ಒಂದಾನೊಂದು ಕಾಲದಲ್ಲಿ, ಅಂದರೆ ತುಂಬಾ ಹಿಂದೇನಲ್ಲ. ಅದು ಬ್ಲಾಗುಗಳ ಬಾಗಿಲು ತೆರೆದುಕೊಳ್ಳುತ್ತಿದ್ದ ಕಾಲ. ಒಂದೊಂದಾಗಿ, ಕನ್ನಡ ಬ್ಲಾಗುಗಳು ಶುರುವಾಗುತ್ತಿದ್ದವು. ದಿನ ಬೆಳಗಾದರೆ, ಚಂದಚಂದದ ಕಾವ್ಯತ್ಮಕ ಹೆಸರಿನೊಂದಿಗೆ ಹೊಸದೊಂದು ಬ್ಲಾಗ್ ವೆಬ್ ಅಂಗಳದಲ್ಲಿ ಅಂಬೆಗಾಲಿಡುತ್ತಾ ಅಡಿಯಿಡುತ್ತಿತ್ತು ಅಕ್ಷರಗಳ ತೋರಣ ಕಟ್ಟಿದ್ದ, ಆ ಸುಂದರ ಮನೆಗಳಿಗೆ ಹೋಗಿಬರುವುದೆಂದರೆ ನನಗಂತೂ ಖುಷಿಯೋ ಖುಷಿ. ಚಂದದ ಸೀರೆಯುಟ್ಟು, ಅಂದವಾಗಿ ಅಲಂಕರಿಸಿಕೊಂಡು, ಮನೆಯಿಂದ ಮನೆಗೆ ಅರಿಶಿನ-ಕುಂಕುಮಕ್ಕೆ ಹೋಗಿಬರುವ ನವರಾತ್ರಿ ಸಂಜೆಯ ಸಂಭ್ರಮ. ಈ ಫೇಸ್ಬುಕ್ಕೆಂಬ ಮಾಯಾವಿ ನಮ್ಮೆಲ್ಲರನ್ನೂ ಆಗ ಇಷ್ಟಾಗಿ ಆವರಿಸಿರಲಿಲ್ಲ. ಹಾಗಾಗಿ, ಪರಸ್ಪರ ಮಾತುಕಥೆಗಿದ್ದ ಅನಿವಾರ್ಯ ಹರಟೆಕಿಟಕಿಗಳಂತಿದ್ದವು ಈ ಬ್ಲಾಗುಗಳು.
ಈ ಬ್ಲಾಗ್ ತಿರುಗಾಟದಲ್ಲಿ ನನ್ನ ನೆನಪಿನ ಸಂಚಿಗೆ ಸೇರಿಹೋದ ಮರೆಯದ ಚಿತ್ರಗಳೆಷ್ಟೋ. ಪರಿಚಿತರಾದ ಹಿರಿಯ/ಕಿರಿಯ ಗೆಳೆಯ-ಗೆಳತಿಯರು ಅದೆಷ್ಟೋ! ಸುಶೃತ, ಶ್ರೀನಿಧಿ, ತೇಜಸ್ವಿನಿ, ಸಿಂಧು, ಜ್ಯೋತಿ, ಮಾಲಾ, ಶಿವು, ಶುಭದಾ, ವೇಣು, ಜಗಲಿ ಭಾಗವತ, ವಿಕ್ರಮ್, ಶಾಂತಲಾ, ಅನ್ವೇಷಿಗಳು, ಚೇತನಾ, ತವಿಶ್ರೀ, ನೀಲಾಂಜನ, ಶ್ರೀಮಾತಾ, ಶ್ರೀದೇವಿ, ಸುರೇಖ, ಸತೀಶ್, ಸುಧನ್ವ, ಸುಶೀಲ್ ಸಂದೀಪ್, ಮಧು… (ಇನ್ನೂ ತುಂಬಾ ಹೆಸರುಗಳಿವೆ…ಈ ಪಟ್ಟಿ ಪರಿಪೂರ್ಣವಲ್ಲವೆಂದು ಗೊತ್ತಿದೆ…) ಒಬ್ಬೊಬ್ಬರ ಬ್ಲಾಗು ಅವರದ್ದೇ ಅರಮನೆ. ಅವರವರ ರುಚಿ-ಅಭಿರುಚಿಗೆ ತಕ್ಕಂತೆ ಬ್ಲಾಗಿನ ಅಲಂಕರಣ. ಒಂದಿದ್ದಂತೆ ಇನ್ನೊಂದಿಲ್ಲ! ಒಂದೊಂದಕ್ಕೂ ಅದರದ್ದೇ ಆದ ಅಂದ-ಚಂದ-ರುಚಿ-ಪರಿಮಳ! ಆ ಬೆರಗಿನ ಲೋಕದಲ್ಲಿ ಏನಿತ್ತು? ಏನಿರಲಿಲ್ಲ?
ಅಲ್ಲೇ ಹೊಸ ಪರಿಚಯಗಳು ಮೊಳಕೆಯೊಡೆಯುತ್ತಿದ್ದವು ; ಸ್ನೇಹಸುಮಗಳು ಅರಳಿ ನಗುತ್ತಿದ್ದವು ; ಮುನಿಸು, ಕಲಹ, ಜಗಳ, ರಗಳೆಗಳಿಗೂ ಅದೇ ವೇದಿಕೆ. ಕೊನೆಗೆ ರಾಜಿ, ಪಂಚಾಯ್ತಿಗಳೂ ಅಲ್ಲೇ ನಡೆಯಬೇಕಿತ್ತು. ನಾವಿನ್ನು ಓದಲು-ಬರೆಯಲು ಮರೆತುಹೋದೆವಾ ಎನ್ನುವ ಕೊರಗನ್ನು ಕೊನೆಯಾಗಿಸುವಂತೆ ಓದಿದಷ್ಟೂ ಮುಗಿಯದ ಬರಹಗಳ ರಾಶಿ ಅಲ್ಲಿತ್ತು. ಅದೊಂದು ಬರಹ ಬೃಂದಾವನವೇ ಸೈ!
ನನ್ನ ತುಳಸಿವನದಲ್ಲಿ ‘ಬೊಗಸೆಯಲ್ಲಿ ಬ್ಲಾಗ್ಸ್’ ವಿಭಾಗದಲ್ಲಿ ಸುಮಾರು ಬ್ಲಾಗುಗಳಿಗೆ ಲಿಂಕ್ ಕೊಟ್ಟಿದ್ದೆ. ಎಷ್ಟೋ ದಿನಗಳ ನಂತರ ನನ್ನ ಬ್ಲಾಗಿನ ಧೂಳು ಕೊಡವಿದಾಗ, ಆ ಲಿಂಕುಗಳನ್ನೆಲ್ಲಾ ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋದೆ. ಕೆಲವು ತೆರೆಯಲೇ ಇಲ್ಲ. ಕೆಲವು ನಿಂತೇ ಹೋಗಿದ್ದವು. ಇನ್ನೂ ಕೆಲವು ಆಗೊಮ್ಮೆ ಈಗೊಮ್ಮೆ ಉಸಿರಾಡುತ್ತಾ ದಿನ ಎಣಿಸುತ್ತಿದ್ದವು. ಓದಿದ ಶಾಲೆಯ ಮುರುಕು ಬೆಂಚಿನ ಮೇಲೆ ಕೂತು ಹಳೆಯ ಗೆಳೆತನವನ್ನು ನೆನೆಯುವಂತೆ, ಎಲ್ಲಾ ಬ್ಲಾಗುಗಳನ್ನು ಒಮ್ಮೆ ಭೇಟಿಯಾಗಿ ‘ಹಾಯ್’ ಹೇಳಿಬಂದೆ. ಈ ಬ್ಗಾಗುಗಳ ಒಡೆಯ/ಒಡತಿಯರು ತಮ್ಮ ಮನೆಗೆ ಮರಳಿಬರಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸಿಬಂದೆ.
ನಮ್ಮನೆ ಬಾಗಿಲ ತನಕ ಬಂದೋಳು ಬಾಗಿಲು ತಟ್ಟಿದೋಳು, ಒಳ ಬಂದೋಳು, ಸದ್ದಿಲ್ಲದೆ ಹಿಂದಿರುಗಿದೋಳು, ನೀನೇನಾ!
ಈಗ ಆಯ್ತು ಆ ಹೆಜ್ಜೆಗುರುತುಗಳ ಪರಿಚಯ!
ಮತ್ತೆ ಬಾ, ಹರಟೆ ಹೊಡೆದು, ಹೇಳಿ ಹೋಗು. ಕಾಯುತ್ತಿರುತ್ತೇನೆ.
<> ನಿಜ, ಫೇಸ್ ಬುಕ್ ನಿಂದಾಗಿ ಬ್ಲಾಗಿಗೆ ಇಣುಕುವವರೇ ಇಲ್ಲವಾಗಿದೆ.. 🙁
” ಓದಿದ ಶಾಲೆಯ ಮುರುಕು ಬೆಂಚಿನ ಮೇಲೆ ಕೂತು ಹಳೆಯ ಗೆಳೆತನವನ್ನು ನೆನೆಯುವಂತೆ, ” ನಿಜ, ಫೇಸ್ ಬುಕ್ ನಿಂದಾಗಿ ಬ್ಲಾಗಿಗೆ ಇಣುಕುವವರೇ ಇಲ್ಲವಾಗಿದೆ.. 🙁
ಹೌದು ಅಕ್ಕಾ. ಈ ಫೇಸ್ಬುಕ್ ಹುಚ್ಚು ಬಿಟ್ಟರೆ ಮತ್ತೆ ಬ್ಲಾಗುಗಳತ್ತ ನಾವು ಮುಖ ಮಾಡಬಹುದೇನೋ. ಅದೂ, ‘ಬಹುದೇನೋ’, ಅಷ್ಟೇ. 🙂
ಹೌದು ಜ್ಯೋತಿ! ನಾನೇ ಬಂದವಳು! ಮತ್ತೆ ಬರುತ್ತೇನೆ! 🙂
ವಿಜಯಶ್ರೀಯವರೆ, ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ಆಗಾಗ ಬಂದು ಓದುತ್ತಿರುತ್ತೇನೆ. ಹೌದು, ಫೇಸ್ಬುಕ್ಕಿನಿಂದ ಬ್ಲಾಗ್ ಬರವಣಿಗೆ, ಓದು ಕಡಿಮೆಯಾಗಿದೆ. ಆದರೆ ಪ್ರಯೋಜನವೂ ಆಗಿದೆ! ನಮ್ಮ ಪರಿಚಯವಾಗಿದ್ದೂ ಅಲ್ಲೇ ಅಲ್ಲವೇ? 🙂
“ಈ ಫೇಸ್ಬುಕ್ ಹುಚ್ಚು ಬಿಟ್ಟರೆ ಮತ್ತೆ ಬ್ಲಾಗುಗಳತ್ತ ನಾವು ಮುಖ ಮಾಡಬಹುದೇನೋ. ಅದೂ, ‘ಬಹುದೇನೋ’, ಅಷ್ಟೇ. :-)”
ಸುಶ್ರುತ, ನಿನ್ನದು ಬಹಳ ಜಾಣತನದ ಉತ್ತರ! ತುಂಬಾ ಜಾಣ ನೀನು! 🙂