ರಚನೆ -ವಿಜಯದಾಸರು
ಹಾಡು ಕೇಳಿ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ||
ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡೊ, ಶಂಭೋ ||೧||
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜ ಮದಹಾರಿ ದಂಡ ಪ್ರಣಾಮವ ಮಾಳ್ಪೆ
ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ, ಶಂಭೋ ||೨||
ಭಾಗೀರಥಿ ಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಶರ್ವ ದೇವ
ಭಾಗವತ ಜನ ಪ್ರಿಯ ವಿಜಯವಿಠಲನಂಘ್ರಿ
ಜಾಗು ಮಾಡದೆ ಭಜಿಪ ಭಾಗ್ಯವನು ಕೊಡೊ, ಶಂಭೋ ||೩||