ಚಿತ್ರ – ಚಿನ್ನಾರಿ ಮುತ್ತ (೧೯೯೩)
ಸಾಹಿತ್ಯ – ಎಚ್.ಎಸ್.ವೆಂಕಟೇಶಮೂರ್ತಿ
ಸಂಗೀತ – ಸಿ. ಅಶ್ವಥ್
ಗಾಯಕರು – ಬೇಬಿ ರೇಖಾ ಮತ್ತು ಸಂಗಡಿಗರು
ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ
ಕಾಲೊಂದಿದ್ದರೆ ಸಾಕೇ?
ಚಿಗರಿಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ
ಹೂವೊಂದಿದ್ದರೆ ಸಾಕೇ?
ಬ್ಯಾಡವೇ ಗಾಳಿ
ನೀವೇ ಹೇಳಿ
ಕಂಪು ಬೀರೋಕೆ
ಮುಖವೊಂದಿದ್ದರೆ ಸಾಕೇ?
ದುಂಬಿಯ ತಾವ
ಬ್ಯಾಡವೇ ಹೂವ
ಜೇನ ಹೀರೋಕೆ ||ರೆಕ್ಕೆ ಇದ್ದರೆ ಸಾಕೇ?||
ನೀರೊಂದಿದ್ದರೆ ಸಾಕೇ?
ಬ್ಯಾಡವೇ ಹಳ್ಳ
ಬಲ್ಲವ ಬಲ್ಲ
ತೊರೆಯು ಹರಿಯೋಕೆ
ಮೋಡ ಇದ್ದರೆ ಸಾಕೇ?
ಬ್ಯಾಡವೇ ಭೂಮಿ
ಹೇಳಿ ಸ್ವಾಮಿ
ಮಳೆಯು ಸುರಿಯೋಕೆ ||ರೆಕ್ಕೆ ಇದ್ದರೆ ಸಾಕೇ?||
ಕಣ್ಣೊಂದಿದ್ದರೆ ಸಾಕೇ?
ಬ್ಯಾಡವೇ ಮಂದಿ
ಕಣ್ಣಿನ ಮುಂದೆ
ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೇ?
ಬ್ಯಾಡವೇ ಹಾಡು
ಎಲ್ಲರ ಜೋಡಿ
ಕೂಡಿ ಹಾಡೋಕೆ
ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ
**************
ಇಂಥ ಮುಗ್ಧ ಸಾಹಿತ್ಯ ಕೇಳಿ ಮೈ ಮನಸ್ಸು ಎಲ್ಲಾ ಪಾವನವಾಯ್ತು ಅನ್ನಿಸ್ತಾ ಇದೆ. ಈ ಹಾಡನ್ನ ನಾನು ಚಿತ್ರಮಂಜರಿ(video)ಯಲ್ಲಿ ಒಮ್ಮೆ ನೋಡಿದ್ದು, ಇದರ ಚಿತ್ರೀಕರಣ ಇನ್ನೂ ನನ್ನ ಕಣ್ಣ ಮುಂದಿದೆ. ಏನೂ ಅರಿಯದ ಹುಡುಗರು ಬಯಲಲ್ಲಿ ಹಾಡುತ್ತಾ ಓಡುತ್ತಾ ಹಾಡುವ ಹಾಡು. ‘ಬಾನು ಇಲ್ಲದಿದ್ದರೆ ಹಕ್ಕಿಗೆ ರೆಕ್ಕೆ ಇದ್ದು ಏನೂ ಪ್ರಯೋಜನವಿಲ್ಲ, ಮಿಂಚಿನಂತೆ ಓಡುವ ಜಿಂಕೆಗೆ ಕಾನನವೇ ಇಲ್ಲದಿದ್ದರೆ ಕಾಲಿದ್ದೇನು ಪ್ರಯೋಜನ?’ ಎಷ್ಟು ಚಂದದ ಸಾಹಿತ್ಯ. ಪ್ರಕೃತಿ ಹೇಗೆ ಪ್ರತಿಯೊಂದು ಜೀವದೊಂದಿಗೆ ಬೆಸೆದಿದೆ ಅಂತ ಯೋಚಿಸಿದರೆ ತುಂಬಾ ಆಶ್ಚರ್ಯ ಆಗತ್ತೆ.
ಇನ್ನು ಸಿ.ಅಶ್ವಥ್ ಅವರ ರಾಗಸಂಯೋಜನೆ ಅಂತೂ ಈ ಚಿತ್ರಕ್ಕೆ ತುಂಬಾ ಮೆರಗು ಕೊಟ್ಟಿದೆ. ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಇಂಪಾಗಿದೆ. ನಂಗೆ ಈ ಹಾಡಿನಷ್ಟೇ ಇಷ್ಟವಾದ ಇನ್ನೊಂದು ಹಾಡು ಅಂದರೆ ‘ಎಷ್ಟೊಂಜನ ಇಲ್ಲಿ ಯಾರು ನಮ್ಮೋರು’ ಇದರ ಸಾಹಿತ್ಯ ಮತ್ತು ರಾಗಸಂಯೋಜನೆ ಕೂಡ ತುಂಬಾ ಚೆನ್ನಾಗಿದೆ.
ವೇಣಿ, ಗಾಯಕ(ಕಿ) ಬಗ್ಗೇನೂ ಬರೆದಿದ್ದರೆ ಚೆನ್ನಾಗಿರೋದು.
ಹೌದು ಮೀರಾ. ಸಿನಿಮಾನೂ ಚೆನ್ನಾಗಿತ್ತು. ಮಕ್ಕಳಿಂದ ಡ್ಯಾನ್ಸ್ ಮಾಡಿಸಲು ಸೂಕ್ತವಾದ ಹಾಡುಗಳು.
ಗಾಯಕರ ಹೆಸರು ಸರಿಯಾಗಿ ಗೊತ್ತಿಲ್ಲ, ಅರ್ಚನಾ ಉಡುಪ, ಸಂಗೀತ…ಇನ್ನೂ ತುಂಬಾ ಮಕ್ಕಳು ಹಾಡಿದ್ದಾರೆ. ಅಲ್ಲಿ ಬೇಬಿ ರೇಖಾ ಹೆಸರು ಮಾತ್ರ ಇದೆ…
ಎಚ್.ಎಸ್.ವಿ. ಅವರನ್ನು ಘಟಾನುಘಟಿಗಳೆಲ್ಲ ‘ಉದಯೋನ್ಮುಖ ಕವಿ’ ಎಂದು ಬಹಳ ವರ್ಷಗಳ ವರೆಗೆ ಬದಿಗೆ ತಳ್ಳಿದ್ದನ್ನು ಪ್ರಶ್ನಿಸುವಂತೆ ಅವರ ಹಲವಾರು ಕೃತಿಗಳನ್ನು ಕಂಡು ಬೆರಗಾಗಿದ್ದೇನೆ. ಚಿನ್ನಾರಿ ಮುತ್ತದ ಸಾಲುಗಳು ಗ್ರಾಮೀಣ ಬೆಡಗನ್ನು ಸರಳ ಹಾಗೂ ಸಹಜವಾದ ಅಚ್ಚರಿಯಲ್ಲಿ ಸಾಮಾನ್ಯ ಪಾತ್ರಗಳು ಹೊರಹೊಮ್ಮಿಸುವುದು ನಿಜಕ್ಕೂ ಅದ್ಭುತವಾಗಿ ಮೂಡಿದೆ.
ರೆಕ್ಕೆ, ಮೋಡ, ಹಕ್ಕಿ, ಜಿಂಕೆ ಮುಂತಾದವುಗಳ ಏಕ(ವ್ಯಕ್ತಿ) ಧ್ವನಿ ಬಾನು, ಕಾಡು, ಗಾಳಿ, ಭೂಮಿ ಮುಂತಾದವುಗಳ ಜೊತೆ ನೇರ ಸಂಪರ್ಕವನ್ನು ಬೆಳೆಸಿ ಇವೆರಡೂ ಸೇರಿದರೆ ಮಾತ್ರ ಫಲಿತಾಂಶ ಎನ್ನುವುದಷ್ಟೇ ಅಲ್ಲದೆ ಪ್ರತಿಯೊಬ್ಬರೂ ತಮ್ಮ ಪರಿಸರವನ್ನು ಆಶ್ರಯಿಸುವ ಬಗೆಯನ್ನು ಈ ಸಾಲುಗಳು ಚೆನ್ನಾಗಿ ಬಿಂಬಿಸಿವೆ. ಕವನದಲ್ಲಿ ಸರಳವಾದ ಪ್ರಶ್ನೆಗಳ ಆಶಯವಿರುವುದು ಕಂಡುಬಂದರೂ ಸಾಲುಗಳ ಒಟ್ಟು ಮರ್ಮ ಗಂಭೀರವಾದದ್ದೇ.
ಕಾಳು, ಮೊನ್ನೆ ಮೊನ್ನೆಯವರೆಗೂ ಎಚ್.ಎಸ್.ವಿ, ಬಿ.ಆರ್.ಎಲ್, ಜಯಂತ ಕಾಯ್ಕಿಣಿ, ವ್ಯಾಸರಾವ್ ….ಇವರನ್ನೆಲ್ಲಾ ಉದಯೋನ್ಮುಖ ಕವಿ, ಯುವ ಕವಿ ಅಂತ ಕರೆಯುತ್ತಿದ್ದುದು ನೆನಪಿದೆ. ಯಾಕೆ ಕರೆಯುತ್ತಿದ್ದರು ಅಂತ ಯಾವತ್ತೂ ಯೋಚಿಸಿರಲಿಲ್ಲ..
ಮೊನ್ನೆ ಬಿ.ಆರ್.ಲಕ್ಷ್ಮಣರಾವ್‍ಗೆ ಅರವತ್ತು ವರ್ಷ ಅಂತ ಗೊತ್ತಾದಾಗ – ಅಯ್ಯೋ ಈ ತುಂಟ ಯುವಕವಿಗಳೆಲ್ಲಾ ಹಿರಿಯ ಕವಿಗಳಾಗಿ ಹೋದರಲ್ಲಾ ಎಂದು ಸ್ವಲ್ಪ ಬೇಜಾರಾಗಿದ್ದು ನಿಜ 🙂
sorry, nange kannada fonts nalli hege type maaDodu gottagtilla. dayavittu instruct maadtira.
“chigurida kanasu” is one more movie by which i get inspired listening to. “swades” was inspired by this national award winning movie. However, most of kannadigas fatefully doesnt recognize the richness of kannada & that a pity
rennie606 , Just try to browse these pages. it may help you.
http://sampada.net/fonthelp
http://en.wikipedia.org/wiki/Wikipedia:Kannada_support
>ಹೂವೊಂದಿದ್ದರೆ ಸಾಕೇ?
ಬ್ಯಾಡವೇ ಗಾಳಿ
ನೀವೇ ಹೇಳಿ
ಕಂಪು ಬೀರೋಕೆ
ಸುಂದರ ಸಾಲುಗಳು !
ನೀವು ಹಾಡು ಆರಿಸಿದೋರಲ್ಲಿ ಸುಪರ್ !