ಈಚೆಗೆ ರಾಮಪ್ರಿಯರ ತಾಣದಲ್ಲಿ ಒಂದು ಮುದ್ದು ಮಗುವಿನ ಚಿತ್ರ ನೋಡಿದೆ. ಅಲ್ಲಿ ನಡೆಯುತ್ತಿದ ಮಾತು-ಕಥೆಗಳನ್ನೂ ಗಮನಿಸಿದ ಮೇಲೆ ಈ ಪ್ರಶ್ನೆ ನನ್ನನ್ನು ಕಾಡಿತು. ಮಕ್ಕಳಿಗೆ ದೃಷ್ಟಿಯಾಗೋದು ನಿಜವೇ?

ನನಗೆ ಕಣ್ಣು ಬೀಳೋದು, ದೃಷ್ಟಿ ಆಗುವುದು ಇದರಲ್ಲೆಲ್ಲ ನಂಬಿಕೆ ಇಲ್ಲ.  ಇದ್ದರೂ ಇರಬಹುದೇ ಎನ್ನುವ ಅರೆಬರೆ ಅನುಮಾನ!   ಆದರೆ ಅಮ್ಮನಿಗೆ ಪೂರ್ತಿ ನಂಬಿಕೆ. ಅಮ್ಮನ ನಂಬಿಕೆ ಅಥವಾ ಮೂಢನಂಬಿಕೆಗೆ ನೀರೆರೆಯುವಂತೆ ಒಂದು ಪ್ರಸಂಗ ನಡೆದಿತ್ತು. ಆಗ ನನ್ನ ಮಗಳಿಗೆ ಇನ್ನೂ  ಒಂದೋ – ಎರಡೋ ತಿಂಗಳಿರಬೇಕು.  ಮಗು  ಮೈತುಂಬಿಕೊಂಡಿದ್ದು,   ಯಾರಾದರೂ ಮಾತನಾಡಿಸಿದರೆ ನಗುವುದು, ಪ್ರತಿಕ್ರಿಯಿಸುವುದು ಮಾಡುತ್ತಿತ್ತು.  ಅದೇ ಸಮಯದಲ್ಲಿ ನಮ್ಮೂರಿನಲ್ಲಿ ನಮ್ಮ ಪರಿಚಿತರೊಬ್ಬರ  ಮನೆಯಲ್ಲೂ ಮಗು ಹುಟ್ಟಿತ್ತು.  ಆ ಮಗುವಿಗೆ ಏನೂ ತೊಂದರೆಯಿಲ್ಲದಿದ್ದರೂ ಯಾಕೋ ಮೈ ಹಿಡಿದಿರಲಿಲ್ಲ.   ಒಂದೇ ವಯಸ್ಸಿನ ಈ ಎರಡು ಮಕ್ಕಳನ್ನು ನೋಡಿದವರು ಹೋಲಿಕೆ ಮಾಡುವುದು ಸಾಮಾನ್ಯವಾಗಿತ್ತು.  ಅಮ್ಮನಿಗೆ, ನನ್ನ ಮಗುವನ್ನು ನೋಡಲು ಬಂದವರು ಅದನ್ನು ಹೆಚ್ಚಾಗಿ ಹೊಗಳಿದರೆ ಒಳಗೇ ಮುಜುಗರ ಪಡುತ್ತಿದ್ದಳು. ಯಾವುದೋ ನೆಪದಲ್ಲಿ ಬಂದವರನ್ನು ಮನೆಯಿಂದ ಸಾಗಹಾಕುತ್ತಿದ್ದಳು 🙂

ಒಂದು ದಿನ ಆ  ಇನ್ನೊಂದು ಮಗುವನ್ನು ನೋಡಿಬಂದವರು ನಮ್ಮ ಮನೆಗೂ ಬಂದಿದ್ದರು. ತೊಟ್ಟಿಲಲ್ಲಿ ಮಲಗಿದ್ದ  ಮಗುವನ್ನೆತ್ತಿ ತೊಡೆಯ ಮೇಲೆ ಮಲಗಿಸಿಕೊಂಡು ಲೋಕಾಭಿರಾಮವಾಗಿ ಮಾತಾಡುತ್ತಾ ಕೂತಿದ್ದರು. ಅವರಿಗೂ ಎರಡೂ ಮಕ್ಕಳ ಬೆಳವಣಿಗೆಯಲ್ಲಿರುವ ವ್ಯತ್ಯಾಸ ಮನಸ್ಸಿಗೆ ಬಂದಿರಬೇಕು. ಅದನ್ನು ಬಾಯಲ್ಲಿ ಆಡಿಯೂ ಬಿಟ್ಟರು.  (ಆಗ ಅಮ್ಮ ಅಲ್ಲೇ ಇದ್ದಳು) ಸ್ವಲ್ಪ ಹೊತ್ತು ಇದ್ದು ಅವರು ಹೊರಟು ಹೋದರು.  ಅವರು ನಮ್ಮ ಮನೆಯ ಹೊಸ್ತಿಲನ್ನು ದಾಟಿದ್ದರೋ ಇಲ್ಲವೋ, ನಗುನಗುತ್ತಾ ಆಡುತ್ತಿದ್ದ ಮಗು ಕಿಟಾರನೆ ಕಿರುಚಿ ಅಳಲು ಶುರುಮಾಡಿಬಿಟ್ಟಿತು.  ಇರುವೆ ಕಡಿಯಿತೇನೋ ಎಂದು ಹುಡುಕಿದ್ದಾಯಿತು, ಮೈ ಕೈ ಉಳುಕಿತೇನೋ ಎಂದು ಶಂಕಿಸಿದ್ದಾಯಿತು.   ಏನು ಮಾಡಿದರೂ ಅದರ ಅಳು ನಿಲ್ಲದು. ಮುಖವನ್ನು ಕೆಂಪಾಗಿಸಿಕೊಂಡು, ಉಸಿರುಗಟ್ಟಿ ಅಳತೊಡಗಿದ್ದ ಮಗುವನ್ನು ಕಂಡು ನನಗಂತೂ ಕೈಕಾಲು ನಡುಗಲು ಶುರುವಾಗಿಬಿಟ್ಟಿತ್ತು.   ಅಮ್ಮನಿಗೆ ಅದೇನು ತೋಚಿತೋ, ಎಡಗೈ ಹಿಡಿಯಲ್ಲಿ ಕೆಂಪು ಮೆಣಸಿನಕಾಯಿ, ಇದ್ದಿಲು ಚೂರು, ಉಪ್ಪಿನ ಹರಳನ್ನು ತಂದು ಮಗುವಿಗೆ ನಿವಾಳಿಸಿ,  ಉರಿಯುತ್ತಿದ್ದ ಒಲೆಗೆ ಅದನ್ನು ಹಾಕಿದಳು.  ಇದಾದ ನಂತರ ಮಗು ಅಳು ನಿಲ್ಲಿಸಿ ಶಾಂತವಾಯಿತು!!

ಅಮ್ಮ ಗೆದ್ದವಳಂತೆ ಹೇಳಿದಳು –  ” ನಾನು ಹೇಳಲಿಲ್ಲವಾ? ಮಗುವಿಗೆ ಯಾರದಾದರೂ ಕಣ್ಣು ತಾಗಿದರೆ, ಆ  ನೋಟ ಮಗುವನ್ನು ಮುಳ್ಳಿನಂತೆ ಚುಚ್ಚಿ ನೋಯಿಸುತ್ತದೆ. ಅದಕ್ಕೆ ಮಕ್ಕಳು ದೃಷ್ಟಿಯಾದರೆ ಅಷ್ಟೊಂದು ಅಳುತ್ತವೆ.”  ಅಮ್ಮನ ಈ ವಾದಕ್ಕೆ ಯಾವುದೇ ಆಧಾರವಿಲ್ಲವೆಂದು ತಿಳಿದಿದ್ದರೂ,  ಆಮೇಲೆ ನಾನೆಂದೂ ದೃಷ್ಟಿ ತೆಗೆಯುವ ಬಗ್ಗೆ ಅಮ್ಮನೊಡನೆ ವಾದ ಮಾಡುತ್ತಿರಲಿಲ್ಲ.  ಹೋದರೆ ಒಂದಿಷ್ಟು ಉಪ್ಪು. ಬದಲಿಗೆ ಕಿರಿಕಿರಿಯಿಲ್ಲದೆ ಆಟವಾಡಿಕೊಳ್ಳುವ ಮಗು! ನಾನೇಕೆ ಬೇಡವೆನ್ನಲಿ?  –  ಎಂದು ಸುಮ್ಮನಾಗುತ್ತಿದ್ದೆ.  ಆದರೂ  ಆ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ!

ಇಲ್ಲಿನ ಮಾಲುಗಳಲ್ಲಿ  ಕಾಣಸಿಗುವ  ಮಕ್ಕಳು ಎಷ್ಟೊಂದು ಮುದ್ದಾಗಿರುತ್ತವೆ. ನೋಡಿದವರೆಲ್ಲ ” How cute!”  ಎಂದು ತಮ್ಮ ಮೆಚ್ಚುಗೆ ಸೂಚಿಸುತ್ತಿರುತ್ತಾರೆ.   ಆ ಮಕ್ಕಳಿಗೆಲ್ಲ ಯಾರು ತಾನೇ ದೃಷ್ಟಿ ತೆಗೆಯುತ್ತಾರೆ?

***

7 thoughts on “ದೃಷ್ಟಿ ತಾಕಿತೇ ನಿನಗೆ ರಂಗಯ್ಯ?”

  1. ಅಯ್ಯೋ ನಿಮಗ್ ಗೊತ್ತಿಲ್ಲಾ ಮೆಡಮ್, ಬಾಳಾ ಹುಷಾರ್ ಇರ್ಬೇಕು…ನನ್ ಮಟ್ಟಿಗೆ ದೃಷ್ಟೀ ತಾಗೋದು ಅಂದ್ರೆ ನಿಜಾನೇ…ಕೆಲವ್ರು ಕಣ್ಣು ಬಾಳಾ ಕೆಟ್ಟದ್ದು ನೀವು ಒಂದ್ ಮಗೂ ಚೆನ್ನಾಗೈತೆ ಅನ್ನೋದ್ ಬೇರೆ, ಅದನ್ನ ನೋಡಿ ಕರಬೋದ್ ಬೇರೆ, ಈ ಕರಬೋದ್ರಿಂದಾನೇ ದೃಷ್ಟೀ ಬೀಳ್‌ಬೋದು.

  2. ಓಹ್ ಶ್ರೀ ಅವರೆ,
    ನಿಮ್ಮ ತುಳಸಿವನಕ್ಕೂ ದೃಷ್ಟಿ ಬೊಟ್ಟು ಇಟ್ಟಿದ್ದೀರಲ್ಲಾ….
    ಅದೇ Tulas”i”vana ನೋಡಿ…. ಐ ಮೇಲೆ ಐ ಬೊಟ್ಟು !

  3. ಶ್ರೀ ತ್ರಿ ಅವರೆ,
    ಯಾವುದೇ ಹಾನಿ ಇಲ್ಲದಂತಿದ್ದರೆ ಕೆಲವು ಬಾರಿ ಮೂಢ ನಂಬಿಕೆಗೆ ತಲೆಬಾಗಲೇಬೇಕಾಗುತ್ತದೆ. ಇದರಿಂದ ಕನಿಷ್ಠ ಪಕ್ಷ ಮಾನಸಿಕ ನೆಮ್ಮದಿಯಾದರೂ ಸಿಗುತ್ತಲ್ಲ!

    ಕ್ರಿಕೆಟಿಗ ಶ್ರೀಕಾಂತ್ ಅವರು ಮೈದಾನಕ್ಕೆ ಹೊರಟಾಗ ಸೂರ್ಯನನ್ನು ದೃಷ್ಟಿಸುತ್ತಿದ್ದರು, ಇನ್ನು ಕೆಲವು ಕ್ರಿಕೆಟಿಗರು ತಾಯತ ಧರಿಸುತ್ತಿದ್ದರು ಎಂಬ ಕುರಿತು ಕೇಳಿದ್ದೇವೆ. ಆತ್ಮ ವಿಶ್ವಾಸ ವೃದ್ಧಿಗೆ ಸಹಾಯವಾಗುವುದಾದರೆ ಯಾಕೆ ಬೇಡ?

    ಆದರೆ ಈ ನಂಬಿಕೆ ಅಥವಾ ಅಪ-ನಂಬಿಕೆಯ ಆಚರಣೆಯಲ್ಲಿ ಸ್ವಲ್ಪ ಎಚ್ಚರಿಕೆಯಂತೂ ಬೇಕೇ ಬೇಕು.

  4. ಅನ್ವೇಷಿಗಳೇ, ಸಕತ್ ಅನ್ವೇಷಣೆ! ನಾನೇ ಗಮನಿಸಿರಲಿಲ್ಲ ಇದನ್ನು 🙂

    ಕಾಳು,ಅವಿನಾಶ್ ನೀವೆಲ್ಲ ನಮ್ಮಮ್ಮನ ಕಡೆಗೆ ವೋಟ್ ಮಾಡಿದ್ದೀರಿ ಅನ್ನಿ ಹಾಗಾದರೆ 🙂 

  5. ಅವಿನಾಶ್,

    ಕ್ರಿಕೆಟಿಗ ಶ್ರೀಕಾಂತ್ ಅವರು ಮೈದಾನಕ್ಕೆ ಹೊರಟಾಗ ಸೂರ್ಯನನ್ನು ದೃಷ್ಟಿಸುತ್ತಿದ್ದರು ಅಂದಿದ್ದೀರಿ, ಮಳೆ ಬಂದು ಆಟಕ್ಕೆ ತೊಂದರೆಯಾದೀತೇನೋ ಅಂತ  ಆಕಾಶ ನೋಡಿರಲೂಬಹುದು ಅಲ್ಲವಾ? 🙂
    ಆದರೂ ಕ್ರಿಕೆಟ್ ಪಟುಗಳಿಗೆ, ಸಿನಿಮಾ ತಾರೆಗಳಿಗೆ, ರಾಜಕಾರಣಿಗಳಿಗೆ ಇಂತಹ ನಂಬಿಕೆಗಳು ಸಾಮಾನ್ಯರಿಗಿಂತ ಸ್ವಲ್ಪ ಹೆಚ್ಚೇ ಅನ್ನಿಸುತ್ತದೆ.

  6. ಮಾನ್ಯರೇ,
    ಸಾಮಾನ್ಯವಾಗಿ ಇಂತಹ ಆಚರಣೆಗಳು ನಮಗೆ ಮೂಢನಂಬಿಕೆಗಳೆಂದು ಅನ್ನಿಸಿಬಿಡುವುದು ಸಹಜ. ಈ ನಂಬಿಕೆಗಳನ್ನು ಜನಪದ ಆಚರಣೆಗಳಿಂದ ಪ್ರತ್ಯೇಕಿಸುವುದೂ ಕಷ್ಟ. ಸರ್ಕಾರವನ್ನೇ ನೋಡಿ, ಮೂಢನಂಬಿಕೆಗಳಿಗೆ ಬಲಿಬೀಳಬೇಡಿ ಎನ್ನುವ ಸರ್ಕಾರದ ಇಲಾಖೆಗಳು ನಾಟಿವೈದ್ಯರಿಗೂ ಪ್ರಶಸ್ತಿ ನೀಡುತ್ತವೆ. ಏನಂತೀರಿ? ಒಟ್ಟಿನಲ್ಲಿ, ಯಾವುದಾದರೂ ಆಚರಣೆಯಲ್ಲಿ ಯಾರಿಗೂ ತೊಂದರೆ ಇಲ್ಲವೆಂದರೆ ಅದನ್ನು ಆಚರಿಸಿದರೆ ಸಮಸ್ಯೆ ಇಲ್ಲ ಎನ್ನುವುದು ನನ್ನ ಅನಿಸಿಕೆ. ಇಂತಹ ಕಾಂಪ್ಲೆಕ್ಸಿಟಿ ಬದುಕು ನಮ್ಮದು!

  7. ವೇಣುವಿನೋದ್ , ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಮತ್ತು ತುಳಸಿವನಕ್ಕೆ ಸ್ವಾಗತ.

    ನಾಟಿ ವೈದ್ಯವೆಂದರೆ ಗಿಡಮೂಲಿಕೆಗಳ ಮೂಲಕ ಮಾಡುವ ಔಷಧಿ ಅಲ್ಲವೇ? ಕೆಲವು ಖಾಯಿಲೆಗಳಿಗೆ ಇಂಗ್ಲೀಷ್ ವೈದ್ಯಕ್ಕಿಂತ ನಾಟಿವೈದ್ಯವೇ ಪರಿಣಾಮಕಾರಿ ಎನ್ನುತ್ತಾರೆ. ನಿಜವೋ, ಸುಳ್ಳೋ ತಿಳಿದವರೇ ಹೇಳಬೇಕು.

Leave a Reply to ವೇಣುವಿನೋದ್‌ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.