ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ)
ಕವನ ಸಂಕಲನ : ನಲ್ವಾಡುಗಳು

-ಪಲ್ಲವಿ-
ನಾ ಸಂತಿಗೆ ಹೋಗಿನ್ನಿ- ಆಕಿ ತಂದಿದ್ದಳೋ ಬೆಣ್ಣಿ;
ಹಿಂಡುಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ!
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!


ತೆನಿ ತಿರಿವಿದ ಟೋಪಿನ ಸೀರಿ-ಅದ-
ರಂಚಿಗೆ ರೇಶಿಮಿ ಭಾರಿ. . .
ಬಿಸಿಲು ಬಿದ್ದ ಕಡೆ ಭಂಗಾರದsಗೆರಿ
ಮೈಯಾಗ ಕುಪ್ಪಸ ಹೂ ಜರತಾರಿ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ- ಬೆಣ್ಣಿ!

ಮೂಗಬಟ್ಟು ಹಾಕಿದಕಿ ಮೂಗಾ-ಕೊರ-
ದ್ಹಚ್ಚಿದ್ಹಾಂಗ ಮಾರೀ ಮ್ಯಾಗs,
ಹರಳೀನ ಝಮಿಕಿ ಕಿವಿಯಾಗs-
ತೂಗ್ಯಾಡಿ ಸುರಿಸತಿತ್ತೊ ಸೊಬಗಾ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!

ಮುಂಗುರುಳು ಹಾರ್‍ಯಾಡುವ ಹಣಿ-
ಚೆಲ್ವಿಕಿಯ ಖಣೀ-ನೋಡು ಥೇಟಾ . . . .
ತಂಬುಲದ ಚೆಂದುಟೀ ಅರಳಿಸಿ ಬಿಟ್ಟರ
ಆ ನಗಿ ಮಲ್ಲಿಗಿತ್ವಾಟಾ-
ಕೊರಳ ಮಣೀ-ಕೆಂಪಾದ ಕೆನ್ನಿ ಕುಣಿ
ಕರದು ಕೈಯಮಾಡಿ ಕೊಟ್ಟಿತಿ ಕಾಟಾ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!


ಸುಳಿಗಾಳಿ ಸರಿಸತಿತ್ತೊ ಸೆರಗಾ-
ಏನ್ಹೇಳ್ಳಿ ತುಂಬಿದೆದಿ ಮೆರಗಾ . . . .
ಪರಿವಿಲ್ಲ ಸರಿದ ಸೆರಗಿಂದಾ-ನನ-
ಗೇರಿತಾಗ ಏನೊ ಸುಂದಾ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!

ಕಣ್ಣೆತ್ತ ನೋಡತಿತ್ತೋ-ಮನಸೆತ್ತ ಓಡತಿತ್ತೋ!
ಬಗಿಯೇನೊ ಹಾಡತಿತ್ತೋ-ಬೆಣ್ಣಿಗಡಗಿ ಮಾತ್ರ ಮುಂದಿತ್ತೋ
ನೋಡಿದ ನಿಟ್ಟಿಗೆ ಮಿಂಚಿನ ಕೋಲಾ
ತಿಳೀದ್ಹಾಂಗ ನನಗಾತೋ ಸೋಲಾ . . . .

ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!

********************

3 thoughts on “ಬೆಣ್ಣಿಯಾಕಿ – ಆನಂದಕಂದ”

  1. ಹಳ್ಳಿಯ ಸಾಮಾನ್ಯರ ಜೀವನದಲ್ಲಿಯ ರೋಮಾನ್ಸ್ ತೋರಿಸುವ ಅಸಾಮಾನ್ಯ ಗೀತೆ !

  2. ನಮಸ್ಕಾರ ,
    ನಲ್ವಾಡುಗಳು ಪುಸ್ತಕದಲ್ಲಿರುವ ಎಲ್ಲ ಗೀತೆಗಳು ಸಿಗಬಹುದೇ

    1. ನನ್ನಲ್ಲಿ ಪುಸ್ತಕವಿದೆ, ಎಲ್ಲವನ್ನೂ ಪ್ರಕಟಿಸಲು ಪ್ರಯತ್ನಿಸುವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.