ಈಚಿನ ದಿನಗಳಲ್ಲಿ ಜ್ಞಾನಪೀಠ ಪಡೆದ ಸಾಹಿತಿಗಳನ್ನು ಲೇವಡಿ ಮಾಡಲು ಬಳಸುತ್ತಿರುವ ’ಜ್ಞಾನಪಿತ್ಥ” ಪದ ಮೊದಲ ಬಾರಿ ಬಳಕೆಗೆ ತಂದವರಾರು?
ಬೇರಾರೂ ಅಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೇ ಆಗಿರುವ ಡಾ.ಶಿವರಾಮ ಕಾರಂತರು! “ಹುಚ್ಚುಮನಸ್ಸಿನ ಹತ್ತುಮುಖಗಳು” ಎಂಬ ಕಾರಂತರ ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದೆ.
ಜ್ಞಾನಪೀಠ ಪ್ರಶಸ್ತಿ ಪಡೆದ ನಂತರ ಅಭಿನಂದನಾ ಸಮಾರಂಭಗಳ ಬಗ್ಗೆ ಬರೆಯುತ್ತಾ ಕಾರಂತರು ಬರೆಯುತ್ತಾರೆ – “ಸುಮಾರು ಮೂರು ತಿಂಗಳು ನಾನು ಬೇರೆ ಯಾವುದನ್ನೂ ಮಾಡದಾದೆ; ಇದೊಂದೇ ಕೆಲಸ ನನಗೆ. ನನ್ನ ಸಾಹಿತ್ಯ ಓದಿದದವರು, ಓದದೆ ಬರಿದೆ ಅಭಿಮಾನ ತಾಳಿದ ಅಸಂಖ್ಯ ಜನರು. ನನ್ನನ್ನು ತಂತಮ್ಮ ಊರುಗಳಿಗೆ ಕರೆಯಿಸಿಕೊಂಡರು; ಪ್ರಶಂಸೆಯ ಸುರಿಮಳೆಯನ್ನೇ ಕರೆದರು. ಅಸಂಖ್ಯ ಮಾಲೆಗಳನ್ನು ಹೊರಿಸಿದರು; ಶಾಲುಗಳನ್ನು ಹೊದೆಸಿದರು; ಅಭಿನಂದನಾ ಪತ್ರಗಳಲ್ಲಿ ಸಂಸ್ಕೃತ ಶಬ್ದಭಂಡಾರವನ್ನೆಲ್ಲ ಸೂರೆ ಮಾಡಿದರು. ಇದು ಮೀತಿ ಮೀರಿದ ಪ್ರಶಂಸೆಯಲ್ಲವೇ – ಎಂಬ ಭಾವನೆ ನನ್ನನ್ನು ಆಗಾಗ ಕಾಡುತ್ತಿತ್ತು. ಹೊಗಳಿಕೆಗೂ ಒಂದು ಮಿತಿ ಬೇಕು – ಎನಿಸುತ್ತಿದೆ. ನಾನು ಪರಿಹಾಸ್ಯಕ್ಕಾಗಿ ಎಷ್ಟೋ ಬಾರಿ ನನ್ನನ್ನು ಸನ್ಮಾನಿಸಿದವರ ಮುಂದೆ ’ಜ್ಞಾನಪೀಠ’ ಪ್ರಶಸ್ತಿ ’ಜ್ಞಾನಪಿತ್ಥ’ವಾಗಬಾರದು ಎಂದದ್ದುಂಟು”.
ಜ್ಞಾನಪೀಠ ಪ್ರಶಸ್ತಿ ಪಡೆದ ಸಂದರ್ಭದ ಇನ್ನೊಂದು ಘಟನೆಯ ಬಗ್ಗೆ ಕಾರಂತರುಬರೆಯುತ್ತಾರೆ –
ಕನ್ನಡಕ್ಕೆ ಮೊದಲಬಾರಿ ಜ್ಞಾನಪೀಠ ತಂದುಕೊಟ್ಟ ಕುವೆಂಪು, ಎರಡನೆಯ ಬಾರಿ ’ನಾಕುತಂತಿ”ಗಾಗಿ ಜ್ಞಾನಪೀಠ ಪಡೆದ ಬೇಂದ್ರೆಯವರು ಪ್ರಶಸ್ತಿಯನ್ನು ಬೇರೆ ಭಾಷೆಯ ಲೇಖಕರೊಡನೆ ಹಂಚಿಕೊಳ್ಳಬೇಕಾಯಿತಂತೆ. ಇದರಿಂದಾಗಿ ಪ್ರಶಸ್ತಿಯ ಜೊತೆಗೆ ಬರುವ ಒಂದು ಲಕ್ಷ ಮೊತ್ತವೂ ಇಬ್ಬರಲ್ಲಿ ಹಂಚಿಹೋಗಿತ್ತು. ಕಾರಂತರು ಪಡೆದಾಗ ಬೇರಾವ ಭಾಷೆಗೂ ಪ್ರಶಸ್ತಿ ಹೋಗದೆ ಪೂರ್ತಿ ಹಣ ಕಾರಂತರಿಗೆ ದೊರಕಿದ್ದು ಜನರಲ್ಲಿ ತಪ್ಪುಗ್ರಹಿಕೆಗೆ ಕಾರಣವಾಯಿತು. ಕನ್ನಡ ಪತ್ರಿಕೆಗಳಲ್ಲಿ ’ಹಿಂದಿನವರಿಗೆ ಕೊಟ್ಟದ್ದು ಅರ್ಧ ಪ್ರಶಸ್ತಿ, ಕಾರಂತರಿಗೆ ಕೊಟ್ಟದ್ದು ಇಡೀ” ಎಂದು ಪ್ರಕಟವಾಗಿತ್ತಂತೆ!
***
ತುಳಸಿಯಮ್ಮ,
ಹೇಳಿದ ಕೆಲಸ ಒಂದೂ ಮಾಡಲ್ವಲ್ಲ ನೀವು……ಕಾರಿ ಹೆಗ್ಗಡೆ ಮಗಳನ್ನ ಕರ್ಕೊಂಡು ಬರ್ತೀನಿ ಅಂದ್ರಿ. ಕರ್ಕೊಂಡು ಬರ್ಲಿಲ್ಲ. ನಿಮ್ಮ ಮಾತು ನಂಬ್ಕೊಂಡು ನಾನು ಅನ್ನಾಹಾರ ನಿದ್ರೆಗಳನ್ನು ಬಿಟ್ಟು, ವಿರಹ ವೇದನೆಯಿಂದ ಬಳಲಿ ಬೆಂಡಾಗಿದ್ದೇ ಬಂತು….
ಬೇಂದ್ರೆಯಜ್ಜನ ‘ಮೂಡಲ ಮನೆ’ಯ ಪದ್ಯ ಹಾಕ್ತೀನಿ ಅಂದ್ರಿ. ಹಾಕ್ಲಿಲ್ಲ….. ಎಂತ ಮಾರಾಯ್ರೇ? ನೀವೂ ರಾಜಕೀಯಕ್ಕೆ ಇಳೀತಿದೀರಾ, ಎಂತ ಕಥೆ?
ಭಾಗವತ’ರು’
ಭಾಗವತ, ರಾಜಕೀಯಕ್ಕಿಳಿಯುವ, ಮುಳುಗುವ ಯಾವ ಇರಾದೆಯೂ ನನಗಿಲ್ಲ. ಕಾರಿ ಹೆಗ್ಗಡೆ ಮಗಳು ನನಗೆ ಸಿಕ್ಕಿಲ್ಲ. ಬೇಂದ್ರೆಯಜ್ಜನ ‘ಮೂಡಲ ಮನೆ’ ಬರಲಿದೆ.