ಕವಿ- ಎಚ್. ಎಸ್. ವೆಂಕಟೇಶಮೂರ್ತಿ
ಎಲ್ಲಿ ಅರಿವಿಗಿರದೊ ಬೇಲಿ
ಎಲ್ಲಿ ಇರದೋ ಭಯದ ಗಾಳಿ
ಅಂಥ ನೆಲೆಯಿದೆಯೇನು ಹೇಳಿ
ಸ್ವರ್ಗವನ್ನು ಅದರೆದುರು ಹೂಳಿ
ಹಸಿದಂಥ ಕೂಸಿರದ ನಾಡು
ಉಸಿರೆಲ್ಲ ಪರಿಮಳದ ಹಾಡು
ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ
ಸ್ವಾತಂತ್ರ್ಯ ನಗುತಲಿದೆ ಅಲ್ಲಿ
ಕಣ್ಣೋ ಹಿಗ್ಗಿನ ಗೂಡು
ಮಣ್ಣೋ ಸುಗ್ಗಿಯ ಬೀಡು
ದುಡಿವೆವೋ ಎಲ್ಲಿ ಕೈಯಲ್ಲಿ
ಬಿಡುಗಡೆಯು ಹಾಡುತಿದೆ ಅಲ್ಲಿ
ಪ್ರೀತಿ ನೀತಿಯ ಸೂತ್ರವಾಗಿ
ನೀತಿ ಮಾತಿನ ಪಾತ್ರವಾಗಿ
ಅರಳೀತು ಎಲ್ಲಿ ಎದೆ ಹೂವು
ಅಂತ ನೆಲವಾಗಲಿ ನಾಡು