಟ ಮಕ್ಕಳೊಂದಿಗೆ ವಿಮಾನ ಹತ್ತಿದವಳು ನಾನು. ಮನೆ ತುಂಬಾ ಹರಡಿಬಿದ್ದಿದ್ದ ನನ್ನೆಲ್ಲಾ ಆಪ್ತ ವಸ್ತುಗಳ ನಡುವೆ ಏನು ಕೊಳ್ಳಲಿ? ಬಿಡಲಿ? ಎಂದು ದಿಗ್ಭ್ರಮೆಯಿಂದ ನಿಂತಿದ್ದು ಈಗಲೂ ನೆನಪಿದೆ. ತೀರಾ ಬೇಕೆನ್ನಿಸಿದ ಪುಸ್ತಕಗಳನ್ನು, ಅದೂ ಎರಡು ಸೂಟ್‌ಕೇಸುಗಳಲ್ಲಿ ಇತರ ಅಗತ್ಯ ವಸ್ತುಗಳ ಜೊತೆಗೆ ಹಿಡಿಯುವಷ್ಟನ್ನು ಮಾತ್ರ ತುಂಬಿಕೊಂಡು ಅಮೆರಿಕದ ನೆಲದ ಮೇಲೆ ಕಾಲಿಟ್ಟಿದ್ದೆ. ನನ್ನಲ್ಲಿದ್ದ ಪುಸ್ತಕಗಳಲ್ಲಿ, ಎಲ್ಲವನ್ನೂ ತರಲು ಸಾಧ್ಯವಿಲ್ಲದ್ದರಿಂದ ಎಲ್ಲವನ್ನೂ ತೆಗೆದುಕೊಂಡುಹೋಗಿ ಅಕ್ಕನ ಮನೆಯ ಕಪಾಟಿನಲ್ಲಿ ನೀಟಾಗಿ ಜೋಡಿಸಿಟ್ಟು, ನಾನು ಬಂದು ಕೇಳುವರೆಗೂ ಜೋಪಾನವಾಗಿಟ್ಟಿರಿ ಎಂದು ಆರ್ತವಾಗಿ ಮೊರೆಯಿಟ್ಟಿದ್ದೆ. ನಾನು ಬಂದು ಅವುಗಳನ್ನು ಮತ್ತೆ ಒಯ್ಯುವ ಭರವಸೆ ಅವರಲ್ಲಿ ಅದೆಷ್ಟಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಅಕ್ಕ-ಬಾವ ನನ್ನನ್ನು ಕರುಣೆಯಿಂದ ನೋಡುತ್ತಾ- ‘ಈ ಪುಸ್ತಕಗಳನ್ನು ನಾವು ಯಾರಾದರೂ ಓದಿದರೆ ತಾನೇ ಹಾಳಾಗಕ್ಕೆ? ನೀನು ಕೊಟ್ಟಿರುವ ಹಾಗೇ ಇರತ್ತೆ ಬಿಡು. ಯೋಚಿಸಬೇಡ.’ ಎಂದು ನುಡಿದಿದ್ದರು. ಅವರ ಕಪಾಟಿನ ತುಂಬಾ ತುಂಬಿದ್ದ ವೇದ-ವೇದಾಂತಕ್ಕೆ ಸಂಬಂಧಿಸಿದ ಘನ ಗಾಂಭೀರ್ಯದ ಪುಸ್ತಕಗಳ ಜೊತೆಗೆ, ನನ್ನಲ್ಲಿದ್ದ ತೀರಾ ಲೌಕಿಕವೆನ್ನಿಸುವ ಪುಸ್ತಕಗಳೂ ಸೇರಿ ಅಲ್ಲೊಂದು ಅಪೂರ್ವ ಸಂಗಮವೇರ್ಪಟ್ಟಿತ್ತು!
ಅಳೆದೂ ಸುರಿದು, ಹೆಚ್ಚು ಭಾರವಾಗದ, ನನಗೆ ಅತಿ ಮಹತ್ವವೆನ್ನಿಸಿದ ಕೆಲವೇ ಪುಸ್ತಕಗಳನ್ನು ಮಾತ್ರ ನನ್ನೊಡನೆ ತಂದಿದ್ದೆ. ಕನ್ನಡದ ಭಗವದ್ಗೀತೆ ಎಂದು ಹೆಸರಾದ ನನ್ನ ಅಚ್ಚುಮೆಚ್ಚಿನ ‘ಮಂಕುತಿಮ್ಮನ ಕಗ್ಗ’, ‘ಇಂಗ್ಲಿಷ್-ಕನ್ನಡ ನಿಘಂಟು’, ‘ಪುರಂದರದಾಸರ ಪದಗಳು’, ‘ಹರಿಕಥಾಮೃತಸಾರ’, ನನ್ನ ಕಥೆ-ಕವನಗಳು ಪ್ರಕಟವಾಗಿದ್ದ ಕೆಲವು ಮಾಸಿಕ, ಪತ್ರಿಕೆಗಳು, ಎಂದಾದರೂ ನನ್ನಲ್ಲಿದ್ದ ಅಗಾಧ ಸೋಮಾರಿತನ ಕಳೆದರೆ ಕಲಿತಿದ್ದ ಹೊಲಿಗೆ ಮುಂದುವರೆಸಲು ಅನುಕೂಲವಾಗಲೆಂಬ ಮುಂದಾಲೋಚನೆಯಿಂದ ‘ಹೊಲಿಗೆ ಪುಸ್ತಕ’, ‘ಹೊಸರುಚಿ’ ಇತ್ಯಾದಿ… ಹೀಗೆ ಆಗ ತೀರಾ ಅಗತ್ಯವೆನ್ನಿಸಿದ್ದ ಕೆಲವೇ ಕೆಲವು… ಖಂಡಿತ, ನನ್ನನ್ನು ನಂಬಿ, ಇಷ್ಟನ್ನೇ ಅಂದು ನಾನು ಹೊತ್ತು ತಂದಿದ್ದು. ಈಗ ನೋಡಿದರೆ, ಆ ಒಂದೊಂದು ಪುಸ್ತಕವೂ ಗರ್ಭ ಧರಿಸಿ ನೂರಾರು ಮರಿಗಳನ್ನಿಟ್ಟಿದೆಯೋ ಎಂಬಂತೆ ನನ್ನ ಪುಸ್ತಕಗಳ ಸಂಗ್ರಹ ಬೃಹತ್ತಾಗಿ ಬೆಳೆದುಬಿಟ್ಟಿದೆ. ‘ಎರಡು ಹೆಜ್ಜೆಯಿಟ್ಟಾಯಿತು, ಇನ್ನು ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಹೇಳು?’ ಎಂದು ಬಲಿಯನ್ನು ಪ್ರಶ್ನಿಸಿದ ವಾಮನನಂತೆ ನನ್ನನ್ನು ಕೇಳುತ್ತಿರುವ ಈ ಪುಸ್ತಕಗಳಿಗೆ ಕೊಡಲು ಉತ್ತರವನ್ನು ನಾನು ಇನ್ನಷ್ಟೇ ಹುಡುಕಬೇಕಾಗಿದೆ.
************
ಚುಕ್ಕುಬುಕ್ಕು ತಾಣದಲ್ಲಿ ಪ್ರಕಟವಾದ ಬರಹ, ಲಿಂಕ್ ಇಲ್ಲಿದೆ:-
*