ಈ ಪ್ರಪಂಚದಲ್ಲಿ ಯಾರುಯಾರಿಗೋ, ಎಷ್ಟೆಷ್ಟೋ ವಿಧದ ಕಷ್ಟಗಳಿರಬಹುದು. ಇದು ಅಂತಹ ದೊಡ್ಡ ಕಷ್ಟವೇನೂ ಅಲ್ಲ. ಆದರೆ ಕಷ್ಟ ಎಂದು ಹೇಳಲೂ ಆಗದಂತಹ, ಅನುಭವಿಸಲೂ ಆಗದಂತಹ ಬಿಸಿತುಪ್ಪದಂತಹ ಕಷ್ಟ. ಅದು ಕಾಯುವ ಕಷ್ಟ. ಗಡಿಯಾರದ ಮುಳ್ಳುಗಳು ಮುಂದೆ ಸರಿಯುವುದನ್ನೇ ನೋಡುತ್ತಾ, ಕಾಯುವುದು ಮತ್ತು ಸಾಯುವುದು ಎರಡೂ ಒಂದೇ ಎಂಬ ಮಾತು ಅತಿಶಯೋಕ್ತಿ ಅನ್ನಿಸಿದರೂ, ಯಾರನ್ನಾದರೂ, ಯಾವುದಕ್ಕಾದರೂ ಬಹಳ ಹೊತ್ತು ಕಾಯುವಾಗ ಹಾಗನ್ನಿಸುವುದು ಮಾತ್ರ ಪೂರ್ತಿ ಸುಳ್ಳೇನಲ್ಲ!
ಕಾಯುವಿಕೆಯ ಅನುಭವವೇ ನನಗೆ ಈವರೆಗೆ ಆಗಿಲ್ಲ ಎಂದು ಯಾರೊಬ್ಬರೂ ಎದೆತಟ್ಟಿಕೊಂಡು ಹೇಳುವಂತಿಲ್ಲ. ಮನದಾಳದ ಭಾವನೆಗಳನ್ನೆಲ್ಲ ಮೊಗೆದು, ಬರೆದು ಕೊಟ್ಟಿರುವ ಮೊದಲ ಪ್ರೇಮಪತ್ರಕ್ಕೆ ಅವಳಿಂದ ಬರುವ ಪ್ರತ್ಯುತ್ತರಕ್ಕಾಗಿ ಕಾಯುವ ಪ್ರೇಮಿ, ಪರೀಕ್ಷೆ ಮುಗಿದಿದ್ದು ಫಲಿತಾಂಶಕ್ಕಾಗಿ ಎದುರು ನೋಡುವ ವಿದ್ಯಾರ್ಥಿ, ಮಗನಿಂದ ಬರುವ ಮೂರು ಸಾಲಿನ ಪತ್ರಕ್ಕಾಗಿ ಕಾದು ಕೂತಿರುವ ಮುದಿ ತಂದೆ, ನವಮಾಸದಿಂದ ಬಸಿರಲ್ಲಿ ಮಿಸುಕುತ್ತಿರುವ ಹಸುಕಂದನನ್ನು ಕಾಣಲು ಕಾತರಿಸುವ ತಾಯಿ, ತಡವಾದ ವಿಮಾನದಿಂದಾಗಿ ಪರದೇಶದಲ್ಲಿ ಪರಿತಪಿಸುವ ಪ್ರವಾಸಿ, ಮೊದಲ ಬರಹಕ್ಕೆ ಓದುಗನ ಪ್ರತಿಕ್ರಿಯೆಗಾಗಿ ನಿರೀಕ್ಷಿಸುವ ಲೇಖಕ, ವರ್ಷಗಳ ಶ್ರಮ, ಶ್ರದ್ಧೆ, ಕೈಯಲ್ಲಿದ್ದ ಹಣ ಎಲ್ಲವನ್ನೂ ಧಾರೆಯೆರೆದು ಚಿತ್ರವೊಂದನ್ನು ತೆರೆಗಿತ್ತು, ಪ್ರೇಕ್ಷಕ ಪ್ರಭುವಿನ ಕೃಪೆಗಾಗಿ ಕಾಯುವ ನಿರ್ಮಾಪಕ, ಮತದಾನ ಮುಗಿದಿದ್ದು, ಮತ ಎಣಿಕೆಗಾಗಿ ಕ್ಷಣಗಣನೆ ಮಾಡುತ್ತಿರುವ ರಾಜಕಾರಣಿ….ಹೀಗೆ ಯಾವುದೋ ಒಂದು ಸಂದರ್ಭದಲ್ಲಿ ಕಾಯುತ್ತಾ ಕೂತುಕೊಳ್ಳುವ, ಕಾಯುತ್ತಾ ಕಾಯುತ್ತಾ ಕ್ಷಣವೊಂದು ಯುಗವಾಗಿ ಹೋಗುವ ಈ ಅನುಭವವಿಲ್ಲದವರು ಯಾರಾದರೂ ಇದ್ದಾರೆಯೇ?
ಕಾಯಿಸುವುದು ಅಂದರೆ ಬೆಂಕಿಯ ಮುಂದೆ ಯಾವುದಾದರೂ ವಸ್ತುವನ್ನು ಹಿಡಿದು ಬಿಸಿ ಮಾಡುವುದು ಎಂಬುದು ಸಾಮಾನ್ಯ ಅರ್ಥ. ನಿರೀಕ್ಷೆಗೂ ಕೂಡ ಕಾಯುವುದು, ಕಾಯಿಸುವುದು ಎಂಬ ಪದವೇ ಬಳಕೆಯಲ್ಲಿರುವುದು ಆಶ್ಚರ್ಯದ ವಿಚಾರ. ಬಹುಶ: ಯಾರನ್ನಾದರೂ ಕಾಯುವವರು, ಬೆಂಕಿಯ ಮೇಲೆ ನಿಂತಂತೆ ಚಡಪಡಿಸುವುದರಿಂದ ಆ ಪದ ಚಾಲ್ತಿಗೆ ಬಂದಿದ್ದರೂ ಬಂದಿರಬಹುದೇನೊ. ಇದನ್ನು ತಿಳಿದವರೇ ಹೇಳಬೇಕು. ಸಾಮಾನ್ಯವಾಗಿ ಹೆಂಗಸರು ಕಾಯಿಸುತ್ತಾರೆ, ಅದರಲ್ಲೂ ಹೊರಗೆಲ್ಲಾದರೂ ಹೋಗುವಾಗ ತಯಾರಾಗಲೂ ಬಹಳ ಸಮಯ ತೆಗೆದುಕೊಂಡು ಗಂಡಸರ ಸಹನೆಯನ್ನು ಪರೀಕ್ಷಿಸುತ್ತಾರೆ ಎಂಬುದೊಂದು ಬಹಳ ಜನಪ್ರಿಯವಾದ ಆರೋಪ. ಆದರೆ ಈ ಕಾಯಿಸುವಿಕೆಗೆ ಗಂಡು, ಹೆಣ್ಣೆಂಬ ಬೇಧಭಾವವೇನೂ ಇದ್ದ ಹಾಗಿಲ್ಲ. ಈ ಕಾಯಿಸುವುದು, ಸತಾಯಿಸುವುದು ಯಾರಿಗಾದರೂ ಬರಬಹುದಾದ, ಯಾರಲ್ಲೂ ಇರಬಹುದಾದ ಒಂದು ಕಾಯಿಲೆ. ಸಮಾರಂಭಗಳಲ್ಲಿ ಸ್ವಲ್ಪ ತಡ ಮಾಡಿ ಬರುವುದರಿಂದ ಮುಖ್ಯ ಅತಿಥಿಗಳ ಗೌರವ ಹೆಚ್ಚುತ್ತದೆ ಎಂಬ ಭ್ರಮೆ ಹಿಂದಿತ್ತು. ಈಗ ಅಷ್ಟಿಲ್ಲ. ಈಗ ಸಮಯವನ್ನು ಸರಿಯಾಗಿ ಪರಿಪಾಲಿಸದ ಅತಿಥಿ ಬರುವ ಮೊದಲೇ ಕಾರ್ಯಕ್ರಮವನ್ನು ಪ್ರಾರಂಭಿಸಿ, ಮುಖ್ಯ ಅತಿಥಿಯೇ ಮುಖಭಂಗಕ್ಕೊಳಗಾಗಿರುವ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ.
ಇದು ವೇಗದ ಯುಗ. ಕಾಯಲು ಈಗ ಯಾರೊಬ್ಬರೂ ಸಿದ್ಧರಿಲ್ಲ. ಸದಾ ಕಾಲ ಅವಸರ, ಧಾವಂತಗಳ ನಡುವೆ ಮುಗ್ಗರಿಸಿದರೂ ಸರಿಯೇ, ಓಟ ನಿಲ್ಲುವಂತಿಲ್ಲ ಎನ್ನುವ ಕಾಲ ಇದು. ಬಯಸಿದ್ದೆಲ್ಲಾ ಮರುಕ್ಷಣವೇ ಕೈಗೆ ಎಟುಕಿಬಿಡಬೇಕು ಎಂದು ಆತುರಪಡುವ ಈ ಲೋಕದಲ್ಲಿ ತಾಳ್ಮೆ, ಸಹನೆ ಎಂಬ ಸವಕಲು ಪದಗಳಿಗೀಗ ಜಾಗವಿಲ್ಲ. ಇದು ಯಾರೊಬ್ಬರದೂ ತಪ್ಪಲ್ಲ. ಅನುಕ್ಷಣ ಸವಾಲು, ಸ್ಪರ್ಧೆಗಳ ನಡುವೆಯೇ ಬದುಕುವ ನಾವು ಸ್ವಲ್ಪ ಕಾದು ನೋಡೋಣ ಎಂದು ನಿಧಾನಿಸಿದರೂ ಆ ಅವಕಾಶ ಮತ್ತಾರದೋ ಪಾಲಾಗಿ ಹೋಗಿರುತ್ತದೆ. ಹಾಲು ಕಾದಷ್ಟೂ ರುಚಿ ಹೆಚ್ಚು ಎಂದು ಕಾಯುತ್ತಾ ಕುಳಿತರೆ ಕೆನೆಯೂ ಇಲ್ಲ, ಹಾಲೂ ಇಲ್ಲ ಅನ್ನುವಂತಹ ಪರಿಸ್ಥಿತಿ ತಪ್ಪಿದ್ದಲ್ಲ.
ಆದರೆ ಓಟದ, ವೇಗದ ಗುಲಾಮರಾಗಿ ಹೋಗಿರುವ ನಮ್ಮ ಬೆನ್ನ ಹಿಂದೆ, ಹೀಗೆ ಕಾಯುತ್ತಾ, ಕಾಯುತ್ತಾ ಕುಳಿತಲ್ಲೇ ಕಲ್ಲಾಗಿ ಹೋದವರ ದೊಡ್ಡದೊಂದು ಪರಂಪರೆಯೇ ಇದೆ. ಪ್ರಿಯಕರನಿಗಾಗಿ ಜನ್ಮಜನ್ಮಾಂತರಗಳವರೆಗೆ ಕಾದುಕುಳಿತ ಮಹಾಶ್ವೇತೆ, ಲಕ್ಷ್ಮಣನ ಬರವಿಗಾಗಿ ಕಾಯುತ್ತಾ, ಅವನ ಸವಿನೆನಪಿನಲ್ಲಿಯೇ ಅನೇಕ ದಿನರಾತ್ರಿಗಳನ್ನು ಕಳೆದುಬಿಟ್ಟ ಊರ್ಮಿಳೆ, ರಾಮನು ಬರಲಿಲ್ಲ, ಏಕೆ? ಎಂದು ಕಣ್ಣೀರುಗರೆಯುತ್ತಾ ಕಲ್ಲಾಗಿ ಕಾದು ಕುಳಿತ ಅಹಲ್ಯೆ, ಬೃಂದಾವನದ ನಂದನದಲ್ಲಿ ಕೃಷ್ಣನಿಗಾಗಿ ಕಾದ ರಾಧೆ, ತಪಸ್ಸಿಗೆ ಕುಳಿತು ಮೈಮೇಲೆ ಹುತ್ತ ಬೆಳೆದು, ಹಾವುಗಳೇ ಹರಿದಾಡಿದರೂ, ಬಾರದ ದೇವತೆಗಳಿಗಾಗಿ, ಅವರು ದಯಪಾಲಿಸಲಿರುವ ವರಗಳಿಗಾಗಿ ಕಾದುಕುಳಿತ ಋಷಿಮುನಿಗಳು…..ಒಬ್ಬರಿಗಿಂತ ಒಬ್ಬರು ಕಾಯುವುದರಲ್ಲಿ ಬೃಹತ್ ದಾಖಲೆಗಳನ್ನೇ ನಿರ್ಮಿಸಿದವರು!
ಈ ಕಾಯುವಿಕೆಗೂ ನೋಬಲ್ ತರಹದ ಒಂದು ಮಹಾನ್ ಪ್ರಶಸ್ತಿಯೇನಾದರೂ ಇದ್ದಿದ್ದರೆ, ಅದು ಸಿಗುತ್ತಿದ್ದುದು ಬೇರಾರಿಗೂ ಅಲ್ಲ. ಖಂಡಿತವಾಗಿಯೂ ಅದು ಕಾಯುವಿಕೆಯಲ್ಲಿ ಡಾಕ್ಟರೇಟ್ ಪದವಿಗಳಿಸಿಕೊಂಡಿರುವ ನಮ್ಮ ಶಬರಿ ಅಜ್ಜಿಯ ಪಾಲಾಗಿರುತ್ತಿತ್ತು. ಶಬರಿ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಬೂರುಗದ ಹತ್ತಿಯಂತೆ ಬೆಳ್ಳಗಾಗಿರುವ ತಲೆಕೂದಲಿನ, ಸುಕ್ಕು ಬಿದ್ದ ಮೈಯ, ಹಣ್ಣು ಹಣ್ಣು ಮುದುಕಿಯ ಮುಖ. ಬಹುಶ: ರಾಮನನ್ನು ಕಾಯಲು ಕುಳಿತ ಮೊದಲ ದಿನಗಳಲ್ಲಿ ಅವಳು ಹಾಗಿರಲಿಲ್ಲ. ಆಗ ಆಕೆಗಿನ್ನೂ ತುಂಬುಯೌವನವೇ ಇತ್ತೇನೋ. ಬಂದೇ ಬರುತಾನೆ ರಾಮ ಎಂದು ದಿನದಿನವೂ ಕಾದು, ಅವಳ ಕಣ್ಣು ಮಂಜಾಗಿ, ಕಿವಿ ಮಂದವಾಗಿ, ರಾಮ ಅಲ್ಲಿಗೆ ಬರುವ ವೇಳೆಗೆ ಅವಳು ಆ ರೀತಿಯಾದ ಜೀರ್ಣಾವಸ್ಥೆಗೆ ಬಂದು ತಲುಪಿರಬಹುದು.
ಹಾಗೆ ನೋಡಿದರೆ, ಯಾರ ಮಾತನ್ನೂ ಕೇಳದೆ, ರಾಮನ ಹಿಂದೆ ಹಟ ಹಿಡಿದು ಹೋದ ಸೀತೆ ಬಹಳ ಜಾಣೆ. ಒಂದಲ್ಲ, ಎರಡಲ್ಲ ಹದಿನಾಲ್ಕು ವರ್ಷ ರಾಮನಿಲ್ಲದೆ ವಿರಹಪಡುವ, “ನೀನಿಲ್ಲದಿರುವಾಗ ನಲ್ಲ, ಒಬ್ಬಂಟಿ ನಾನು ಮನೆಯಲ್ಲಿ” ಎಂದು ಕಾಯುತ್ತಾ ಕುಳಿತುಕೊಳ್ಳುವ ಅಸಹನೀಯ ವೇದನೆಯ ಅಂದಾಜು ಆಕೆಗೆ ಮೊದಲೇ ಇತ್ತು! ಅರಣ್ಯದಲ್ಲಿ ಹಗಲಿರುಳು ಕಾಡುವ ರಾಕ್ಷಸರು, ಕಷ್ಟ,ನಷ್ಟಗಳ ಬಗೆಗೆ ಅವಳಿಗೆ ತಿಳಿದಿದ್ದರೂ ರಾಮನಂತಹ ಸಹೃದಯಿ,ಸರಸಿಯಾದ ಸ್ನೇಹಿತನೊಡನೆ ವನವಾಸ ಕೂಡ ಹಿತವೇ ಎಂದು ಅವಳಿಗನ್ನಿಸಿರಬಹುದು. ಅರಮನೆಯಲ್ಲಿದ್ದ ಸುಖವೈಭೋಗಗಳು, ಮೃಷ್ಟಾನ್ನ, ತೂಗುಮಂಚ…ಯಾವುದೂ ಅಲ್ಲಿರದಿದ್ದರೂ, ಬಾಳು ಸುಂದರವೆನಿಸುವಂತೆ ಮಾಡಬಲ್ಲ ಒಲಿದ ಜೀವವೊಂದು ಅವಳ ಜೊತೆಯಲ್ಲಿತ್ತಲ್ಲ! ಅದಕ್ಕಿಂತ ಮಿಗಿಲಾದುದು ಇನ್ನೇನಿದೆ?
ರಾಮಾಯಣದ ಊರ್ಮಿಳೆಯ ಮಾತು ಹಾಗಿರಲಿ, ಈಗಲೂ ಕೆಲವು ಊರ್ಮಿಳೆಯರು ಕಾಯುತ್ತಿದ್ದಾರಂತೆ. ಆದರೆ ಅವರ ಲಕ್ಷ್ಮಣರು ರಾಮನೊಡನೆ ವನವಾಸಕ್ಕೆ ಹೋದವರಲ್ಲ, ಸೈನ್ಯದೊಡನೆ ಸಮರಕ್ಕೆಂದು ಹೋಗಿ ಶತೃದೇಶದಲ್ಲಿ ಸೆರೆವಾಸದಲ್ಲಿರುವವರು. ಆ ಯೋಧರ ಪತ್ನಿಯರು, ಹಾಳಾಗಿರುವ ಮನೆಗಳನ್ನು ದುರಸ್ತಿ ಮಾಡಿಸಿದರೆ, ಎಲ್ಲಿ ತಮ್ಮ ಗಂಡಂದಿರಿಗೆ ಮನೆಯ ಗುರುತೇ ಸಿಗದೆ ನಿರಾಶರಾಗಿ ಹಿಂತಿರುಗಿ ಹೋಗಿಬಿಡುತ್ತಾರೋ ಎಂದು ಮುರಿದ ಮನೆ, ಮನಸ್ಸುಗಳೊಡನೆ ಇವತ್ತಿಗೂ ಕಾಯುತ್ತಿದ್ದಾರಂತೆ. ಇದು ಯಾವ ತಪಸ್ಸಿಗೂ ಕಡಿಮೆ ಇಲ್ಲದಂತಹ ಮಹಾನಿರೀಕ್ಷೆ. ಅವರ ತಪಸ್ಸು ಬೇಗ ಕೈಗೂಡಲಿ. ಮನೆಗಳಿಗೆ ಮನೆಯೊಡೆಯರು ಮರಳಿ ಬರಲಿ!
ಕಾಯುವುದು ಕಷ್ಟ. ಅದರಲ್ಲೂ ಕಾಯುವಿಕೊಂದು ಪ್ರತಿಫಲದ ನಿರೀಕ್ಷೆಯೇ ಇಲ್ಲದೆ ಕಾಯುವುದಂತೂ ಇನ್ನೂ ಕಷ್ಟ. ಆ ಪ್ರತಿಫಲ ಬಂದರೂ ಅದು ತೀರಾ ತಡವಾಗಿ ಬಂದರೆ, ಮರಣೋತ್ತರ ಪ್ರಶಸ್ತಿಗಳಂತೆಯೇ ಅದೂ ವ್ಯರ್ಥವೇ. “ಒಣಗಲ್ ಪೈರಿಗೆ ಬಾರದಿರ್ದ ಮಳೆ ಬಂದೇನದು?” – ಎಂದು ಕವಿ ಸೋಮೇಶ್ವರ ತನ್ನ ಶತಕದಲ್ಲಿ ಗುಡುಗಿದ್ದು, ಹೀಗೆ ಕಾದು ಬೇಸತ್ತ ನಂತರವೇ ಇರಬಹುದು. “ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಈಗಲೇ ಬರಲಿ” ಎಂದು ಜವರಾಯನನ್ನೂ ಧಾವಂತ ಪಡಿಸುವ ವಚನಕಾರರು ಇನ್ನು ಬೇರೆ ಯಾರಿಗಾದರೂ ಯಾಕಾಗಿ ಕಾದಾರು? “ಕಾಯಲಾರೆನೋ ಕೃಷ್ಣಾ.. ಕಂಡವರ ಬಾಗಿಲನು” ಎನ್ನುತ್ತಾ ಮೊದಲೇ ತಾಳ್ಮೆಗೆಟ್ಟಿರುವ ಹರಿದಾಸರ ಸಹನೆಯನ್ನು ಕೆಣಕುವ ಸಾಹಸಕ್ಕೆ ಹೋಗದಿರುವುದೇ ಕ್ಷೇಮ!
ಕಾಯುವುದು ಪ್ರೇಮಿಗಳ ಹಣೆಗಂಟಿದ ಕರ್ಮ. ಈ ಪ್ರೇಮ ಎಂತಹ ಅರಸಿಕನನ್ನೂ ಕವಿಯಾಗಿ ಮಾಡುತ್ತದೆಯಂತೆ. ನಮ್ಮ ಅಮರ ಮಧುರ ಪ್ರೇಮಗೀತೆಗಳೆಲ್ಲ ಈ ಕಾಯುವಿಕೆಯ ಬೆಂಕಿಯಲ್ಲಿ ಅರಳಿದ ಹೂವುಗಳೇ. ಉರ್ದು, ಹಿಂದಿ ಕವಿಗಳಂತೂ ಪ್ರೇಮದ ಅಮಲಿನಲ್ಲಿ ಮುಳುಗಿ ಹುಚ್ಚರಾಗಿ ಹೋದವರು. ಇಂತಹ ವಿಷಯದಲ್ಲಿ ಅವರು ನಮ್ಮ ಕನ್ನಡ ಕವಿಗಳಿಗಿಂತ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ರಸಿಕರು. “ಗುಲ್ ಹೈ, ಗುಲ್‍ಶನ್ ಹೈ, ಮೌಸುಮ್-ಎ-ಬಹಾರ್ ಹೈ, ಸಬ್ ಹೈ, ಮಗರ್ ಮುಜಕೊ ತೇರಾ ಇಂತೆಜಾರ್ ಹೈ…” – ಎಂದು ಪ್ರೇಯಸಿಯ ಹೆಜ್ಜೆ ಸಪ್ಪಳಕ್ಕಾಗಿ ಕಾದು ಹೈರಾಣವಾಗಿ ಹೋದವರು. ಪ್ರೇಮದ ಬೆಲೆಯನ್ನು ಅವರು ಚೆನ್ನಾಗಿ ಅರಿತವರಾದ್ದರಿಂದ, ಕಾಯುವುದು ಅವರಿಗೊಂದು ಕಷ್ಟದ ಕೆಲಸ ಎಂದು ಅನ್ನಿಸದೆ ಇರಬಹುದು. ಈ ಯುಗ ಉರುಳಿ, ಯುಗ ಮರಳಿ, ಪ್ರತಿ ಜನುಮದಲ್ಲೂ ಕಾಯಲು ಅವರು ತಯಾರು. ಅಷ್ಟು ಮಾತ್ರ ಏಕೆ? “ಖುದಾ ಕರೆ ಕೆ ಕಯಾಮತ್ ಹೋ, ಔರ್ ತೂ ಆಯೆ..” ಎನ್ನುತ್ತಾ ಕೊನೆಯುಸಿರು ದೇಹದಿಂದ ಹೊರಹೋಗುವರೆಗೂ ಉತ್ಕಟವಾಗಿ ಕಾಯುವುದು ಮತ್ತಾರಿಂದ ತಾನೇ ಸಾಧ್ಯ? ಈ ಗುಲಾಬಿ ಹೃದಯದ ಕವಿಗಳಿಂದಲ್ಲದೆ!
ಕಾಯುವುದು ಸಮ್ಮತ, ಸರಿ. ಆದರೆ ಎಲ್ಲಿಯವರೆಗೆ ಅಂದರೆ, “ಕಾಯಿಸಿದರೂ, ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ” – ಎಂಬ ಉಗುರು ಬೆಚ್ಚಗಿನ ಸಾಂತ್ವನದ ಭರವಸೆ ಇದ್ದಾಗ ಮಾತ್ರ! ಅದೇ ಇಲ್ಲದಿದ್ದರೆ “ನಿನ್ನ ದಾರಿಯೇ ಬೇರೆ, ನನ್ನ ಗುರಿಯೇ ಬೇರೆ” ಎಂದು ಕೊಡವಿಕೊಂಡು ಎದ್ದು ಹೋಗುವುದೇ ನ್ಯಾಯ. ಸರಿ ತಾನೇ?
(ಡಿಸೆಂಬರ್.೨೦೦೪)
* * * * * *
Waiting ಮೇಲೊಂದು weighted ಲೇಖನ 🙂
ತ್ರಿ: ಕಾಯುವಿಕೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅಭಿನಂದನೆಗಳು.
“ಕಾಯುವುದಕ್ಕೆ” ಇರುವ ಎರಡು ಅರ್ಥಗಳನ್ನು ಉದಾಹರಣೆ ಸಮೇತ ಚೆನ್ನಾಗಿ ವಿವರಿಸಿದ್ದೀರ. ಅದನ್ನು ಹೀಗೆ ಹೇಳಬಹುದೇ?
ಹೆಂಚಿನ ಮೇಲೆ ಕಾಯುವುದು ಚಪಾತಿ
ಬೆಂಚಿನ ಮೇಲೆ ಕಾಯುವುದು ಪ್ರೀತಿ
‘ಕಾದಿರುವಳು ಶಬರಿ ರಾಮ ಬರುವನೆಂದು’
ಶಬರಿಗೆ ನೋಬೆಲ್, ಡಾಕ್ಟರೇಟ್ ಇವೆಲ್ಲವೂ ತೃಣಸಮಾನ. ‘ಕಾಯುವಿಕೆ’ಗೆ ಶಬರಿಯಿಂದಲೇ ಗೌರವ ಬರಬೇಕೆ ಹೊರತು ಶಬರಿಗೆ ಕಾಯುವಿಕೆಯಿಂದಲ್ಲ.
ಈ ವರ್ಷದಿಂದ ಕಾಯುವಿಕೆಯಲ್ಲಿ ಅಪ್ರತಿಮ ಸಾಧನೆ ತೋರಿದವರಿಗೆ ‘ಶಬರಿ ಪ್ರಶಸ್ತಿ’ ಪ್ರದಾನ ಮಾಡಿದರೆ ಬಲು ಚೆನ್ನ. 🙂
‘ಹಣ್ಣು ಹಣ್ಣು ಮುದುಕಿ
ಬಹುಶ: ರಾಮನಿಗೆ ಹಣ್ಣು ಕೊಡುವ ವೇಳೆಗೆ ಶಬರಿಯು ಮುದುಕಿಯಾಗಿದ್ದರಿಂದ, ಬಹಳ ವಯಸ್ಸಾದ ಮುದುಕಿಗೆ ಶಬರಿಯ ನೆನಪಿನಲ್ಲಿ ‘ಹಣ್ಣು ಹಣ್ಣು ಮುದುಕಿ’ ಎಂದು ಕರೆಯುವುದು ರೂಡಿಗೆ ಬಂದಿರಬಹುದೇ?
~ ಮನ
ಕಾಯುವಿಕೆಗಿಂತನ್ಯ ತಪವು ಇಲ್ಲ….. ಅನ್ನಬಹುದೇ ತ್ರಿ ಅವರೆ,:)
ಕಾಯುವವರಿಗೂ ನೊಬೆಲ್ ಕೊಡಿಸುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
ಯಶಸ್ವಿಯಾಗಲಿ ಮತ್ತು ಅದು ನನಗೆ ದೊರೆಯುವುದು ಖಂಡಿತಾ ಬೇಡ 🙂
ಮನ, “ಹಣ್ಣು ಹಣ್ಣು ಮುದುಕಿ” ಪದಕ್ಕೆ ನೀವು ಕೊಟ್ಟಿರುವ ವಿಶ್ಲೇಷಣೆ ಚೆನ್ನಾಗಿದೆ.
ಹೆಂಚಿನ ಮೇಲೆ ಕಾಯುವುದು ಚಪಾತಿ ಸರಿ. “ಬೆಂಚಿನ” ಮೇಲೆ ಕಾಯುವುದು ಪ್ರೀತಿ ಯಾಕೆ? ನಿಮ್ಮ ಕಾಲೇಜಿನ ದಿನಗಳನ್ನು ನೆನೆಸಿಕೊಂಡು ಈ ಮಾತು ಬರೆದಿದ್ದೀರೇನೋ 🙂
ಅಸತ್ಯಾನ್ವೇಷಿಗಳೇ, ಪ್ರಶಸ್ತಿ ಯಾಕೆ ಬೇಡವೆನ್ನುತ್ತಿದ್ದೀರಿ? ಲಂಚ ಕೊಡಬೇಕಾದೀತೆಂಬ ಭಯವೇ?
ನಾನಂತೂ ಕಾಯುವುದಕ್ಕೆ ಒಗ್ಗಿಕೊಂಡು ಹೋಗಿಬಿಟ್ಟಿದ್ದೇನೆ, ಕಾರಿನಲ್ಲಿ ಯಾವುದಾದರೊಂದು ಪುಸ್ತಕವನ್ನಿಟ್ಟುಕೊಂಡರೆ ಅಥವಾ ಕೈಯಲ್ಲೊಂದು ಲ್ಯಾಪ್‌ಟಾಪ್ ಇಟ್ಟುಕೊಂಡ್ರೆ ಆಯ್ತಪ್ಪಾ, ಅದೇನ್ ದೊಡ್ ವಿಷ್ಯಾ!
ಏನೇ ಆಗ್ಲಿ, ಕಾಯಿಸುವವರನ್ನೂ, ಕಾಯುವವರನ್ನೂ ‘ಕಾಯೋ ತಂದೆಯೇ!’ ಎಂದು ಬೇಡಿಕೊಳ್ಳುತ್ತೇನೆ.
ಅಂತರಂಗಿಗಳೇ, ಹೈಟೆಕ್ ಯುಗದಿಂದ ಕೆಲಕ್ಷಣ ಹೊರಬನ್ನಿ. 🙂
ಬೆಂಗಳೂರಿನಲ್ಲಿರುವ ಒಂದು ಸಾಮಾನ್ಯವಾದ ವಠಾರವನ್ನೋ, ಅಥವ ಒಂದು ಅವಿಭಕ್ತ ದೊಡ್ಡ ಕುಟುಂಬವನ್ನೋ ನೆನಪಿಸಿಕೊಳ್ಳಿ. ಬೆಳಗಿನ ವೇಳೆ, ಮತ್ತು ಒಂದೇ ಶೌಚಾಲಯ!!
ಯಾವುದೇ ಪುಸ್ತಕ, ಯಾವುದೇ ಲ್ಯಾಪ್‍ಟಾಪ್ ನಮ್ಮ ನೆರವಿಗೆ ಬರುವುದಿಲ್ಲ. “ಕಾಯುವ” ಕೆಲಸ ಬಿಟ್ಟು ಇನ್ನಾವ ಕೆಲಸವನ್ನೂ ಮಾಡಲಾಗದು. 😀
ಹೆಚ್ಚು ಅಂದರೆ, ನೀವೇ ಹೇಳಿರುವ ಹಾಗೆ, “ಕಾಯೋ ತಂದೆಯೇ” ಎಂದು ಹಾಡು ಗುನುಗಿಸಬಹುದು. 🙂
~ ಮನ
ಅಂತರಂಗಿಯವರೇ, ಹೌದು, ಬೇರೆ ಕೆಲಸದಲ್ಲಿ ತೊಡಗಿಕೊಂಡಾಗ ಕಾಯೋ ಕಷ್ಟ ಗೊತ್ತಾಗಲ್ಲ. ಒಗ್ಗಿಕೊಂಡು ಹೋಗಿಬಿಟ್ಟಿದ್ದೇನೆ ಅಂದ್ರಲ್ಲ, ಅದು ಕಾದು ಕಾದು ಕೊನೆಗೊಮ್ಮೆ ಬರುವ ನಿರ್ಲಿಪ್ತ ಸ್ಥಿತಿ. ತಡವಾಗಿ ಬರುವ ಬುದ್ಧಿ. 🙂
ಮನ, ಬ್ಲಾಗ್ ಶುರು ಮಾಡಿದ ಮೇಲೆ ನಿಮ್ಮ ಭಾಷೆಗೆ ಹೊಸ ಲವಲವಿಕೆ ಬಂದಿರೋ ಹಾಗಿದೆ. 🙂
ಶಬರಿಗೆ ಒಳ್ಳೆ ಪ್ರಶಸ್ತಿ, ಅಥವ ಮನಸಿದ್ದಹಾಗೆ, ಕಾಯ್ದ ಅನ್ಯರಿಗೆ ಶಬರಿ ಪ್ರಶಸ್ತಿ. ಒಟ್ಟಿನಲ್ಲಿ, ಕಾಯುವವರಿಗೆ ಪ್ರಶಸ್ತಿ ಖಾಯಂ.
ಕರೆಂಸಿ ಸಿಗೊಹಾಗಿದ್ರೆ, ಕಾಯೊಕ್ಕೆ ರೆಡಿ,
ಇಲ್ದಿದ್ರೆ ಮುಂದಕ್ ನಡಿ
ಅನ್ನೊ ಕಾಲಕ್ಕೆ ಬಂದು ತಲ್ಪಿದ್ದಿವಿ ಅಂಸುತ್ತೆ.