ಕವಿತೆ :ಬೆಳಗು
ಕವಿ : ಅಂಬಿಕಾತನಯದತ್ತ,
(೧)
ಮೂಡಲ ಮನೆಯಾ ಮುತ್ತಿನ ನೀರಿನ
ಎರಕವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲು ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ.
(೨)
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.
(೩)
ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿರುವರು ಮುಗಿಲs ಮೇಲಿಂ-
ದಿಲ್ಲಿಗೇ ತಂದು
ಈಗ-ಇಲ್ಲಿಗೇ ತಂದು.
(೪)
ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.
(೫)
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.
(೬)
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.
(೭)
ಅರಿಯದು ಆಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ-ಕಾಣsದೋ ಬಣ್ಣಾ
ಶಾಂತೀರಸವೇ ಪ್ರೀತಿಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.
ಬೇಂದ್ರೆಯವರ ಕವನಸಂಕಲನ”ಗರಿ’ಯಲ್ಲಿ ಈ ಕವಿತೆ ಪ್ರಕಟವಾಗಿದೆ.
ಈ ಕವಿತೆಯನ್ನು ಬೆಳ್ಳಿ ಮೋಡ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಗಾಯಕಿ: ಎಸ್. ಜಾನಕಿ;
ಸಂಗೀತ: ವಿಜಯಭಾಸ್ಕರ್
“ಬೇಂದ್ರೆಯಜ್ಜನ ಕವಿತೆ ಹಾಕ್ತೇನೆ ಅಂತ ಹೇಳಿ ಎಷ್ಟು ದಿನ ಆಯ್ತು?”
– ಭಾಗವತರೇ, ನಿಮ್ಮ ಹಾಡು ಬಂದಿದೆ. ಎದುರುಗೊಳ್ಳಿ. ನಿಮ್ಮ ಧನ್ಯವಾದ ಸುನಾಥರಿಗಿರಲಿ.
ಸುನಾಥರೇ,
ಧನ್ಯವಾದಗಳು.
ತುಳಸಿಯಮ್ಮ,
ಕೊನೆಗೂ ಮಾತು ಉಳಿಸಿಕೊಂಡಿದ್ದಕ್ಕೆ ಅಭಿನಂದನೆಗಳು.
ಈ ಹಾಡಿನ ಮೋಡಿಯಿಂದ ಹೊರಬರಲಾಗದು. ಅದರಲ್ಲೂ ಕೊನೆಯ ಚರಣದ ಮತ್ತು ಕೊನೆಯ ಸಾಲಿನ ಅರ್ಥ ಭೌತಿಕವನ್ನು ಅಲೌಕಿಕವನ್ನಾಗಿಸುವಂಥದ್ದು. ಅಂಬಿಕಾತನಯದತ್ತರ ಪ್ರತಿಭೆಯ ಸಾಕಾರ ಇದು.
ಈ ಹಾಡಿನ ಬಗ್ಗೆ ಶ್ರೀ ನಾಗ ಐತಾಳ (ಆಹಿತಾನಲ)ರು ಕೊಟ್ಟ ಚಂದದ ವಿವರಣೆ ಇಲ್ಲಿದೆ:
http://www.sahityanjali.org/?q=node/20
ಓದಿ ನೋಡಿ….
ಜ್ಯೋತಿಯವರೆ,
ಆಹಿತಾನಲರ ಲೇಖನಕ್ಕೆ ದಾರಿ ತೋರಿದ್ದಕ್ಕಾಗಿ ಧನ್ಯವಾದಗಳು. ಬೇಂದ್ರೆಯವರ ಕಲ್ಪನಾ ಶಕ್ತಿ ಅಗಾಧವಾದದ್ದು. ಹೀಗಾಗಿ ಅವರು ‘ಬೆಳಕಿ’ನ ಬಗೆಗೆ ಬರೆದಷ್ಟು ಹಾಗು ವೈವಿಧ್ಯಪೂರ್ಣವಾಗಿ ಬರೆದಷ್ಟು ಬಹುಶಃ ಯಾವೂ ಕವಿಯೂ ಬರೆದಿರಲಿಕ್ಕಿಲ್ಲ. ಕೆಳಗೊಂದು ಉದಾಹರಣೆಃ
“ಏಳು ಚಿಣ್ಣ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ!
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ!
ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್ ಎಂದು ಬಿಟ್ಟ ಮಾರ,
ಗುಡಿ ಗೋಪುರಕ್ಕು ಬಲೆ ಬೀಸಿ ಬಂದ ಅಗೊ ಬೆಳಕು ಬೇಟಗಾರ.”