ಬಾಂಬು ಹೊತ್ತ ಕೆಂಪು ಮಾರುತಿ ಕಾರು ಭರ್ ಎಂದು ಮುಂದೆ ಹೋಯಿತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮೋಟರ ಸೈಕಲ್ ಮೇಲೆ ಕುಳಿತುಕೊಂಡು ಸುತ್ತಲೂ ಹದ್ದಿನ ಕಣ್ಣಿನಿಂದ ನೋಡುತ್ತಿದ್ದ ಭರತಖಾನ ಮಾತ್ರ ಈ ಪುಟ್ಟ ಬಿಳಿಯ ಪಾರಿವಾಳವನ್ನು ಗಮನಿಸುತ್ತ ಅಲ್ಲಿಯೇ ನಿಂತುಕೊಂಡ. ಪ್ರವಲ್ಲಿಕಾ ಆಟೊ ಒಂದನ್ನು ಹಿಡಿದು ಪೋಲೀಸ ಸ್ಟೇಶನ್ನಿಗೆ ಓಡಿದಳು. ಭರತಖಾನ ಎಚ್ಚರಿಕೆಯಿಂದ ಅವಳನ್ನು ಹಿಂಬಾಲಿಸಿ, ತಾನೂ ಪೋಲೀಸ ಸ್ಟೇಶನ ಒಳಗೆ ನಡೆದ. ಏದುಸಿರು ಬಿಡುತ್ತ ಒಳಗೆ ಓಡಿದ ಪ್ರವಲ್ಲಿಕಾ ಎದುರಿಗೆ ಬರುತ್ತಿದ್ದ ಏ.ಸಿ.ಪಿ.ಗೆ ಡಿಕ್ಕಿ ಹೊಡೆದಳು.ಹಾಗೆಯೆ ಸಾವರಿಸಿಕೊಂಡು,”ಸರ್, ಕಾರಿನಲ್ಲಿ ಬಾಂಬು ಒಯ್ಯುತ್ತಿದ್ದಾರೆ” ಎಂದು ತೊದಲಿದಳು.ಇವಳ್ಯಾವಳೊ ಹುಚ್ಚಿ ಇರಬೇಕೆಂದುಕೊಂಡ ಏ.ಸಿ.ಪಿ. ಅಲ್ಲಿಯೇ ನಿಂತುಕೊಂಡಿದ್ದ ಕನಿಷ್ಠಬಿಲ್ಲೆಗೆ, “ಇವಳ ಕಂಪ್ಲೇಂಟ ಬರಕೊಳ್ಳಯ್ಯ” ಎಂದು ಹೇಳಿ ಹೊರನಡೆದರು. ಕನಿಷ್ಠಬಿಲ್ಲೆ ಪ್ರವಲ್ಲಿಕಾಳ ಹೆಸರು,ವಿಳಾಸ, ಕಂಪ್ಲೇಂಟ ಎಲ್ಲವನ್ನೂ ಬರೆದುಕೊಂಡ. ಅಷ್ಟರಲ್ಲಿ ಭರತಖಾನ ತನ್ನ ಗುಂಪಿನ ಟ್ಯಾಕ್ಸಿ ಒಂದಕ್ಕೆ ಮೋಬೈಲ ದಿಂದ ಕಾಲ್ ಮಾಡಿ ಪೋಲೀಸ್ ಸ್ಟೇಶನ್ ಎದುರಿಗೆ ಕರೆಯಿಸಿಕೊಂಡಿದ್ದ. ಪ್ರವಲ್ಲಿಕಾ ಹೊರಬರುತ್ತಿದ್ದಂತೆ, ಟ್ಯಾಕ್ಸಿ ಚಾಲಕ ಬಾಗಿಲನ್ನು ತೆರೆದ. ಭರತಖಾನ ಪ್ರವಲ್ಲಿಕಾಳ ಪರಿಚಿತನಂತೆಯೆ ನಟಿಸುತ್ತ ಅವಳನ್ನು ದಬ್ಬಿಕೊಂಡು ಒಳ ನಡೆದ. ಟ್ಯಾಕ್ಸಿ ಶರವೇಗದಲ್ಲಿ ಸಾಗಿತು.

ಎ.ಸಿ.ಪಿ. ಮನೆ ಮುಟ್ಟುತ್ತಿದ್ದಂತೆಯೆ ಅವರ ಮೊಬೈಲ ರಿಂಗಣಿಸಿತು. ಸುದ್ದಿ ಕೇಳಿದ ಎ.ಸಿ.ಪಿ. ಹೌಹಾರಿದರು. “ಭಾಭಾ ಸಂಶೋಧನಾಲಯದಲ್ಲಿ ಬಾಂಬು ಸ್ಫೋಟ; ಪ್ರಯೋಗಾಲಯ ನುಚ್ಚು ನೂರು; ಐವರ ಸಾವು.”
ಏ.ಸಿ.ಪಿ. ಕಾರನ್ನು ಭಾಭಾ ಸಂಶೋಧನಾಲಯದ ಕಡೆಗೆ ಓಡಿಸಿದರು. ಹಾಗೆಯೆ ಮೊಬೈಲಿನಲ್ಲಿ ತಮ್ಮ ಕಚೇರಿಗೆ ಮಾತಾಡಿ, ” ಬಾಂಬ್ ಬಗ್ಗೆ ಕಂಪ್ಲೇಂಟ್ ಕೊಡುತ್ತಿದ್ದಳಲ್ಲ ಒಬ್ಬ ಹುಡುಗಿ; ಅವಳನ್ನು ಸ್ಟೇಶನ್ನಿಗೆ ಮತ್ತೆ ಕರೆಯಿಸಿ ಕೂಡಿಸಿಕೊಳ್ಳಿ. ಅವಳು ಸಂಶಯಿತರೆ ಚೆಹರೆ ಹೇಳಿದ್ದರೆ, ಎಲ್ಲಾ ಸ್ಟೇಶನ್ನಿಗಳಿಗೂ ಕಳೆಯಿಸಿ ಕೊಡಿ. ಏರ್ ಪೋರ್ಟ್, ರೇಲ್ವೆ ಸ್ಟೇಶನ್ , ಬಸ್ ಸ್ಟ್ಯಾಂಡುಗಳಲ್ಲಿ ಮಫ್ತಿ ಸಿ.ಐ. ಡಿ ಕಳಿಸಿರಿ ಎಂದು ತುರ್ತು ಆದೇಶ ನೀಡಿದರು.
………………………………………………………………….
ಭರತಖಾನ ಸುಖಾಸನದಲ್ಲಿ ಕುಳಿತುಕೊಂಡು ಈ ಬಿಳಿಯ ಪಾರಿವಾಳವನ್ನು ಆರಾಮವಾಗಿ ನಿಟ್ಟಿಸುತ್ತಿದ್ದ. ಪ್ರವಲ್ಲಿಕಾ ಅವನ ಎದುರಿನಲ್ಲಿ ಕಟ್ಟಿಗೆಯ ಸ್ಟೂಲಿನ ಮೇಲೆ ಕುಳಿತುಕೊಂಡಿದ್ದಳು. ಹೆದರಿಕೆಯಿಂದ ಅವಳ ಮುಖ ಬಿಳಿಚಿಕೊಂಡಿತ್ತು. ಹಣೆಯ ಮೇಲೆ ಬೆವರ ಹನಿಗಳು ಸಾಲುಗಟ್ಟಿದ್ದವು. ತುಟಿಗಳು ಅದುರುತ್ತಿದ್ದವು. ಏದುಸಿರಿನಿಂದಾಗಿ ಎದೆ ಏರಿಳಿಯುತ್ತಿತ್ತು.

ಬೇಟೆಯನ್ನು ಒಂದೇ ಏಟಿಗೆ ಕೊಲ್ಲುವದರಲ್ಲಿ ಏನೂ ಮಜಾ ಇರುವದಿಲ್ಲ, ಇಂಚಿಂಚು ಹರಿಯುತ್ತ, ಚಪ್ಪರಿಸುತ್ತ ತಿನ್ನಬೇಕು ಎನ್ನುವದು ಭರತಖಾನನ ತತ್ವ. ಅವನ ಬೇಟೆ ಅವನ ವಶದಲ್ಲಿದೆ, ಸಾವಕಾಶವಾಗಿ ಅನುಭವಿಸೋಣ ಎಂದುಕೊಂಡ ಭರತಖಾನ ಅವಳನ್ನು ಅಲ್ಲಿಯೇ ಬಿಟ್ಟು, ರೂಮ್ ಲಾಕ್ ಮಾಡಿ ಹೊರ ನಡೆದ.
………………………………………………………….

ಭರತಖಾನನ ಅಪ್ಪ ಪ್ರೊ. ಸಯಾದುಲ್ಲಾ ಖಾನ ಹೆಸರಾಂತ ಇತಿಹಾಸ ಪಂಡಿತರು. ಭಾರತೀಯರೆಲ್ಲರೂ ಭಾರತದ ಸತ್ಸಂಪ್ರದಾಯಕ್ಕೆ ವಾರಸುದಾರರು. ಹಿಂದು, ಮುಸ್ಲಿಮ್ ಕ್ರಿಶ್ಚಿಯನ್ ಯಾರೇ ಇರಲಿ, ಈ ದೇಶದ ಪರಂಪರೆಯನ್ನು ಗೌರವಿಸಬೇಕು ಎನ್ನುವ ಮನೋಭಾವದವರು. ಆದುದರಿಂದಲೇ, ತಮ್ಮ ಮಗನಿಗೆ ಭರತಖಾನ ಎಂದು ಹೆಸರಿಟ್ಟರು. ಭರತಖಾನ ಗಣಕ ಶಾಸ್ತ್ರದಲ್ಲಿ ಇಂಜನಿಯರಿಂಗ್ ಪದವಿ ಪಡೆದ ಬಳಿಕ ಹೆಚ್ಚಿನ ಅಭ್ಯಾಸಕ್ಕಾಗಿ ಇಂಗ್ಲಂಡಿಗೆ ತೆರಳಿದ. ಅಲ್ಲಿ ಅವನಿಗೆ ಮುಸ್ಲಿಮ್ ಉಗ್ರಗಾಮಿಗಳ ಜೊತೆ ಸಖ್ಯ ಬೆಳೆಯಿತು. ಅತಿ ಗೋಪ್ಯದಿಂದ ಅವನಿಗೆ ಒಮ್ಮೆ ಬಿನ್ ಲಾಡೆನ್ ದರ್ಶನ ಸಹ ಲಭ್ಯವಾಯಿತು. ಭಾರತದಲ್ಲಿರುವ ಕಾಫಿರರನ್ನೆಲ್ಲ ನಿರ್ಮೂಲಗೊಳಿಸಿ ಅಲ್ಲಿ ಧರ್ಮರಾಜ್ಯ ಸ್ಥಾಪಿಸಲು ಬಿನ್ ಲಾಡೆನ್ ನೀಡಿದ ಆದೇಶದ ಮೇರೆಗೆ ಭರತಖಾನ ಬೆಂಗಳೂರಿಗೆ ಬಂದಿಳಿದಿದ್ದ.

ಭಾರತೀಯ ಇತಿಹಾಸ ಸಂಶೋಧನಾ ಮಹಾಮಂಡಲದ ವಾರ್ಷಿಕ ಸಭೆ ನಡೆದಿದೆ. ಪ್ರಮುಖ ಭಾಷಣಕಾರರಾದ ಪ್ರೊ. ಸಯಾದುಲ್ಲಾಖಾನರ ಭಾಷಣ ನಡೆದಿದೆ. ” ಭಾರತದ ಮೇಲೆ ದಾಳಿ ಮಾಡಿದ ಆಕ್ರಮಣಕಾರರಲ್ಲಿ ಅತಿ ಹೆಚ್ಚಿನ ಹಾನಿ ಮಾಡಿದ ವಿದೇಶೀಯರೆಂದರೆ ತುರ್ಕರು ಹಾಗು ಪರ್ಶಿಯನ್ನರು. ಇವರಿಂದ ಧರ್ಮಾಂತರಗೊಂಡ ಭಾರತೀಯರು ತಾವು ಭಾರತೀಯರೆನ್ನುವದನ್ನೆ ಮರೆತರು. ಆಕ್ರಮಣಕಾರರಿಗಿಂತ ಹೆಚ್ಚು ಭೀಕರವಾಗಿ ಅವರು ಇತರ ಭಾರತೀಯರ ಮೇಲೆ ವರ್ತಿಸಿದರು. ಮಲ್ಲಿಕ ಕಾಫರ ಇದರ ಉದಾಹರಣೆ. ಆಬಳಿಕ ಸಹ Two nation theory ಸಾರಿದ ಜಿನ್ನಾ, ಈವತ್ತಿಗೂ India is a plural country ಎಂದು ಭಾಷಣ ಬಿಗಿಯುವ ಪಂಡಿತರು ತಾವೆಲ್ಲರೂ ಭಾರತೀಯ ಬೀಜದವರೇ ಎನ್ನುವದನ್ನು ಮರೆತ ಮಹಾನುಭಾವರು. ತಮ್ಮನ್ನು ಸೆರೆಹಿಡಿದವರ ವಿಚಾರಗಳನ್ನೇ ಆತ್ಮಸಾತ್ ಮಾಡಿಕೊಳ್ಳುವ ಈ ಮನೋವಿಕಾರಕ್ಕೆ Stockholm syndrome ಎಂದು ಕರೆಯಲಾಗುತ್ತದೆ. ಆದರೆ ಈ ದಾಸ್ಯಭಾವನೆಗೆ ನಾನು Mallik kaphar syndrome ಎಂದು ಕರೆಯುತ್ತೇನೆ.”

ತನ್ನ ರೂಮಿನಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ಭರತಖಾನ್ ಎಡಗೈಯಲ್ಲಿ ಹಿಡಿದುಕೊಂಡಿದ್ದ ಚಿಕ್ಕ ರಿಮೋಟ ನ ಬಟನ್ ಒಂದನ್ನು ಒತ್ತಿದ. ಒಮ್ಮೆಲೆ ಕಿವಿಗಡಚಿಕ್ಕುವ ಭಯಂಕರ ಶಬ್ದದೊಂದಿಗೆ, ವೇದಿಕೆಯ ಮೇಲಿದ್ದ ಗಣ್ಯರ ಅಂಗಾಂಗಳು ತುಂಡುತುಂಡಾಗಿ ಹಾರಿದ ದೃಶ್ಯ ಕಂಡಿತು. ಭರತಖಾನ ವ್ಯಂಗ್ಯ ನಗುವೊಂದನ್ನು ನಕ್ಕ. “ಸಾಲಾ ಮಟಾಶ್!” ಎನ್ನುತ್ತ ಟಿ.ವಿ. ಬಂದು ಮಾಡಿದ.
***

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.