ನರಕವಾಳುವ ಯಮಧರ್ಮರಾಯ
ತನ್ನ ನರಜನ್ಮದೊಳಗೆ ಪೊರಳಿಸಿ
ಮರಳೀ ತನ್ನರಕದಲಿ ಪೊರಳಿಸಿ ಕೊಲುವನು
ಕುರು ನಿನ್ನ ಕುಹಕ ಕೊಳದಲ್ಲ ||೫೭||

ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು-
ಷ್ಕರ್ಮ-ದುಃಖಂಗಳು ತೊಡಸುವರೆ ||೫೮||

ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯಕಾಯದ ಶ್ರೀಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ||೫೯||

ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ||೬೦||

ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ
ರಣರಂಗದಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ||೬೧||

ತಾಯ ಪೊಟ್ಟೆಯಿಂದ ಮೂಲರೂಪವ ತೋರಿ
ಆಯುಧ ಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ
ಬಾಯಿಗೆ ಬಂದಂತೆ ಬೊಗಳದಿರು ||೬೨||

ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಕಿರೀಟವು
ಮೆಟ್ಟಿದ ಕುರುಹು ಎದೆಯಲ್ಲಿ ತೊರಿದ ಶ್ರೀ-
ವಿಠ್ಠಲ ಪುಟ್ಟಿದನೆನಬಹುದೆ ||೬೩||

ವೃಷಭಹಂಸಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಾಹಸಕ್ಕೆ ಮಡಿದರು
ಕುಸುಮನಾಭನಿಗೆ ಸರಿಯುಂಟೆ ||೬೪||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದೆಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೬೫||

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||೬೬||

ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ-
ಯೆಂದವನ ಬಳಿಗೆ ನಡೆದಳು ||೬೭||

ಈ ತೆರದ ಸುರರ ಸುತ್ತ ನೋಡುತ ಲಕ್ಷ್ಮೀ
ಚಿತ್ತವ ಕೊಡದೆ ನಸುನಗುತ
ಚಿತ್ತವಕೊಡದೆ ನಸುನಗುತ ಬಂದು ಪುರು-
ಷೋತ್ತಮನ ಕಂಡು ನಮಿಸಿದಳು ||೬೮||

ನಾನಾಕುಸುಮಗಳಿಂದ ಮಾಡಿದ ಮಾಲೆಯ
ಶ್ರೀ ನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ
ಕೊರಳಿನ ಮೇಲಿಟ್ಟು ನಮಿಸಿದಳು ||೬೯||

ಉಟ್ಟಪೊಂಬಟ್ಟೆಯ ತೊಟ್ಟಾಂಭರಣಂಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನನೆಂಬ ಕಡೆಯ ಪಂಡೆಗಳು
ವಟ್ಟಿದ್ದ ಹರಿಗೆ ವಧುವಾದಳು ||೭೦||

ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದವು ||೭೧||

ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ-
ನರ್ಘ್ಯ ಪೂಜೆಯಿತ್ತನಳಿಯಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ||೭೨||

ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ-
ಲಾದ ಮುನೀಂದ್ರರು ಮುದದಿಂದ
ವಧೂವರರ ಮೆಲೆ ಶೋಭನದಕ್ಷತೆಯನು
ಮೊದವೀವುತ್ತ ತಳೆದರು ||೭೩||

ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ತುತಿಸುತ್ತ
ತುಂಬುರು ನಾರದರು ತುತಿಸುತ್ತ ಪಾಡಿದರು ಪೀ-
ತಾಂಬರಧರನ ಮಹಿಮೆಯ ||೭೪||

ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೆಲೆ ಕರೆದರು ||೭೫||

ಮುತ್ತು-ರತ್ನಗಳಿಂದ ಕೆತ್ತಿಸಿದ ಹಸೆಯ ನವ-
ರತ್ನ ಮಂಟಪದಿ ಪಸರಿಸಿ
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ||೭೬||

ಶೇಷಶಯನನೆ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-
ಲಾಸದಿಂದೆಮ್ಮ ಹಸೆಗೆ ಬಾ ||೭೭||

ಕಂಜಲೋಚನನೆ ಬಾ ಮಂಜುಳಮೂರ್ತಿ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-
ರಂಜನ ನಮ್ಮ ಹಸೆಗೆ ಬಾ ||೭೮||

ಆದಿಕಾಲದಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ||೭೯||

ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿತ್ತ ಅ-
ನಾದಿ ಮೂರುತಿಯೆ ಹಸೆಗೆ ಬಾ ||೮೦||

ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ
ತಿರ್ಮಯವಾದ ಪದ್ಮದಲ್ಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||೮೧||

ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯೊಡನೆ ಹಸೆಗೆಳು ||೮೨||

ಬೊಮ್ಮನ ಮನೆಯಲ್ಲಿ ರನ್ನದಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೩||

ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿ-
ಕ್ಕೆ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ||೮೪||

ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಗಳನು ಬಡಿಸಲು ಕೈಗೊಂಡ
ಮುದ್ದು ನರಸಿಂಹ ಹಸೆಗೆ ಬಾ ||೮೫||

ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ||೮೬||

ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೭||

ಇಂದ್ರನ ಮನೆಘೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ||೮೮||

ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ-
ಸ್ಸೀಮ ಮಹಿಮ ಹಸೆಗೆ ಬಾ ||೮೯||

ಮುತ್ತಿನ ಸತ್ತಿಗೆಯ ನವರತ್ನದ ಚಾಮರ
ಸುತ್ತನಲಿವ ಸುರಸ್ತ್ರೀಯರ
ನೃತ್ಯವ ನೋಡುತ ಚಿತ್ರ ವಾದ್ಯಂಗಳ ಸಂ
ಪತ್ತಿನ ಹರಿಯೆ ಹಸೆಗೆ ಬಾ ||೯೦||

ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷ್ಮಿಯೊಡಗೂಡಿ
ಅನಂತ ವೈಭವದಿ ಕುಳಿತ ಕೃಷ್ಣನ ನಾಲ್ಕು
ದಿನದುತ್ಸವವ ನಡೆಸಿದರು ||೯೧||

ಅತ್ತೆರೆನಿಪ ಗಂಗೆ ಯಮುನೆ ಸರಸ್ವತಿ ಭಾ-
ರತಿ ಮೊದಲಾದ ಸುರಸ್ತ್ರೀಯರು
ಮುತ್ತಿನಾಕ್ಷತೆಯನು ಶೋಭಾನವೆನುತಲಿ ತಮ್ಮ
ಅರ್ತಿಯಳಿಯಗೆ ತಳಿದರು ||೯೨||

ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೆದೆರೆಲ್ಲ ಧವಳದ ಪದವ ಪಾ-
ಡುತ್ತಲೆತ್ತಿದರೆ ಸಿರಿವರಗೆ ||೯೩||

ಬೊಮ್ಮ ತನ್ನರಸಿ ಕೂಡೆ ಬಂದರೆಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ||೯೪||

ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಾಸುರರು ಮುದದಿಂದ
ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ
ಮಸ್ತಕದ ಮಣಿಯ ಶಿವನಿತ್ತ ||೯೫||

ತನ್ನರಸಿ ಕೂಡೆ ಸವಿನುಡಿ ನುಡಿವಾಗ
ವದನದಲ್ಲಿದ್ದಗ್ನಿ ಕೆಡದಂತೆ
ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿ ದಿಬ್ಬಣ ಸುರರಿಗೆ ||೯೬||

ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹುರುಷದಿ ಉಣಿಸಬೇಕೆಂದು ಸಿಂಧು
ಸರ್ವರಿಗಡಿಗೆಯ ಮಾಡಿಸಿದ ||೯೭||

ಮಾವನ ಮನೆಯಲ್ಲಿ ದೇವರಿಗೌತಣವ
ದಾನವರು ಕೆಡಿಸದೆ ಬಿಡರೆಂದು
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವಸ್ತ್ರೀವೇಷವ ಧರಿಸಿದ ||೯೮||

ತನ್ನ ಸೌಂದರ್ಯದಿಂದುನ್ನತಮಯವಾದ
ಲಾವಣ್ಯದಿಂದ ಮೆರೆವ ನಿಜಪತಿಯ
ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು ||೯೯||

ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವಕಿಯರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ||೧೦೦||

ನಾಗನ ಮೆಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದ ||೧೦೧||

ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರ ಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ||೧೦೨||

ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣ ಮದು-
ಮಕ್ಕಳಾಯುಷ್ಯವ ಬೆಳೆಸೆಂದ ||೧೦೩||

ಮತ್ತೆ ದೇವೆಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತುಸಾವಿರ ಕೊಟ್ಟ ವರುಣದೇವ ಹರಿ-
ಭಕ್ತಿಯ ಮನದಲ್ಲಿ ಬೆಳೆಸೆಂದ ||೧೦೪||

ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದ ಅಮರರಿಗೆ ಸಲ್ಲಿಸಿದ
ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ
ಕಳುಹಿದನವರ ಮನೆಗಳಿಗೆ ||೧೦೫||

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೆ ಮಗಳಿಗೆ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರಮಾಡಿ ಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||೧೦೬||

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ||೧೦೭||

ಈ ಪದವ ಮಾಡಿದ ವಾದಿರಾಜ ಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣವ ಸ
ಮೀಪದಲ್ಲಿಟ್ಟು ಸಲಹಲಿ ||೧೦೮||

ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ
ಕಾಂತನ ಕಂದನೆನಿಸುವ
ಸಂತರ ಮೆಚ್ಚಿನ ವಾದಿರಾಜೇಂದ್ರಮುನಿ
ಪಂಥದಿ ಪೇಳಿದ ಪದವಿದು ||೧೦೯||

ಶ್ರೀಯರಸ ಹಯವದನಪ್ರಿಯ ವಾದಿರಾಜ-
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚಾಗುವದು ನಿ-
ರಾಯಾಸದಿಂದ ಸುಖಿಪರು ||೧೧೦||

ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೊದಿಸುವ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗು
ಅಸುರ ಮೋಹನವೆ ನರನಟನೆ ||೧೧೧||

ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವದು
ಮದನನಯ್ಯನ ಕೃಪೆಯಿಂದ ||೧೧೨||

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ||ಶೋಭಾನೆ||

****** ***** ******

2 thoughts on “ಲಕ್ಷ್ಮೀ ಶೋಭಾನೆ – Lakshmi Shobhane – 2”

    1. ಹೌದು, ವಾದಿರಾಜರ, ಮತ್ತು ಎಲ್ಲಾ ದಾಸರ ಕೃತಿಗಳನ್ನು ಕೇಳಿದಾಗ ಮಹದಾನಂದವಾಗುತ್ತದೆ. ಭೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು.

Leave a Reply to Koushik Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.