ರಚನೆ : ಗೋಪಾಲದಾಸರು
ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ
ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ||
ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ ದಿನದಿನ ಕಳೆದೆ ||೧||
ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ
ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಉಸುರಿದ ನೆಲವು ಸರ್ವಕಾಲ ನಿನ್ನೊಡೆತನ ಎಂಬುವ ಬಗೆಯನು ಅರಿಯದೆ ||೨||
ನೆರೆನಂಬಿದ ಪಾವಟೆಗಳು ಎಲ್ಲಾ ಸರಿದು ಪೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತೂ ಇಲ್ಲ
ಪರಿಪರಿ ವಿಷಯದ ಆಸೆಯು ಎನಗೆ ಪಿರಿದು ಆಯಿತಲ್ಲ
ಹರಿಯೇ, ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ! ||೩||
ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ ! ||೪||
ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳಿದ ಹರಿಕಥೆ ಸಂಯೋಗವೆಂಬೋದಿಲ್ಲ
ನೀಗುವಂಥ ಭವಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಠಲ ತಲೆಬಾಗಿ ನಿನ್ನನೇ ಬೇಡಿಕೊಂಬೆ ||೫||
ತ್ರಿವೆಣಿ ಅವರೇ,
ಈ ಹಾಡು ಹಾಕಿದ್ದಕ್ಕೆ/ಕೇಳಿಸಿದ್ದಕ್ಕೆ ತುಂಬ ಥ್ಯಾಂಕ್ಸ್. ನನ್ನ ಬ್ಲಾಗ್ ಪೊಸ್ಟೋಂದರಲ್ಲಿ ಇದನ್ನು ಓದಿದ ಪರಿಣಾಮ ಬರೆದಿರುವೆ. ಸಾಧ್ಯವಾದರೆ ನೋಡಿ.
– ಅನಿಲ
ಅನಿಲ್, ನಿಮ್ಮ ಬ್ಲಾಗ್ ಪೋಸ್ಟ್ ನೋಡಿದೆ.
– ಜ್ಞಾನದ ಕಿರಣ ಯಾವ ದಿಕ್ಕಿನಿಂದ ಬರತ್ತೆ ಅಂತ ಗೊತ್ತಾಗಲ್ಲ ಅಲ್ವಾ? ಅದಕ್ಕೆ ಎಲ್ಲಾ ಕಡೆನೂ ಗೊತ್ತುಗುರಿಯಿಲ್ಲದೆ ಸುತ್ತುತ್ತಿರಬೇಕು. 🙂
ಇದೇ ಹಾಡನ್ನ, ಪುತ್ತೂರು ನರಸಿಂಹ ನಾಯಕರು ತಮ್ಮ “ದಾಸನಾಗು” ಧ್ವನಿ ಸುರುಳಿನಲ್ಲಿ ಹಾಡಿದ್ದಾರೆ. ನನಗೆ ಅವರು ಹಾಡಿರೊ ಧಾಟಿ ಬಹಳ ಹಿಡಿಸ್ತು.ಒಟ್ಟಿನಲ್ಲಿ ತುಂಬಾ ಒಳ್ಳೇ ರಚನೆ.
ಹೌದು. ಪುತ್ತೂರು ನರಸಿಂಹನಾಯಕ್ ಹಾಡಿರುವ ಲಿಂಕ್ ಕೂಡ ಹಾಡಿನ ಜೊತೆಗಿದೆ.