ಶ್ರೀ ತುಳಸಿ ಮಹಿಮೆಯ ಹಾಡು ರಾಗಸಹಿತ:

ಸ್ತೋತ್ರ: ಉದಯರಾಗ

ರಾಗ: ಭೂಪಾಳಿ
—————-

ಶ್ರೀ ತುಳಸಿಯಾ ಸೇವಿಸಿ ||ಪ||
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು ಮಾಡುವಳು
ಯಾತಕನುಮಾನವಯ್ಯಾ ||ಅ||ಪ||

ಸುಧೆಗಡಲ ಮಧಿಸುವ ಸಮಯದಲಿ ವೈದ್ಯನಾಗಿ
ಪದುಮನಾಭನು ತಾನು ಉದುಭವಿಸಿ ಬರಲ೦ದು
ಉದುರಿದವು ಕಣ್ಣಿಂದ ಉದಕ ಉತ್ಸಾಹದಿಂದಲದೆ
ತುಳಸಿನಾಮವಾಗೇ ||

ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ
ತ್ಪದವಿಗೆ ಸಿದ್ದವೆಂದು ಮುದದಿಂದ ತಿಳಿದು
ವೃಂದಾವನ ರಚಿಸಿದರಯ್ಯಾ ||೧||

ರಾಗ: ಮಲಯಮಾರುತ
——————–
ಮೂಲದಲಿ ಸರ್ವತೀರ್ಥಗಳುಂಟು ತನ್ಮಧ್ಯೆ
ಕಾಲ ಮೀರದೆ ಸರ್ವನದನದಿಗಳಮರಗಣ
ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು
ವಾಲಯವಾಗಿಪ್ಪುದು ||

ಮೂರ್ಲೋಕಗಳ ಧರ್ಮವ್ರತಕೆ ಮಿಗಿಲೆನಿಸುವುದು
ನೀಲೆಮೇಘಶ್ಯಾಮ ಗರ್ಪಿಸಿದ ತುಳಸಿ ನಿ
ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ
ಕಾಲನಾಳಿಗೆ ಶೂಲನೋ ||೨||

ರಾಗ: ರಂಜಿನಿ
————–
ಉದಯದೊಳಗೆದ್ದು ನೀರೆರೆದು ಮಜ್ಜನಗೈದು
ತುದಿಬೆರಳಿನಿಂದ ಮೃತ್ತಿಕೆ ಫಣೆಯೊಳಿಟ್ಟು
ಮುದದಿಂದಲೊಂದು ಪ್ರದಕ್ಷಿಣೆ ನಮಸ್ಕಾರ
ತದನಂತರದಲಿ ಭಜನೇ ||

ವದನದೊಳುಗೈಯೆ ಧರೆಯಮೇಲಿದ್ದ ಸರ್ವ
ನದನದಿಗಳಿಗೆ ನೂರ್ಮಡಿಯಾತ್ರೆ ಮಾಡಿದ ಫಲ
ಒದಗುವುದು ಹಿಂದಣಾನಂತ ಜನ್ಮಗಳಘವ
ತುದಿಮೊದಲು ದಹಿಪುದಯ್ಯಾ ||೩||

ರಾಗ: ಬಿಲಹರಿ
—————

ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ
ಆವವನ ಮನೆಯಲ್ಲಿ ಹರಿದಾಸರಾ ಕೂಟ
ಆವವನ ಭುಜದಲ್ಲಿ ತಪ್ತ ಮುದ್ರಾಂಕಿತವು
ಪಾವಮಾನಿಯ ಮತದೊಳು

ಆವವನು ಕಾಲತ್ರಯ ಕಳೆವನಾವಲ್ಲಿ
ಶ್ರೀ ವಾಸುದೇವ ಮುನಿದೇವಾದಿ ಗಣಸಹಿತ
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದೆಲೆ
ಭಾವಿಸಿರಿ ಭಾವಜ್ಜ್ನರೂ ||೪||

ರಾಗ: ಅಠ್ಠಾಣ:
—————

ಕಂಡರೆ ದುರಿತಕ್ಕೆ ಕೆಂಡವನು ಬೀರುವುದು
ಕೊಂಡಾಡಿದರೆ ಪುಣ್ಯವಪರಿಮಿತ ಉಂಟು ಮೈ
ದಿಂಡುಗೆಡಹಿದರೆ ಪುನರಪಿಜನನವಿಲ್ಲ ಸಲೆ
ದಂಡವಿಟ್ಟವ ಮುಕ್ತನೋ ||

ಚಂಡಾಲಕೇರಿಯೊಳು ಇರಲು ಹೀನಯವಲ್ಲ
ಪಾಂಡುರಂಗಕ್ಷೇತ್ರ ಸರಿಮಿಗಿಲು ಎನಿಸುವುದು
ತಂಡತಂಡದ ಕುಲಕೆ ಅವರವರ ಯೋಗ್ಯಫಲ
ಕಂಡವರಿಗುಂಟೆ ಅಯ್ಯಾ ||೫||

ರಾಗ: ಮೋಹನ:
————–
ಚಿತ್ತಶುದ್ದನ ಆಗಿ ಮುಂಜಾನೆಯೊಳು ತುಳಸಿ
ಸ್ತೋತ್ರವನು ಮಾಡುತ್ತ ದಿವ್ಯವಾಗಿಹ ತ್ರಿದಳ
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ
ವಿತ್ತಾದಿಯಲಿತಾರದೇ ||

ಮತ್ತೆ ವಸ್ತ್ರದಿ ಹಸ್ತಶಿಲೆ ಆರ್ಕಏರಂಡ
ಪತ್ರದಲಿ ತಾರದೆಲೆ ಭೂಮಿಯೊಳಗಿಡದೆ ಪೂ
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು
ಹೊತ್ತು ಮೀರಿಸಲಾಗದು ||೬||

ರಾಗ: ಷಣ್ಮುಖಪ್ರಿಯ:
———————-
ಕವಿ ಮಂಗಳವಾರ ವೈಧೃತಿ ವೃತೀಪಾತ
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಟ ಉಪರಾಗ ಪಿತೃಶ್ರಾದ್ದ
ಇವುಗಳಲಿ ತೆಗೆಯದಿರೀ ||

ನವವಸನಪೊದ್ದು ಊಟವ ಮಾಡಿ ತಾಂಬೂಲ
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ
ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ
ದಿವಸ ದಿವಸಗೊಳೊಳಯ್ಯಾ ||೭||

ರಾಗ: ಸಿಂಧುಭೈರವಿ
——————–
ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಸಿ ನಿರ್ಮಾಲ್ಯವಾದರೂ ತ್ರಿವಾರದಲಿ ತೊಳೆದು
ತೊಳೆದೇರಿಸಲಿ ಬಹುದೂ ||

ತುಳಸಿ ಒಣಗಿದ್ದರೂ ಲೇಶದೋಶಗಳಲ್ಲ
ತುಳಸಿ ವಿರಹಿತ ಪೂಜೆಯದು ಸಲ್ಲದೋ
ತುಳಸೀ ತುಳಸೀ ಎಂದು ಸ್ಮರಣೆಯಾದರೂ ಮಾಡಿ
ಜಲಜಾಕ್ಷನರ್ಚಿಸಿರಯ್ಯಾ ||೮||

ರಾಗ: ಕಾನಡ
————-
ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳೆಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಿಗಿದ್ದರೂ ವ್ಯರ್ಥ
ತುಳಸಿ ಬಲು ಪ್ರಾಧಾನ್ಯವೋ ||

ತುಳಸಿ ಮಿಶ್ರಿತವಾದ ನೈವೇದ್ಯಗತಿ ಸಾಧ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವೈಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾಗಾಣೆನಯ್ಯಾ ||೯||

ರಾಗ: ಸುರುಟಿ
————-
ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಶ ಶಶಿಬಿಂದು ರುಕುಮಾಂಗದನು
ಇವರೆ ಮೊದಲಾದವರು ಭಕುತಿ ಪೂರ್ವಕದಿಂದ
ವಿವರವನು ತಿಳಿದರ್ಚಿಸೀ ||

ತವಕದಿಂ ತಂತಮ್ಮ ಘನಪದವನೈದಿದರು
ಭುವನದೊಳಗುಳ್ಳ ನಿರ್ಮಲಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು ನೀಗಿ
ಭವ ದೂರರಾದರಯ್ಯಾ ||೧೦||

ರಾಗ: ಮಧ್ಯಮಾವತಿ:
———————
ಉದಯಕಾಲದೊಳೆದ್ದು ಆವನಾದರೂ ತನ್ನ
ಹೃದಯನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ
ಮದಗರ್ವ ಪರಿಹಾರವೋ ||

ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ
ಪದೆಪದೆಗೆ ಸಿರಿ ವಿಜಯ ವಿಠ್ಠಲಗೆ ಪ್ರಿಯಳಾದ
ಮದನತೇಜಳ ಭಜಿಸಿರಯ್ಯಾ ||೧೧||

ಶ್ರೀ ತುಳಸಿಯಾ ಸೇವಿಸಿ ||ಪ||

||ಸಂಪೂರ್ಣಂ||

(ವಿಜಯದಾಸರು ರಚಿಸಿರುವ ತುಳಸಿಯ ಮಹಿಮೆ ಕೊಂಡಾಡುವ ಒಂದು ಕೃತಿಯನ್ನು ತುಳಸಿವನಕ್ಕೆ ಅರ್ಪಿಸಬೇಕೆಂದು ಅನ್ನಿಸಿತು. ಹಾಗಾಗಿ ನಿಮಗೆ ಕಳಿಸಿದ್ದೇನೆ. ಈ ಹಾಡನ್ನು ’ಹುಡುಕಿ’ ನೋಡಿದೆ ಸಿಗಲಿಲ್ಲ. ಹಾಗಾಗಿ ರಿಪೀಟ್ ಆಗಿಲ್ಲ ಎಂದು ಭಾವಿಸುತ್ತೇನೆ ! – ಶ್ರೀನಾಥ ಭಲ್ಲೆ)

3 thoughts on “ಶ್ರೀ ತುಳಸಿ ಮಹಿಮೆಯ ಹಾಡು”

  1. ಶ್ರೀನಾಥ್ ಅವರೇ, ಈ ಹಾಡಿನ ಬಗ್ಗೆ ತಿಳಿದಿರಲಿಲ್ಲ. ಮುದ್ರಣದಲ್ಲಿಯೂ ನೋಡಿದ ನೆನಪಿಲ್ಲ. ಅಪರೂಪದ ಕೃತಿಯೊಂದನ್ನು ಅಂತರ್ಜಾಲಕ್ಕೆ ಸೇರಿಸಲು ಸಂತೋಷವಾಗುತ್ತಿದೆ. ನಿಮ್ಮ ಕೊಡುಗೆಗೆ ಧನ್ಯವಾದಗಳು.

  2. ತ್ರಿವೇಣಿಯವರಿಗೆ ಅನಂತ ವಂದನೆಗಳು. ನನ್ನಲ್ಲಿರುವ ಹಾಗೂ ತುಳಸೀವನದಲ್ಲಿರದ ಹಾಡುಗಳನ್ನು ನಿಮಗೆ ಅಭ್ಯಂತರವಿಲ್ಲದಿದ್ದರೆ ಆಗಾಗ್ಗೆ ಕಳಿಸುತ್ತಿರುತ್ತೇನೆ.

  3. ಖಂಡಿತ ಕಳಿಸಿಕೊಡಿ. ಹಾಗೆಯೇ, ದಾಸಸಾಹಿತ್ಯ ಪ್ರಕಟನೆಗೆಂದೇ ಮೀಸಲಾದ ಈ ತಾಣದಲ್ಲಿಯೂ ನಿಮ್ಮಲ್ಲಿರುವ ಸಾಹಿತ್ಯವನ್ನು ಹಂಚಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.