ವಾಯುವಿಹಾರ – ಸುಪ್ತದೀಪ್ತಿ 

ಬರಹೇಳಿದ್ದ ದುಷ್ಯಂತ.
ಮರದ ಕೆಳಗೆ ಕಾದಳು,
ಕಾದೇ ಕಾದಳು ಇವಳು.
ಬೆರಳಲ್ಲಿ ಉಂಗುರ,
ಬಾನಲ್ಲಿ ಚಂದಿರ.

ರಥವಿಲ್ಲದ ಕುದುರೆಯಲ್ಲಿ
ಟಕಟಕಿಸುತ್ತ ಬಂದ ನಲ್ಲ
ಹತ್ತು – ಎಂದ.
ಹಿಂದೆ-ಮುಂದೆ ನೋಡದೆ,
ಕಣ್ವ-ಗೌತಮಿಯರ ನೆನೆಯದೆ,
ಬೆನ್ನಿಗಂಟಿದಳು,
ಕಣ್ಣು ಮುಚ್ಚಿದಳು.

ಗಾಳಿಯ ಸುಗಂಧ ಇವನದೇ.
ಕುದುರೆಯ ವೇಗ ಮನಸಿನದೇ.

ಎಚ್ಚರಾದಾಗ-
ಉಂಗುರ ಮೀನಿನೊಳಗಿತ್ತು.
ಮುದಿ ಕುದುರೆ ಕುಂಟುತ್ತಿತ್ತು.
ಮರದ ಒಂಟಿ ನೆರಳು
ಕಾದು ಕಾದು… ಕರಟಿತ್ತು.
ಭರತ ನಗುತ್ತಿದ್ದ.

(೧೬-ಸೆಪ್ಟೆಂಬರ್-೨೦೦೬ )

*      *     *        *
ಶಿವೋಹಂ – ಸುಪ್ತದೀಪ್ತಿ

ಜ್ಞಾನ ಮುದ್ರಾಂಕಿತ ಧ್ಯಾನಯೋಗಿಯ
ಅರ್ಧನಿಮೀಲಿತ ರೆಪ್ಪೆಗಳ ಕೆಳಗೆ
ಸಿಡುಕು ಮೂಗಿನ ನೇರದೊಳಗೆ
ಅರೆ-ಬರೆಯಾಗಿ ಕಂಡದ್ದು
ಅಂತಃಪುರದ ಹಂಸತಲ್ಪದಡಿಯಲ್ಲಿ
ಕುರುಡುಗತ್ತಲ ಮೂಲೆಯಲ್ಲಿ
ಮೂಷಿಕ ಸವಾರಿ ಹೊರಟ
ಮುದ್ದಿನ ಕುವರ
ಲೋಕ ಸುಟ್ಟರೂ ತೊಂದರೆಯಿಲ್ಲ
ಕೆಂಡಗಣ್ಣನ ಕೋಪ
ಆರದೆ ವಿಧಿಯಿಲ್ಲ
ಬಲಿಯಾಗಲೇಬೇಕು
ತಲೆಕೊಡಲು ಯಾರಿದ್ದೀರಿ
ಕಂದನ ಮುಂಡಕ್ಕೆ?

*         *
(೦೮-ಸೆಪ್ಟೆಂಬರ್-೨೦೦೬ )

3 thoughts on “ಸುಪ್ತದೀಪ್ತಿಯವರ ಎರಡು ಕವನಗಳು”

  1. ಯಾರಿದು ಸುಪ್ತ ದೀಪ್ತಿ…?
    ಎಲ್ಲೋ ಹೆಸರು ಕೇಳಿದ ಹಾಗಿದೆಯಲ್ಲಾ…
    ಹಾಂ… ಹಾಂ…. ಈಗ ನೆನಪಾಯಿತು…
    ಈ ಹಾಡಿನ ಶೀರ್ಷಿಕೆಯಲ್ಲೇ ಇದೆಯಲ್ಲಾ…!!!

  2. ಅನ್ವೇಷಿಗಳೇ, ಯಾವ ಹಾಡಿನ ಶೀರ್ಷಿಕೆ? ನಿಮಗೇನು ನೆನಪಾಯಿತು? ಸ್ವಲ್ಪ ವಿವರಿಸಿ.

    “ಸುಪ್ತದೀಪ್ತಿ” – ಎಂಬುದು ಲೇಖಕಿ – ಜ್ಯೋತಿ ಮಹಾದೇವ್ – ಅವರ ಕಾವ್ಯನಾಮ. ಜ್ಯೋತಿಯವರು ಅಮೆರಿಕಾ, ಕ್ಯಾಲಿಫೋರ್ನಿಯಾ ನಿವಾಸಿ.

  3. ಏನಿಲ್ಲ ಶ್ರೀ ತ್ರೀ ಅವರೆ,
    ಎಲ್ಲೋ ಕೇಳಿದ ಹಾಗಿತ್ತು ಅಂದಿದ್ದೇಕೆಂದರೆ….
    ಬೇರೆಲ್ಲೂ ಕೇಳಿಲ್ಲ…. ಮೇಲಿಂದ ನೋಡ್ತಾ ಕೆಳಗೆ ಬರುವಾಗ
    ಮೇಲೇ ಇತ್ತಲ್ವಾ (“ಸುಪ್ತದೀಪ್ತಿಯವರ ಎರಡು ಕವನಗಳು”) ಅಂತ ನೆನಪಾಗಿದ್ದು ನನಗೆ 🙂

Leave a Reply to Anveshi Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.