ಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗ

ಒಡೆದು ಬಿದ್ದ ಕೊಳಲು ನಾನು,
ನಾದ ಬರದು ನನ್ನಲಿ;
ವಿನೋದವಿರದು ನನ್ನಲಿ.

ಕಿವಿಯನೇಕೆ ತೆರೆಯುತಿರುವೆ?
ಎದೆಯೊಳೇನ ಬಯಸುತಿರುವೆ?
ದೊರೆಯದೇನೂ ನನ್ನಲಿ!

ನಲ್ಲೆ ಬಂದು ತುಟಿಗೆ ಕೊಳಲ
ನೊತ್ತಿ ಉಸುರ ಬಿಟ್ಟಳು;
ತನ್ನ ಒಲವಿನಿಂದ್ರಧನುವ
ಹರಿದು ಇಳಿದು ಬಿಟ್ಟಳು;
ಬಣ್ಣ ಬಣ್ಣದೆನಿತೋ ಹಾಡ
ನಿಲ್ಲಿ ಚೆಲ್ಲಿ ಕೊಟ್ಟಳು.

ಹಾಡಿ ಹಾಡಿ ಬೇಸರಾಗಿ
ನೆಲಕೆಸೆದಳು ಕೊಳಲನು;
ಇಂದು ಮೌನದುಸುಬಿನಲ್ಲಿ
ಹುಗಿದಳೆನ್ನ ಮನವನು.

ಕೊಳಲು ಬೇಸರಾಯಿತೇನೊ,
ಹೊಸ ಹಂಬಲ ಹಾಯಿತೇನೊ,
ಎದೆಯ ಗಾಯ ಮಾಯಿತೇನೊ,
ಬಿಸುಟೆದ್ದಳು ಕೊಳಲನು.

ಕಂಪು ಗಾಳಿ ಅಲೆ ಅಲೆ
ತೇಲಿ ಬರಲು ಮಲೆ ಮಲೆ
ಬಿದಿರ ಕೊಳಲ ಮಾಡಿ ಹಾಡಿ
ತೂಗುತಿರಲು ಹೊಂದಲೆ

ಒಡೆದ ಕೊಳಲ ಪಾಡ ನೋಡು;
ಇನ್ನೆಲ್ಲಿದೆ ಸುಗ್ಗಿ ಎಂದು
ಮಣ್ಣಿನಂತೆ ಮಲಗಿತು.
ಮುಗ್ಗಿ ಮುರುಟಿ ನಲುಗಿತು.

ಮನ ಯಮುನಾ ತೀರದಲ್ಲಿ
ಕುಣಿದು ಬರೆ ಸಮೀರನು,
ನೆಳಲಿನಿಂದಲೆದ್ದು ಬರಲು
ಗೋಪ ಗೋಪಿಕೆಯರು,

ಒಡೆದು ಬಿದ್ದ ಕೊಳಲ ಕೊಳಲು
ಬರುವನೊಬ್ಬ ಧೀರನು,
ಅಲ್ಲಿವರೆಗೆ ಮೃಣ್ಮಯ,
ಬಳಿಕ ನಾನು ಚಿನ್ಮಯ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತ

ಕವನ -ಕನಸಿನೊಳಗೊಂದು ಕಣಸುಕವಿ – ದ.ರಾ.ಬೇಂದ್ರೆ(ಅಂಬಿಕಾತನಯದತ್ತ)          ತಾಯಿ ಮಕ್ಕಳ ಸಂವಾದ(ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ) “ಯಾರು ನಿಂದವರಲ್ಲಿ ತಾಯೆ” ಎಂದೆ  “ಯಾರು ಕೇಳುವರೆನಗೆ, ಯಾಕೆ ತಂದೆ ?” “ಬೇಸರದ ದನಿಯೇಕೆ ಹೆಸರ ಹೇಳಲ್ಲ”  “ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ”

ತೇನ ವಿನಾ – ಕುವೆಂಪುತೇನ ವಿನಾ – ಕುವೆಂಪು

ರಚನೆ : ಕುವೆಂಪು ತೇನ ವಿನಾ ತೇನ ವಿನಾ ತೃಣಮಪಿ ನ ಚಲತಿ ತೇನ ವಿನಾ ಮಮತೆಯ ಬಿಡು, ಹೇ ಮೂಢಮನಾ, ಮೂಢಮನಾ, ಹೇ ಮೂಢಮನಾ ! ರವಿಗಿಲ್ಲದ ಭಯ, ಶಶಿಗಿಲ್ಲದ ಭಯ, ತಾರಾನಿವಹಕೆ ಇರದ ಭಯ, ನಿನಗೇತಕೆ ಬಿಡು, ಅಣು

ನೆರಳು – ಪುತಿನನೆರಳು – ಪುತಿನ

ಕವನ – ನೆರಳು ಕವಿ – ಪು.ತಿ.ನರಸಿಂಹಾಚಾರ್ (ಪುತಿನ) ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೆ ಅದರಿಚ್ಚೆ ಹಾದಿ ಇದಕು ಹರಿದತ್ತ ಬೀದಿ ನೆಲನೆಲದಿ ಮನೆಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿನಕೊಂದೆ