ಶಾಲ್ಮಲಾ – ಚಂಪಾ

ಕವಿ – ಚಂದ್ರಶೇಖರ ಪಾಟೀಲ
ಸಂಗೀತ – ಸಿ. ಅಶ್ವಥ್
ಗಾಯಕ – ಸಿ. ಅಶ್ವಥ್

ಹಾಡು ಕೇಳಿ

ಎಲ್ಲೋ ಹುಟ್ಟಿ
ಎಲ್ಲೋ ಬೆಳೆದು
ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ
ಒಳಗೊಳಗೇ ಕೊರೆಯುವವಳು

ಸದಾ….
ಗುಪ್ತಗಾಮಿನಿ
ನನ್ನ ಶಾಲ್ಮಲಾ|

ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು

ಸದಾ…
ತಪ್ತಕಾಮಿನಿ ನನ್ನ ಶಾಲ್ಮಲಾ|

ಭೂಗರ್ಭದ ಮೌನದಲ್ಲಿ
ಜುಂಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ
ಕನಸಿನಲ್ಲಿ ತುಳುಕುವವಳು

ಸದಾ..
ಸುಪ್ತಮೋಹಿನಿ ನನ್ನ ಶಾಲ್ಮಲಾ|

ನನ್ನ ಬದುಕ ಭುವನೇಶ್ವರಿ
ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ
ನನ್ನ ಶಾಲ್ಮಲಾ

ಸದಾ…
ಗುಪ್ತಗಾಮಿನಿ ನನ್ನ ಶಾಲ್ಮಲಾ|
 

**********************

8 thoughts on “ಶಾಲ್ಮಲಾ – ಚಂಪಾ”

  1. ತಪ್ತಕಾಮಿನಿ – ಸುಪ್ತಮೋಹಿನಿ – ಗುಪ್ತಗಾಮಿನಿ …

    ಚಂಪೂ (ಪಾ) ಕಾವ್ಯ ಚೆನ್ನಾಗಿದೆ!

    ಜೀವ ಹಿಂಡಿ ಹಿಪ್ಪೆ ಮಾಡುವವಳಾದರೆ, ಪದ್ಯಕ್ಕೆ ಇನ್ನೊಂದು ಚರಣವನ್ನು ಸೇರಿಸಿ ಅದರಲ್ಲಿ ‘ದುಷ್ಟಡಾಕಿಣಿ’ ಎಂದು ಪ್ರಾಸ ಮಾಡಿ ಆಕೆಯ ಗ್ರಾಸವಾಗಬಹುದಿತ್ತೋ ಏನೊ!

  2. sritri says:

    ಜೋಶಿಯವರೇ, ಈ ಕವನ ಬರೀ ಜೀವ ಹಿಂಡಿ ಹಿಪ್ಪೆ ಮಾಡುವ ಹೆಣ್ಣು/ಹೆಂಡತಿಯ ಬಗೆಗೆ ಇದ್ದರೆ ಚಂಪಾ ನೀವಂದಂತೆ ಬರೆದಿರುತ್ತಿದ್ದರೋ ಏನೋ. 🙂

    ಆದರೆ ಈ ಕವನದಲ್ಲಿ, ಧಾರವಾಡದ ಸನಿಹ ಹುಟ್ಟಿ,ಹರಿಯುವ ಶಾಲ್ಮಲಾ ನದಿಯನ್ನು ಹೆಣ್ಣಿನೊಡನೆ ಸಮೀಕರಿಸಲಾಗಿದೆ- (ನಾನು ಅರ್ಥ ಮಾಡಿಕೊಂಡಂತೆ). ದಾಹ ನೀಗುವ ಜೀವ ನದಿಯನ್ನು” ದುಷ್ಟ ಡಾಕಿಣಿ” ಎನ್ನುವ ದುಸ್ಸಾಹಸವನ್ನು ಚಂಪಾ ಮಾಡಿರಲಾರರು.

  3. Anveshi says:

    ಅಬ್ಬಾ….
    ಶ್ರೀ ತ್ರೀ ಅವರೆ,
    ನೀವು ಪ್ರಾಣ ಹಿಂಡುತಿ ಬಗ್ಗೆ ಹೇಳ್ತಾ ಇದ್ದೀರಾ?

    ಅಷ್ಟು ಬೈದು ಕೂಡ ಚಂಪಾ ಅವರೇಗೆ ‘ನನ್ನ ಹೃದಯ ರಾಜೇಶ್ವರಿ’ ಅಂದ್ರೋ ಗೊತ್ತಾಗಿಲ್ಲ. 🙂

  4. sritri says:

    ಅನ್ವೇಷಿಗಳ ಅನುಭವ ಹಾಗಿದ್ದರೆ ನನ್ನ ತಕರಾರೇನಿಲ್ಲ! 🙂

  5. ಭುತಾ says:

    ಇದರ ಸಾಹಿತ್ಯವನ್ನು ಇಲ್ಲಿ ಇರಿಸಿದ್ದಕ್ಕೆ ಧ.ವಾ.

    ಹಸಿರು ಮುರಿವ ಎಲೆಗಳಲ್ಲಿ
    ಬಸಿರ ಬಯಕೆ ಒಸರುವವಳು
    ಇದು ಅಮೋಘ ಕಲ್ಪನೆ.

    ತುಟಿ ಬಿರಿಯುವ ಹೂಗಳಲ್ಲಿ
    ಬೆಂಕಿ ಹಾಡು ಉಸುರುವವಳು

    ಇದು ಅರ್ಥವಾಗದ್ದು 🙁

    ಇಂತಿ
    ಭೂತಾಪಿ

  6. sritri says:

    ಕವನ ಅರ್ಥವಾಗಲಿಲ್ಲವೆಂದ ಭೂತದ ಪ್ರಾಮಾಣಿಕತೆಗೆ ಮೆಚ್ಚುಗೆ 🙂

  7. sunaath says:

    ಇವಳು ಪಿತ್ತದೋಷಿಣಿ ‘ಚಂಪಾ’ರ ಶಾಲ್ಮಲಾ!

  8. sritri says:

    ಕಾಕಾ, ಶಾಲ್ಮಲಾ ನಿಮ್ಮೂರಿನವಳು. ಅವಳು ಪಿತ್ತದೋಷಿಣಿಯೊ, ಪಿತ್ತಹಾರಿಣಿಯೋ ನೀವೇ ಹೇಳಬೇಕು 🙂

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಗಾನಜೀವನೆ – ಡಿವಿಜಿಗಾನಜೀವನೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು ಗಾಯಕಿ: ಅಶ್ವಿನಿ ಸಂಗೀತ – ವಿಶ್ವೇಶ್ ಭಟ್ ಆಲ್ಬಮ್ – ಘಮ ಘಮ ಹಾಡು ಕೇಳಿ ಆವ ರಾಗವ ಪಾಡುವೇ – ಓ ಚೆಲುವೇ ಎನ್ನೊಲವೇ ಬಾಳ್ಗೆಲವೇ – ನೀನಾವ – ರಾಗವ ಪಾಡುವೇ||

ವನಸುಮ – ಡಿ.ವಿ.ಗುಂಡಪ್ಪವನಸುಮ – ಡಿ.ವಿ.ಗುಂಡಪ್ಪ

ಕವಿ – ಡಿ.ವಿ.ಗುಂಡಪ್ಪ ವನಸುಮದೊಳೆನ್ನ ಜೀ- ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ, ಹೇ ದೇವಾ ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ ತಾನೆಲೆಯ

ಮಿಥಿಲೆ – ಸು.ರಂ.ಎಕ್ಕುಂಡಿಮಿಥಿಲೆ – ಸು.ರಂ.ಎಕ್ಕುಂಡಿ

‘ಮಿಥಿಲೆ’ ಕವಿ : ಸುಬ್ಬಣ್ಣ.ರಂಗನಾಥ.ಎಕ್ಕುಂಡಿ ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಬೀದಿಬೀದಿಯನಲೆದು ನೋಡಬೇಕು ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು ರಾಮಭದ್ರನ ಮಹಿಮೆ ಹಾಡಬೇಕು ಅಲ್ಲಿಹವು ಎತ್ತರದ ಮನೆಗಳು ಮಂದಿರವು ಅಲ್ಲಿ ಬೇಕಾದಷ್ಟು ತುಳಸಿ ಹೂವು ಹೆಜ್ಜೆ ಹೆಜ್ಜೆಗೆ ಅಲ್ಲಿ