ಕವಿ – ಕೆ.ಎಸ್.ನರಸಿಂಹ ಸ್ವಾಮಿ
ಸಂಗೀತ – ಪ್ರವೀಣ್ ಗೋಡ್ಕಿಂಡಿ
ಗಾಯಕಿ – ಎಂ.ಎಸ್.ಶೀಲಾ

ಹಾಡು ಕೇಳಿ

ಕೊಳದ ಪಕ್ಕದ ಹೊಲದ
ಮೈತುಂಬಾ ನಾ ಕಂಡೆ
ಬಿಳಿ ಹಳದಿ ಹೂಗಳನು ಸೇವಂತಿಗೆ
ನೀರ ಮೇಗಣ ಗಾಳಿ ಬೀಸಿತೋ ನನ ಮೇಲೆ
ಅದರ ಕಂಪಿಗೆ ನಾನು ಮಾರು ಹೋದೆ

ಅಲ್ಲೊಂದು ತಾಣದಲಿ
ಜಾಲಿ ಹೂಗಳ ಕಂಡೆ
ಕೆಂಡ ಸಂಪಿಗೆ ಬಿತ್ತು ನನ್ನ ಮೇಲೆ
ಬಾಂದಳದ ತನಕ ಸೇವಂತಿಗೆಯ ಆಹ್ವಾನ
ಚೆಲುವಿಗಿಂಪಿಗೆ ನಾನು ಕೈಯ ಮುಗಿದೆ

ಒಲವು ದೇವರ ಹೆಸರು
ಚೆಲುವು ಹೂವಿನ ಬದುಕು
ಸೇವಂತಿಗೆಯ ಬದುಕು ಕಂಪಿನಲ್ಲಿ
ಎಲೆಮರೆಯ ಹಕ್ಕಿ ಹಾಡಾಗುವುದು ಕೋಗಿಲೆ
ಧನ್ಯತೆಯ ಕಾಣುವುದು ಇಂಪಿನಲ್ಲಿ

ಹಕ್ಕಿ ಹಾಡಿನ ನಡುವೆ
ಅರಳಿತ್ತು ಹಳದಿ ಹೂ
ಬಿಳಿಯ ಹೂ ಅರಳಿತ್ತು ಸೋನೆಯಲ್ಲಿ
ಕೋಗಿಲೆಯ ಹೊಸ ಹಾಡ ಕೇಳುತ್ತ ಮುನ್ನಡೆದೆ
ನನ್ನ ಬುಟ್ಟಿಯ ತುಂಬಾ ಸೇವಂತಿಗೆ!

**********************

8 thoughts on “ಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿ”

  1. ವಹ್,

    ಕೇಳಿರ್ಲಿಲ್ಲ.

    🙂 🙂 🙂

    ಎಮ್.ಎಸ್.ಶೀಲ, ದ್ವನಿ, ಭಾವ ಎರಡೂ ಹಿತ ಮತ್ತು ಸೊಗಸು.
    ಪ್ರವೀಣ್, ಸುಮಧುರ ಸಂಗೀತ ನೀಡಿದ್ದಾರೆ.

    ಒಟ್ಟಿನಲ್ಲಿ ಹಿತಾನುಭವ!

    ಇಂತಿ
    ಪುಳಕಿತ ಭೂತ

  2. ಹೌದು.  ಪ್ರವೀಣ್ ಗೋಡ್ಕಿಂಡಿ ಸಂಗೀತ ಚೆನ್ನಾಗಿದೆ.  ಹಾಡಿನಲ್ಲಿ ಪ್ರವೀಣ್ ಕೊಳಲು ನಲಿದಾಡುತ್ತದೆ 🙂

    ಭೂತವೇ, ಹಾಡಲ್ಲಿ ಏನಾದರೂ ತಪ್ಪಿದ್ದರೆ ತಿಳಿಸು.

  3. ಉತ್ತಮ ಹಾಡುಗಾರಿಕೆ – ಉತ್ತಮ ಸಾಹಿತ್ಯ

    ಉತ್ತಮ ಕೊಡುಗೆ. ಕ್ಷಮಿಸಿ ಬಹಳ ದಿನಗಳಿಂದ ಈ ಕಡೆ ಬರಲಾಗಿಲ್ಲ. ಶ್ರೀತ್ರಿಯವರದ್ದೇನು ಮತ್ತೆ?

  4. ತ್ರಿವೇಣಿಯವರೇ,

    ಕೊಳದ ಪಕ್ಕದ ಸೇವಂತಿಗೆ ತೋಟದಲ್ಲಿ ಕರಕೊಂಡು ಹೋಗಿ ಕೋಗಿಲೆ ಹಾಡು ಕೇಳಿಸಿದ್ದಕ್ಕೆ ವಂದನೆಗಳು. ಕೆ‍ಎಸ್‍ನ ಅವರಿಗಲ್ಲದೆ ಬೇರೆ ಯಾರೂ ಈ ತರ ಮನಕ್ಕೆ ಪುಳಕ ನೀಡುವ,ಮನಕ್ಕೆ ಮುದ ನೀಡುವ ಕವನ ನೀಡೋಕೇ ಸಾಧ್ಯ?

    ಸುಂದರ ಸುಲಲಿತ ಕವನ..

  5. ತವಿಶ್ರೀಯವರೆ, ಧನ್ಯವಾದಗಳು. ಈಚೆಗೆ ಅಪರೂಪವಾಗಿದ್ದೀರಿ. busy ಅನ್ನಿಸತ್ತೆ. ಶ್ರೀಶ್ರೀಶ್ರೀ ಎಂದು ಬೇರೆ ಹೆಸರು ಹಾಕಿಕೊಂಡಿದ್ದೀರಿ. ಯಾವುದಾದರೂ ಮಠದ ಜವಾಬ್ದಾರಿ ಗಂಟು ಬಿದ್ದಿದೆಯೋ ಹೇಗೆ? 🙂

  6. ಕೆ‍ಎಸ್‍ನ ಅವರಿಗಲ್ಲದೆ ಬೇರೆ ಯಾರೂ ಈ ತರ ಮನಕ್ಕೆ ಪುಳಕ ನೀಡುವ,ಮನಕ್ಕೆ ಮುದ ನೀಡುವ ಕವನ ನೀಡೋಕೇ ಸಾಧ್ಯ? –

    ಶಿವು, ನೂರಕ್ಕೆ ನೂರು ನಿಜ. ಹಾಗಾಗಿಯೇ ಕೆ.ಎಸ್.ನ ನನ್ನ ಅಚ್ಚುಮೆಚ್ಚಿನ ಕವಿ. 🙂

  7. ಜೋಶಿಯವರಿಗೆ ಪಡಿನುಡಿ –  

    ಅನ್ನಿ (ಅಂದು) ಸತ್ತವರಿಲ್ಲವೋ, ನಂಬಿ ಕೆಟ್ಟವರಿಲ್ಲವೋ ತರಹ 🙂

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.