ಧಾರಿಣಿ ಆದಿನವೆಲ್ಲಾ ತನ್ನ ಪ್ರೀತಿಯ ಅಣ್ಣನ ನೆನಪಲ್ಲಿ ಕಳೆದಳು.ತನಗೆ ಸೈಕಲ್ ಕಲಿಸುತ್ತಿದ್ದ ಅಣ್ಣ…ಜಡೆ ಎಳೆದು ರೇಗಿಸುತ್ತಿದ್ದ ಅಣ್ಣ…ಗಂಟಾನುಗಟ್ಟಲೆ ಪಕ್ಕದಲ್ಲಿ ಕೂರಿಸಿಕೊಂಡು ಟ್ರಿಗ್ನಾಮಿಟ್ರಿ ಹೇಳಿಕೊಡುತ್ತಿದ್ದ ಅಣ್ಣ…ಅಪ್ಪನ ಜೇಬು ತನ್ನ ಹರೆಯದ ಆಸೆಗಳನ್ನು ಪೂರೈಸಲ್ಲು ಆಗದಿದ್ದ ಗಳಿಗೆಗಳಲ್ಲಿ ತನ್ನ ಮುಖ ಸಣ್ಣದಾದಾದಲೆಲ್ಲಾ ನಾನು ಕೆಲಸಕ್ಕೆ ಸೇರಿ ನಿನಗೇನೇನು ಬೇಕು ಹೇಳು ಎಲ್ಲಾ ತಂದು ಕೊಡುತ್ತೇನೆ ಅಂತ ರಮಿಸುತ್ತಿದ್ದ ಅಣ್ಣ… ಎದೆ ಉಬ್ಬಿಸಿ ಪ್ರೆಸಿಡೆಂಟ್ ಸ್ಕೌಟ್ ಮೆಡಲ್ ಅನ್ನು ರಾಷ್ಟಪತಿಗಳಿಂದ ಸ್ವೀಕರಿಸಿದ ಅಣ್ಣ…ತಾನು ಸಂಪಾದಿಸಲು ಶುರು ಮಾಡಿದ ನಂತರ ಮೊದಲತಿಂಗಳ ಸಂಬಳದಲ್ಲಿ ನನ್ನ ಮಡಿಲ ತುಂಬಾ ಉಡುಗೊರೆ ತುಂಬಿದ್ದ ಅಣ್ಣ… ನನ್ನ ಬಾಳ ಗೆಳೆಯ ರಾಜೀವನನ್ನು ನನ್ನ ಜೀವನದಲ್ಲಿ ಪರಿಚಯಿಸಿದ ಅಣ್ಣ…
ರಾಜೀವನ ಸ್ಥಿತಿಯೇನೂ ಭಿನ್ನವಾಗಿರಲಿಲ್ಲ… ಪ್ರತಾಪ ಅವನ ಜೀವದ ಗೆಳೆಯ…ಆಪ್ತ ಮಿತ್ರ…ಇಬ್ಬರೂ ಇಂಜಿನಿಯರಿಂಗ್ ಸಹಪಾಠಿಗಳು ನಂತರ ತಾನು ಸೇರಿದ ಕಂಪನಿಗೇ ರಾಜೀವನನ್ನು ಒತ್ತಾಯದಿಂದ ಬರಮಾಡಿಕೊಂಡಿದ್ದ.ಅಷ್ಟೊತ್ತಿಗಾಗಲೇ ರಾಜೀವ ಶಾಸ್ತ್ರಿಗಳ ಮನೆಯವನಂತೆ ಬೆರೆತು ಹೋಗಿದ್ದೂ,ಧಾರಿಣಿಗೆ ತನ್ನ ಹೃದಯವನ್ನು ಅರ್ಪಿಸಿದ್ದೂ ಆಗಿತ್ತು.ಅಸಾಧಾರಣ ಬುದ್ದಿವಂತನಾಗಿದ್ದ ಪ್ರತಾಪ ಅಲ್ಪ ಕಾಲದಲ್ಲೇ ಲೀಡ್ ಪೊಸಿಶನ್ ಗೆ ಏರಿದರೂ ರಾಜೀವನಿಗೆ ಅಸೂಯೆಯೇನಿಲ್ಲ ಮಿತ್ರನ ಪ್ರಗತಿ ಕಂಡು ಅಚ್ಚರಿ ತುಂಬಿದ ಹೆಮ್ಮೆ. ನ್ಯೂಯಾರ್ಕ್ ನ ಪ್ರಾಜೆಕ್ಟ್ ನಲ್ಲಿ ಪ್ರತಾಪನೇ ಟೀಮ್ ಲೀಡ್ ಆಗಿದ್ದ ರಾಜೀವನನ್ನು ತನ್ನ ಟೀಮ್ ನಲ್ಲಿ ಸೇರಿಸಿಕೊಂಡಿದ್ದ.ವರ್ಲ್ಡ್ ಟ್ರೇಡ್ ಸೆಂಟರ್ ನ ಇಪ್ಪತ್ತ ಮೂರನೇ ಮಹಡಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದದ್ದು.
ಸಸ್ಯಾಹಾರಿ ಮಿತ್ರರಿಬ್ಬರೂ ದುಬಾರಿ ನ್ಯೂಯಾರ್ಕ ನಲ್ಲಿ ತಮ್ ತಮ್ಮ ಪಾಕಪ್ರವೀಣ್ಯತೆಯನ್ನು ಒಬ್ಬರಿನ್ನೊಬ್ಬರ ಮೇಲೆ ಪ್ರಯೋಗಿಸಿ ಸೋತು ಹೋಗಿದ್ದ ಕಾಲದಲ್ಲಿ `ಬೇಗ ಮದ್ವೆ ಮಾಡ್ಕೊಳ್ಳಯ್ಯಾ…ನಿನ್ ಅಡುಗೆ ತಿಂದು ನಾನು ಹೊಟ್ತೆ ಕೆಟ್ಟು ಒಂದು ದಿನ ಗೊಟಕ್ ಅಂದ್ಬುಡ್ತೀನಿ ಅಷ್ಟೆ…ಅಂತ ರಾಜೀವನಿಗೆ ಪ್ರತಾಪ ರೇಗಿಸುತ್ತಿದ್ದ ಇಂಡಿಯಾಗೆ ಮನೆಗೆ ಪೋನ್ ಮಾಡಿದಾಗಲೆಲ್ಲಾ `ಧಾರಿಣೀ.. ಬೇಗ ಚೆನ್ನಾಗಿ ಅಡುಗೆ ಮಾಡೋದು ಕಲ್ತು ಕೊಳ್ಳೇ… ನಿನ್ ಭಾವಿ ಗಂಡನ ಅಡುಗೆ ತಿಂದೂ ತಿಂದೂ ಸಾಕಾಗಿದೆ ನಂಗೆ…’ ಎಂದು ಧಾರಿಣಿಯನ್ನು ಛೇಡಿಸುತ್ತಿದ್ದ…
ಮೊದಲ ಹಂತದ ಪ್ರಾಜೆಕ್ಟ್ ಮುಗಿದು ಎರಡನೇ ಫೇಸ್ ಶುರು ವಾಗುವ ಮೊದಲು ರಾಜೀವ -ಧಾರಿಣಿಯರ ಮದುವೆ ನಡೆದಿತ್ತು…ಅಮ್ಮನ ಮನೆ ಬಿಟ್ಟು ಹೊರಡುವಾಗ ಧಾರಿಣಿಯ ಕಣ್ತುಂಬಿ ಬಂದಿದ್ದರೂ ರಾಜೀವ ಸಾನಿದ್ಯ ಜೊತೆಗೆ ಅಪರಿಚಿತ ದೇಶದಲ್ಲಿ ಪ್ರೀತಿಯ ಅಣ್ಣನ ನೆರಳು ಇರುತ್ತದೆಂಬ ಭರವಸೆ ಅವಳಿಗೆ ಉತ್ಸಾಹ ಬಲ ನೀಡಿತ್ತು. ಹಾಗೇ ಶಾರದಮ್ಮನಿಗೂ ಮಗಳನ್ನು ಕಳಿಸಿಕೊಡುವಾಗ ಪ್ರತಾಪ ಅಲ್ಲೇ ಇದ್ದಾನಲ್ಲ ಎಂದ ಸಂಗತಿ ನೆಮ್ಮದಿ ನೀಡಿತ್ತು…
ಧಾರಿಣಿ,ರಾಜೀವ ಎಷ್ಟು ಹೇಳಿದರೂ ಕೇಳದೆ ಪ್ರತಾಪ `ನೀವಿಬ್ಬರೂ ನವದಂಪತಿಗಳು ನಿಮ್ಮಿಬ್ರ ಮಧ್ಯೆ ನಾನ್ಯಾಕೇ…? ಪಾನಕದಲ್ಲಿ ಪರಕೆ ಕಡ್ಡಿ ತರ… ಅಂತ ಧಾರಿಣಿ ಬಂದ ಮೇಲೆ ತನ್ನ ವಾಸ್ತವ್ಯ ವನ್ನು ಬ್ಯಾಚುಲರ್ ಮಿತ್ರನ ಮನೆಗೆ ಸಾಗಿಸಿದ್ದ.ಆದರೆ ರಾಜೀವ ಪ್ರತಾಪನಿಗೂ ಸೇರಿಸಿ ಮಧ್ಯಾನ್ಹ ಊಟ ಒಯ್ಯುತ್ತಿದ್ದ.ಧಾರಿಣಿಯ ಹೊಸ ರುಚಿ ಪ್ರಯೋಗಗಳಿಗೆಲ್ಲಾ ಇಬ್ಬರೂ ಬಲಿಪಶುವಾದಾಗಲೆಲ್ಲಾ `ನಿನ್ ಅಡುಗೆಯೇ ಚೆನ್ನಾಗಿರ್ ತಿತ್ತಲ್ಲೋ ಮೈ ಡಿಯರ್ ಬ್ರದರ್ ಇನ್ ಲಾ’ ಅಂತ ರಾಜೀವನ ಹತ್ರ ಹೇಳಿಕೊಂಡು ನಗುತ್ತಿದ್ದ ಪ್ರತಾಪ.
ಅಂದು ಆ ಕರಾಳ ದಿನ….
ಸಮಯಪಾಲನೆಯ ಬಗ್ಗೆ ಕಟ್ಟು ನಿಟ್ಟಾಗಿದ್ದ ಪ್ರತಾಪ ಕೊಂಚ ಬೇಗನೆ ಆಫೀಸಿನಲ್ಲಿ ಕಾರ್ಯಮಗ್ನನಾಗಿದ್ದ…
ಧಾರಿಣಿಯ ತೋಳಸೆರೆ ಬಿಡಿಸಿಕೊಂಡು ಅಂದು ರಾಜೀವ ಆಫೀಸು ಸೇರುವದು ಕೊಂಚ ತಡವಾಯಿತು…
ಅವನು ತಲುಪುವಷ್ಟರಲ್ಲಿ…….ಘೋರ ನಡೆದು ಹೋಗಿತ್ತು….
ಮೃದು ಮನಸ್ಸಿನ ರಾಜೀವ ನಿಂತಲ್ಲೇ ಕುಸಿದು ಹೋಗಿದ್ದ… ಹುಚ್ಚು ಹಿಡಿದವನಂತೆ ಬಡಬಡಿಸುತ್ತಾ
ರಾಜೀವ ಅವಶೇಷಗಳಲ್ಲಿ ತನ್ನ ಮಿತ್ರನನ್ನು ಹುಡುಕಲು ಮುಂದಾಗಿದ್ದ… ಆದರೆ ಪೋಲೀಸರು ಮತ್ತು ಮತ್ತ FBI ಅವನನನ್ನು ಬಲವಂತದಿಂದ ಮನೆಗೆ ಅಟ್ಟಿದ್ದರು….
***