ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ
ಗಾಯಕಿ – ಪಿ.ಸುಶೀಲ
ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ
ಸಂಗೀತ – ವಿಜಯ ಭಾಸ್ಕರ್

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ
ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ||

ಮುತ್ತುಗದ ಹೂವು ಮಲ್ಲಿಗೆಯೇ ?
ಅತ್ತಿಯ ಹಣ್ಣು ಅಂಜೂರವೇ?
ಚಿತ್ತೆಯ ಚಿಟ್ಟೆ ದುಂಬಿಯೇ?
ದತ್ತೂರಿ ಕಾಡಿಗೆ ಕಸ್ತೂರಿಯೇ? ||1||

ಕಾಜಾಣ ಕಾಗೆ ಕೋಗಿಲೆಯೇ?
ಬಣ್ಣದ ಕೆಂಬೂತ ಗಿರಿನವಿಲೇ?
ಕಾಡಿನಾ ಮರವೆಲ್ಲ ಶ್ರೀಗಂಧವೇ?
ನಾಡಿನ ಮಣ್ಣೆಲ್ಲಾ ಬಂಗಾರವೇ?||2||

ಬೆಟ್ಟದ ಕಾಳ್ಗಿಚ್ಚು ದೀಪವೇ?
ಬಿರುಗಾಳಿ ಕೆಂಧೂಳಿ ಧೂಪವೇ?
ಮೋಹದಾವೇಶ ಭಕ್ತಿಯೇ?
ಸವಿಯಾದುದೆಲ್ಲಾ ನೈವೇದ್ಯವೇ?||3||

ಮನಸು ಹೇಳಬಯಸಿದೆ – ಬೀಗರ ಪಂದ್ಯ

ಚಿತ್ರ : ಬೀಗರ ಪಂದ್ಯ
ಗಾಯಕಿ : ಪಿ.ಸುಶೀಲ
ಸಂಗೀತ: ರಮೇಶ್ ನಾಯ್ಡು
ಸಾಹಿತ್ಯ: ಆರ್. ಏನ್. ಜಯಗೋಪಾಲ್

ಮನಸು ಹೇಳಬಯಸಿದೆ ನೂರೊಂದು
ತುಟಿಯ ಮೇಲೆ ಬಾರದಿದೆ ಮಾತೊಂದು
ನೆನಪು ನೂರು ಎದೆಯಲಿ ಅಗಲಿಕೆಯ ನೋವಲಿ
ವಿದಾಯ ಗೆಳೆಯನೆ ವಿದಾಯ ಗೆಳತಿಯೆ
ವಿದಾಯ ಹೇಳೆಬಂದಿರುವೆ ನಾನಿಂದು || ಪಲ್ಲವಿ||

ಹಗಲು ರಾತ್ರಿ ಹಕ್ಕಿ ಹಾಗೆ ಹಾಡಿ ಮೆರೆದೆವು
ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವು
ಹೃದಯಗಳ ಬೆಸುಗೆಯಾಗಿ
ಸ್ನೇಹಬಂಧ ಅಮರವಾಗಿ
ನಾಳೆ ಎನುವ ಚಿಂತೆ ಮರೆತು ಹಾಡಿ ಕುಣಿದೆವು
ಆ ಕಾಲ ಕಳೆದಿದೆ ದೂರಾಗೊ ಸಮಯದೆ
ವಿದಾಯ ಹೇಳೆ ಬಂದಿರುವೆ ನಾನಿಂದು ||೧||

ನೀನು ಬೇರೆ ನಾನು ಬೇರೆ ಹೇಗೋ ಬೆರೆತೆವು
ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವು
ಈ ದಿನವ ಮರೆಯಬೇಡ
ನಮ್ಮ ಸ್ನೇಹ ತೊರೆಯಬೇಡ
ದಾರಿ ಬೇರೆಯಾದರೇನು ಪ್ರೀತಿ ಉಳಿಯಲಿ
ನೀ ಎಲ್ಲೇ ಇದ್ದರೂ ನೀ ಹೇಗೇ ಇದ್ದರೂ
ನೀ ನಾಳೆ ಕೇಳಬೇಡ ನನ್ನ ಯಾರೆಂದು||೨||

 

ನೋಡುವ ಜನರೇ ದುಡ್ಡು ಹಾಕಿ ಮಾಡಿದ ಸಿನೆಮಾ: ಲೂಸಿಯಾ

ಲೇಖಕ : ವಾಸುಕಿ ರಾಘವನ್

ಸುಮಾರು ಒಂದೂವರೆ ವರ್ಷಗಳ ಹಿಂದಿನ ಕಥೆಯಿದು. ಇನ್ನೇನು ಬಿಡುಗಡೆಗೆ ಕಾದಿರುವ “ಲೈಫು ಇಷ್ಟೇನೆ” ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಕ್ರೌಡ್ ಫಂಡೆಡ್ “ಲೂಸಿಯಾ” ಚಿತ್ರದ್ದು. ಚಿತ್ರ ಹೇಗಿದೆ ಅಂತ ನಾವು ಇನ್ನೂ ನೋಡಬೇಕಷ್ಟೇ, ಆದರೆ ಈ ಚಿತ್ರದ ಮೇಕಿಂಗ್ ಇದೆಯಲ್ಲಾ ಅದೇ ಒಂದು ಅದ್ಭುತ ಸ್ಕ್ರಿಪ್ಟ್ ಆಗಬಹುದು!

“ಲೈಫು ಇಷ್ಟೇನೆ” ಗೆಲುವಿನ ನಂತರ ಪವನ್ ಗೆ ಹೊಳೆದ ಐಡಿಯಾ “ಲೂಸಿಯಾ”. ಸ್ಕ್ರಿಪ್ಟ್ ಪೂರ್ತಿ ಮುಗಿಸಿ, ಉದ್ಯಮದಲ್ಲಿನ ತಮ್ಮ ಹಿತೈಷಿಗಳಿಗೆ ತೋರಿಸಿದರು, ಎಲ್ಲರಿಂದ ಮೆಚ್ಚುಗೆಯೂ ವ್ಯಕ್ತವಾಯಿತು. ಮೊದಲ ಸಿನಿಮಾ ಸಕ್ಸಸ್ ಆಗಿರೋವಾಗ ಎರಡನೆಯ ಸಿನಿಮಾ ಸುಲಭವಾಗಿ ಮಾಡಬಹುದು ಅಂದುಕೊಂಡಿದ್ದರು ಪವನ್. ಅವರ ನಿರೀಕ್ಷೆ ಸುಳ್ಳಾಗಿತ್ತು! ಅವರ ಸ್ಕ್ರಿಪ್ಟ್ ಅನ್ನು ಉದ್ಯಮದ ದೊಡ್ಡ ದೊಡ್ಡ ‘ವಿಶೇಷಣ’ ಸ್ಟಾರ್ ಗಳ್ಯಾರೂ ಓದಲೂ ಇಲ್ಲ. ಇದರಿಂದ ನೊಂದ ಪವನ್ ತಮ್ಮ ಹತಾಶೆಯನ್ನು ತಮ್ಮ ಬ್ಲಾಗ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು.

ಈ ಬ್ಲಾಗ್ ಪೋಸ್ಟ್ ವೈರಲ್ ಆಗಿ ಸಾವಿರಾರು ಜನರನ್ನು ತಲುಪಿತ್ತು. ಯಾರೋ ಒಬ್ಬರು, ಆಸಕ್ತ ಜನರ ಹತ್ತಿರಾನೇ ದುಡ್ಡು ಪಡೆದು ಫಿಲಂ ಮಾಡಿ ಅಂತ ಸಲಹೆ ಕೊಟ್ರಂತೆ. ಇದು ಅಸಾಧ್ಯ ಅನಿಸಿದರೂ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಯಾವುದೇ ಭರವಸೆ ಇಟ್ಟುಕೊಳ್ಳದೆ ಪವನ್ ಇನ್ನೊಂದು ಬ್ಲಾಗ್ ಪೋಸ್ಟ್ ಮಾಡಿದ್ರಂತೆ. ನೂರು ದಿನಗಳೊಳಗಾಗಿ ಐವತ್ತು ಲಕ್ಷ ಸೇರಿದರೆ ಚಿತ್ರ ಮಾಡುವುದು, ಇಲ್ಲಾ ಬಂದ ಹಣವನ್ನು ಹಿಂದಿರುಗಿಸಿಬಿಡೋದು ಅಂತ ಅಂದುಕೊಂಡಿದ್ದರು. ಆದರೆ ನಂಬಲಸಾಧ್ಯ ಅನ್ನುವಂತೆ ಗುರುತು ಪರಿಚಯ ಇರದ ಸುಮಾರು ಅರವತ್ತೇಳು ಜನರು ಐವತ್ತು ಲಕ್ಷ ಸೇರಿಸಿಬಿಟ್ಟರು, ಕೇವಲ ಇಪ್ಪತ್ತೇಳು ದಿನಗಳಲ್ಲಿ!

ಚಿತ್ರದ ನಿರ್ಮಾಣ ಶುರುವಾಗೇ ಬಿಟ್ಟಿತು. ಇದಾದ ನಂತರ ಈ ಚಿತ್ರದಲ್ಲಿ ಹಲವಾರು ವಿನೂತನ ಪ್ರಯೋಗಗಳು ನಡೆದವು :

ಅದಾಗ ತಾನೇ ಹೆಚ್ಚುಹೆಚ್ಚು ಪಾಪ್ಯುಲರ್ ಆಗುತ್ತಿದ್ದ ಫೇಸ್ಬುಕ್ ಅಂತಹ ಸೋಶಿಯಲ್ ಮೀಡಿಯಾ ಅನ್ನು ಪವನ್ ಸಮರ್ಪಕವಾಗಿ ಬಳಸಿಕೊಂಡರು. ತಮ್ಮ ಚಿತ್ರದ ಪ್ರಗತಿಯನ್ನು, ಅನುಭವಿಸುತ್ತಿರುವ ಬವಣೆಗಳನ್ನು ಎಲ್ಲವನ್ನೂ ಹಂಚಿಕೊಂಡು ಜನರಲ್ಲಿ ಚಿತ್ರದ ಬಗ್ಗೆ ಒಲವು ಮೂಡಲು ಸಹಾಯವಾಯಿತು. ಅದೇ ಸಮಯದಲ್ಲಿ ಪವನ್ ಗೆ ಬ್ರಿಟಿಷ್ ಕೌನ್ಸಿಲ್ ಅವರಿಂದ “ಯಂಗ್ ಆಂತ್ರಪ್ರಿನ್ಯುಯರ್ ಅವರ್ಡ್” ಕೂಡ ಲಭಿಸಿತು.

ಈ ಚಿತ್ರದಿಂದ ಬಹಳಷ್ಟು ಹೊಸಬರಿಗೆ ಅವಕಾಶವಾಯಿತು, ಉದಾಹರಣೆಗೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ತಮ್ಮ ಸಾಫ್ಟ್ ವೇರ್ ವೃತ್ತಿಯನ್ನು ಬಿಟ್ಟು ಬಂದ ತೇಜಸ್ವಿಯ ಬಳಿ ಈಗ ಇನ್ನೂ ಮೂರು ಚಿತ್ರಗಳಿವೆ. ನಮ್ಮ ರಾಜ್ಯದ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅವಕಾಶ ಕೊಡಬೇಕೆನ್ನುವ ಇರಾದೆ ಆಗಲೇ ನೆರವೇರಿದೆ.
ಪ್ರತಿಭೆಗಳನ್ನು ಹುಡುಕುವಲ್ಲಿ ಹಲವಾರು ಪ್ರಯತ್ನ ನಡೆದಿದೆ. “ತಿನ್ಬೇಡ ಕಮ್ಮಿ” ಅನ್ನುವ ಹಾಡನ್ನು ಯೂಟ್ಯೂಬ್ ಅಲ್ಲಿ ಅನಾವರಣಗೊಳಿಸಿ, ಹಾಡಲು ಆಸಕ್ತಿ ಇರುವವರು ರೆಕಾರ್ಡ್ ಮಾಡಿ ಕಳಿಸಲು ಕೋರಲಾಯಿತು. ಆ ವೀಡಿಯೊ ವೈರಲ್ ಆಗಿ ಚಿತ್ರದ ಬಗ್ಗೆ ಕುತೂಹಲ ಕೂಡ ಹೆಚ್ಚಾಯ್ತು, ಉತ್ತಮ ಗಾಯಕರನ್ನು ಹುಡುಕುವ ವೇದಿಕೆಯೂ ಆಯಿತು.

ಗಾಯಕರು ಅಂದಾಕ್ಷಣ ಹೊರರಾಜ್ಯದವರು ಶ್ರೇಷ್ಠ ಅನ್ನುವ ಭಾವನೆ ನಮ್ಮ ಚಿತ್ರರಂಗದಲ್ಲಿದೆ. ಆದರೆ ಈ ಚಿತ್ರಕ್ಕಾಗಿ ನವೀನ್ ಸಜ್ಜು ಅನ್ನುವ ಒಬ್ಬ ಆರ್ಕೆಸ್ಟ್ರ ಸಿಂಗರ್ ನ ಪ್ರತಿಭೆಯನ್ನು ಗುರುತಿಸಿ, ಅವನಿಗೆ ಆರು ತಿಂಗಳುಗಳ ಕಾಲ ತರಬೇತಿ ಕೊಟ್ಟು, ಅವನಿಂದ ಹಾಡಿಸಿರುವ ಹಾಡುಗಳು ಈಗಾಗಲೇ ರಾಜ್ಯದಲ್ಲೆಲ್ಲಾ ಪ್ರಸಿದ್ಧಿಯಾಗಿದೆ.

ಹಾಗೆಯೇ ಪೋಸ್ಟರ್ ಡಿಸೈನ್ ಮಾಡಲು ಜನರೇ ಮುಂದೆ ಬಂದರು. ಯಾವ ಪೋಸ್ಟರ್ ಚನ್ನಾಗಿದೆ ಅನ್ನುವ ವಿಚಾರವಿನಿಮಯ ಕೂಡ ನಡೆಯಿತು.
ಇತ್ತೀಚಿಗೆ ಲಂಡನ್ ಇಂಡಿಯನ್ ಫಿಲಂ ಫೆಸ್ಟಿವಲ್ ಅಲ್ಲಿ ಪ್ರೀಮಿಯರ್ ಆದ ಮೊದಲ ಕನ್ನಡ ಚಿತ್ರ ಅನ್ನುವ ಹೆಗ್ಗಳಿಕೆ ಈ ಚಿತ್ರದ್ದು. ಅಷ್ಟೇ ಅಲ್ಲ, ಕರಣ್ ಜೋಹರ್, ಅನುರಾಗ್ ಕಶ್ಯಪ್ ಮುಂತಾದವರ ಚಿತ್ರಗಳ ಜೊತೆ ಪೈಪೋಟಿ ನಡೆಸಿ “ಲೂಸಿಯಾ” “ಆಡಿಯನ್ಸ್ ಚಾಯ್ಸ್ ಬೆಸ್ಟ್ ಫಿಲಂ ಅವಾರ್ಡ್” ಕೂಡ ಗೆದ್ದುಕೊಂಡಿತು! ಬಾಲಿವುಡ್ ನಟ “ಇರ್ಫಾನ್ ಖಾನ್” ಕೂಡ ಮೆಚ್ಚಿದ್ದಾರೆ ಈ ಚಿತ್ರವನ್ನು ನೋಡಿ.

ಪ್ರಿ-ಆರ್ಡರ್

ಇದೀಗ ಚಿತ್ರ ಬಿಡುಗಡೆಗೆ ರೆಡಿ ಇದೆ. ಆದರೆ ಪಬ್ಲಿಸಿಟಿ ಮತ್ತು ಥೀಯೇಟರ್ ಅಲ್ಲಿ ಬಿಡುಗಡೆಗೆ ಆಗುವ ಖರ್ಚು ಚಿತ್ರನಿರ್ಮಾಣಕ್ಕಿಂತ ಹೆಚ್ಚು. ಇದನ್ನು ನಿಭಾಯಿಸಲು ಪವನ್ ಕಂಡುಕೊಂಡ ವಿನೂತನ ವಿಧಾನವೇ “ಪ್ರಿ-ಆರ್ಡರ್”. ಅದರ ಪ್ರಕಾರ ಜನರು 500, 1000, 2500, 5000 ರೂಗಳು – ಹೀಗೆ ಬೇರೆ ಬೇರೆ ಪ್ಲಾನ್ ಗಳಲ್ಲಿ ಚಿತ್ರವನ್ನು ‘ಕೊಂಡು’ ಆನ್ಲೈನ್ ಡಿಸ್ಟ್ರಿಬ್ಯೂಟರ್ ಆಗಬಹುದು (ಈ ಹಕ್ಕು ಜೀವನದಾದ್ಯಂತ ಇರುತ್ತದೆ!), ಪ್ರತೀ ಪ್ಲಾನಿಗೂ ಬೇರೆ ಬೇರೆ ಮೊತ್ತದ ಕಮಿಷನ್ ಉಂಟು. ಅಂದರೆ ಈ ಚಿತ್ರ ಆನ್ಲೈನ್ ರಿಲೀಸ್ ಆದ ತಕ್ಷಣ ಡಿಸ್ಟ್ರಿಬ್ಯೂಟರ್ ಗಳು ತಮ್ಮದೇ ಪ್ರತ್ಯೇಕವಾದ ಮೂವಿ ಲಿಂಕ್ ಅನ್ನು ತಮ್ಮ ಗೆಳೆಯರಿಗೆ, ಪರಿಚಯದವರಿಗೆ ಕಳುಹಿಸಬಹುದು. ಆ ಲಿಂಕ್ ಇಂದ ಅವರ ಗೆಳೆಯರು ಮೂವಿಯನ್ನು ಕೊಂಡು ನೋಡಿದಾಗ, ಡಿಸ್ಟ್ರಿಬ್ಯೂಟರ್ ಗಳು ದುಡ್ಡು ಪಡೆಯುತ್ತಾರೆ. ಅಷ್ಟೇ ಅಲ್ಲ, ನೀವು ಪ್ರಿ-ಆರ್ಡರ್ ಮಾಡಿದ ಮೇಲೆ, ನಿಮ್ಮ ಗೆಳೆಯರು ನಿಮ್ಮ ಲಿಂಕ್ ಇಂದ ಪ್ರಿ-ಆರ್ಡರ್ ಮಾಡಿದರೆ, ಅದರಲ್ಲಿ 10% ಕೂಡ ಬರುತ್ತದೆ! ಇದರಿಂದ ಸಿನಿಮಾ ರಿಲೀಸ್ ಗೆ ಬೇಕಾದ ಹಣ ನಿರ್ದೇಶಕರಿಗೆ ಸಿಗುತ್ತದೆ, ಸಿನಿಮಾವನ್ನು ಲೀಗಲ್ ಆಗಿ ಮಾರಿ ಜನ ಹಣ ಕೂಡ ಸಂಪಾದಿಸಬಹುದು. ಎಷ್ಟು ಜನ ಡಿಸ್ಟ್ರಿಬ್ಯೂಟರ್ ಗಳು ಸೇರುತ್ತಾರೋ, ಅಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಸಾಧ್ಯವಾಗುತ್ತದೆ. ಜನರಿಗೆ ಒಂದು ಸಣ್ಣ ಮೊತ್ತದ ರಿಸ್ಕ್ ಅಷ್ಟೇ (ನನ್ನ ಪ್ರಕಾರ ಇಲ್ಲಿ ರಿಸ್ಕ್ ಏನೂ ಇಲ್ಲ; ಉದಾಹರಣೆಗೆ, ನೀವು ಒಂದು ಸಾವಿರಕ್ಕೆ ಪ್ರಿ-ಆರ್ಡರ್ ಮಾಡಿದರೆ, ನಿಮ್ಮ ಲಿಂಕ್ ಇಂದ ಆರು ಜನ ಸಿನಿಮಾ ನೋಡಿದರೆ ನಿಮ್ಮ ಅಸಲು ಬಂದತೆಯೇ!) ಆದರೆ ಯಾವ ದೊಡ್ಡ ನಿರ್ಮಾಪಕರು, ಹಂಚಿಕೆದಾರರ ಹಂಗಿಲ್ಲದೇ, ಜನರ ಒಂದು ಸಮೂಹ ಉತ್ತಮ ಚಿತ್ರಗಳ ಪರವಾಗಿ ನಿಲ್ಲುವ ಒಂದು ಪರ್ಯಾಯ ವ್ಯವಸ್ಥೆ ಉಂಟಾಗುತ್ತದೆ. ನೀವು ನಂಬಲಿಕ್ಕಿಲ್ಲಾ, ನಾನು ಹಾಕಿದ ಹಣಕ್ಕೆ ಮೂರರಷ್ಟು ಗಳಿಕೆ ನನಗೆ ಆಗಲೇ ಆಗಿದೆ, ಚಿತ್ರದ ಬಿಡುಗಡೆಗೆ ಮುಂಚೆಯೇ! ದಿಸ್ ಸಿಸ್ಟಮ್ ವರ್ಕ್ಸ್!

ಚಿತ್ರರಂಗದ ಬಗ್ಗೆ ಸದಾ ದೂಷಿಸುವುದರಿಂದ ಏನೂ ಪ್ರಯೋಜನ ಇಲ್ಲ. ಈ ತರಹದ ಪ್ರಯೋಗಗಳು ನಡೆದಾಗ ಉತ್ತೇಜನ ನೀಡುವುದು ಅಷ್ಟೇ ಮುಖ್ಯ. ಇಲ್ಲವಾದಲ್ಲಿ ಮುಂದೊಂದು ದಿನ “ಇದು ಸರಿ ಇಲ್ಲ, ಅದು ಸರಿ ಇಲ್ಲ” ಅಂತ ಗೊಣಗುವ ನೈತಿಕ ಹಕ್ಕನ್ನು ಕಳೆದುಕೊಂಡು ಬಿಡ್ತೀವಿ. ಈಗಾಗಲೇ ಎಂಟು ನೂರಕ್ಕೂ ಹೆಚ್ಚು ಡಿಸ್ಟ್ರಿಬ್ಯೂಟರ್ ಗಳು ಇದ್ದಾರೆ. ಇನ್ನೊಂದು ನಾಕು ಸಾವಿರ ಜನ ಪ್ರಿ-ಆರ್ಡರ್ ಮಾಡಿಬಿಟ್ಟರೆ, ಇಡೀ ಜಗತ್ತೇ ನಮ್ಮನ್ನು ಬೆರಗಿನಿಂದ ನೋಡುವಂತಹ ಕ್ರಾಂತಿಯಾಗುತ್ತದೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಹಾಯವಾಗುತ್ತದೆ. ನಿಮ್ಮ ಮನೆಗಳಲ್ಲೇ, ಪರಿಚಯಸ್ಥರಲ್ಲೇ ಯಾರಾದ್ರೂ ನಿಜವಾಗಿಯೂ ಪ್ರತಿಭಾನ್ವಿತರಿದ್ದರೆ ಅಂತಹವರಿಗೆ ಅವಕಾಶ ಸಿಗುವ ಒಂದು ವೇದಿಕೆ ನಿರ್ಮಾಣ ಆಗುತ್ತದೆ.

ಆಗಸ್ಟ್ ಹದಿನೈದರಂದು ಪ್ರಿ-ಆರ್ಡರ್ ಕೊನೆಗೊಳ್ಳುತ್ತಿದೆ.

ಆದ್ದರಿಂದ ಈಗಲೇ ಪ್ರಿ-ಆರ್ಡರ್ ಮಾಡಿ!

ನಿಮ್ಮ ಪರಿಚಯದವರಿಗೂ ಮಾಡಲು ಪ್ರೇರೇಪಿಸಿ!

ಪ್ರಿ-ಆರ್ಡರ್ ಮಾಡಲು ಇಲ್ಲಿಗೆ ಭೇಟಿ ಕೊಡಿ : http://muvi.es/w3254/168991

**************************

‘ಲೂಸಿಯಾ’ ಬಿಡುಗಡೆಯಾಗಿದ್ದು, ನೀವು ನೋಡುವುದಾದಲ್ಲಿ ಲಿಂಕ್ ಇಲ್ಲಿದೆ :-