ಕವಿ – ಎಸ್.ವಿ. ಪರಮೇಶ್ವರ ಭಟ್ಟ
೧
ಹೇಮಂತ ಋತುರಾಜನಿಳೆಗೆ ಬಂದಿಳಿವಂದು
ಹೂವಿಲ್ಲ ಹಸಿರಿಲ್ಲ ಚಿಗುರೆಲೆಗಳಿಲ್ಲ.
ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ
ಕುಸುಮಗಂಧ ತರುವ ಮರುತನಿಲ್ಲ.
೨
ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ
ಮೆರೆವ ಮರಗಿಡಬಳ್ಳಿ ಬರಿದೆ ಮೊಗವಿಳುಹಿ
ಮೌನದಲಿ ಮನದೆಗೆದು ಮನಮುರಿದು ನಿಂದಿಹವು
ಭಾಗ್ಯಹೀನರವೋಲು ದೀನರೆಂದೆನಿಸಿ.
೩
ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ
ಸುಯ್ಯೆಲರ ಸೂಸುತಿವೆ ನಿನ್ನ ಹಳಿದು
ಮೆಲ್ಲಮೆಲ್ಲನೆ ಸರಿದು ಮೊಗದ ಜವನಿಕೆಯೆಳೆದು
ತುಂಗೆ ತೊರೆ ಹರಿಯುತಿದೆ ನಡುಗಿ ಮೈನೆನೆದು.
೪
ಹಣ್ಣೆಲೆಗಳುದುರುತಿಹ ಬರಲು ಮರಗಳನೇರಿ
ಕಣ್ಣೀರು ಸುರಿಸುತಿದೆ ಕಾನನದ ಹಕ್ಕಿ.
ತಣ್ಣನೆಯ ಗಾಳಿಯಲಿ ಹಿಮದೊಂದು ಸೋನೆಯಲಿ
ಮಿಣ್ಣನಿದೆ ಮಾನವನ ಜೀವ ಸೆರೆ ಸಿಕ್ಕಿ.
೫
ಎತ್ತಲುಂ ಬಿಳಿಮಂಜು ಎತ್ತಲುಂ ಹಿಮಗಾಳಿ
ಎತ್ತಲುಂ ನಡುಗುತಿಹ ನೀರವಾಲೋಕ!
ಎತ್ತಲುಂ ಬರಡು ಬನವೆತ್ತಲುಂ ಜಡದ ಜನ
ಎತ್ತಲುಂ ಶೂನ್ಯಮನ ಮರುಗುತಿಹ ಮರುಕ.
೬
ಹೇಮಂತನಾಳಿಕೆಯ ಕಠಿನ ಶಾಸನವಿಂತು
ಅದಕೆ ತಲೆವಾಗುವುದೆ ಸೃಷ್ಟಿಯೊಳಮರ್ಮ.
ಒಂದೊಂದು ಋತುವಿನಲಿ ಒಂದೊಂದು ರೀತಿಯಲಿ
ಸಂಸ್ಕಾರ ಪಡೆಯುವುದೆ ಜೀವಗಳ ಧರ್ಮ.
* * *
ಇದೇನೂ…ವಸಂತ ಬರುವ ಹೊತ್ತಲ್ಲಿ ಇಶ್ಟು ಬೇಜಾರು ನಿಮಗೆ..?
ಹೇಮಂತ ಗಾನವೇನೋ ಚೆನ್ನಾಗಿದೆ
“ಎತ್ತಲುಂ ನಡುಗುತಿಹ ನೀರವಾಲೋಕ!”
ಶಿಕಾಗೋದ ಹವಾಮಾನದ ಪರಿಣಾಮವೇ…?ಅಂತ ಡೌಟ್ ನನಗೆ
ಇಶ್ಟು ಅಲ್ಲ ಇಷ್ಟು
ಮೊಗ್ಗಿನ ಜಡೆಯವರೇ,
ಶಿಕಾಗೊದಲ್ಲಿನ ಹವಾಮಾನ ಬೇಜಾರು ಮಾಡಿಕೊಳ್ಳುವ ಹಾಗೆಯೇ ಇದೆ ಅನ್ನಿ. ಇಲ್ಲಿನ್ನೂ ವಸಂತನ ಸುಳಿವಿಲ್ಲ.
ಶಿಕಾಗೋದ್ದೇ ಇರಲಿ ಶಿಮ್ಲಾದ್ದೇ ಇರಲಿ, ಹೇಮಂತಗಾನ ಕಠಿನ ಶಾಸನವೇ ಸರಿ. ಚಂದದ ಗೀತೆಯನ್ನು ಹಾಕಿದ್ದಕ್ಕೆ ಧನ್ಯವಾದಗಳು ವೇಣಿ.
ಹೇಮಂತನೂ ಇರಲಿ, ವಸಂತನೂ ಬರಲಿ, ಕವಿ ನುಡಿದಿರುವಂತೆ – “ಒಂದೊಂದು ಋತುವಿನಲಿ ಒಂದೊಂದು ರೀತಿಯಲಿ
ಸಂಸ್ಕಾರ ಪಡೆಯುವುದೆ ಜೀವಗಳ ಧರ್ಮ!”
ಜ್ಯೋತಿ, ನಿನ್ನ ಧನ್ಯವಾದವೇನಿದ್ದರೂ ಇಲ್ಲಿಗೇ ಸಲ್ಲಬೇಕು.
ಇಶ್ಟು ಅಲ್ಲ ಇಷ್ಟು