ರಚನೆ : ಗೋಪಾಲದಾಸರು
ವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪ | ಪ |
ನೀದಯದಲಿ ತವ ಪಾದ ಧ್ಯಾನವನು ಆದರದಲಿ ಕೊಟ್ಟಾದರಿಸೆನ್ನನು | ಅ.ಪ |
ಮೂಷಕ ಬಿಲದಿಂದಾ ಉದರಪೋಷಕೆ ಬರಲಂದು
ವಾಸುಕಿ ಭಯದಿ ನಿಮ್ಮಾಸನದಡಿ ಬರೆ
ಕ್ಲೇಶ ಕಳೆದು ಸಂತೋಷವಗೈಸಿದೆ | ೧ |
ಮುಂದೆ ಭೂತವರನಾ ಪ್ರೇರಿಸೆ ಹಿಂದೆ ಒಬ್ಬ ನರನಾ
ನಿಂದರಿಸ್ಯತಿ ಆನಂದದಿಂದ ಜನ-ವೃಂದ ನೋಡುತಿರೆ
ಅಂದಣನಡಿಸಿದ್ಯೊ | ೨ |
ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತನ ಗೆಲಿದಿಲ್ಲಿ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ | ೩ |
ತುರಗ ವದನ ಪಾದಾ ಭುಜದಲಿ ಧರಿಸಿಕೊಂಡ ಮೋದ
ವರಕಡಲೆ ಮಡ್ಡಿಯನು ಕರದಿಂದ
ಧರಿಸಿ ಉಣಿಸಿದೆ ಗುರುವರ ಶುಭಕರ | ೪ |
ಆ ಮಹಾ ಗೋಪಾಲವಿಠಲನ ಪ್ರೇಮ ಪೂರ್ಣ ಪಾತ್ರ
ಧೀಮಂತರಿಗೆ ಸುಕಾಮಿತಾರ್ಥಗಳ ನೇಮದಿಂದೀಯುವ ಪಾವನ ಚರಿತ | ೫ |