ರಚನೆ : ವಾದಿರಾಜರು
ಧವಳಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ ||
ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿದ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ
ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||
ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ಥಿ || ೨ ||
ಚೆನ್ನಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀಯೆನ್ನ
ಅನ್ಯನಲ್ಲವೊ ನೀನು ಗುರುವೆಂಬೆ ನಿನ್ನ
ಇನ್ನಾದರೂ ಹರಿಯ ತೋರೊ ಧೀರಮುಕ್ಕಣ್ಣ || ೩ ||
ಃ) ಃ)