ರಾಗ: ತೋಡಿ ತಾಳ: ದೀಪ್ ಚಂಡಿ

ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ
ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ

ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ
ಮನ್ನಿಸುವ ದೊರೆಯಿಲ್ಲ ಮನಕೆ ಹಿತವಿಲ್ಲ
ಹೊನ್ನುಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ
ಇನ್ನಿಲ್ಲಿ ತರವಲ್ಲ ಇಂದಿರೇಶನೆ ಬಲ್ಲ

ದೇಶ ಪರಿಚಯವಿಲ್ಲ ದೇಹದೊಳು ಬಲವಿಲ್ಲ
ವಾಸಿಪಂಥಗಳೆಂಬೊ ಒಲುಮೆ ಎನಗಿಲ್ಲ
ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ

ಕರೆದು ಕೊಡುವವರಿಲ್ಲ ಕರುಣೆ ತೋರುವವರಿಲ್ಲ
ಕಮಲಾಕ್ಷನಲ್ಲದೆ ಗತಿಯೊಬ್ಬರಿಲ್ಲ
ಕನಸಲಿ ಕಳುವಿಲ್ಲ ಮನಸಲಿ ಧೃಢವಿಲ್ಲ
ವನಜಾಕ್ಷ ಪುರಂದರವಿಠಲ ತಾ ಬಲ್ಲ

***

ಪುರಂದರದಾಸರ ಈ ರಚನೆಯನ್ನು ತುಳಸಿವನದ ಸಂಗ್ರಹಕ್ಕೆಂದು ಕಳಿಸಿಕೊಟ್ಟ ಶ್ರೀನಾಥ್ ಭಲ್ಲೆಯವರು ಜೊತೆಗೊಂದು ಟಿಪ್ಪಣಿಯನ್ನೂ ಸೇರಿಸಿದ್ದಾರೆ:-

“ಈ ಹಾಡನ್ನು ದೃಶ್ಯ ಕಾವ್ಯವಾಗಿಸಿದಲ್ಲಿ ‘ವೃದ್ದಾಶ್ರಮದಲ್ಲಿನ ಹಿರಿಯರು’, ‘ತನ್ನವರಿಂದ ದೂರಾದವರು’, ‘ಮಗ-ಸೊಸೆ/ಮಗಳು-ಅಳಿಯ ಕೆಲಸಕ್ಕೆ ಹೋದ ಮೇಲೆ ಮಾಡಲೇನೂ ಕೆಲಸವಿಲ್ಲದ ಅಮೇರಿಕಕ್ಕೆ ಬಂದ ಹಿರಿಯರು’ ಮತ್ತು ‘ಅಮೇರಿಕದಲ್ಲಿ ನೆಲೆಸಿ ದಿನಕ್ಕೆ ಹೆನ್ನೆರಡು ಘಂಟೆ ದುಡಿವ ಗಂಡನ ಡ್ರೈವಿಂಗ್-ಬಾರದ ಹೆಂಡತಿ’ ಮೇಲೆ ಚಿತ್ರಿತವಾಗಬಹುದು.”

2 thoughts on “ಏಕೆನ್ನ ಈ ರಾಜ್ಯಕ್ಕೆಳೆತಂದೆ?”

  1. ಕಾಕಾ, ಈ ಹಾಡು ಪುರಂದರದಾಸರ ಭವಿಷ್ಯ ದೃಷ್ಟಿ ಎನ್ನುತ್ತೀರಾ? ನಾನು ಇದನ್ನು ಪುರಂದರದಾಸರ ವರ್ತಮಾನದ (ಅವರ ಕೊನೆಯ ದಿನಗಳ) ಅನುಭವಿರಬಹುದೆಂದು ಭಾವಿಸಿದ್ದೆ. ವಿಜಯನಗರ ಸಾಮ್ರಾಜ್ಯ ಪತನದ ನಂತರ, ಪರಕೀಯ ಆಳ್ವಿಕೆಗೆ ಒಳಗಾದ ರಾಜ್ಯವನ್ನು ಬಿಟ್ಟು ಪುರಂದರದಾಸರು ಮತ್ತಾವುದೋ ಸ್ಥಳಕ್ಕೆ ಹೋಗಿ, ಅಲ್ಲಿ ಅವರು ಅನುಭವಿಸಿರಬಹುದಾದ ಪಾಡೇ ಈ ಹಾಡಾಗಿರಬಹುದೇ ಅನ್ನಿಸಿತ್ತು. ಈ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿಕೊಡಿ.

    `ಏಕೆನ್ನ ಈ ರಾಜ್ಯಕ್ಕೆಳೆತಂದೆ?’ ಎನ್ನುವಲ್ಲಿ `ಈ ರಾಜ್ಯ’ ಎನ್ನುವ ಬದಲು ‘ಅದಾವ ರಾಜ್ಯ’ ಎಂದು ದಾಸರು ಸ್ಪಷ್ಟವಾಗಿ ಉಲ್ಲೇಖಿಸಿದ್ದರೆ ನಮ್ಮ ಹಿನ್ನೋಟ ಇನ್ನಷ್ಟು ವಿಶಾಲವಾಗುತ್ತಿತ್ತೇನೊ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.