ಒಲ್ಲನೋ ಹರಿ ಕೊಳ್ಳನೋ ||ಪ||
ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಅನು||
ಸಿಂಧು ಶತಕೋಟಿ ಗಂಗೋದಕವಿದ್ದು |
ಗಂಧ ಸುಪರಿಮಳ ವಸ್ತ್ರವಿದ್ದು ||
ಚಂದುಳ್ಳ ಆಭರಣ ಧೂಪ ದೀಪಗಳಿದ್ದು |
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||೧||
ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದು|
ಮಧುಪರ್ಕ ಪಂಚೋಪಚಾರವಿದ್ದು||
ಮುದದಿಂದ ಮುದ್ದು ಶ್ರೀಕೃಷ್ಣನ ಪೂಜೆಗೆ|
ಸದಮಲಳಾದ ಶ್ರೀತುಳಸಿ ಇಲ್ಲದ ಪೂಜೆ ||೨||
ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು|
ತಂತು ತಪ್ಪದೆ ತಂತ್ರಸಾರವಿದ್ದು ||
ಸಂತತ ಸುಖ ಸಂಪೂರ್ಣನ ಪೂಜೆಗೆ |
ಅತ್ಯಂತ ಪ್ರಿಯಳಾದ ತುಳಸಿ ಇಲ್ಲದ ಪೂಜೆ ||೩||
ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ |
ವಿಮಲ ಘಂಟೆ ಪಂಚವಾದ್ಯವಿದ್ದು||
ಅಮಲ ಪಂಚಭಕ್ಷ್ಯ ಪರಮಾನ್ನಗಳಿದ್ದು |
ಕಮಲನಾಭನು ತನ್ನ ತುಳಸಿ ಇಲ್ಲದ ಪೂಜೆ ||೪||
ಪೂಜೆಯ ಮಾಡದೆ ತುಳಸಿ ಮಂಜರಿಯಿಂದ |
ಮೂಜಗದೊಡೆಯ ಮುರಾರಿಯನು||
ರಾಜಾಧಿರಾಜನೆಂಬ ಮಂತ್ರಪುಷ್ಪಗಳಿಂದ |
ಪೂಜಿಸಿದರು ಒಲ್ಲ ಪುರಂದರವಿಠಲ ||೫||
——————————-
ತುಳಸಿ ಇರಲು ತುರುಚಿಯನು ತರುವಿರೆ |
ಗಂಗೆಯಿರಲು ತೋಡಿದ ಕೂಪದಿ
ಪಾನವ ಮಾಡಿದೆ | ರಾಜಹಂಸವಿರಲು ಕೋಯೆಂದು
ಕೂಗುವ ಕೂಳಿಗೆ ಹಾಲೆರೆದೆ
ಬಾವನ್ನವಿರಲು ಬೇವಿನ ನೆಳಲೊಳೊರಗಿದೆ |
ತಾಯಿ ಮಾರಿ ತೊತ್ತ ತರುವ
ಮಾನವನಂತೆ | ಪುರಂದರವಿಠಲ ನೀನಿರಲನ್ಯತ್ರ
ದೈವಂಗಳಯೆಣಿಸಿದೆ ||
(ಉಗಾಭೋಗ – ಪುರಂದರದಾಸರು)
ಮನಸ್ಸು ತುಂಬುವ ಭಕ್ತಿಗೀತೆ.
ಕಾಕಾ ನಿಮ್ಮ ಮಾತು ನಿಜ. ಇದೇ ಹಾಡನ್ನು ಹೋಲುವ ಇನ್ನೊಂದು ದಾಸರ ಪದ – “ಕೇಳನೋ ಹರಿ ತಾಳನೋ “.
ತುಲಸಿಯವರಿಗೆ ನಮಸ್ಕಾರಗಳು.
ಭಾವಪೂರ್ಣವಾದ ಭಕ್ತಿಗೀತೆ.
ನಿಮ್ಮಲ್ಲಿ ಕನ್ನಡ ದಾಸಸಾಹಿತ್ಯದ ಲಾಲಿಹಾಡುಗಳಿದ್ದರೆ ದಯವಿಟ್ಟು ಪ್ರಕಟಿಸಿ.
ಧನ್ಯವಾದಗಳು ಸ್ವರ್ಣ, ತುಳಸಿವನಕ್ಕೆ ಸ್ವಾಗತ.
ದಾಸಸಾಹಿತ್ಯದ ಅನೇಕ ಲಾಲಿಹಾಡುಗಳು ನನಗೆ ಗೊತ್ತಿವೆ. ಅವುಗಳ ಮೂಲ ಸಾಹಿತ್ಯ ಹುಡುಕಿ, ಒಂದೊಂದಾಗಿ ತುಳಸಿವನದಲ್ಲಿ ಸೇರಿಸುತ್ತೇನೆ. ತಡವಾಗಿ ಉತ್ತರಿಸುತ್ತಿದ್ದೇನೆ. ಕ್ಷಮಿಸಿ.
ತುಳಸಿಯಮ್ಮ ಮತ್ತು ಮನೆಯವರಿಗೆ
ತುಳಸಿಹಬ್ಬದ ಶುಭಾಶಯಗಳು.
ನೂರಾರು ಔಷಧೀಯ ಗುಣಗಳಿರುವ ತುಳಸಿಯನ್ನು ನಮ್ಮ ಹಿರಿಯರು ಶ್ರೇಷ್ಠವೆಂದು ಪೂಜ್ಯವೆಂದು ಪರಿಗಣಿಸಿದ್ದು ಎಷ್ಟು ಸೂಕ್ತ ಎಂದು ಅರಿವಾಗುತ್ತಿದೆ. ಬೇರೆ ಯಾರಾದರೂ ಇದಕ್ಕೂ ಪೇಟೆಂಟ್ ಪಡೆಯುವ ಮೊದಲು ಭಾರತೀಯ ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಪಟ್ಟವರಾರಾದರೂ ಪೇಟೆಂಟ್ ಪಡೆದು ಅದನ್ನು ಭಾರತದಲ್ಲಿಯೇ ಪೂಜ್ಯವಾಗಿಯೇ ಇರಿಸಿಯಾರೆ?