ಬಾಳ ಪಯಣದಲಿ ಹಿರಿಯ ಗುರಿಯ ಕಡೆ
ನಡೆಯುತಿರಲು ನಾನು
ಯಾವ ಜನ್ಮದಲಿ ಗೈದ ಸುಕೃತವೊ
ಮಿಲನವಾದೆ ನೀನು.
ತಾಯಿ ಮೊದಲ ಗುರು, ತಂದೆ ರಕ್ಷಕನು
ಮಿತ್ರ ಎರಡು ಹೌದು,
ಎಂಬ ಹಿರಿನುಡಿಯ ನಿನ್ನ ವಾಣಿಯಲಿ
ಕೇಳಿ ನಲಿದೆನಿಂದು
ಬಾಳ ಹಾದಿಯಲಿ ಪಯಣಕರ್ಮದಲಿ
ನೀನು ಮುಂದೆ ಮುಂದೆ.
ನಾನಿನ್ನು ಹಿಂದೆ ; ಬಾಹ್ಯದೃಷ್ಟಿಯಲಿ
ನಾವೆಲ್ಲರಿಲ್ಲಿ ಒಂದೆ!
ಸಹೃದಯ ಗೆಳೆಯ ‘ಸಂಜೀವ’ ಕೇಳು
ಭವ್ಯಜೀವ ನೀನು.
ನನ್ನ ದೃಷ್ಟಿಗದು ; ಹೊಗಳಲರಿಯೆ ನಾ
ಒಲಿಯಬಲ್ಲೆ ನಾನು.
ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?