ಮದುವೆಯಾಗಿ
ಇಪ್ಪತ್ತೈದು ಕಳೆದರೂ
ಆಗೀಗ ಫಂಕ್ಷನ್ನುಗಳಲ್ಲಿ
ಹೊರಗೆ ಬಂದು
ಉಸಿರೆಳೆದುಕೊಳ್ಳುವ
ಅದೇ ಭಾರಿ ದುಬಾರಿ
ಧಾರೆ ಸೀರೆಗಳು,
ಎಂದೋ ಫ್ಯಾಷನ್ ಆಗಿದ್ದು
ಈಗ ಫ್ಯಾಷನ್ ಅಂಗಳದಿಂದ
ಒದ್ದಾಚೆ ಹಾಕಿರುವ
ಅದೇ ಉದ್ದ ತೋಳಿನ
ಅಂಚು ತೊಡಿಸಿದ
ರವಿಕೆಗಳಲ್ಲಿ
ಬಾಬ್ ಅಲ್ಲದ,
ಜಡೆಯೂ ಅಲ್ಲದ
ಕರಿ-ಬಿಳಿ ಕೂದಲಿಗೆ
ಮೆಹಂದಿ ಸೋಕಿದ
ಕೆಂಬಣ್ಣದ ರಂಗು.
ಬಂಗಾರ ಈ ಪಾಟಿ ಏರಿರದ
ಕಾಲದಲ್ಲೆಂದೊ ಕೊಂಡಿಟ್ಟುಕೊಂಡ
ಚಿನ್ನ-ವಜ್ರ-ವೈಢೂರ್ಯಗಳ
ಮಿನುಗು ಮಿಣುಕುಗಳ ನಡುವೆ
ಮಿಂಚು ಕಳಕೊಂಡ
ಮಂಕು ಕಣ್ಣುಗಳು,
ಸತ್ಯನಾರಾಯಣ, ನವಗ್ರಹ,
ಹುಟ್ಟುಹಬ್ಬ, ಸೀಮಂತ, ವಾರ್ಷಿಕೋತ್ಸವ
ಎಲ್ಲದಕ್ಕೂ ಅದೇ ಅದೇ
ಚಪಾತಿ-ಕರ್ರಿ,
ನಾನ್-ಮಟರ್ ಪನೀರ್,
ಚಿಪ್ಸ್-ಸೋಡ-ಸಮೋಸ-ಢೋಕ್ಲಾ
ಫ್ರೈಡ್ ರೈಸ್-ರಾಯಿತ, ಇತ್ಯಾದಿ
ಸಿದ್ಧ ಮೆನುಗಳ ಕೃತಕ ದುನಿಯ,
ಹಾಯ್! ಹೌ ಆರ್ ಯು?
ಐ ಆಮ್ ಫೈನ್!
ಹೌ ವಾಸ್ ಯುವರ್ ಇಂಡಿಯ ಟ್ರಿಪ್?
ಹನಿ ಆತ್ಮೀಯತೆಯಿಲ್ಲದ
ಮಾತುಕಥೆಯ ನಡುವೆ
ಕಿಣಿಕಿಣಿಸುವ
ಚಮಚ-ಮುಳ್ಳುಗಳು
ಬೆಳೆದ ಮಕ್ಕಳಿಗಿನ್ನೂ
ಮದುವೆಯಾಗದ ಕೊರಗು,
ಶುಗರ್, ಬೀಪಿ, ಕೊಲೆಸ್ಟರಾಲ್…
ಮೈತುಂಬ ಅಡರಿಕೊಂಡು
ಕಿರಿಕಿರಿ ಮಾಡುವ
ಇಪ್ಪತ್ತೆಂಟು ರೋಗ
ಅರವತ್ತು ಎಂದೋ ದಾಟಿದ್ದರೂ
ಇನ್ನೂ ಹಗುರವಾಗಿರದ
ಬಾಳ ನೊಗ
ಇವುಗಳ ನಡುವೆ
ಮತ್ತೆ ಮತ್ತೆ ನೆನಪಾಗುವ
ಅಡಿಗರ ಅದೇ ಹಳೆ ರಾಗ
ಯಾವ ಮೋಹನ ಮುರಳಿ ಕರೆಯಿತು?
ದೂರ ತೀರ ನಿನ್ನಕೆ ನಿನ್ನನು?
***
ಅವಧಿಯಲ್ಲಿ ಪ್ರಕಟವಾಗಿರುವ ಕವನ. ಲಿಂಕ್ ಇಲ್ಲಿದೆ:-