ಕವಿ – ಕೆ.ಎಸ್.ನರಸಿಂಹಸ್ವಾಮಿ
ಗಾಯಕಿ – ಎಸ್.ಜಾನಕಿ
ಸಂಗೀತ – ಸಿ.ಅಶ್ವಥ್          

ಹಾಡು ಕೇಳಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ

*         *         *

9 thoughts on “ಆಸೆ – ಕೆ.ಎಸ್.ನ”

  1. ಶ್ರೀ ತ್ರೀ ಅವರೆ,
    ಈ ಹಾಡಿನ ಸಾಹಿತ್ಯ ಎಷ್ಟು ಚೆನ್ನಾಗಿದೆಯೋ… ಅಶ್ವಥ್ ಸಂಗೀತದೊಂದಿಗೆ ಎಸ್.ಜಾನಕಿ ಅವರ ಶಾರೀರವೂ ಅಷ್ಟೇ ಚಿನ್ನಕ್ಕೆ ಒಪ್ಪ ಹಾಕಿದಂತಿದೆ… ಎಷ್ಟು ಕೇಳಿದರೂ ಮತ್ತಷ್ಟು ಕೇಳುವಂತೆ ಮಾಡುವ ಹಾಡು…

    ನೆನಪಿಸಿದ್ದಕ್ಕೆ ಧನ್ಯವಾದ.

    ಶುಭಾಶಯ ಕೋರಿದ್ದಕ್ಕೂ ತುಂಬಾ ತುಂಬಾ ಧನ್ಯವಾದ. 🙂

  2. ಧನ್ಯವಾದಗಳು ಅವಿನಾಶ್ , ಹುಟ್ಟುಹಬ್ಬ ಹೇಗೆ ಆಚರಿಸಿಕೊಂಡ್ರಿ ಅಂತ ತಿಳಿಸಲೇ ಇಲ್ಲ. 🙂

  3. ಈ ಪದ್ಯಗಳ ಶೀರ್ಷಿಕೆ ಮೇಲೇನೇ ನನಗೆ ಅನುಮಾನ, ಕೆ.ಎಸ್.ನ. ಅವರು ತಮ್ಮ ಪದ್ಯಗಳ ಶೀರ್ಷಿಕೆಯನ್ನ ಮೊದಲ ಸಾಲಿನ ಕೆಲವು ಪದಗಳಿಗೇಕೆ ಸೀಮಿತ ಮಾಡಿದ್ರೂ ಅಂತ ಯೋಚಿಸ್ತಾ ಇದ್ದೆ…

    ಉದಾಹರಣೆಗೆ ಈ ಪದ್ಯವನ್ನ ಸರಳವಾಗಿ ‘ಆಸೆ’ ಅನ್ನಬಹುದಿತ್ತು, ಅಥವಾ ಇನ್ನೇನೋ ಆಗಬಹುದಿತ್ತು…

    ಪ್ರತಿ ಸಾಲಿನಲ್ಲೂ ನಿಸರ್ಗದ ಸರಳ ಸಂಭ್ರಮದಿಂದ ಸಣ್ಣ ಎಳೆಯೊಂದನ್ನು ಹೊರಗೆ ತೆಗೆದು ಬದುಕಿನ ಊರುಗೋಲಾದ ‘ಆಸೆ’ಯ ಜೊತೆ ಮಾಡಿ ಕೊನೆಯಲ್ಲಿ ಮಾನವ ಹೃದಯದ ಬೃಹದಾಳವನ್ನು ತೋರಿಸಿರೋ ಕವಿಗೆ ನಮನ.

  4. ಎಷ್ಟೊಂದು ಆಸೆಗಳು….

    “ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ” ಈಡೇರಿದರೆ ಭವಿಷ್ಯ ಭದ್ರವಾಗಬಹುದೇ? 🙂

  5. ಕಾಳು, ಈ ಕವನದ ಹೆಸರು “ಆಸೆ” ಅಂತ ಇದ್ದರೂ ಇರಬಹುದೇನೋ. ನನಗೆ ಗೊತ್ತಿಲ್ಲ. ನಾನು ಬರೆದಿರುವುದು ಕವನದ ಹೆಸರಲ್ಲ, ಹಾಡಿನ ಮೊದಲ ಪದಗಳು .

  6. ಕವನದ ಹೆಸರು ತಿಳಿಸಿದ್ದಕ್ಕೆ ಧನ್ಯವಾದಗಳು ಮಾಲಾ. ನಾನು ಕೆ.ಎಸ್.ನರಸಿಂಹಸ್ವಾಮಿಯವರ ಕವನಗಳನ್ನು (ಬಹಳ ಜನರಂತೆ) ಹಾಡಿನ ರೂಪದಲ್ಲಿ ಕೇಳಿರುವುದೇ ಹೆಚ್ಚು. “ದೀಪವು ನಿನ್ನದೇ” ಈ ಕವಿತೆಯ ಶೀರ್ಷಿಕೆಯನ್ನು ಕೂಡ, ಗೊತ್ತಿದ್ದರೆ ತಿಳಿಸಿ.

  7. ಶ್ರೀತ್ರೀ ಅವರೇ,
    ದೀಪವು ನಿನ್ನದೇ ಕವನದ ಶೀರ್ಷಿಕೆ “ಪ್ರಥಮ ರಾಜನಿಗೆ” ಎಂದು
    (ವಿ.ಸೂ.ಮುಂದಿನ ಬಾರಿ ಕನ್ಸಲ್ಟಿಂಗ್ ಗೆ ಛಾರ್ಜ್ ಮಾಡಲಾಗುತ್ತೆ!)

  8. ಪರವಾಗಿಲ್ಲ. ನಿಮ್ಮಕನ್ಸಲ್ಟಿಂಗ್ ಛಾರ್ಜ್ ಎಷ್ಟು ಎಂಬುದನ್ನೂ ತಿಳಿಸಿ. ಸದ್ಯಕ್ಕೆ ಧನ್ಯವಾದ ತೆಗೆದುಕೊಂಡು ಅಡ್ಜಸ್ಟ್ ಮಾಡಿಕೊಳ್ಳಿ 🙂

    ಈ ಕವನಗಳೆಲ್ಲ ನಿಮ್ಮ ಬಳಿ ಇರುವ “ಹಾಡು-ಹಸೆ” ಪುಸ್ತಕದಲ್ಲಿದೆಯೇ?

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.