ರಚನೆ : ಕನಕದಾಸರು

ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ||

ಮುನ್ನಿನ ವೈರದಿ ಕಡುಸ್ನೇಹವ ಮಾಡಿ
ಉನ್ನಂತಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನು ಕೊಂದ
ಘನ್ನಘಾತುಕ ಶಕುನಿಯೋ? ಪಾಂಡವರೋ? ||೧||

ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು
ಧುರದೊಳು ಷಂಡನ ನೆವದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನ
ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||2||

ಮಗನ ನೆವದಿ ಕಾಳಗವ ಬಿಸುಟು ಸುರ
ನಗರಿಗೈದಲು ವೈರಾಗ್ಯದಿಂದ
ಜಗವರಿಯಲು ಕುರುವಂಶಕೆ ಕೇಡನು
ಬಗೆದು ಕೊಂದವನು ದ್ರೋಣನೋ? ಪಾಂಡವರೋ? ||3||

ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ
ನೆಟ್ಟನೆ ರಣಮುಖದೊಳು ತನ್ನ ಪ್ರಾಣವ
ಬಿಟ್ಟು ಕೊಂದವನು ಕರ್ಣನೋ? ಪಾಂಡವರೋ? ||4||

ಮತಿನಿಸಿಸುತ ಸೂತತನವ ಮಾಡಿ ರಣದೊಳಗೆ
ಅತಿ ಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವ ಬಲವನು
ಹತ ಮಾಡಿಸಿದವ ಶಲ್ಯನೋ? ಪಾಂಡವರೋ ? ||5||

ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆನ್ನುತ
ಕಲಿ ಭೀಮಸೇನನ ನುಡಿ ಕೇಳಿ ಹೊರಹೊರಟು
ಕುಲವ ಕೊಂದವನು ಕೌರವನೋ? ಪಾಂಡವರೋ? ||6||

ಕಂಸಮರ್ದನ ಸಿರಿ ಕೃಷ್ಣ ಪಾಂಡವರೊಳು
ತಾಮಸಿಲ್ಲದೆ ಕಾಯುವೆನೆನ್ನುತ
ಸಂಶಯವಿಲ್ಲದೆ ಕುರುಬಲವನು ಕೊಂದ
ಹಿಂಸಕನು ಆದಿಕೇಶವನೋ? ಪಾಂಡವರೋ ||7||

2 thoughts on “ಬಂದಿದೆ ದೂರು ಬರಿದೆ ಪಾಂಡವರಿಗೆ- Bandide dooru – Kanakadaasaru”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.