ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು.  “ಏನೂ ಸಿಗಲಿಲ್ಲ”,  ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”,  ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” –  ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ, ತೆಂಗಿನ ಕರಟಕ್ಕೊಂದು ಪರ್ಯಾಯ ಪದ.  ಯಾವುದೇ ಹಣ್ಣಿನ ಹೊರಪದರವಾದ ಸಿಪ್ಪೆಯನ್ನು ಚಿಪ್ಪು ಎನ್ನಬಹುದಾದರೂ, ತೆಂಗಿನಕಾಯಿಗೆ ಈ ಪದ ಬಳಕೆ ಹೆಚ್ಚು.  ಏನೂ ಸಿಗದ ನಿರಾಶೆ ಆಕ್ರೋಶ ರೂಪದಲ್ಲಿ ವ್ಯಕ್ತವಾದಾಗ “ಚಿಪ್ಪಿಗೆ” ಇನ್ನೂ ಹೆಚ್ಚಿನ ಒತ್ತು ಕೊಡಲು  – “ಅಷ್ಟೆಲ್ಲಾ ಮಾಡಿದ್ದಕ್ಕೆ ಕೊನೆಗೆ ನನಗೇನು ಸಿಕ್ಕಿತು? ಚಿಕ್ಕನಾಯಕನ ಹಳ್ಳಿ ಚಿಪ್ಪು” ಎಂದು ಹೇಳಲಾಗುತ್ತದೆ. ಹಣ್ಣಿನ ಹೊರಪದರವಾದ ಚಿಪ್ಪಿನಂತೆ, ಹಣ್ಣಿನ ಒಳಗಿರುವ “ಗೊರಟೆ” ಯನ್ನು ಇದೇ ಅರ್ಥದಲ್ಲಿ ಬಳಸುತ್ತಾರೆ.  ಒಟ್ಟಿನಲ್ಲಿ ಇದೊಂದು “ತಿರುಳಿಲ್ಲದ್ದು, ತಿರುಳಲ್ಲದ್ದು’ ಎಂಬುದನ್ನು ಸೂಚಿಸಲು ಉಪಯೋಗಿಸುವ ಪದ.

ಚಿಕ್ಕನಾಯಕನ ಹಳ್ಳಿ ತೆಂಗು ಬೆಳೆಗೆ ಹೆಸರಾದ ತುಮಕೂರು ಜಿಲ್ಲೆಯ ಒಂದು ಹಳ್ಳಿ.  ಎಲ್ಲಾ ಹಳ್ಳಿಗಳನ್ನೂ ಬಿಟ್ಟು ಈ ಹಳ್ಳಿಯ ಹೆಸರನ್ನೇ ಚಿಪ್ಪಿನೊಡನೆ ಸೇರಿಸಲು ಏನು ಕಾರಣವಿರಬಹುದೋ ಗೊತ್ತಿಲ್ಲ. ಅಲ್ಲಿ ಬೇರೆಲ್ಲ ಕಡೆಗಿಂತ ಹೆಚ್ಚು ತೆಂಗಿನಕಾಯಿ ಬೆಳೆದು, ಅಷ್ಟೇ ಸಂಖ್ಯೆಯ ಚಿಪ್ಪೂ ಸಿಗುತ್ತದೆ ಎಂದಿರಬಹುದೇನೋ 🙂

“ದರ್ಜಿ” – ಎಂಬ ಪದವನ್ನು ಸೂಚಿಸುವ ಚಿಪ್ಪಿಗ, ಸಿಂಪಿಗ (ಸಿಂಪು -ಚಿಪ್ಪು) ಪದಕ್ಕೂ ಈ ಚಿಪ್ಪಿಗೂ ಏನಾದರೂ ಸಂಬಂಧ ಇದ್ದೀತೆ?

ಇರಲಿ, ವಿಶ್ವಕಪ್ ಪಡೆಯಲು ಬಯಸಿ ವೆಸ್ಟ್ ಇಂಡೀಸ್‍ಗೆ  ಹೋಗಿದ್ದ ಭಾರತಕ್ಕೆ ಸಿಕ್ಕಿದ್ದೂ ಕಪ್ಪಲ್ಲ, ಚಿಪ್ಪು! ಭಾರತ ಗೆಲ್ಲಲಿ ಎಂದು ಬಯಸಿ ಹೋಮ,ಹವನ ನಡೆಸಿದ, ಭಾರತ ಗೆಲ್ಲಲೆಂದು ಮನಸಾರೆ ಶುಭ ಹಾರೈಸಿ ಕಳಿಸಿದ ಅಸಂಖ್ಯ ಅಭಿಮಾನಿಗಳಿಗೂ , ಸಿಕ್ಕಿದ್ದು ಚಿಪ್ಪೇ! 🙂

ಈ ದಿಸೆಯಲ್ಲಿ ಯೋಚಿಸುತ್ತಿರುವಾಗ ಹೊಳೆದ ಒಂದು ಪುಟ್ಟ ಹನಿಗವನ. ಇದರ ಹೆಸರು – ” ಕಪ್ಪೆಚಿಪ್ಪು ” – ಇದನ್ನು ಓದುವಾಗ, ನಿಮ್ಮ ನಾಲಿಗೆ ತೊಡರಿ “ಚಿಪ್ಪೇ ಕಪ್ಪು” ಎಂದು ಓದಿಕೊಂಡರೂ ನನ್ನದೇನೂ ಅಭ್ಯಂತರವಿಲ್ಲ!

ಕಪ್ಪೇ ಚಿಪ್ಪು

 “ವಿಶ್ವ ಕಪ್ -೨೦೦೭”
ಎಂಬ ಕಪ್ಪೆಚಿಪ್ಪಿನಲ್ಲಿ
ಸಿಗಲಿಲ್ಲ
ಭಾರತಕ್ಕೆ ಮುತ್ತು!

17 thoughts on “ಕಪ್ಪೇ ಚಿಪ್ಪು – ಚಿಪ್ಪೇ ಕಪ್ಪು”

  1. ಈ ಪದಪ್ರಯೊಗ ನಮ್ಮಲ್ಲೂ ಇದೆ.

    ಆಗ – ವೆಸ್ಟ್ ಇಂಡೀಸ್‍ಗ ಭಾರತದ ದಂಡಯಾತ್ರೆ
    ಈಗ – ವೆಸ್ಟ್ ಇಂಡೀಸ್‍ಗೆ ಭಾರತದ ದಂಡ – ಯಾತ್ರೆಃ-((

    ಅಂದಹಾಗೆ, ತಿಪಟೂರು ತಾಲೂಕು. ತುಮಕೂರು ಜಿಲ್ಲೆ.

  2. ಕಿರಿಕೆಟ್ಟಾಟದಲ್ಲಿ ಭಾರತಕ್ಕೆ ಚಿಪ್ಪೇ ಕಪ್ಪು ಆಗಿದ್ದರೂ ಮತ್ತು ಭಾರತೀಯ “ವಿಶ್ವ ವಿಖ್ಯಾತ” ದಾಂಡಿಗರ ಮೋರೆ ಕಪ್ಪು ಆಗಿದ್ದರೂ… ಅವರಿಗೆ ಜಾಹೀರಾತಿನಿಂದ ದೊರೆಯುವ ಆದಾಯವೇ ಸಾಕಲ್ಲವೇ ಐಷಾರಾಮಿ ಜೀವನ ಸಾಗಿಸಲು?
    ಜಾಹೀರಾತು ಛಾನ್ಸ್ ಸಿಗುವಂತಾಗಲು ಆಗಲೋ ಈಗಲೋ ಒಮ್ಮೆ ಬರ್ಮುಡಾದಂತಹಾ ಶಿಶುಗಳೆದುರು ವಿಶ್ವ ದಾಖಲೆ ಮಾಡಿಕೊಂಡಿದ್ದರಾಯಿತು.

  3. 1. Intel ಅಥವಾ ಬೇರಾವುದೋ ಚಿಪ್ಪು ಅಲ್ಲದಿದ್ದರೆ ನಿಮ್ಮ ಈ ಬ್ಲಾಗು ಇರುತ್ತಿರಲಿಲ್ಲ. ಈ ಚಿಪ್ಪು ತಿರುಳಿಲ್ಲದ್ದಲ್ಲ, ತಿರುಳಲ್ಲದ್ದೂ ಅಲ್ಲ!

    2. ‘ಚಿಕ್ಕನಾಯಕನಹಳ್ಳಿ’ಯನ್ನು ಚಿಪ್ಪಿನೊಂದಿಗೆ ಸೇರಿಸಿದ್ದೇಕೆಂದರೆ ಮೊದಲಕ್ಷರ ಪ್ರಾಸವಾಗುತ್ತದೆಂದು.

    3. ದರ್ಜಿ ನಮ್ಮ ದೇಹರಕ್ಷಣೆಗೊಂದು ಚಿಪ್ಪನ್ನು (ಉಡುಪನ್ನು) ಹೊಲಿದುಕೊಡುತ್ತಾನಾದ್ದರಿಂದ ಅವನನ್ನು ಚಿಪ್ಪಿಗ/ಸಿಂಪಿಗ ಎನ್ನುವುದಿರಬಹುದು.

    4. ವೆಸ್ಟ್‌ಇಂಡೀಸ್‌ಗೆ ಹೋದ ಭಾರತೀಯ ಆಟಗಾರರು ಅಲ್ಲಿ ಕ್ರಿಕೆಟ್ ಆಟಕ್ಕೆ ಗಮನ ಕೊಡದೆ ತೇರೆ ಮೇರೆ ಬೀಚ್ ಮೇ ಕೈಸಾ ಹೈ ಯೇ ಚಿಪ್ಪೂ… ಅಂಜಾನಾ… ಎಂದು ಹಾಡುತ್ತ ಬೀಚಲ್ಲಿ ಚಿಪ್ಪು ಸಂಗ್ರಹಿಸುವುದರಲ್ಲೇ ಮಗ್ನರಾಗಿದ್ದರಂತೆ. ಬೀಚ್ ಮೇ ಅವರನ್ನಾರೋ, “ಬನ್ರಯ್ಯಾ ಕ್ರಿಕೆಟ್ ಆಡಲು ನೀವಿಲ್ಲಿ ಬಂದಿರೋದು…” ಎಂದು ಗದರಿದ್ದಕ್ಕೆ ಬರ್ಮುಡಾವನ್ನು ಎತ್ತಿಕಟ್ಟಿದರಂತೆ.

    5. ಇನ್ನೊಂದು ವದಂತಿಯ ಪ್ರಕಾರ “ನಾವು ವೆಸ್ಟ್ ಇಂಡೀಸ್‌ಗೆ ಹೊರಟವರು… ಆದ್ದರಿಂದ ಈಸ್ಟ್, ಸೌತ್ ದೇಶಗಳದ್ದೆಲ್ಲ ನಮಗೆ ಗೊತ್ತೇ ಇಲ್ಲ. ಬಾಂಗ್ಲಾ, ಲಂಕಾ ದೇಶಗಳೆದುರು ಸೋಲಬೇಕಾಯಿತು…” ಎಂಬ ಸಬೂಬು ಸೃಷ್ಟಿಯಾಗಿದೆಯಂತೆ.

  4. ನಿಮ್ಮ ಹೋಳಿಗೆ ತಿನ್ನುವ ಭಾಗ್ಯ ಈ ವರ್ಲ್ಡ್ ಕಪ್‍ನಲ್ಲಿ ನನಗಿಲ್ಲವಲ್ಲಾ 🙁

  5. ಟಿಪ್ಪು ಕನ್ನಡಪ್ರೇಮಿ ಆಗಿದ್ದನೇ ಇಲ್ಲವೇ ಎಂಬ ಬಗ್ಗೆ ಇತ್ತೀಚಿಗೆ ಈ ಕಡೆ ನಡೆದ ಬಿಸಿ ಬಿಸಿ ವಾದ-ವಿವಾದಗಳು ನೆನಪಾದವು 🙂 ಅದರಲ್ಲೂ ಸೋತವರಿಗೆ ಸಿಕ್ಕಿದ್ದು ಚಿಪ್ಪೇ. ಆದರೆ ತಮಗೆ ಸಿಕ್ಕಿದ್ದೇ ಮುತ್ತು ಅಂತ ಹೇಳಿಕೊಂಡು ಅವರು ಓಡಾಡುತ್ತಿದ್ದುದು ಸುದ್ದಿ. 🙂

  6. ಚಿಪ್ಪಿನ ಕುರಿತಾದ ನನ್ನ ಪೋಸ್ಟ್ ಓದಿ ಗಪ್ಪು”ಚಿಪ್ಪಾಗಿ” ಕೂಡದೆ ಮುತ್ತಿನಂತಹ ಪ್ರತಿಕ್ರಿಯೆಗಳನ್ನು ನೀಡಿರುವ ಎಲ್ಲರಿಗೂ ಧನ್ಯವಾದಗಳು! 🙂

    ಜೋಶಿಯವರೇ, ಚಿಪ್ಪಿಗನ ಬಗೆಗೆ ನೀವು ನೀಡಿರುವ ವಿವರಣೆ ಒಪ್ಪಿಗೆಯಾಯಿತು. ಚಿಪ್ಪಿಗನಿಗೆ ಆ ಹೆಸರು ಬರಲು ಅದೇ ಕಾರಣವಿರಬಹುದು.

  7. ಶಿವು, ಹೋಳಿಗೆ ತಿನ್ನುವ ಭಾಗ್ಯವಿಲ್ಲವೆಂದು ಯಾಕೆ ದುಃಖಪಡುತ್ತಿದ್ದೀರಿ? ಸದ್ಯದಲ್ಲೇ ಸಿಗಲಿರುವ ನಿಮ್ಮ ಮದುವೆಯ ಸಿಹಿಯೂಟಕ್ಕಾಗಿ ನಾವೂ ಕಾಯುತ್ತಿದ್ದೇವೆ.  🙂

  8. “ಆದರೆ ತಮಗೆ ಸಿಕ್ಕಿದ್ದೇ ಮುತ್ತು ಅಂತ ಹೇಳಿಕೊಂಡು ಅವರು ಓಡಾಡುತ್ತಿದ್ದುದು ಸುದ್ದಿ.”

    – ಸುಶೃತ, ಮುತ್ತು ಸಿಕ್ಕಿದ್ದು ಯಾರಿಗೆ? ಎಂತಹ ಮುತ್ತು? ಎಂದು ನೀವು ಸ್ಪಷ್ಟವಾಗಿ ವಿವರಿಸದಿದ್ದರೆ, ಅನ್ವೇಷಿಗಳು ಮತ್ತು ಜಗಲಿ ಭಾಗವತರು ಆ ಕುರಿತು ಅನಗತ್ಯ ತನಿಖೆ ಶುರು ಮಾಡುತ್ತಾರೆ. 🙂

  9. ಭಾರತಕ್ಕೆ ಚಿಪ್ಪು ಸಿಕ್ಕಿದೆ ಅಂತ ಎಲ್ಲಾ ಬೈಯ್ಯುತ್ತಿರೋದು ನೋಡಿ ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ ಮತ್ತು ಚಿಪ್ಪಿನ ಮೇಲೆ ತುಂಬಾ ಕನಿಕರ ಉಂಟಾಗಿದೆ. ಬಹು ಉಪಯೋಗಿ ಕರಟವನ್ನು ಅವರಿಗೇಕೆ ಕೊಡಬೇಕು ಸೋತವರಿಗೆ. ಈ ಕರಟ(ಚಿಪ್ಪು)ದಿಂದ ಎಷ್ಟೊಂದು ಅನುಕೂಲಗಳಿವೆ. ನಿಮಗೆ ಬೇಡದಿದ್ದರೆ ಮೂಟೆ ಕಟ್ಟಿ ಈ ತೆಂಗಿನ ಕರಟವನ್ನ ನನಗಾದರೂ ಕಳಿಸಿಕೊಡಿ, ಊರಿಗೆ ಒಯ್ದು ಹಂಡೆ ಒಲೆಗೆ ಹಾಕಿ ಎರೆದುಕೊಳ್ಳಕ್ಕಾದರೂ ಆಗತ್ತೆ. ಇಲ್ಲಾ ಕರಟದ ಮೂತಿಗೆ ಒಂದು ಕೋಲು ಕಟ್ಟಿ ಯಾವುದಾದರೂ ಸಮಾರಾಧನೆಗೆ ಬಡಿಸುವವರಿಗೆ ಕೊಟ್ಟರೆ use and throw ಮಾಡಬಹುದಲ್ಲವೇ? ಕಸದಿಂದ ರಸ ಮಾಡುವ ವಿಧಾನ ಅನುಸರಿಸಿ ಸುಮ್ನೆ waste ಮಾಡ್ಬೇಡಿ.

  10. ಮೀರಾ, ಆಟಗಾರರ ಕೈಲಿರುವ ಚಿಪ್ಪು ಕಸಿದು ,ನಿನ್ನ ವಿಳಾಸಕ್ಕೆ ಕಳಿಸಲು ಪ್ರಯತ್ನಿಸಲಾಯಿತು.ಆದರೆ ಮುಂಬರುವ ಆಟಗಳಲ್ಲಿಯೂ, ಕೆಲವೊಮ್ಮೆ, ಉಪಯೋಗಕ್ಕೆ ಬರಬಹುದಾದ ಚಿಪ್ಪುಗಳನ್ನು ಒಪ್ಪಿಸಲು ಆಟಗಾರರು ಸಾರಾಸಗಟಾಗಿ ನಿರಾಕರಿಸಿದರೆಂದು ತಿಳಿದು ಬಂದಿದೆ. (ಬೊ.ರ.ಬ್ಯೂರೊದ ಬೀರುವಿನಿಂದ ಕದ್ದು ತಂದ ತನಿಖಾ ವರದಿ)

  11. ಆಟಗಾರರ ಕೈಯಲ್ಲಿ ತೆಂಗಿನ ಚಿಪ್ಪೋ, ಅಥವಾ ಸಮುದ್ರ ತಟದ ಕಪ್ಪೆ-ಚಿಪ್ಪೋ? ಆ ಚಿಪ್ಪಾದರೂ ಪರವಾಗಿಲ್ಲ, ಊರಲ್ಲಿ ಅದೂ ಉಪಯೋಗಕ್ಕೆ ಬರ್ತದೆ, ಸ್ವಲ್ಪ ಬಿಸಿ-ಬಿಸಿ ನೀರಲ್ಲಿ ಹಾಕಿದ್ರೆ, ಸುಣ್ಣ ಆಗ್ತದೆ, ತೆಂಗಿನ ಮರದ ಬುಡಕ್ಕೂ ಸೈ; ಗೋಡೆಗೆ ಬಳಿಯೋದಕ್ಕೂ ಸೈ. ಇನ್ನೂ ಬೇಕಾದ್ರೆ ಯಾರದಾದ್ರೂ…. ಛೇ, ಛೇ… ಹೇಳಬಾರ್ದು. ಸಾಕು.

  12. ಜ್ಯೋತಿಯವರು ಅರ್ಧದಲ್ಲೇ ನಿಲ್ಲಿಸಿದ್ದು ನೋಡಿ ನಮಗೆ ಕನಿಕರ(ಟಕ)ವಾಗುತ್ತಿದೆ.

    ಎಲೆಅಡಿಕೆ ಜತೆಗೆ ಅಗಿದು ಈಸ್ಟ್, ಸೌತ್ ಮರೆತ ಟೀಂ ಇಂಡಿಯಾ ಸದಸ್ಯರ ಮುಖಕ್ಕೆ ಸಂಪ್ರೋಕ್ಷಣೆಯೇ?

  13. ಅನ್ವೇಷಿಗಳೇ, ಅದೇನೇ ಇರಲಿ, ಈಸ್ಟ್, ಸೌತ್ ಮರೆತ ಇಂಡಿಯಾ ಟೀಮಿನ ಸ್ಕೋರ್ ಬೋರ್ಡಿಗಿಂತ, ನಮ್ಮ ತುಳಸಿವನದ – “Top -10 ” ಸ್ಕೋರ್‍ ಬೋರ್ಡೇ ಹೆಚ್ಚು ಆಕರ್ಷಕವಾಗಿದೆ. ಏನಂತೀರಿ?

  14. ಜ್ಯೋತಿ, ಅದೇನು ಅರ್ಧಕ್ಕೆ ನಿಂತು ಹೋದ ನಿನ್ನ ಮಾತು? ನನಗಂತೂ ತುಂಬಾ ಭಯವಾಗುತ್ತಿದೆ. ಯಾರಿಗೆ ಗ್ರಹಚಾರ ಕಾದಿದೆಯೋ?

  15. ನಮ್ಮ ಕಡೆ ಅದಕ್ಕೆ ಚಿಕ್ಕನಾಯಕನ ಹಳ್ಳಿ ಬೆಳ್ಳಿಕಪ್ಪು(cup) ಅಂತ ಕೂಡ ಹೇಳ್ತಾರೆ

  16. ಜ್ಯೋತಿ, ಈ ಕಡೆ ಬಂದು.ತುಂಬಾ ದಿನವಾಯಿತು. ನಿಮ್ಮ ಕಡೆ ಚಿಪ್ಪಿಗೆ ಇನ್ನಷ್ಟು ಮೆರುಗು ಕೊಟ್ಟು “ಬೆಳ್ಳಿಕಪ್ಪು” ಎನ್ನುವುದರಿಂದ ಚಿಪ್ಪಿನ ಬೆಲೆ ಇನ್ನೂ ಹೆಚ್ಚಾದಂತಾಯಿತು.

Leave a Reply to ಶ್ರೀವತ್ಸ ಜೋಶಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.