ರಚನೆ – ವಾದಿರಾಜರು
ಗಾಯನ – ಪ೦ಡಿತ್ ವೆಂಕಟೇಶ್ ಕುಮಾರ್
ಒಂದು ಬಾರಿ ಸ್ಮರಣೆ ಸಾಲದೇ?
ಆನಂದತೀರ್ಥರ, ಪೂರ್ಣಪ್ರಜ್ಞರ, ಸರ್ವಜ್ಞರಾಯರ, ಮಧ್ವರಾಯರ ||ಪ||
ಹಿಂದನೇಕ ಜನ್ಮದಲ್ಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶನ ಪಾದವನ್ನು ಹೊಂದಬೇಕೆಂಬುವರಿಗೆ || 1 ||
ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ
ಧೀರನಾದ ಹರಿಯ ಪಾದ ಸೇರಬೇಕೆಂಬುವರಿಗೆ || 2 ||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದ ಭಕುತಿ ಬೇಕೆಂಬುವರಿಗೆ || 3 ||
ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ-
-ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ|| 4 ||
ಹೀನಬುದ್ದಿಯಿಂದ ಶ್ರೀ ಹಯವದನನ್ನು ಜರಿದು
ತಾನು ಬದುಕಲಾರದಿರಲು ತೋರಿಕೊಟ್ಟ ಮಧ್ವಮುನಿಯ|| 5 ||
***********************************************