ಭಾರತಾಂಬೆಯ ಮಡಿಲಲ್ಲಿ
ಜನಿಸಿದ ಧೀರ ಸನ್ಯಾಸಿ
ವಿಶ್ವ ಭೂಪಟದಲ್ಲಿ ಮಾಡಿದ
ಭಾರತವ ಹೆಸರುವಾಸಿ
ಪರಮಹಂಸರ ದಿವ್ಯ ಶಕ್ತಿಯು
ಕಟೆದು ನಿಲಿಸಿದ ಮೂರುತಿ
ನರೇಂದ್ರನೆಂಬ ಪುಟ್ಟ ಬಾಲಕ
ವಿವೇಕಾನಂದನೆನಿಸಿದ ಕೀರುತಿ
ಮಲಗಿ ಮೈಮರೆತಿದ್ದ ಜನರನು
ತಟ್ಟಿ ಎಬ್ಬಿಸಿ ಛಲದಲಿ
ಸಿಂಹದಂತೆಯೇ ಗರ್ಜಿಸಿದ್ದನು
‘ಏಳಿ! ಎದ್ದೇಳಿ!’- ಗುಡುಗಿನ ದನಿಯಲಿ
ಶಿಕಾಗೊ ನೆಲವಿದು ಧನ್ಯವಾಯಿತು
ಅವನ ಪಾದಧೂಳಿಯು ಸೋಕಲು
ಹಿಂದೂ ಧರ್ಮದ ಕಹಳೆ ಮೊಳಗಿತು
ಸರ್ವಧರ್ಮದ ಸಭೆಯೊಳು!
ಓ ವೀರ! ನೀನು ಕನಸಿದ ನಿನ್ನ ಭಾರತ
ನೋಡು ಬಾ ಇಂದೇನಾಗಿದೆ
ಧೈರ್ಯ ಅತ್ತಿದೆ ; ಶೌರ್ಯ ಸತ್ತಿದೆ
ಹೇಡಿತನವೇ ಸಹನೆಯೆನ್ನಿಸಿಕೊಂಡು ರಾಜ್ಯವ ಆಳಿದೆ
ಗಡಿಗಳಲ್ಲಿ ನಡೆಯುತಲೆ ಇದೆ
ಬಿಡದೆ ರಕ್ತದ ಓಕುಳಿ
ಉಗ್ರ ದಾಳಿಯ ತಡೆಯಹೋದರೆ
ನಮ್ಮ ಯೋಧರ ಶಿರ ಬಲಿ
ಕೊಲೆ, ಸುಲಿಗೆ, ಭ್ರಷ್ಟಾಚಾರ
ತುಂಬಿದ ದೇಶ ಶುದ್ಧವೇ?
ಪತ್ರಿಕೆಯ ತಲೆಬರಹಗಳಲಿ
ನಿತ್ಯ ಅತ್ಯಾಚಾರದ ಸುದ್ದಿಯೇ!
ಅಳಿದ ಹಿರಿಮೆಯ ಮರಳಿ ಕೊಡಿಸಲು
ನೀನೇ ಮತ್ತೆ ಹುಟ್ಟಿ ಬಾ
ತಾಯಿದೇವಿಯ ಸಂಕೋಲೆ ಬಿಡಿಸಲು
ಸಿಡಿಲಿನಂತೆ ಸಿಡಿದೆದ್ದು ಬಾ!
***
(`ಡಿಂಡಿಮ’ ಆಶುಕವಿತೆ, ಅಕ್ಟೊಬರ್,೨೦೧೩)