ಜ್ವರ, ನೆಗಡಿಯ ಕೆಟ್ಟ ಪರಿಣಾಮಗಳು ಎಲ್ಲರಿಗೂ ತಿಳಿದೇ ಇರುತ್ತವೆ. ಆದರೆ ನೀವು ಕೆಟ್ಟದರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಆಶಾವಾದಿಯಾಗಿದ್ದರೆ, ಜ್ವರದಲ್ಲೂ ಕೆಲವು ಪ್ರಯೋಜನಗಳನ್ನು ಕಾಣಬಹುದು. ಕಳೆದೆರಡು-ಮೂರು ದಿನಗಳು ಜ್ವರದ ಕುಲುಮೆಯಲ್ಲಿ ಬೇಯುತ್ತಿದ್ದಾಗ, ಮನಸ್ಸಿನಲ್ಲಿಯೇ ನಾನು ಜ್ವರದ ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಮರೆಯುವ ಮುನ್ನ, ನೆನಪಿರುವುದನ್ನು ಬರಹಕ್ಕಿಳಿಸಿ ಬಿಡುತ್ತೇನೆ. ನಿಮ್ಮ ಅನುಭವಕ್ಕೆ ಬಂದಿರುವ ಸಂಗತಿಗಳೇನಾದರೂ ಇದ್ದರೆ ಈಗಲೇ ತಿಳಿಸಿ. ಜ್ವರ ಬರುವ ತನಕ ಕಾಯಬೇಡಿ!

* ಹಾಡ ಹಗಲೇ ಮೈತುಂಬಾ ಹೊದ್ದು ಮಲಗಿದಾಗ ಪಾಪಪ್ರಜ್ಞೆ ಕಾಡುವುದಿಲ್ಲ. ಜ್ವರ ಬಂದಿರುವುದರಿಂದ ಮಲಗುವುದು ನಿನ್ನ ಹಕ್ಕು ಎಂದು ಮನಸ್ಸು ದೇಹದ ನೆರವಿಗೆ ನಿಲ್ಲುತ್ತದೆ.

* ಕೆಮ್ಮಿನ ಸಿರಪ್ಪುಗಳಿಗೆ ಆಲ್ಕೋಹಾಲ್ ಬೆರೆಸುವುದೇಕೆ? ನನಗಂತೂ ಅದನ್ನು ಕುಡಿದರೆ ಇನ್ನಿಲ್ಲದ ನಿದ್ದೆ ಆವರಿಸುತ್ತದೆ. ಗುಂಡಿನ ರುಚಿ ಅರಿಯದ ಪಾಪದ ಪ್ರಜೆಗಳಿಗೆ ಗುಂಡಿನ ಗಮ್ಮತ್ತನ್ನು ತಿಳಿಸಿ ಕೊಡಲೆಂದೇ ಔಷಧಿಗಳಿಗೆ ಆಲ್ಕೋಹಾಲ್ ಬೆರೆಸುತ್ತಾರೆ!

* ದೂರವಾಣಿ ಕರೆಗಳನ್ನು ಅಟೆಂಡ್ ಮಾಡದಿರಲು ಸಕಾರಣ.

* ಜ್ವರ ಹಿಡಿದ ಬಾಯಿಗೆ ಹಿತವಾಗುವಂತೆ, ನನ್ನವರು ಮಾಡಿ ಬಡಿಸುವ ಗೊಡ್ಡು ಸಾರು. ಈ ಸಾ(ನೀ)ರನ್ನು ಸೂಕ್ಷ್ಮದರ್ಶಕದಡಿಯಲ್ಲಿ ಹಿಡಿದು ನೋಡಿದರೂ ಅದರಲ್ಲಿ ಏನೂ ಕಾಣಿಸದು!

* ಒಮ್ಮೆ ಜ್ವರ ಬಂದು ಹೋದರೆ ದೇಹದ ರಕ್ಷಣಾ ಸೈನಿಕರು ಶಸ್ತ್ರ ಸನ್ನದ್ಧರಾಗಿ ನಿಲ್ಲುವುದರಿಂದ, ಹೋದ ಜ್ವರ ಸ್ವಲ್ಪ ಕಾಲವಂತೂ ಹಿಂತಿರುಗಿ ಬರುವುದಿಲ್ಲವೆಂಬ ಭರವಸೆ.

* ಇದು ಜ್ವರದ ಕೊನೆಯ ಮತ್ತು ಅತ್ಯಂತ ಒಳ್ಳೆಯ ಪರಿಣಾಮ. ಡಯಟ್, ವ್ಯಾಯಾಮಗಳ ನೆರವಿಲ್ಲದೆಯೇ ದೇಹದ ತೂಕ ಜರ್ರನೆ ಇಳಿದು ಹೋಗಿರುತ್ತದೆ..

10 thoughts on “ಜ್ವರ..ಒಂಥರ ಜ್ವರ..”

  1. ನಾನು ಚಿಕ್ಕವಳಾಗಿದ್ದಾಗ “ನನಗೆ ಯಾಕೋ ಜ್ವರಾನೇ ಬರಲ್ಲ ” ಅಂತ ಹೇಳಿ ಅಮ್ಮನತ್ರ ಬೈಸಿಕೊಳ್ತಾ ಇದ್ದಿದ್ದು ನೆನಪಾಯಿತು. ಃ)

  2. ಜ್ವರದಲ್ಲೂ ಒಳ್ಳೆಯ ಗುಣಗಳನ್ನು ಹುಡುಕುವ ನಿನ್ನ ಒಳ್ಳೆಯ ಮನಸ್ಸಿಗೆ ಸಲಾಂ. ಜ್ವರದಿಂದ ಜಡ್ಡು ಹಿಡಿದ ನಾಲಗೆಗೆ ಗೊಡ್ದು ಸಾರಾದರೂ ಸರಿ, ಮಾಡಿಕೊಡುವ ಪ್ರೀತಿಯ ಪತಿ ನಿನಗಿರುವುದೂ ನಿನ್ನ ಪುಣ್ಯ. ಚೆನ್ನಾಗಿ ಸುಧಾರಿಸಿಕೋ. ಮತ್ತೆ ಹರಟೋಣ.

  3. ತ್ರಿವೇಣಿಯವರೆ,
    ಜ್ವರದ ಬಗೆಗೆ ಉತ್ತಮ ಮಾಹಿತಿ ನೀಡಿ ಉಪಕರಿಸಿದ್ದೀರಿ. ಧನ್ಯವಾದಗಳು. ನನಗೆ ಕೆಲವು ಅನುಮಾನಗಳಿವೆ.ನಿಮ್ಮ ಅನುಭವದ ಮೂಸೆಯಲ್ಲಿ ಪರೀಕ್ಷಿಸಿ ದಯವಿಟ್ಟು ಉತ್ತರ ನೀಡಲು ವಿನಂತಿಸುತ್ತೇನೆ.
    (೧) ಜ್ವರಗಳಲ್ಲಿ ಯಾವದು ಅತ್ಯುತ್ತಮ?
    (೨) ಜ್ವರ ಬರಿಸಿಕೊಳ್ಳಲು ಯಾವುದು ಸಕಾಲ?
    (೩) ಜ್ವರದ ಅವಧಿ ಎಷ್ಟಿರುವದು ಅತ್ಯಂತ ಅನುಕೂಲಕರ?
    ಈ ಪ್ರಶ್ನೆಗಳಿಗೆ ಉತ್ತರ ತಿಳಿದೂ ಹೇಳದಿದ್ದರೆ………………..

  4. ಸುನಾಥರೇ,

    ಜ್ವರಗಳಲ್ಲಿ ಯಾವದು ಅತ್ಯುತ್ತಮ? ; ಸಂಶೋಧನೆಗಳು ನಡೆಯ ಬೇಕಾಗಿದೆ.

    ಜ್ವರ ಬರಿಸಿಕೊಳ್ಳಲು ಸಕಾಲ ; ಯಾವುದೆಂದರೆ, ಮನೆಯಲ್ಲಿ ಯಾವುದಾದರೂ ಸಮಾರಂಭವಿದ್ದು, ತುಂಬಾ ಜನ ಸೇರಿರಬೇಕು. ಆಗ ನಿಮ್ಮ ಜ್ವರಕ್ಕೆ ಹೆಚ್ಚಿನ ಪ್ರಚಾರ ದೊರಕುತ್ತದೆ.

    ಜ್ವರದ ಅವಧಿ ; ವ್ಯಕ್ತಿಗಳ ದೇಹ ಬಲವನ್ನು ಅನುಸರಿಸಿ ಇದ್ದರೆ ಒಳ್ಳೆಯದು. ಕೆಲವರು ಒಂದು ದಿನದ ಜ್ವರಕ್ಕೆ ಸುಸ್ತು ಹೊಡೆದು ಹೋದರೆ, ಇನ್ನು ಕೆಲವರು ಜ್ವರವಿದ್ದರೂ ನಿತ್ಯದ ಕೆಲಸಗಳನ್ನು ನಿರಾಯಾಸವಾಗಿ ಮಾಡಿಕೊಂಡು ಹೋಗುತ್ತಿರುತ್ತಾರೆ.

    ಈ ಪ್ರಶ್ನೆಗಳಿಗೆ ಉತ್ತರ ತಿಳಿದೂ ಹೇಳದಿದ್ದರೆ….ಏನೂ ಆಗುವುದಿಲ್ಲ ಎಂಬ ನಂಬಿಕೆ ಇರುವುದರಿಂದ ನಿಮ್ಮ ಗೊಡ್ಡು ಬೆದರಿಕೆಗೆ ನಾನು ಹೆದರಿಲ್ಲ!

  5. ಜ್ಯೋತಿ, ನಿನ್ನ ಪ್ರತಿಕ್ರಿಯೆಯೊಂದಿಗ ತುಳಸಿವನದ ಕಾಮೆಂಟುಗಳ ಸಂಖ್ಯೆ ೧೦೦೦ ತಲುಪಿತು. ಸಾವಿರ ಕಾಮೆಂಟ್ಸ್ ಸರದಾರರ ಪ್ರತಿನಿಧಿಯಾದ ನಿನಗೆ ಅಭಿನಂದನೆ.

    ಶೋಭಾ, ತುಳಸಿವನಕ್ಕೆ ಸ್ವಾಗತ. 🙂

  6. “ಒಂಥರ ಜ್ವರ”?

    ಅದು ಎರಡು ಥರ ಜ್ವರ ಆಗಬೇಕಿತ್ತಲ್ಲವೇ? “ಥರ ಥರ ನಡುಗಿಸುವ ಜ್ವರ” ಎಂದು ಬರೆಯುವಾಗ ಎರಡು ‘ಥರ’ ಇರುತ್ತವಲ್ಲ, ಅದಕ್ಕೆ!

  7. ಜ್ವರ ಬಂದು, ಕಣ್ಣು ಮಂಜಾಗಿದ್ದರಿಂದ ಒಂಥರನೋ, ಎರಡು ಥರಾನೋ ಗಮನಿಸಲು ಸಾಧ್ಯವಾಗಲಿಲ್ಲ ಜೋಶಿಯವರೇ. ಮುಂದಿನ ಸಲ ನೋಡಿ ಹೇಳ್ತೀನಿ 🙂

  8. @ಜೋಶಿ: “ಥರ ಥರ ನಡುಗಿಸುವ ಜ್ವರ” ಎಂದು ಬರೆಯುವಾಗ ಎರಡು ‘ಥರ’ ಇರುತ್ತವಲ್ಲ, ಅದಕ್ಕೆ!–

    ತ್ರಿವೇಣಿಗೆ ಬಂದಿರೋದು “ಥರ ಥರ ನಡುಗಿಸುವ” ಛಳಿ ಜ್ವರ ಅಲ್ಲ ಅಂತ ನನ್ನ ಅಭಿಪ್ರಾಯ. ಆದ್ದರಿಂದ ಇದು “ಎರಡು ಥರ ಜ್ವರ” ಹೇಗಾದೀತು?

  9. ‘ಥರ’ಮೋಮೀಟರ್ ಅಧಿಕ ಉಷ್ಣತೆಯನ್ನು ತೋರಿಸಿದಾಗ ಜ್ವರವೆಂದು ಸಾರಿಕೊಂಡ ತುಳಸಿಯಮ್ಮ ‘ಥರ’ಮಾಸ್ ಫ್ಲಾಸ್ಕ್‌ನಿಂದ ಬಿಸಿಬಿಸಿ ಕಾಫಿ ಹೀರತೊಡಗಿದರಂತೆ.
    ಆದ್ದರಿಂದ ಎರಡು ‘ಥರ’ ಜ್ವರ 🙂

  10. ಜ್ವರದಲ್ಲೂ ಜೊತೆ ಇದ್ದ (ತಮಗೂ ಅಂಟೀತೇಂದು ಹೆದರಿ ಓಡದೆ ) ತುಳಸಿವನದ ಗೆಳೆಯ-ಗೆಳತಿಯರಿಗೆಲ್ಲ ಧನ್ಯವಾದಗಳು 🙂

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.