ಕೋಟ್ಯಾಧಿಪತಿಯು ನಾನು
ಬಹುಮಹಡಿ ಬಂಗಲೆಯು
ಚಿನ್ನ, ಒಡವೆಗಳಿಂದ
ತುಂಬಿತುಳುಕಾಡುವ ತಿಜೋರಿ
ಬ್ಯಾಂಕಿನಲ್ಲಿಯೂ ಉಂಟು
ರಾಶಿ ಹಣದ ಗಂಟು
ಇಷ್ಟಿದ್ದೂ ಹೀಗೇಕಿಲ್ಲಿ ಮಲಗಿಹೆನು
ಬರಿ ನೆಲದ ಮೇಲೆ?
ಹಾಸಿಗೆ, ಹೊದಿಕೆಗಳೆಲ್ಲಿ?
ಹಕ್ಕಿ ಗರಿಗಿಂತಲೂ ಮೃದುವಾಗಿದ್ದ
ನನ್ನ ಸುಪ್ಪತ್ತಿಗೆಯೀಗ ಹೋಯಿತೆಲ್ಲಿ?
ಎಲ್ಲಿ ಹೋಗಿಹರೋ ಎಲ್ಲಾ ?
ಹೆಂಡತಿ, ಮಕ್ಕಳು, ನೆಂಟರಿಷ್ಟರು ;
ಸುತ್ತಲೂ ಮುತ್ತಿದ್ದ ಆಳುಕಾಳುಗಳು?
ಕಗ್ಗತ್ತಲೆಯಲಿ, ಕೊರೆವ ಚಳಿರಾತ್ರಿಯಲಿ
ಶವಾಗಾರದ ತಂಪಿನಲಿ ಮಲಗಿರುವ
ಸಿರಿವಂತ ಶವವೊಂದು ನಡೆಸುತಿದೆ
ತನ್ನೊಳಗೆ ತಾನೇ ಮೌನ ಸಂವಾದ!
(‘ವಿದ್ಯಾರಣ್ಯ’ದ ‘ಡಿಂಡಿಮ’ಕ್ಕೆಂದು ಬರೆದಿದ್ದು)
Hello Triveni
Poem is very nice .kannadalli easy yagi arthavada nanna modalaneya poem enna bahudu 🙂
ಜೀವ ಹೋದ ನಂತರ ಏನೂ ಇಲ್ಲ ಎಂದು ಎಷ್ಟು ಸರಳವಾಗಿ ಹೇಳಿದ್ದೀರಿ…
ನಮಸ್ಕಾರ ತ್ರಿವೇಣಿಯವರೇ…
ನಿಮ್ಮ ತಾಣದ “ಕನ್ನಡ ತಾಣಗಳು” ಅಡಿಯಲ್ಲಿರುವ ದಾಸ ಸಾಹಿತ್ಯ ಚಿಟುಕಿಸಿದರೇ, ಬೇಡದ ಯಾವ್ಯಾವುದೋ ತಾಣಗಳ ವಿಳಾಸ ಬಂತು. ಎರಡು ಸಲ ಪ್ರಯತ್ನಿಸಿ ನೋಡಿದೇ… ದಯವಿಟ್ಟು ಒಮ್ಮೇ ಪರೀಕ್ಷಿಸಿ ನೋಡಿ.. ಅಥವಾ ಸಂಪದ ಇಲ್ಲದಿರುವಿಕೆಯಿಂದ ಹೀಗೇ ಆಗಿದೇಯಾ?
ಸಹನಾ, ನನಗೊಂದು ಚಂದದ ಪ್ರಶಸ್ತಿ ಪತ್ರ ಕೊಟ್ಟಿದ್ದಕ್ಕೆ Thanks 🙂 ಹೌದು, ಕೆಲವೊಂದು ಕವನಗಳು ನನಗೂ ಅರ್ಥವಾಗುವುದಿಲ್ಲ. ಅರ್ಥವಾಗದ ಕವನಗಳನ್ನು ಅವುಗಳ ಪಾಡಿಗೆ ಬಿಟ್ಟು, ಸುಲಭವಾಗಿ ಅರ್ಥವಾಗುವ ಸರಳ, ಸುಂದರ ಕವಿತೆಗಳನ್ನೇ ಓದಿ ಸಂತೋಷಪಡೋಣ. ಅಂತಹ ಕವಿತೆಗಳೂ ಹೆಚ್ಚೇ ಇವೆ.
ಶ್ಯಾಮಲ, ದಾಸ ಸಾಹಿತ್ಯ ವೆಬ್ ಸೈಟ್ ಬಹಳ ದಿನಗಳಿಂದ ಹಾಗೆಯೇ ಇದೆ. ಇಂದಲ್ಲಾ, ನಾಳೆ ಸರಿಯಾದೀತೆಂದು ಆ ಲಿಂಕನ್ನು ಹಾಗೆಯೇ ಇರಿಸಿದ್ದೆ. ಇದೀಗ ತೆಗೆದುಹಾಕಿದೆ. ಸರಕಾರಿ ಸ್ವಾಮ್ಯದಲ್ಲಿರುವ ಕನ್ನಡ ತಾಣಗಳ ಹಣೆಬರಹವೇ ಅಷ್ಟು. 🙁
ಕೊನೆಯಲ್ಲಿರುವ `ಸಂಪದ – ಹರಿದಾಸ’ ಲಿಂಕ್ ಮಾತ್ರ ಸಂಪದಕ್ಕೆ ಸಂಬಂಧಿಸಿದ್ದು. ಸಂಪದ ತೆರೆದುಕೊಂಡ ನಂತರ ಆ ತಾಣವೂ ತೆರೆಯಲಿದೆ.
ತ್ರಿವೇಣಿ,
ಕಣ್ಣು ತೆರೆಯಿಸುವ ಸ್ವಗತ!
ಕಾಕಾ, ಯಾವ ಕವನ, ವಚನ, ಕೀರ್ತನ, ಪ್ರವಚನಗಳಿಂದಾದರೂ ನಮ್ಮ ಕಣ್ಣು ತೆರೆಯುವುದುಂಟೆ! ಒಂದೆರಡು ಕ್ಷಣಗಳ ಮಟ್ಟಿಗೆ ಸ್ಮಶಾನ ವೈರಾಗ್ಯಕ್ಕೆ ಮೊರೆಹೋಗುವ ನಾವು ಮತ್ತೆ ನಮ್ಮದೇ ಸ್ವಾರ್ಥ, ಸಣ್ಣತನಗಳ ಸುಳಿಯಲ್ಲಿ ಸುತ್ತತೊಡಗುತ್ತೇವಲ್ಲವೇ?
ವೇಣಿ, ತುಂಬಾ ಚೆನ್ನಾಗಿದೆ ಈ ಕವನ, ನಂಗೆ ತುಂಬಾ ಇಷ್ಟವಾಯ್ತು, ಬೇರೆ ಏನೋ ಕುಬೇರನ ಬಗ್ಗೆ ಬೆರೆದಿರಬಹುದು ಅಂತಾ ಕುತೂಹಲದಿಂದ ಓದುತ್ತಿದ್ದ ನಂಗೆ ಸುಸ್ತು, ತುಂಬಾ ದಿನದ ಮೇಲೆ ನನ್ನ ಒಂದು ಟೀಕೆ ನಿನ್ನ ಬ್ಲಾಗಿಗೆ. ಹೀಗೇ ಬರೀತಿರು.
ಮೀರಾ, ಬಹಳ ದಿನಗಳ ನಂತರ ಬಂದಿದೀಯ. ಮರುಸ್ವಾಗತ. ನಿನ್ನ ಟೀಕೆ-ಟಿಪ್ಪಣಿಗಳು ಹೀಗೇ ಬರುತ್ತಿರಲಿ. 🙂
ತುಳಸಿಯಮ್ಮ,
ಲೇಟೆಸ್ಟ್ ಸುದ್ದಿ ಅಂದರೆ ಸಿರಿವಂತ ಶವ ಹೊಸ ಡೀಲ್ ಮಾಡೋಕೋ ನೋಡ್ತಾ ಇದೆಯಂತೆ. ಇರೋದರಲ್ಲ್ಲಿ ತನಗೆ ಒಳ್ಳೆ ಜಾಗ ಬೇಕು ಶವಸಂಸ್ಕಾರಕ್ಕೆ, ಅದರ ಮೇಲೆ ಒಳ್ಳೆ ಮಾರ್ಬಲ್ ಕಲ್ಲೇ ಬೇಕು…
-ಪಾತರಗಿತ್ತಿ
ಶಿವು, ಸಿರಿವಂತ ಶವ ಹೊಸ ಡೀಲ್ ಬೇಗ ಕುದುರಿ, ಅದರ ಕೊನೆ ಆಸೆಯೂ ನೆರವೇರಲಿ. ( ಮಾನವನಾಸೆಗೆ ಕೊನೆ ಎಲ್ಲಿ?)