ಅಮ್ಮನನ್ನು ನೋಡುವ ತವಕದಲ್ಲಿ ಹಳ್ಳಿ ಬಿಟ್ಟಾಗ ಭರತನ ಮನದ ತುಂಬಾ ಸರೋಜಮ್ಮನವರ ರೂಪವೇ ತುಂಬಿ ಹೋಗಿತ್ತು ಇಹದ ಅರಿವೇ ಇರಲಿಲ್ಲದವನಿಗೆ ಅವನ ಕಾರಿನ ಹಿಂಬದಿಯ ಸೀಟಿನಲ್ಲಿ ಯಾರಿದ್ದಾರೆ ಎಂಬ ಗಮನ ಹೋಗುವುದು ಹೇಗೆ?

ಕೇಶವನ ಮನೆಯನ್ನು ಹಿಂಭಾಗದಿಂದ ಹೊಕ್ಕು ಕಿಟಕಿಂದಲೇ ಸರೋಜಮ್ಮನ ದರ್ಶನ ಮಾಡಿಕೊಂಡು ಭಾರವಾದ ಮನಸ್ಸಿನಿಂದ ಹೊರಬಂದು ಕಾರು ಓಡಿಸತೊಡಗಿದ ಭರತ ಖಾನ ಕಾರು ಬಾಂಬೆ ಕಡೇಗೆ ಶರವೇಗದಿಂದ ಓಡುತ್ತಿತ್ತು. ಭರತನ ಮನ ವ್ಯಗ್ರ ವಾಗಿತ್ತು ತನ್ನ ಮುಂದಿನ ದಾರಿ ಏನು ಎಂದು ಚಿಂತಿಸುತ್ತಿದ್ದ ಅವನು ಸುಸ್ತಾದರೂ ಲೆಕ್ಕಿಸದೇ ಮಧ್ಯಾನ್ಹ ದ ವರೆಗೂ ಒಂದೇ ಸಮನೆ ಕಾರು ಓಡಿಸಿದ ಹೊಟ್ಟೆಯಲ್ಲಿ ಹಸಿವು ಬಡಬಾಗ್ನಿಯಂತೆ ಮೇಲೆದ್ದಾಗ ಯಾವುದೋ ಢಾಬಾ ದ ಬಳಿ ಕಾರು ನಿಲ್ಲಿಸಿ ಹೊಟ್ತೆಗೆ ಹಾಕಿಕೊಂಡು ಮತ್ತೆ ಕಾರಿಗೆ ಬಂದಾಗ ಅವನಿಗೆ ಶಾಕ್! ಹಿಂದಿನ ಸೀಟಿನಲ್ಲಿ ಬೆಕ್ಕಿನ ಮರಿಯಂತೆ ಮುದುರಿ ಕೂತಿದ್ದಳು ಕವಿತಾ…

ಭರತನಿಗೆ ಅಚ್ಚರಿಯಾದರೂ ತೋರ್ಪಡಿಸಿ ಕೊಳ್ಳದೆ ಕವಿತಾಳನ್ನು ಕೆಳಗಿಳಿಯಲು ಸೂಚಿಸಿದ ಹಸಿವಿನಿಂದ ಕಂಗಾಲಾಗಿ ಹೋಗಿದ್ದಳು ಕವಿತಾ. ಕಾರಿನಿಂದ ಹೊರಗೆ ಹೆಜ್ಜೆ ಇಟ್ಟವಳೇ ಕಣ್ಣು ಕತ್ತಲಿಟ್ಟು ನೆಲಕ್ಕೆ ವಾಲುತ್ತಿದ್ದವಳನ್ನು ಭುಜ ಹಿಡಿದು ಕರೆದೊಯ್ಯದ ಭರತ .ಸ್ವಲ್ಪ ತಿಂಡಿ ತಿಂದ ಮೇಲೆ ಗೆಲುವಾದಳು ಕವಿತಾ. ಯಾಕೆ ನೀನು ನನ್ನ ಹಿಂದೆ ಬಂದಿದ್ದು…? ಭರತನ ಕೋಪ ತುಂಬಿದ ವಿಚಾರಣೆಗೆ ಕವಿತಾಳ ಮೌನವೇ ಉತ್ತರವಾಗಿತ್ತು.
`ನಡೆ ನಿನ್ನನ್ನು ವಾಪಸ್ಸು ಊರಿಗೆ ಕಳಿಸುವ ಏರ್ಪಾಡು ಮಾಡುತ್ತೇನೆ…’ ಭುಸುಗುಟ್ಟುತ್ತಾ ಎದ್ದು ಹೊರಟವನ ತೋಳು ಜಗ್ಗಿ ವಾಪಸ್ಸು ಕೂರಿಸಿ ಉಸುರಿದಳು`ನಾನು ನಿನ್ನೊಂದಿಗೇ ಬರುವವಳು…’
ಏನು ಹೇಳ್ತಿದೀಯಾ…ನನ್ನ ಪಾಸ್ಟ್ ನಿನಗೆ ಗೊತ್ತಾ…?
ಗೊತ್ತು…
ಗೊತ್ತಿದ್ದೇ ಬಂದೆಯಾ…?
ಹೌದು…
ಭರತ ನಿರುತ್ತರನಾದ
ಭರತನಿಗೆ ಕವಿತ ಮಾರು ಹೋದಂತೆ ಈ ಜೇನುದನಿಯ ಜಿಂಕೆ ಕಣ್ಣಿನ ಚೆಲುವೆಯೆಡೆಗೆ ಭರತನೂ ಸೆಳೆಯಲ್ಪಟ್ಟಿದ್ದ ಆದರೆ ತನ್ನ ಜೀವನ ಬೆಂಕಿಯೊಂದಿಗೆ ಸರಸ ಎಂದು ಅವನಿಗೆ ಗೊತ್ತಿತ್ತಾದ್ದರಿಂದ
ಯಾರನ್ನೂ ತನ್ನ ಜೀವನದಲ್ಲಿ ಒಳಗೊಳ್ಳಲು ಅವನಿಗೆ ಮನಸಾಗುತ್ತಿಲ್ಲ
ಕವಿತಾಳಿಗೂ ಈಮಾತನ್ನು ಸ್ಪಷ್ಟವಾಗಿ ಹೇಳಿದ`ಭಾರತ ಸರ್ಕಾರದ ಸೇವೆಯಲ್ಲಿ ನಾನು ಸೇರಿರುವುದಂತೂ ನಿಜ ಆದರೆ ಒಮ್ಮೆ ಪ್ಯಾನ್ ಇಸ್ಲಾಮಿಕ್ ಮೂಮೆಂಟಿನಲ್ಲಿ ಸಕ್ರಿಯನಾಗಿದ್ದ ನನ್ನನ್ನು
ಹೇಗಾದರೂ ಓಸಾಮಾನ ಭಂಟರು ಪತ್ತೆ ಹಚ್ಚುತ್ತಾರೆ ಒಸಾಮ ನನಗೇನೂ ಮಾಡಲಾರ ಆದರೆ ಮಿಕ್ಕವರು ನನ್ನನ್ನು ಉಳಿಸುವುದಿಲ್ಲ. ಅದಕ್ಕೆ ಇಲ್ಲಿಂದ ದೂರ ಓದಿ ಹೋಗೋಣವೆಂದಿದ್ದೇನೆ ಅಮೇರಿಕಾ ಅಥ್ವಾ ಯೂರೋಪ್ ನಲ್ಲಿ ನನಗೆ ವಿಶ್ವಾಸವಿಲ್ಲ. ಬಹುಷಃ ನ್ಯೂಝೀಲ್ಯಾಂಡ್ ಅಥ್ವಾ ಆಸ್ಟ್ರೇಲಿಯಾಕ್ಕೆ…ಅಥ್ವಾ ಕೆರೆಬಿಯನ್…?ನೀನು ನನ್ನೊಂದಿಗೆ ಬಂದರೆ ಇನ್ನು ಕೆಲವು ವರ್ಷ ಭಾರತಕ್ಕೆ ಬರಲಾಗದು.
ಬರುವುದು ಹಾಗಿರಲಿ ನಿಮ್ಮವರೊಂದಿಗೆ ಸಂಪರ್ಕ ಸಹ ಇಟ್ಟುಕೊಳ್ಳಲಾಗದು ಹೇಳು ಇದಕ್ಕೆಲ್ಲಾ ರೆಡಿ ಇದ್ದೀಯಾ…?ಅಷ್ಟಕ್ಕೂ ನೀನು ಇಷ್ಟೇಲ್ಲಾ ಕಷ್ಟ ಪಟ್ಟು ನನ್ನೊಂದಿಗೆ ಬರುವ ಅಗತ್ಯ ಇದೆಯಾ ಅಂತ
ಮೊದಲು ಯೋಚಿಸು…ಸುಮ್ಮನೆ ವಾಪಸು ಮನೆಗೆ ಹೋಗು.. ಮನೆಯವರು ತೋರಿಸುವ ಹುಡುಗನನ್ನು ಮದುವೆಯಾಗಿ ಸುಖವಾಗಿರು…ನನ್ನೊಂದಿಗೆ ಬಂದು ಮುಳ್ಳಿನ ಹಾದಿಯಲ್ಲಿ ನೀನು ಕಷ್ಟಪಡುವುದು ನಾ ನೋಡಲಾರೆ…

2 thoughts on “ಭಾಗ – 22”

  1. ಮನೋಶಾಸ್ತ್ರ ಹಾಗು ಮಾನವಶಾಸ್ತ್ರ ಇವು ಕವಿತಾಳ ಮೆಚ್ಚಿನ ವಿಷಯಗಳು.
    ಅಲ್ಲದೆ ಅವಳು ಒಂದು ರೀತಿಯ ಸ್ತ್ರೀಸ್ವಾತಂತ್ರ್ಯವಾದಿ. ಕಾಲೇಜಿನಲ್ಲಿ ಜರುಗುವ ಚರ್ಚಾಕೂಟಗಳಲ್ಲಿ, ಮಾನವ ಸಮಾಜ ಪ್ರಾರಂಭವಾದ ಗಳಿಗೆಯಿಂದ ಯಾವ ಯಾವ ವಿಧಾನಗಳಲ್ಲಿ ಸ್ತ್ರೀಯ ಮೇಲೆ ಅನ್ಯಾಯ ನಡೆದಿದೆ ಎನ್ನುವದನ್ನು ಅವಳು ತರ್ಕಬದ್ಧವಾಗಿ ವಿವರಿಸುತ್ತಿದ್ದಳು. ಕೇವಲ ಸಮಾಜವಷ್ಟೇ ಅಲ್ಲ, ನಿಸರ್ಗವೂ ಸಹ ಮಹಿಳೆಗೆ ಅನ್ಯಾಯ ಮಾಡಿದೆ; ಶಿಶುವಿನ ಗರ್ಭಧಾರಣೆಯು ಸ್ತ್ರೀಯ ಜೈವಿಕ ಅವಶ್ಯಕತೆ ಹಾಗು ಅನಿವಾರ್ಯತೆ; ಮಾನವ ಸಂತಾನದ ಉಳಿವು ಅವಳ ಪಾಲಿನ ವಿಧಿ. ಇದರ ಪರಿಣಾಮವೆಂದರೆ ಪುರುಷನನ್ನು ಆಕರ್ಷಿಸುವ ಹಾಗು ಅವಲಂಬಿಸುವ ಅನಿವಾರ್ಯತೆ ಅವಳ ಸಾಮಾಜಿಕ ಹಣೆಬರಹ ಹಾಗು ವೈಯುಕ್ತಿಕ ದುರಂತ. ಸ್ತ್ರೀಸ್ವಾತಂತ್ರ್ಯವು ಪರಮಾವಧಿಯನ್ನು ತಲುಪಿರುವ ಪಾಶ್ಚಾತ್ಯ ದೇಶಗಳಲ್ಲೂ ಸಹ ಅಂಗಾಂಗ ಪ್ರದರ್ಶನ ಮಾಡುವದು ಹೆಣ್ಣಿಗೆ ಅನಿವಾರ್ಯವಾಗಿದೆ ಎನ್ನುವದು ಸ್ತ್ರೀಕುಲದ ಸಾಮೂಹಿಕ ದೌರ್ಬಲ್ಯದ ನಿದರ್ಶನ. ಇದನ್ನು ತಪ್ಪಿಸಬೇಕು ಎನ್ನುವದು ಕವಿತಾಳ ಆವೇಶಭರಿತ ಪ್ರತಿಪಾದನೆ. ಅವಳ ದೈನಂದಿನ ಉಡುಗೆ ತೊಡುಗೆ ಹಾಗು ಅವಳ ಆಚರಣೆ ಸಹ ಅವಳ ಈ ವಿಚಾರಗಳಿಗೆ ಅನುಗುಣವಾಗಿದ್ದವು. ಅವಳ ಚೆಲುವು ಹಾಗು ನಿಲುವಿಗೆ ಮರುಳಾದವರೆಷ್ಟೋ ಜನ. ಆದರೆ ಅವಳು ಯಾರಿಗೂ ‘ಕ್ಯಾರೆ’ ಎಂದವಳಲ್ಲ. ಅಂತಹ ಕವಿತಾ ಭರತನನ್ನು ಕದ್ದು ಕದ್ದು ನೋಡಿದಳು. ಪ್ರವಲ್ಲಿಕಾಳ ಬಗೆಗೆ ಗೊತ್ತಿದ್ದೂ, ಭರತನನ್ನು ಮನದಲ್ಲೆ ವರಿಸಿದಳು. ಇಂತಹದನ್ನೆಲ್ಲ ಸ್ವತಹ ಅನುಭವಿಸಿದ್ದರಿಂದಲೆ, ಭರ್ತೃಹರಿಯಂತಹ ಕವಿ
    “ಧಿಕ್ ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ!” ಎಂದು ಹಲುಬಿದ್ದು!
    ಮಧ್ಯರಾತ್ರಿ ಎದ್ದೋಡುತ್ತಿರುವ ಭರತನನ್ನು ಕಂಡ ಕವಿತಾ ತನ್ನ ದಿಟ್ಟ ಸ್ವಭಾವಕ್ಕನುಗುಣವಾಗಿ ಅವನನ್ನು ಹಿಂಬಾಲಿಸಿ ಹೋದಳು, ಅವನಲ್ಲಿ ತನ್ನ ಮನಸ್ಸನ್ನು ತೋಡಿಕೊಂಡಳು. ಇದು ಅವಳ ಮೊದಲ ಪಲಾಯನವಾದ ಕಾರಣ ತುಸು ಹೆದರಿದ್ದಳು. ಭರತ ಅವಳನ್ನು ಬೆಂಗಳೂರಿಗೆ ಮರಳಿಸುವ ಮಾತನ್ನಾಡಿದಾಗ ಅವಳ ಸ್ವಭಾವ ಮತ್ತೆ ಜಾಗೃತವಾಯಿತು.
    “ನೋ, ಭರತ್ ನೋ! ಕಾರನ್ನು ನೆಟ್ಟಗೆ ಮುಂಬಯಿ ಕಡೆಗೆ ಓಡಿಸು!” ಎಂದು ಭರತನಿಗೆ ಆಣತಿ ಇತ್ತಳು. ಭರತ ದಿಗ್ಭ್ರಾಂತನಾದ. ಜಿಂಕೆಯೆಂತಹ ಈ ಹುಡುಗಿಯ ಜೇನುದನಿಯಲ್ಲಿ ಇಷ್ಟು ಅಧಿಕಾರ, ಇಷ್ಟು ಕಾಠಿಣ್ಯ ಇರಬಹುದೆಂದು ಅವನು ಎಣಿಸಿರಲಿಲ್ಲ.

    ಅಷ್ಟರಲ್ಲಿ ಕವಿತಾಳ ಮೊಬೈಲ್ ರಿಂಗಣಿಸಿತು. ಅತ್ತಲಿಂದ ಪ್ರವಲ್ಲಿಕಾಳ ಕಾತರದ ಧ್ವನಿಃ” ಕವಿತಾ, ಎಲ್ಲಿದ್ದೀ? ನಾವೆಲ್ಲರೂ ಗಾಬರಿಯಾಗಿದ್ದೇವೆ.”
    “ಹೆದರಬೇಡ, ವಲ್ಲೀ. ನಾನು ಭರತನನ್ನು ಓಡಿಸಿಕೊಂಡು ಹೋಗುತ್ತಿದ್ದೇನೆ.
    ಎಲ್ಲಿ ಹೋಗುತ್ತಿದ್ದೇನೊ ಗೊತ್ತಿಲ್ಲ. ಮದುವೆ ಮುಗಿದ ನಂತರ ನಿನಗೆ ಖಂಡಿತವಾಗಿಯೂ ತಿಳಿಸುತ್ತೇನೆ!” ಇಷ್ಟು ಹೇಳಿದ ಕವಿತಾ ಫೋನ್ ಕಟ್ ಮಾಡಿದಳು. ಭರತನೆಡೆಗೆ ವಿಜಯದ ನಗೆ ಬೀರಿದಳು.
    ………………….
    ಭರತ ಹಾಗು ಕವಿತಾ ಮುಂಬಯಿ ತಲುಪಿದಾಗ ಬೆಳಗಿನ ಹತ್ತು ಗಂಟೆ.

  2. ಬೆಂಗಳೂರಿನಿಂದ ಚಿತ್ರದುರ್ಗದವರೆಗೆ, ಅಂದರೆ ಸುಮಾರು ೨೦೦ ಕಿಲೊಮೀಟರುಗಳವರೆಗೂ ವಾಹನ ಚಲಾಯಿಸಿದ ಭರತ, ಚಹಾಪಾನಿಗೆಂದು ಅಲ್ಲಿ ನಿಲ್ಲಿಸಿದಾಗ ಆಕಸ್ಮಿಕವಾಗಿ ಕವಿತಾಳನ್ನು ನೋಡಿದ. ಕವಿತಾ ಆತನ ಜೊತೆಗೇ ಸಾಗುವ ತನ್ನ ಉದ್ದೇಶ ಪ್ರಕಟಿಸಿದಾಗ ಅವನು ಹೈರಾಣಾದ. ದೈಹಿಕವಾಗಿ ಹಾಗು ಮಾನಸಿಕವಾಗಿ ಆತ ಆಯಾಸಗೊಂಡಿದ್ದನ್ನು ಗಮನಿಸಿದ ಕವಿತಾ ಅಲ್ಲಿಂದ ಮುಂದೆ ಕಾರಿನ ಚಕ್ರವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡಳು. ಭರತ ಅವಳ ಪಕ್ಕದಲ್ಲಿ ಕುಳಿತುಕೊಂಡ. ಚೆಲುವೆಯ ಕುತೂಹಲದ ಪ್ರಶ್ನೆಗಳಿಗೆ ಈ ರಸಿಕರಾಜ, ಕರಗುತ್ತಿರುವ ಹಿಮದ ಬಂಡೆಯಂತಾದ. ತನ್ನ ಪ್ರಯಾಣದ ಉದ್ದೇಶ, ಹಿನ್ನೆಲೆ ಎಲ್ಲವನ್ನೂ ತೋಡಿಕೊಂಡು ಬಿಟ್ಟ. ರಾಣಿಬೆನ್ನೂರು ತಲುಪುವಷ್ಟರಲ್ಲಿ ಅಂದರೆ ಒಂದು ನೂರು ಕಿಲೋಮೀಟರ ಕ್ರಮಿಸುವ ಒಂದು ತಾಸಿನ ಅವಧಿಯಲ್ಲಿ, ಭರತನ ಜಾತಕವೆಲ್ಲ ಕವಿತಾಳಿಗೆ ಕರತಲಾಮಲಕವಾಯಿತು. ಪ್ರವಲ್ಲಿಕಾ ಭರತನಿಗೆ ಸೋದರಿಯಾಗುವದರಿಂದ, ತನ್ನ ಪ್ರತಿದ್ವಂದಿಯಾಗಲು ಸಾಧ್ಯವಿಲ್ಲವೆನ್ನುವದು ಹೊಳೆದು ಕವಿತಾಳ ಮನಸ್ಸು ನಿಸೂರಾಯಿತು. ‘ಛೇ, ಸ್ವಾರ್ಥಿ ಮನಸ್ಸೆ!’ ಎಂದು ತನ್ನನ್ನೆ ಬೈದುಕೊಂಡಳು.
    “ಭರತ, ರಾಷ್ಟ್ರವಿಭಜನೆಯ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ತನ್ನ ಮಗನನ್ನು ಕಳೆದುಕೊಂಡ ಒಬ್ಬ ಹಿಂದೂ ಗಾಂಧೀಜಿಯವರಲ್ಲಿ ತನ್ನ ಆಕ್ರೋಶವನ್ನು ತೋಡಿಕೊಂಡನಂತೆ. ಗಾಂಧೀಜಿ ಅವನಿಗೆ ಹೇಳಿದ ಪರಿಹಾರ ಏನು ಗೊತ್ತೆ? ‘ಒಬ್ಬ ಅನಾಥ ಮುಸ್ಲಿಮ್ ಹುಡುಗನನ್ನು ಸಾಕು, ಅವನನ್ನು ಉತ್ತಮ ಮುಸ್ಲಿಮ್ ನನ್ನಾಗಿ ಬೆಳೆಸು’ ಎಂದು. ನಿನ್ನ ಸಾಕು ತಂದೆ ಸಮೀಉಲ್ಲಾಖಾನ ರಾಷ್ಟ್ರೀಯವಾದಿ ಗಾಂಧೀಭಕ್ತ ಎಂದು ಹೇಳಿದೆಯೆಲ್ಲ. ನೀನು ಅನಾಥ ಹಿಂದೂ ಶಿಶುವೆಂದೇ ಅವರು ನಿನ್ನನ್ನು ಹಿಂದು ಬಾಲಕನಂತೆ ಬೆಳೆಸಿರಬೇಕು” ಎಂದು ಕವಿತಾ ವಿಶ್ಲೇಷಿಸಿದಳು.
    ಧಾರವಾಡವನ್ನು ತಲುಪಿದಾಗ, ಭರತ ಕಾರಿನ ಚಕ್ರವನ್ನು ತೆಗೆದುಕೊಂಡ. ಕವಿತಾ ತೂಕಡಿಸುತ್ತ ಅವನ ಭುಜಕ್ಕೊರಗಿದಳು. ಬೆಳಗಾವಿ ಹಾಗು ಕೊಲ್ಲಾಪುರ ಭರದಿಂದ ಹಿಂದೆ ಸರಿದವು. ಕೊಲ್ಲಾಪುರದಲ್ಲಿ ಕಾರಿನ ಚಕ್ರವನ್ನು ಹಿಡಿದ ಕವಿತಾ ಪುಣೆ ಸಮೀಪ ಬಂದಾಗ ಪೂರ್ವಾಕಾಶದಲ್ಲಿ ಬೆಳ್ಳಿ ಚುಕ್ಕೆ ಕಾಣಿಸುತ್ತಿತ್ತು. ಭರತ ಹಾಗು ಕವಿತಾಳಿಗೆ ಇದು ಅವರ ಆಗಾಮಿ ಬಾಳಿನ ಬೆಳ್ಳಿ ಚುಕ್ಕೆಯಂತೆ ಭಾಸವಾಯಿತು.
    “ಭರತ್ ನ್ಯೂಝೀಲ್ಯಾಂಡಿನಲ್ಲಿರುವ ಭಾರತೀಯ ಸಂಸ್ಥೆಯೊಂದು ತಾನು ನಡೆಯಿಸುತ್ತಿರುವ ಹೈಸ್ಕೂಲಿಗೆ ಶಿಕ್ಷಕಿಯರು ಬೇಕೆಂದು ಜಾಹೀರಾತು ಕೊಟ್ಟಿದ್ದರು. ನಾನು ಅಲ್ಲಿ apply ಮಾಡಿ ಈಗಾಗಲೇ ಒಂದು ತಿಂಗಳಾಗಿದೆ. ಇವತ್ತೊ ನಾಳೆಯೊ ನನಗೆ appointment order ಬರಬಹುದು. ನನ್ನ ಜೊತೆಗೆ ನೀನೂ ಬಂದು ಬಿಡು” ಎಂದು ಕವಿತಾ ತನ್ನ ಪ್ರಪ್ರಥಮ ಪ್ರಿಯಕರನಿಗೆ ಸಲಹೆ ಮಾಡಿದಳು. ಪ್ರಿಯತಮನಿಗೂ ಸಹ ಇದು ಪಟಾಯಿಸಿತು. ಭಾರತೀಯ ಸೈನ್ಯದವರಲ್ಲಿ ವಿನಂತಿಸಿದರೆ, ಅವರು ಕೆಲವು ಲಕ್ಷ ಡಾಲರು ಖರ್ಚು ಮಾಡಿ ತನ್ನನ್ನು ನ್ಯೂಝೀಲ್ಯಾಂಡಿನಲ್ಲಿ ನೆಲೆಗೊಳಿಸಿಯಾರು ಎಂದು ಅವನ ವಿಚಾರಧಾರೆ ಹರಿಯಿತು. ತನ್ನ ಹೆತ್ತಮ್ಮನನ್ನು ಒಂದು ಸಲ ಕಣ್ಣಾರೆ ಕಂಡು, ಮುಂದಿನ ಕ್ರಮ ಯೋಚಿಸೋಣ ಎಂದು ಅವನು ನಿರ್ಧರಿಸಿದ. ಆದರೆ ವಿಧಿಯ ಆಟವನ್ನು ಬಲ್ಲವರಾರು? ಹತ್ತು ಜನ ಆಟಗಾರರ ಕಾಲಿಗೆ ಸಿಕ್ಕ ಫುಟ್ ಬಾಲಿನಂತೆ ಅವನ ಜೀವನ ಎತ್ತೆತ್ತೆಲೊ ಸಾಗುತ್ತಿದೆ. ಅವನು ತನ್ನ ಗೋಲನ್ನು ತಲುಪಿಯಾನೇ ಅಥವಾ ಸ್ಟಾರ್ ಟಿ.ವಿ.ಯಲ್ಲಿ ಬರುತ್ತಿರುವ ಏಕತಾ ಕಪೂರಳ ಹಿಂದಿ ಧಾರಾವಾಹಿಗಳಂತೆ ಕೊನೆಯಿಲ್ಲದೆ ಓಡುವನೇ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.