ಹೇಮಂತನ ತಂದೆಯಂತಿದ್ದ ಹಿರಿಯರು ಮಾತುಕತೆಗೆ ವಿರಾಮ ಹಾಕುವವರಂತೆ ನುಡಿದರು, “ನೋಡಿ ಸ್ವಾಮಿ, ನಾವು ನಿಮಗಿಂತ ಬಡವರಿರಬಹುದು. ಹಾಗೆಂದು ನಾವೇನು ಗತಿಗೆಟ್ಟವರಲ್ಲ. ಏನೋ ಹುಡುಗ-ಹುಡುಗಿ ಇಷ್ಟಪಟ್ಟಿದ್ದಾರೆ ಅನ್ನೋ ಕಾರಣಕ್ಕೆ ನಾವು ಮಾತಾಡೋದಿಕ್ಕೆ ಬಂದಿದೀವಿ. ನಿಮ್ಮನೆ ಹೆಣ್ಣನ್ನು ನಮ್ಮನೆ ಬೆಳಗಲು ಕಳಿಸಿಕೊಡಿ ಎಂದು ಕೇಳೋದಿಕ್ಕೆ ಬಂದಿದೀವಿ. ನೀವೂ ಅಷ್ಟೆ, ಎಳೆಯರ ಪ್ರೀತಿಗೆ ಬೆಲೆಕೊಟ್ಟು ಮದುವೆಗೆ ಒಪ್ಪಿಕೊಳ್ಳಿ. ನಿಮ್ಮ ಮಗು ನಮ್ಮನೆಯಲ್ಲಿ ಸುಖವಾಗಿರುತ್ತದೆ; ನನ್ನನ್ನು ನಂಬಿ” ನಯ-ವಿನಯ ತುಂಬಿದ್ದ ಅವರ ದನಿಯಲ್ಲಿ ದಣಿವಿತ್ತು.
ಪುಟ್ಟಿಗೆ ಈಗ ವಿಷಯ ಅಲ್ಪ ಸ್ವಲ್ಪವಾಗಿ ಅರಿವಿಗೆ ಬಂದಿತು. ರಜನಿ ಅಕ್ಕನ ಮದುವೆ ಮಾತು ನಡೆಯುತ್ತಿದೆ! ಕಳೆದ ಬೇಸಿಗೆ ರಜೆಯಲ್ಲಿ ನಡೆದ ಸೋಮು ಚಿಕ್ಕಪ್ಪನ ಮದುವೆಯ ಸವಿ ಇನ್ನೂ ಪುಟ್ಟಿಯ ಮನಸ್ಸಿನಿಂದ ಮರೆಯಾಗಿರಲಿಲ್ಲ. ಹೊಸ ಬಟ್ಟೆ, ಸಿಹಿ ತಿಂಡಿಗಳು, ಮನೆ ತುಂಬಾ ಬಂದಿಳಿಯುವ ನೆಂಟರಿಷ್ಟರು… ಎಲ್ಲಾ ನೆನಪಾಗಿ ಪುಟ್ಟಿಗೆ ಸಡಗರವೆನಿಸಿತು.
ಅಷ್ಟರಲ್ಲಿ ದೊಡ್ಡಪ್ಪ ಸಿಟ್ಟಿನಿಂದ ನುಡಿದರು. ಹಿರಿಯರ ಮಾತಿನಿಂದ ಅವರು ಕೆರಳಿದ್ದರು. “ಶಿವರಾಮಯ್ಯನೋರೆ, ನಿಮಗೆ ತಲೆ ಕೆಟ್ಟಿದೆಯೇನ್ರಿ? ನಾವೇ ನಮ್ಮ ಕೈಯಾರೆ ನಮ್ಮ ಮಗಳ ಬಾಳು ಹಾಳು ಮಾಡೋಕಾಗತ್ತಾ? ನಿಮ್ಮನೆಗೆ ಹೆಣ್ಣು ಕೊಡುವಷ್ಟು ಗತಿಗೆಟ್ಟಿಲ್ಲ ನಾವು. ನಿಮ್ಮ ಯೋಗ್ಯತೆ ತಿಳಿದು ವ್ಯವಹಾರ ಮಾಡಿ. ನಮ್ಮಿಬ್ಬರ ಜಾತಿ, ಅಂತಸ್ತು ಯಾವುದರಲ್ಲೂ ಹೊಂದಾಣಿಕೆ ಇಲ್ಲ. ಮದುವೆ ಮಾಡಿಕೊಡಬೇಕಂತೆ, ಮದುವೆ! ಹೋಗ್ರಿ… ಹೋಗ್ರಿ… ನಿಮಗೆ ಮಾನ-ಮರ್ಯಾದೆ ಇದ್ದರೆ ಎದ್ಹೋಗ್ರಿ ಇಲ್ಲಿಂದ” ಎಂದು ತಿರಸ್ಕಾರದಿಂದ ನುಡಿದು ಬಾಗಿಲತ್ತ ಕೈ ತೋರಿದರು.
ಆ ಹಿರಿಯರು ಈಗಾಗಲೇ ಸಾಕಷ್ಟು ಮಾತಾಡಿ ಆಯಾಸಗೊಂಡಂತಿದ್ದರು. ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂಬ ಭಾವನೆ ಮುಖದಲ್ಲಿ ಅಚ್ಚೊತ್ತಿತ್ತು. ನಿರಾಸೆ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು. ಈ ಅವಮಾನವನ್ನು ಸಹಿಸಿಕೊಂಡು ಇನ್ನೂ ಅಲ್ಲೇ ನಿಂತಿರಲು ಮನಸ್ಸಾಗಲಿಲ್ಲ. ಮಗನತ್ತ ತಿರುಗಿ ಬೇಸರದಿಂದ ನುಡಿದರು, “ಹೇಮಂತ, ಈಗ ಗೊತ್ತಾಯಿತೇನಪ್ಪಾ ನಿನಗೆ? ದೊಡ್ಡವರ ಸಹವಾಸ ನಮಗಲ್ಲ, ಅದರ ಆಸೆ ಬಿಟ್ಟುಬಿಡು ಎಂದು ಎಷ್ಟು ಬುದ್ಧಿ ಹೇಳಿದರೂ ನಿನ್ನ ತಲೆಗೆ ಹೋಗಲೇ ಇಲ್ಲ. ನನಗೆ ಮೊದಲೇ ಗೊತ್ತಿತ್ತು. ಈ ಜನ ಮದುವೆಗೆ ಒಪ್ಪೋದಿಲ್ಲ ಅಂತ. ಏನೋ ನಿನ್ನ ಮಾತಿಗೆ ಕಟ್ಟುಬಿದ್ದು ಅದನ್ನೂ ನೋಡೇಬಿಡೋಣ ಅಂತ ಬಂದಿದ್ದಾಯಿತು. ನಡಿ ಇನ್ನು. ಇಲ್ಲೇ ಇದ್ದರೆ ನಮ್ಮ ಅಳಿದುಳಿದ ಮರ್ಯಾದೆಯೂ ಬೀದಿಪಾಲಾದೀತು.” ಎಂದು ಎದ್ದು, ಹೆಗಲ ಮೇಲಿದ್ದ ಟವಲನ್ನು ಕೊಡವಿ ಮತ್ತೆ ಭುಜದ ಮೇಲೆ ಹಾಕಿಕೊಂಡರು.
ಹೇಮಂತ ಇನ್ನೂ ಸೋಲೊಪ್ಪಲು ಸಿದ್ಧನಿರಲಿಲ್ಲ. “ಅಪ್ಪಯ್ಯಾ, ನೀವು ಹೋಗಿರಿ. ರಜನಿಯನ್ನು ನಾನು, ನನ್ನನ್ನು ಅವಳು ಮೆಚ್ಚಿಕೊಂಡಿದ್ದೇವೆ. ನಾನು ಇವತ್ತು ಇವರನ್ನು ಒಪ್ಪಿಸಿಕೊಂಡೇ ಬರೋದು. ಇವತ್ತು ಒಂದು ನಿರ್ಧಾರ ಆಗಿಯೇಹೋಗಲಿ.” ಎಂದ ಧೃಡ ನಿಶ್ಚಯ ಮಾಡಿದವನಂತೆ.
ಹೇಮಂತನ ತಂದೆ ಶಿವರಾಮಯ್ಯನವರು ಮತ್ತೂ ಒಂದೆರಡು ಸಲ ಮಗನನ್ನು ತಮ್ಮ ಜೊತೆಗೇ ಬರುವಂತೆ ಕರೆದರು. ಒಪ್ಪದಿದ್ದಾಗ ಅವನನ್ನೊಮ್ಮೆ ಮರುಕದಿಂದ ದಿಟ್ಟಿಸಿ “ಎಲ್ಲಾ ಶಿವನಿಚ್ಛೆ! ಅವನು ಮಾಡಿಸಿದಂತೆ ಆಗಲಿ” ಎಂದು ಅಲ್ಲಿಂದ ಹೊರನಡೆದರು.
ಹೇಮಂತನ ತಂದೆ ಸೋತು ಹೊರನಡೆದಿದ್ದು ನೋಡಿ ರಜನಿ ಅಕ್ಕನ ಮುಖದ ಕಳೆಯೇ ಬತ್ತಿಹೋಯಿತು. ಆದರೂ ಅವಳು, ತನ್ನ ಪ್ರಯತ್ನ ಮುಂದುವರೆಸುವಂತೆ, “ಜಾತಿ ಯಾವುದಾದರೇನಮ್ಮಾ? ಈ ಕಾಲದಲ್ಲಿ ಅದೆಲ್ಲಾ ಯಾರು ನೋಡ್ತಾರೆ? ಹೇಮಂತ್ ತುಂಬಾ ಒಳ್ಳೆಯವನು. ನೀವೆಲ್ಲರೂ ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ. ನಾನು ಹೇಮಂತನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗೋಳಲ್ಲ.” ಈ ಬಾರಿ ರಜನಿ ಅಕ್ಕನ ಸ್ವರದಲ್ಲಿದ್ದ ಅಳು ಮಾಯವಾಗಿ ಅಲ್ಲಿ ಧೃಡತೆ ತಲೆ ಎತ್ತಿತ್ತು.
ಅಕ್ಕನ ಮಾತು ದೊಡ್ಡಪ್ಪನ ಕೋಪದ ಬೆಂಕಿಗೆ ತುಪ್ಪ ಸುರಿದಂತಾಯಿತು. “ನಿನ್ನನ್ನು ತಲೆ ಮೇಲೆ ಹೊತ್ತು, ಮುದ್ದು ಮಾಡಿ ಬೆಳೆಸಿದ್ದಕ್ಕೆ ಸಾರ್ಥಕವಾಯಿತು ನೋಡು. ಒಳ್ಳೆ ಬಹುಮಾನವೇ ಸಿಕ್ಕಿತು ನಿನ್ನಿಂದ. ಮನೆ ಮರ್ಯಾದೆ ಮೂರು ಕಾಸಿಗೆ ಹರಾಜಾಯಿತು.” ದೊಡ್ಡಪ್ಪನ ದನಿಯಲ್ಲಿ ನೋವು ಇಣುಕಿತು.
ರಜನಿ ತಂದೆಯನ್ನೊಮ್ಮೆ ಉಪೇಕ್ಷೆಯಿಂದ ದಿಟ್ಟಿಸಿ, “ಎಲ್ಲಾ ತಂದೆ-ತಾಯಿಗಳು ಮಾಡಿದ್ದನ್ನೇ ನೀವೂ ಮಾಡಿದ್ದೀರಿ. ಅದನ್ನೇನು ದೊಡ್ಡ ವಿಷಯ ಅಂತ ಹೇಳಿಕೊಳ್ಳುತ್ತಿದ್ದೀರಿ?” ಅಂದಳು.
ಈ ಮಾತು ದೊಡ್ಡಪ್ಪನನ್ನು ಕೆರಳಿಸಿತು. “ಏನಂದೆ? ನನ್ನ ಮುಂದೆ ಹೀಗೆಲ್ಲಾ ಮಾತಾಡೋ ಧೈರ್ಯ ನಿನಗೆಲ್ಲಿಂದ ಬಂತು? ಎಲ್ಲಾ ಇವನ ಸಹವಾಸವಿರಬೇಕು” ಎಂದು ಹೇಮಂತನನ್ನು ಅಪರಾಧಿಯಂತೆ ನೋಡಿದರು.
ರಜನಿ ಅಲ್ಲಿಗೂ ಸುಮ್ಮನಾಗದೆ, “ನಾನು ಈಗ ಹೇಮಂತನ ಜೊತೆ ಹೋಗ್ತಾ ಇದ್ದೀನಿ ಅಷ್ಟೆ. ಅದೇನು ಮಾಡಿಕೊಳ್ಳುತ್ತೀರೋ ಮಾಡಿ” ಎಂದು ಅಲ್ಲಿಂದ ಹೊರಡಲು ಅನುವಾದಳು.
ದೊಡ್ಡಮ್ಮ ಇದನ್ನೆಲ್ಲಾ ನೋಡುತ್ತಾ, ಸುರುಬುರು ಮಾಡುತ್ತಾ, ಇಷ್ಟರವರೆಗೂ ಸುಮ್ಮನೇ ಕುಳಿತಿದ್ದವರು, “ಅಯ್ಯೋ…. ನನ್ನ ವಿಧಿಯೇ. ಮಗಳ ಬಾಯಲ್ಲಿ ಇಂತಹ ಮಾತು ಕೇಳುವ ಕರ್ಮ ನನ್ನ ಹಣೆಯಲ್ಲಿ ಬರೆದಿತ್ತು.” ಎಂದು ತಲೆ ಚಚ್ಚಿಕೊಂಡು ಅಳತೊಡಗಿದರು. ನಡುರಾತ್ರಿಯಲ್ಲಿ ದೊಡ್ಡಮ್ಮನ ಅಳು ಪುಟ್ಟಿಯಲ್ಲಿ ಭಯ ಹುಟ್ಟಿಸಿತು. ತನ್ನಿಂದ ದೂರದಲ್ಲಿ, ಕಂಬವೊಂದರ ಬದಿಗೆ ಅಸಹಾಯಕತೆಯಿಂದ ಎಲ್ಲವನ್ನೂ ದಿಟ್ಟಿಸುತ್ತಾ ನೋವುಣ್ಣುತ್ತಿದ್ದ ಅಮ್ಮನ ಬಳಿ ಓಡಿಹೋಗಲೇ ಎಂದೊಮ್ಮೆ ಯೋಚಿಸಿದಳು. ಅಮ್ಮನಿಂದ ಅನತಿದೂರದಲ್ಲೇ ಕುಳಿತಿದ್ದ ಕಠಿಣ ಮುಖಭಾವದ ಅಪ್ಪನನ್ನು ನೋಡಿ ಪುಟ್ಟಿಗೆ ಧೈರ್ಯವಾಗಲಿಲ್ಲ. ನಿಂತಲ್ಲೇ ನಿಂತು ಕಾಲು ನೋವಾದಂತಾಗಿ ಅಲ್ಲೇ ಮಂಡಿಯೂರಿ ಕುಳಿತುಕೊಂಡಳು.
ರಜನಿ ತನ್ನಮ್ಮನ ಅಳುವಿಗೆ ಕರಗಿದರೂ ಅವಳ ನಿರ್ಧಾರದಿಂದೇನೂ ಹಿಂದೆಗೆಯಲಿಲ್ಲ. “ಅಮ್ಮಾ, ನಿನಗೆ ನಾನು ನೋವುಂಟುಮಾಡುತ್ತಿದ್ದೇನೆಂದು ಗೊತ್ತು. ನನ್ನನ್ನು ಕ್ಷಮಿಸಿಬಿಡು. ಅಪ್ಪನ ದಬ್ಬಾಳಿಕೆಯಲ್ಲಿ ಸೋತು ಸುಣ್ಣವಾಗಿರುವ ನಿನ್ನ ಬಗ್ಗೆ ನನಗೆ ಕನಿಕರವಿದೆ. ಅಪ್ಪ ಹುಡುಕಿ ತಂದ ವರನನ್ನು ಮದುವೆಯಾಗಿ ನಿನ್ನಂತೆ ಜೀವಂತ ಶವವಾಗಿ ಬದುಕುವ ಆಸೆ ನನಗಿಲ್ಲ. ಬಡವನಾದರೂ ಸರಿ, ಹೇಮಂತನಂತಹ ಹೃದಯವಂತನನ್ನೇ ಕೈಹಿಡಿಯುತ್ತೇನೆ. ತುಂಬು ಹೃದಯದಿಂದ ನನ್ನನ್ನು ಹರಸಮ್ಮಾ.” ಎಂದಳು ಅಮ್ಮನತ್ತ ಆರ್ತ ನೋಟ ಬೀರಿ. ಮಗಳ ಮಾತಿಗೆ ಅಂಬುಜಮ್ಮನ ಕಣ್ಣೀರಿನ ಕಟ್ಟೆಯೊಡೆಯಿತು.
ಮಗಳ ಬಾಯಿಂದ ಸಿಡಿಲಿನಂತೆ ಬಂದೆರಗಿದ ಮಾತುಗಳನ್ನು ಕೇಳಿ ಸದಾಶಿವಯ್ಯನವರ ರಕ್ತ ಕುದಿಯಿತು. “ಏನಂದೆ? ನಿನಗೆ ಇಷ್ಟು ಧೈರ್ಯ ಬಂದಿತೇ? ಮುದ್ದಿನ ಮಗಳೆಂದು ನಿನಗೆ ನಾನು ಕೊಟ್ಟ ಸಲುಗೆ ಹೆಚ್ಚಾಯಿತು. ನಾನೂ ನೋಡ್ತೀನಿ, ಅವನನ್ನು ಅದು ಹೇಗೆ ಮದುವೆಯಾಗ್ತೀಯ ಅಂತ?” ಎಂದು ಹಲ್ಲು ಕಡಿದರು. ಮಾತಿನ ಜೊತೆಗೆ ಅವರ ಕೈ ರಜನಿಯ ಕೆನ್ನೆಗೆ ಅಪ್ಪಳಿಸಿತು. ಅನಿರೀಕ್ಷಿತವಾಗಿ ಬಿದ್ದ ಏಟಿನ ನೋವು ತಡೆಯಲಾರದೆ “ಅಯ್ಯೋ” ಎಂದು ನರಳಿದಳು, ರಜನಿ. ಅವಳ ನುಣುಪಾದ ಕೆನ್ನೆ ವೇದನೆಯಿಂದ ಕೆಂಪಾಯಿತು.
ಪುಟ್ಟಿಗೆ ರಜನಿ ಅಕ್ಕನನ್ನು ಕಂಡು ಅಳುವೇ ಬಂತು. ದೊಡ್ಡಪ್ಪನಿಗೆ ರಜನಿ ಅಕ್ಕನೆಂದರೆ ಪ್ರಾಣ. ಅವಳು ಬೇಡಿದ್ದಕ್ಕೆ ಇಲ್ಲವೆಂದವರಲ್ಲ. ಈ ದಿನ ರಜನಿ ಅಕ್ಕನ ಮೇಲೆ ಇಷ್ಟೇಕೆ ಕೋಪ? ಅಕ್ಕ ಮಾಡಿದ ತಪ್ಪಾದರೂ ಏನು? ದೊಡ್ಡಪ್ಪನ ಕಣ್ಣು ಸಿಟ್ಟಿನಿಂದ ಕೆಂಪಗಾಗಿದ್ದವು. ತನ್ನನ್ನು ಹೆಗಲ ಮೇಲೆ ಹೊತ್ತು ಸವಾರಿ ಮಾಡುತ್ತಿದ್ದ ದೊಡ್ಡಪ್ಪನ ರೌದ್ರಾವತಾರವನ್ನು ಕಂಡು ಪುಟ್ಟಿ ನಡುಗಿದಳು. ಬಾಯಿಗೆ ಕೈ ಅಡ್ಡ ಹಿಡಿದು ಉಕ್ಕಿ ಬರುತ್ತಿದ್ದ ಅಳು ನುಂಗಿದಳು.
ರಜನಿ ಏಟಿನ ನೋವು ತಡೆಹಿಡಿಯುವಂತೆ ತುಟಿ ಕಚ್ಚಿ, “ನೀವು ನನಗೆ ಎಷ್ಟಾದರೂ ಹೊಡೆಯಿರಿ. ಅದರಿಂದ ನನಗೇನೂ ಬೇಸರವಿಲ್ಲ. ಹೇಮಂತನನ್ನು ಮಾತ್ರ ನನ್ನಿಂದ ದೂರ ಮಾಡಬೇಡಿ. ನೀವು ನನ್ನನ್ನು ಸಾಯಿಸಿದರೂ ಸಂತೋಷ. ನಾನು ಅವನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲ್ಲ.” ಎಂದಳು ಕಣ್ಣೀರನ್ನು ಅಂಗೈಯಿಂದ ಒರೆಸಿಕೊಳ್ಳುತ್ತಾ.
ಈ ಬಾರಿ ರಜನಿಯ ಮಾತಿಗೆ ತಡೆ ಹಾಕುವಂತೆ ಅವಳ ಬಾಯಿಯ ಮೇಲೆ ಬಲವಾಗಿ ಹೊಡೆತ ಬಿತ್ತು. ಕೋಪದಿಂದ ಮೈಮೇಲಿನ ವಿವೇಕ ಕಳೆದುಕೊಂಡಿದ್ದ ಸದಾಶಿವಯ್ಯ ರಜನಿಯ ಮುಖ ಮೂತಿ ನೋಡದೆ ಬಾರಿಸಿದರು. ರಜನಿಯ ತುಟಿಯೊಡೆದು ರಕ್ತ ಸುರಿಯಲಾರಂಭಿಸಿತು. ಎಳೆ ಬಾಳೆ ಗಿಡದಂತೆ ಕೋಮಲವಾಗಿ ಬೆಳೆದಿದ್ದ ರಜನಿಯ ದೇಹ ಆಘಾತಕ್ಕೆ ತತ್ತರಿಸಿಹೋಯಿತು.
ಹೇಮಂತನಿಗೆ ರಜನಿಯ ಸ್ಥಿತಿ ನೋಡಿ ದಿಗಿಲಾಯಿತು. ಸದಾಶಿವಯ್ಯ ಮೈಮೇಲೆ ದೆವ್ವ ಹೊಕ್ಕವರಂತೆ ವಿಕಾರವಾಗಿ ಕಾಣುತ್ತಿದ್ದರು. ಸಿಟ್ಟಿಗೆ ಅವರ ಮೈ ನಡುಗುತ್ತಿತ್ತು. ಹೇಮಂತ್ ಕುಳಿತಲ್ಲಿಂದ ಎದ್ದು ಬಂದು, ರಜನಿಯ ಮುಂದೆ ತಡೆಗೋಡೆಯಂತೆ ನಿಂತು, “ರಜನಿ ನನ್ನ ಪ್ರಾಣ. ಅವಳನ್ನು ಹೊಡೆಯಬೇಡಿ” ಎಂದು ಕಿರುಚಿಕೊಂಡ.
ದೊಡ್ಡಪ್ಪ ಅವನನ್ನೊಮ್ಮೆ ದುರುಗುಟ್ಟಿಕೊಂಡು ನೋಡಿದರು. “ಹೋಗೋ ಅತ್ಲಾಗೆ. ನೀ ಯಾರೋ ಅವಳಿಗೆ ಕಾವಲು ಕಾಯಕ್ಕೆ? ಯಾರೋ ನೀನು? ನನಗೆ ಉಕ್ಕಿ ಬರುತ್ತಿರುವ ಸಿಟ್ಟಿನಿಂದ ಏನಾದರೂ ಅನಾಹುತ ಆಗುವ ಮುಂಚೆ ಇಲ್ಲಿಂದ ತೊಲಗಿಹೋಗೋ” ಅಬ್ಬರಿಸಿದರು ಸದಾಶಿವಯ್ಯ.
ಹೇಮಂತ್ ರಜನಿಯನ್ನು ಬಿಟ್ಟು ಒಂದಿಂಚೂ ಅತ್ತ ಸರಿಯಲಿಲ್ಲ. ಅವನ ಮೊಂಡಾಟ ದೊಡ್ಡಪ್ಪನ ಕೋಪವನ್ನು ನೆತ್ತಿಗೇರಿಸಿತು. ತಂದೆಯ ಬೆಂಕಿಯುಗುಳುವ ಕಣ್ಣುಗಳನ್ನು ನೋಡಿ ರಜನಿ ಭಯದಿಂದ ತತ್ತರಿಸಿದಳು. ತಂದೆಯ ಕೋಪ ಅವಳಿಗೆ ತಿಳಿಯದ್ದೇನಲ್ಲ. ಗಟ್ಟಿಯಾಗಿ ಹೇಮಂತನ ಕೈಹಿಡಿದು, “ಹೇಮಂತ್, ಇಲ್ಲಿದ್ದರೆ ನಮ್ಮನ್ನು ಕೊಂದೇ ಬಿಡುತ್ತಾರೆ. ನಡಿ ಇಲ್ಲಿಂದ ಮೊದಲು ಹೊರಟುಹೋಗೋಣ” ಎಂದಳು ಅವಸರಿಸುವಂತೆ.
ಹೇಮಂತ್ ಅವಳ ಮಾತಿಗೆ ಬೆಲೆ ಕೊಡದೆ ಅಲ್ಲೇ ನಿಂತಿದ್ದ. ರಜನಿಯ ಬಂಧು-ಬಳಗವನ್ನು ಒಪ್ಪಿಸಿಯೇ ಸಿದ್ಧವೆಂದು ಬಂದಿದ್ದ ಅವನು ಇನ್ನೂ ತನ್ನ ಪ್ರಯತ್ನದಲ್ಲಿ ಸೋಲೊಪ್ಪಲು ತಯಾರಿರಲಿಲ್ಲ.
ಸೋಮು ಚಿಕ್ಕಪ್ಪ ಹೇಮಂತನ ಎದುರು ನಿಂತು ಹೆದರಿಸುವನಂತೆ ಹೇಳಿದ, “ನೋಡೋ, ಕೊನೆಯ ಬಾರಿಗೆ ಹೇಳ್ತಾ ಇದ್ದೀನಿ. ಪ್ರಾಣದ ಮೇಲೆ ನಿನಗೇನಾದರೂ ಆಸೆ ಇದ್ದರೆ ಇಲ್ಲಿಂದ ಹೊರಟುಹೋಗು. ರಜನಿಯನ್ನು ಮರೆತು ಬೇರೆ ಯಾರನ್ನಾದರೂ ಮದುವೆಯಾಗಿ ಸುಖವಾಗಿರು.”
ಹೇಮಂತ ಹೆದರುವ ಬದಲು ವ್ಯಂಗ್ಯ ನಗೆ ನಕ್ಕ. “ಏನ್ಸಾರ್, ಇದೆಲ್ಲಾ ಹಳೆ ಸಿನಿಮಾಗಳ ಡೈಲಾಗು. ಈ ಕಾಲದಲ್ಲಿ ಇದೆಲ್ಲಾ ನಡೆಯಲ್ಲ. ನನ್ನನ್ನು ನೀವು ಏನೂ ಮಾಡಕ್ಕಾಗಲ್ಲ” ಎಂದ ಸೋಮುವಿನತ್ತ ನೋಡಿ.
ಸದಾಶಿವಯ್ಯನಿಗೆ ಹುಡುಗ ಯಾವುದಕ್ಕೂ ಬಗ್ಗುವವನಲ್ಲವೆನಿಸಿತು. ತಮ್ಮ ಪ್ರಯತ್ನಗಳೆಲ್ಲಾ ವಿಫಲವಾದ ಹತಾಶೆ ವಿವೇಚನೆಯನ್ನು ಮರೆಸಿತ್ತು. ಮೊದಲೇ ಮಾತನಾಡಿಕೊಂಡಿದ್ದ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವುದು ಅನಿವಾರ್ಯವೆಂಬ ತೀರ್ಮಾನಕ್ಕೆ ಬಂದರು. ಅಲ್ಲೇ ನಿಂತಿದ್ದ ತಮ್ಮಂದಿರತ್ತ ಸನ್ನೆ ಮಾಡಿದರು. ಪುಟ್ಟಿಯ ಅಪ್ಪ ಹೇಮಂತನನ್ನು ಸಮೀಪಿಸಿದರು. ಅವರ ಕೈಯಲ್ಲಿ ವಯರಿನಂತಹದೇನೋ ವಸ್ತು ಹೊಳೆಯುತ್ತಿತ್ತು. ಹೇಮಂತನನ್ನು ರಾಮು-ಸೋಮು ಬಲವಾಗಿ ಎರಡೂ ಕಡೆಯಿಂದ ಹಿಡಿದುಕೊಂಡರು. ಪುಟ್ಟಿ ನೋಡುತ್ತಿದ್ದಂತೆಯೇ ಅವಳ ಅಪ್ಪ ತಮ್ಮ ಕೈಲಿದ್ದ ವೈರನ್ನು ಹೇಮಂತನ ಕತ್ತಿನ ಸುತ್ತ ಬಿಗಿದರು. ಹೇಮಂತ ಬಿಡಿಸಿಕೊಳ್ಳಲು ಕೊಸರಾಡಿದ. ಅವನೂ ಕಟ್ಟುಮಸ್ತಾದ ಆಳೇ. ಆದರೆ ರಾಮು-ಸೋಮುವಿನಂತಹ ಶಕ್ತಿಶಾಲಿಗಳ ಮುಂದೆ ಅವನ ಪ್ರಯತ್ನ ವ್ಯರ್ಥವಾಯಿತು. ಅವನ ಕತ್ತಿನ ಸುತ್ತ ಬಿಗಿತ ಹೆಚ್ಚಾಯಿತು. ಅವನ ಅಸಹಾಯಕ ನೋಟ ರಜನಿಯತ್ತಲೇ ನೆಟ್ಟಿತ್ತು.
ಎಲ್ಲವನ್ನೂ ನೋಡುತ್ತಿದ್ದ ರಜನಿ ಕಂಗಾಲಾದಳು. “ಹೇಮಂತನನ್ನು ಬಿಟ್ಟುಬಿಡಿ. ಕೊಲ್ಲಬೇಡಿ ಅವನನ್ನು….ಯಾರಾದರೂ ಕಾಪಾಡಿ…ಕಾಪಾಡಿ….” ಎಂದು ಬೊಬ್ಬಿರಿದಳು. ಸದಾಶಿವಯ್ಯ ಮಗಳ ಬಾಯಿಂದ ಮುಂದೆ ಶಬ್ದ ಹೊರಡದಂತೆ, ಅವಳ ಬಾಯನ್ನು ಬಲವಾಗಿ ಮುಚ್ಚಿ ಅವಳನ್ನು ಎಳೆದುಕೊಂಡು ಒಳಕೋಣೆಯತ್ತ ನಡೆದರು.
ಪುಟ್ಟಿ ನೋಡನೋಡುತ್ತಿದ್ದಂತೆಯೇ ಹೇಮಂತನ ಕಣ್ಣುಗಳು ಅಗಲವಾಗಿ ತೆರೆದುಕೊಂಡು ಮುಖ ವಿಕಾರಗೊಂಡಿತು. ಅವನ ಕೊಸರಾಟ ಕ್ರಮೇಣ ತಣ್ಣಗಾಗುತ್ತಾ ಬಂದು ಕುತ್ತಿಗೆ ವಾಲಿಕೊಂಡಿತು.
ನಿಂತಲ್ಲಿಯೇ ಭಯದಿಂದ ಮರಗಟ್ಟಿಹೋಗಿದ್ದ ಪುಟ್ಟಿ “ಅಮ್ಮಾ…..” ಎಂದು ಒಮ್ಮೆ ಹೃದಯ ವಿದ್ರಾವಕವಾಗಿ ಕಿರುಚಿ ಕುಸಿದುಬಿದ್ದಳು. ಊರೆಲ್ಲ ಮೈಮರೆತು ನಿದ್ರಿಸಿದ್ದ ಹೊತ್ತಿನಲ್ಲಿ ನಡೆದುಹೋದ ತಣ್ಣನೆಯ ಕೊಲೆಯೊಂದಕ್ಕೆ ಮುಗ್ಧ ಪುಟ್ಟಿ ಸಾಕ್ಷಿಯಾಗಿ ಉಳಿದುಬಿಟ್ಟಳು!
(ಎಂದೋ, ಎಲ್ಲೋ ಕೇಳಿದ ನೈಜ ಘಟನೆಯೊಂದಕ್ಕೆ ಕಲ್ಪನೆಯ ಬಣ್ಣ ಬೆರೆಸಿ ತಯಾರಿಸಿದ ನುಡಿಚಿತ್ರವಿದು)
*****************
(‘ಸಂಗಮ’ ಯುಗಾದಿ/೨೦೦೮)