ರಚನೆ : ಕನಕದಾಸರು
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ||
ಎಂಟು ಏಳನು ಕಳೆದುದರಿಂದೆ
ಭಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಭಂಟನಾಗಿ ಬಂದೆನೋ ರಂಗಶಾಯಿ ||೧||
ವರ್ಜ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||೨||
ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ, ರುದ್ರರ ಕಂಡೆ
ಶಂಬರಾರಿ ಪಿತನೆ ರಂಗಶಾಯಿ ||೩||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿ ಕೇಶವನ ನಾ ಕಂಡೆ ||೪||
******************************
This is one of my favourite songs .Thanks for posting it
ಸಹನಾ, ಈ ಹಾಡು ನನಗೂ ಇಷ್ಟ.
ಕೃಷ್ಣಂ ವಂದೇ ಜಗದ್ಗುರುಂ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
its very very good songs
ಈ ಹಾಡು ನನ್ನ ಮನಸೂರೆಗೊಂಡಿದೆ.. ಮೊದಲನೆ ಚರಣ (“ಎಂಟು ಏಳನು ಕಳೆದುದರಿಂದೆ……”)ದ ಅರ್ಥವನ್ನು ದಯವಿಟ್ಟು ವಿವರಿಸವಿರಾ?
ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ತುಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದೆನೋ ರಂಗಶಾಯಿ ||
“ಎಂಟು ಅಂದರೆ ಅಷ್ಟ ಮದಗಳನ್ನು (ಅನ್ನ, ಧನ, ಯೌವನ, ರೂಪ, ಕುಲ, ವಿದ್ಯೆ, ಅಧಿಕಾರ, ತಪ), ಏಳನು ಅಂದರೆ ಸಪ್ತ ವ್ಯಸನಗಳನ್ನು (ಬೇಟೆ, ಜೂಜು, ಮದ್ಯಪಾನ, ಸ್ತ್ರೀ, ವಾಕ್ಪಾರುಷ್ಯ, ದಂಡಪಾರುಷ್ಯ, ಅರ್ಥದೂಷಣೆ) ಕಳೆದುದರಿಂದ ಅರ್ಥಾತ್ ಅವುಗಳನ್ನು ಮೀರಿ ನಿಂತುದರಿಂದ, ಬಂಟರೈವರ ಅಂದರೆ ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮ ಈ ಪಂಚೇಂದ್ರಿಯಗಳಿಂದಾಗುವ ಆಸೆಗಳನ್ನು ತುಳಿದುಹಾಕಿದ್ದರಿಂದ, ತುಂಟಕನೊಬ್ಬನನ್ನು ಅಂದರೆ ಕಾಮವನ್ನೂ ನಿಗ್ರಹಿಸಿದ್ದರಿಂದ, ನಿನ್ನ ಬಂಟನಾಗಿ ವೈಕುಂಠಕ್ಕೆ ಬರುವುದು ಸೇರುವುದು ನನಗೆ ಸಾಧ್ಯವಾಯಿತು”
(ಈ ವಿವರಣೆ ’ಕನಕ ಸಾಹಿತ್ಯ ದರ್ಶನ ಸಂಪುಟ : ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು’ ಪುಸ್ತಕದಿಂದ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ)
ನಮಸ್ಕಾರ. ತುಳಸಿವನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.
ಶ್ರೀಮತಿ ತ್ರಿವೇಣಿಯವರಿಗೆ ಅನಂತರಾಮವಿನ ಅನಂತ ನಮಸ್ಕಾರಗಳು. ನನ್ನ ಕೋರಿಕೆಯನ್ನು ಮನ್ನಿಸಿ ಪದ್ಯದ ಅರ್ಥವನ್ನು ಬಹಳ ಬೇಗ ತಿಳಿಸಿರುವುದಕ್ಕೆ ನಾನು ಆಭಾರಿ. ನನ್ನದು ಇನ್ನೂಂದು
ಕೋರಿಕೆ ಯಂದರೆ
ಕನಕದಾಸರ ಮತ್ತೊಂದು ಜನಪ್ರಿಯ ಹಾಡಾದ ” ಏನೆ ಮನವಿತ್ತೆ ಲಲಿತಾಂಗಿ…… ಯಲ್ಲಿಯ ಶ್ರೀ ಕೃಷ್ಣನ ಸಂಬಂಧವನ್ನು ದಯಮಾಡಿ ವಿವರಿಸುವಿರಾ?
ನಿಮ್ಮ ವಿಶ್ವಾಸಿ
ನಂ.ಅನಂತರಾಮು.