ಬರಹಗಾರ ಮಿತ್ರ ಶ್ರೀನಾಥ್ ಭಲ್ಲೆಯವರು, ಕೆಲವು ತಿಂಗಳ ಹಿಂದೆ ಸಂಪದದಲ್ಲಿ ತಮ್ಮ ‘ಕಂಪತಿಗಳು’ ನಾಟಕವನ್ನು ಪ್ರಕಟಿಸಿದ್ದರು. ಬಹಳ ದಿನಗಳಿಂದ, ಚಿಕ್ಕ-ಚೊಕ್ಕದಾಗಿದ್ದು ಸುಲಭವಾಗಿ ಆಡಬಹುದಾದಂತಹ, (ನಿರ್ದೇಶಕರಿಗೆ ಹೆಚ್ಚು ಕಷ್ಟಕೊಡದ) ನಕ್ಕುನಗಿಸುವ ಹಾಸ್ಯ ನಾಟಕಕ್ಕಾಗಿ ಹುಡುಕುತ್ತಿದ್ದ ನನಗೆ, ಅರಸುತ್ತಿದ್ದ ಬಳ್ಳಿ ಕಾಲಿಗೆ ಎಡರಿದಂತಾಯಿತು. ಅದನ್ನು ಓದಿ ಮುಗಿಸುತ್ತಿದ್ದಂತೆಯೇ ಸಂಪದದಲ್ಲೇ ಇರುವ ಖಾಸಗಿ ಸಂದೇಶ ಕಳಿಸುವ ಅನುಕೂಲವನ್ನು ಉಪಯೋಗಿಸಿಕೊಂಡು ಲೇಖಕರ ಅನುಮತಿ ಕೋರಿ ಪತ್ರ ಬರೆದೆ. ನನ್ನ ಕಾಮಿಡಿ ಟೈಮ್ ಅಲ್ಲಿಂದಲೇ ಆರಂಭವಾಯಿತು ಎನ್ನಬಹುದು. ಏಕೆಂದರೆ, ನಾನು ಪತ್ರ ಬರೆದಿದ್ದು ನಾಟಕವನ್ನು ಅಲ್ಲಿ ಪೋಸ್ಟ್ ಮಾಡಿದ್ದ ಲೇಖಕ ಶ್ರೀನಾಥ್ ಭಲ್ಲೆಯವರಿಗಲ್ಲ, ಆ ಪೋಸ್ಟಿಗೆ ಕಾಮೆಂಟ್ ಮೂಲಕ ಉತ್ತರಿಸಿದ್ದ ‘ರಾಘವ’ ಎನ್ನುವ ಸಂಪದಿಗರಿಗೆ. ಸದ್ಯ, ಹಿಂದುಮುಂದು ಒಂದೂ ತಿಳಿಯದ ಆ ಸಂದೇಶ ನೋಡಿ ತಬ್ಬಿಬ್ಬಾಗದೆ ರಾಘವ ಅವರು, ‘ಶ್ರೀನಾಥರ ಒಪ್ಪಿಗೆ ಸಿಗ್ಲಿ, ನಾಟ್ಕ ಆಡ್ಸೋಹಾಗಾಗ್ಲಿ, ಚೆನ್ನಾಗಾಗ್ಲಿ’ ಎಂದುತ್ತರಿಸಿ, ನಮ್ಮ ನಾಟ್ಕಕ್ಕೆ ವಿಷ್ ಮಾಡಿದವ್ರ ಲಿಸ್ಟ್ನಲ್ಲಿ ಫಸ್ಟಾಗೋದ್ರು.
ಶ್ರೀನಾಥ್ ಅವರಿಗೆ ಪತ್ರ ಬರೆದರೆ, ಅವರು ಒಪ್ಪಿಗೆ ನೀಡಿದರು, ಆದರೆ ಭಾರಿ ಸಂಭಾವನೆ ಕೇಳಿಬಿಟ್ರು. ಏನೂಂತೀರಾ? ಆಗ ನನ್ನ ಬ್ಲಾಗಿನಲ್ಲಿ ರಾರಾಜಿಸುತ್ತಿದ್ದ ಗರಿಗರಿ ಕೋಡುಬಳೆ ನೋಡಿ ಪ್ರಭಾವಿತರಾಗಿದ್ರು ಅಂತ ಕಾಣಿಸುತ್ತೆ. ‘ನನಗೆ ಸಂಭಾವನೆ ರೂಪದಲ್ಲಿ ಒಂದು ಡಬ್ಬಿ ಕೋಡುಬಳೆ ಮಾಡಿಕೊಡಿ ಸಾಕು’ ಎಂದು ಗ್ರೀನ್ ಸಿಗ್ನಲ್ ನೀಡಿದರು. ಆಮ್ಯಾಕೆ, ನಂಗೆ ಪರಿಚಯವಿರುವ ವಿದ್ಯಾರಣ್ಯದ ರಂಗೋತ್ಸಾಹಿಗಳ ಗುಂಪಿಗೆ-ರಣೋತ್ಸಾಹಿ ಅಂತ ಓದಿಕೋಬೇಡಿ ಮತ್ತೆ- ‘ಹೀಗೊಂದು ನಗೆನಾಟಕ ಸಿಕ್ಕಿದೆ. ಇದನ್ನೋದುವಾಗ ನಾನಂತೂ ತುಂಬಾ ನಕ್ಕೆ. ನಿಮಗೆ ಆಸಕ್ತಿ ಇದ್ದರೆ ಹೇಳಿ, ನಾಟಕ ಆಡೋಣ’ ಎಂದು ಮೈಲ್ ಕಳಿಸಿದೆ. ತಕ್ಷಣದ ಉತ್ತರದ ನಿರೀಕ್ಷೆಯಲ್ಲೇನೂ ಇರದಿದ್ದ ನಾನು, ‘ನನಗೆ ಆಸಕ್ತಿ ಇದೆ. ನನಗೊಂದು ಪಾರ್ಟು ಕೊಡಿ’ ಎಂದು ಕೂಡಲೇ ಬಂದ ಉತ್ತರಗಳನ್ನು ನೋಡಿ ಪುಳಕಿತಳಾದೆ. ಇರುವ ಕೆಲವೇ ಪಾರ್ಟುಗಳನ್ನು ಹಂಚಿಮುಗಿಸಿದ ಮೇಲೂ ಒಬ್ಬರು, ‘ಹೇಗೂ ನಾಟಕದಲ್ಲಿ ಡಾಕ್ಟ್ರು, ಕಾಂಪೌಂಡರ್ರು ಇದ್ದಾರೆ ಅಂದ್ರಲ್ಲಾ, ರೋಗಿ ಪಾರ್ಟು ನೀವೇ ಸೃಷ್ಟಿಸಿ, ಅದನ್ನು ನನಗೆ ಕೊಡಿ’ ಎಂದು ತಮಾಷೆಯಾಗಿ ಒತ್ತಾಯಿಸಿದರು. ಇನ್ನೊಬ್ಬರು ಇನ್ನೂ ಮುಂದುವರೆದು, ‘ನನಗೆ ಡೈಲಾಗೇ ಬೇಡಬಿಡಿ, ಡೆಡ್ ಪೇಷಂಟ್ ರೋಲ್ ಆದ್ರೂ ಸಾಕು, ಮಾಡಿ ಬಿಸಾಕ್ತೀನಿ’ ಎಂದು ಉದಾರತೆ ಮೆರೆದರು.
ಪಯಣಿಸಿ ಗುರಿ ಸೇರುವುದಕ್ಕಿಂತ, ಪಯಣದ ಹಾದಿಯ ಅನುಭವವೇ ಹೆಚ್ಚು ಖುಷಿ ಕೊಡತ್ತೆ ಅಂತಾರಲ್ಲಾ ಹಾಗೆ, ನಾಟಕ ಆಡುವುದಕ್ಕಿಂತ ಅದರ ತಯಾರಿಯಲ್ಲಿಯೇ ಮಜ ಹೆಚ್ಚು. ಕಾಮಿಡಿ ಅಭ್ಯಾಸದ ವೇಳೆಯಲ್ಲಿ ಹುಟ್ಟಿಕೊಳ್ಳುವ ಕಾಮಿಡಿಗಳಿಗೇನು ಬರ? ಉದಾಹರಣೆಗೆ ಹೇಳ್ತಿದೀನಿ, ಈ ನಾಟಕದಲ್ಲಿ ಒಂದು ಪಾತ್ರ ಹೇಳತ್ತೆ ‘ನನ್ನ ಕಥೆ ಸ್ವಲ್ಪ ಡಿಫೆರೆಂಟು. ಇವಳ ಅಜ್ಜಿ ನನಗೆ ಇಂಟರ್ವ್ಯೂ ಮಾಡಿದ್ದು!’ ಎಂದು, ಅದಕ್ಕೆ ಉತ್ತರವಾಗಿ ಇನ್ನೊಂದು ಪಾತ್ರ, ಮಧ್ಯೆ ಬಾಯಿ ಹಾಕಿ ‘ನೀನು ಹುಡುಗೀನ್ನೇ ಮದುವೆ ಆದಿ ತಾನೇ?’ ಎಂದು ಕೇಳಬೇಕು. ಈ ಸಂಭಾಷಣೆ ನುಡಿಯುವಾಗ ಪಾತ್ರಧಾರಿ ಗಿರೀಶ್ ಸಾಹುಕಾರ್ ಬಾಯಿತಪ್ಪಿ ‘ನೀನು ಅಜ್ಜೀನೆ ಮದುವೆ ಆದಿ ತಾನೆ?’ ಎಂದು ಕೇಳಿ ನಗುವಿನ ಸುನಾಮಿ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ಪ್ರತಿ ಅಭ್ಯಾಸದಲ್ಲಿಯೂ ಈ ಮಾತು ಬಂದಾಗ, ಅಲ್ಲಿ ನಗಲಿಕ್ಕೆಂದು ಒಂದು ಕಡ್ಡಾಯ ನಿಲುಗಡೆ. ಪ್ರತಿವಾರದ ರಿಹರ್ಸಲ್ ನೆಪದಲ್ಲಿ ವಾರಕ್ಕೊಂದು ಮನೆಯಲ್ಲಿ ಪುಷ್ಕಳ ಭೋಜನ. ಅಭ್ಯಾಸ ಮೂವತ್ತು ನಿಮಿಷಗಳಾದರೆ ಹೆಚ್ಚು. ಉಳಿದೆರಡು-ಮೂರು ಘಂಟೆಗಳು ತಿಂಡಿ-ಕಾಫಿ-ಊಟ-ಹರಟೆಗೆ ಮೀಸಲು!
(ಡಾಕ್ಟರ್ ಯಮಸುತನಾಗಿ ಶ್ರೀನಿವಾಸರಾವ್ ಮತ್ತು ಕಾಂಪೌಂಡರ್ ಆಗಿ ಜಯಸಿಂಹ) (`ಕಂಪತಿಗಳು’ ಬಳಗ)
ಅಭ್ಯಾಸದ ಕಥೆ ಹೀಗಾದರೆ, ರಂಗಸಜ್ಜಿಕೆಗೆ ಪರಿಕರ ಹೊಂದಿಸಿದ್ದೇ ಇನ್ನೊಂದು ಕಥೆ. ಮೊದಲೆರದು ದೃಶ್ಯ ಮನೆಯ ಪರಿಸರವಾದ್ದರಿಂದ ನಮಗೇನೂ ಕಷ್ಟವಾಗಲಿಲ್ಲ. ಮೂರನೆಯ ದೃಶ್ಯದ್ದೇ ಫಜೀತಿ. ಅದು ಡಾಕ್ಟರು ಶಾಪು. ನಮ್ಮ ತಂಡದಲ್ಲಿ ಒಬ್ಬರಾದರೂ ವೈದ್ಯವೃತ್ತಿಯವರಿಲ್ಲ, ಇದ್ದವರಲ್ಲಿ ಕಂಪತಿ ನಾಟಕಕ್ಕೆ ಹೇಳಿಮಾಡಿಸಿದ ಕಂಪ್ಯೂಟರ್ ಟೆಕ್ಕಿಗಳೇ ಹೆಚ್ಚು. ಆ ದೃಶ್ಯ ‘ಕ್ಲಿನಿಕ್’ ಎಂದು ಪ್ರೇಕ್ಷಕರಿಗೆ ತಿಳಿಯಲು, ಡಾಕ್ಟರಿಗೆ ಕನಿಷ್ಠ ಒಂದು ಸ್ಟೆಥಾಸ್ಕೊಪ್, ಗೋಡೆಯ ಮೇಲೆ ಮಾನವ ದೇಹದ ಭಾಗಗಳಿರುವ ಕೆಲವು ಚಿತ್ರಪಟಗಳನ್ನಾದರೂ ತೂಗುಬಿಡೋಣವೆಂದುಕೊಂಡೆ. ಒಂದಿಬ್ಬರು ವೈದ್ಯ ನೆಂಟರಿಷ್ಟರಿರುವ ಸ್ನೇಹಿತರಲ್ಲಿಯೂ ಈ ಬಗ್ಗೆ ವಿನಂತಿಸಿಕೊಂಡಿದ್ದೆ. ನನ್ನ ಗ್ರಹಚಾರಕ್ಕೆ ನಾಟಕದ ದಿನ ಹತ್ತಿರ ಬಂದರೂ ಒಂದೂ ಕೈಸೇರಲಿಲ್ಲ. ಸ್ಟೆಥಾಸ್ಕೋಪ್ಗಾಗಿ ಮಕ್ಕಳ ಆಟಿಕೆಗಳಿರುವ ಅಂಗಡಿ, ವಾಲ್ ಗ್ರೀನ್, ಅಲ್ಲಿಇಲ್ಲಿ ಹುಡುಕಿ ಅಲೆದಿದ್ದೇ ಬಂತು. ಯಾರೋ ‘ಡಾಲರ್ ಶಾಪಿನಲ್ಲಿ ಸಿಗಬಹುದು ನೋಡಿ’ ಎಂದರು. ಇನ್ನ್ಯಾರೋ ‘ಹ್ಯಾಲೊವಿನ್ ಶಾಪಿನಲ್ಲಿ ನೋಡಿ’ ಅಂದರು. ಡಾಲರ್ ಸ್ಟೆಥಾಸ್ಕೋಪು ಧರಿಸುವ ವೈದ್ಯರ ಕರ್ಮಕ್ಕೆ ಮರುಗುತ್ತಲೇ ಅಲ್ಲಿಗೂ ಹೋದೆ. ಸಿಕ್ಕಲಿಲ್ಲ.
ನಾಟಕದ ಹಿಂದಿನ ದಿನ ನನಗೆ ದಂತವೈದ್ಯರಲ್ಲಿಗೆ ಹೋಗುವುದಿತ್ತು. ಸ್ಟೆಥಾಸ್ಕೋಪ್ ಸಿಕ್ಕದ ಚಿಂತೆಯಲ್ಲಿ ಡಾಕ್ಟರ್ ಮುಂದೆ ಬಾಯೆ ತೆರೆದುಕೂತಿದ್ದ ನನಗೆ ಇದ್ದಕ್ಕಿದ್ದಂತೆ ಮೆದುಳಿನಲ್ಲಿ ಬಲ್ಬ್ ಹೊತ್ತಿದಂತಾಯಿತು. ಸ್ಕ್ರೂ ಡ್ರೈವರು, ಕಟ್ಟಿಂಗ್ ಪ್ಲೇಯರು ಮುಂತಾದ ಹತಾರಗಳನ್ನು ಅವರು ಹೊರತೆರೆದು ಬಾಯಿ ತೆರವಾಗುತ್ತಿದ್ದಂತೆಯೆ, ‘ಡೆಂಟಿಸ್ಟ್ ಹತ್ರ ಸ್ಟೆಥಾಸ್ಕೋಪ್ ಇರಲಾರದು ಕಣೆ’ ಎಂದಿದ್ದ ಗೆಳತಿ ಜ್ಯೋತಿಯ ಸಂಶಯವನ್ನೂ ನಿರ್ಲಕ್ಷಿಸಿ (ಉಸಿರಾಡ್ತಿರೋ ರೋಗಿಗಳಿಗೆ ಮಾತ್ರ ಹಲ್ಲಿನ ಚಿಕಿತ್ಸೆಯ ಅಗತ್ಯವೆಂಬ ನನ್ನದೇ ಲಾಜಿಕ್ಕಿನಿಂದ), “ಡಾಕ್ಟ್ರೇ, ನಮ್ಮ ನಾಟಕಕ್ಕೆ ಸ್ಟೆಥಾಸ್ಕೋಪ್ ಬೇಕಿತ್ತು. ಇದ್ದರೆ ದಯವಿಟ್ಟು ಕೊಡ್ತೀರಾ? ಏನು ಹಾಳುಮಾಡದೆ ಜೋಪಾನವಾಗಿ ತಂದುಕೊಡ್ತೀನಿ” ಎಂದು ಕೇಳಿಯೇಬಿಟ್ಟೆ ಭಂಡಧೈರ್ಯದಿಂದ. ‘ಅಲ್ರೀ, ಯಾರಾದ್ರೂ ನಾಟಕಕ್ಕೆ ಬೇಕೂಂತ ಡಾಕ್ಟರನ್ನೇ ನಿಜವಾದ ಸ್ಟೆಥಾಸ್ಕೋಪ್ ಕೇಳ್ತಾರೇನ್ರೀ, ನಿಮಗೇನು ಬುದ್ಧಿ ಇಲ್ವಾ?’ ಎಂದೆಲ್ಲಿ ಬೈತಾರೋ ಎಂದು ಹೆದರಿಕೊಂಡು ಕೂತಿದ್ದೆ. ಸದ್ಯ, ಕಂಪತಿಗಳ ಮೇಲೆ ಅವರಿಗೂ ಸಿಂಪತಿ ಬಂತೂಂತ ಕಾಣತ್ತೆ. ಡಾಕ್ಟ್ರು, ಗೋಡೌನಿನಂತಿದ್ದ ತಮ್ಮ ರೆಕಾರ್ಡ್ ರೂಮಿನೊಳಗೆ ನುಗ್ಗಿ ಒಂದು ಸ್ಟೆಥಾಸ್ಕೋಪ್ ಹುಡುಕಿ ತಂದೇ ಬಿಟ್ಟಾಗ ನನಗಾದ ಆನಂದ, ಆಂಜನೇಯ ಸಂಜೀವಿನಿ ಪರ್ವತ ಹೊತ್ತುತಂದಾಗ ರಾಮನಿಗಾದ ಆನಂದಕ್ಕಿಂತ ಒಂದೆರಡು ಔನ್ಸ್ ಹೆಚ್ಚೇ ಇರಬಹುದು.
ಅದೇ ಖುಷಿಯಲ್ಲಿ ಸಾಯಂಕಾಲವಿದ್ದ ಸ್ಟೇಜ್ ರಿಹರ್ಸಲ್ ಕೂಡ ಮುಗಿಸಿದೆ. ಆದರೆ ಮಾನವ ಅಂಗಗಳ ಪಟ ಇನ್ನೂ (ಅನಾಟಮಿ ಚಾರ್ಟ್) ಸಿಕ್ಕಿರಲಿಲ್ಲ. ವೈದ್ಯಾಲಯಗಳಲ್ಲಿ ನೋಡಿದ್ದ, ಮನುಷ್ಯನ ದೇಹದಲ್ಲೆಲ್ಲೂ ಹರಡಿರುವ ನರವ್ಯೂಹವಿರುವ ಚಿತ್ರವೊಂದನ್ನು ನಾನು ಬಯಸಿದ್ದೆ. ಅದೇ ಗುಂಗಿನಲ್ಲಿ ದಾರಿಯಲ್ಲಿ ಕಂಡುಬಂದ ವಾಲ್ ಮಾರ್ಟ್ ಹೊಕ್ಕೆವು. ನಾವು ಹುಡುಕಿ ಸಿಗದಾಗ ಅಲ್ಲೇ ಇದ್ದ ಉದ್ಯೋಗಿಯೊಬ್ಬಳಲ್ಲಿ ವಿಚಾರಿಸಿದೆವು. ಆ ಚಾರ್ಟಿಗೆ ಏನೆನ್ನಬೇಕಿತ್ತೋ, ಅದರ ತಾಂತ್ರಿಕ ಹೆಸರೇನೋ ತಿಳಿಯದೆ ನಾವೇನು ಕೇಳಿದೆವೋ, ಅವಳಿಗೆ ಅದಾವ ಕಹಿ ನೆನಪು ಕಾಡಿತೋ, ಅವಳು ಸಹಾಯ ಮಾಡುವ ಬದಲು ಅಲ್ಲೇ ಸುಳಿದಾಡುತ್ತಿದ್ದ ಪೋಲಿಸಿನವನನ್ನು ಕರೆದುಬಿಟ್ಟಳು. ಅವನ ಪ್ರಶ್ನೆಗಳಿಗೆ ಒಪ್ಪುವಂಥ ಉತ್ತರ ಕೊಟ್ಟು ‘ಬದುಕಿದೆಯಾ ಬಡಜೀವವೇ!’ ಎಂದು ಬರಿಗೈಯಲ್ಲಿ ಹಿಂತಿರುಗಿದೆವು. ಅಲ್ಲಾ, ಅವಳದಾದರೂ ಏನು ತಪ್ಪು? ಅರ್ಧ ರಾತ್ರಿಯಲ್ಲಿ, ‘ಕಂದುಬಣ್ಣದ’ ದಂಪತಿಗಳಾದ ನಾವು ‘ಮನುಷ್ಯ ಬಾಡಿ ಪಾರ್ಟ್ಸ್’ ಇರುವ ಚಾರ್ಟಿಗಾಗಿ ಪೆದ್ದುಪೆದ್ದಾಗಿ ಹುಡುಕುತ್ತಿದ್ದರೆ ಅವಳಿಗಾದರೂ ಅನುಮಾನ ಬರದಿದ್ದೀತೇ? ಅದೂ ಅಲ್ಲದೆ, ಅಂದಿನ ತಾರೀಖು ೯/೧೧ ಬೇರೆ!
ಕೊನೆಗೆ, ನಮ್ಮ ವಿದ್ಯಾರಣ್ಯದ ಅಧ್ಯಕ್ಷೆ ಉಷಾ ಅವರ ಪುಟ್ಟ ಮಗ ಅಂಕುಶ್ ಶಾಲೆಯ ಪ್ರಾಜೆಕ್ಟಿಗಾಗಿ ಮಾಡಿದ ಎರಡು ಚಿತ್ರಗಳನ್ನು ತಂದುಕೊಟ್ಟರು. ಸಮಯದಲ್ಲಿ ನೆರವಾದ ಉಷಾ ಅವರಿಗೆ ಧನ್ಯವಾದಗಳು. ಅದಕ್ಕೇ ಪುಷ್ ಪಿನ್ ಚುಚ್ಚಿ ಡಾಕ್ಟರ್ ಶಾಪಿನ ಗೋಡೆಗೆ ಅಂಟಿಸಿದೆವು. ಅದು ತುಂಬಾ ಹಳೆಯದಾದ್ದರಿಂದ, ಪಾಪ! ಆ ಕಾಗದದ ಮನುಷ್ಯನಿಗೆ ಎಡಗೈ ಇತ್ತು, ಬಲಗೈ ಇರಲೇ ಇಲ್ಲ. ‘ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ’ ಎಂದು ಹಾಡಿದ ದಾಸರಾಯರು ನೆನಪಾದರು. ನಾಟಕದ ಪ್ರದರ್ಶನಕ್ಕೆ ಕೆಲವೇ ನಿಮಿಷಗಳಿದ್ದರೂ, ನಮ್ಮ ನಾಟಕದ ಪಾತ್ರಧಾರಿಗಳಲ್ಲೊಬ್ಬರು, ಸ್ವತಃ ಉತ್ತಮ ಕಲಾಕಾರರೂ ಆಗಿರುವ ಅರುಣ್ ಮೂರ್ತಿಯವರು ‘ಏನೂ ಪರವಾಗಿಲ್ಲ ಬಿಡಿ. ಎಲ್ಲಾದರೂ ಒಂದು ಕಾಗದ ಸಿಕ್ಕರೆ ಇನ್ನೊಂದು ಕೈ ಮಾಡೇಬಿಡ್ತೀನಿ’ ಎಂದರು ಉತ್ಸಾಹದಿಂದ. ಅವರಿಗಿದ್ದ ಹುಮ್ಮಸ್ಸು ನನಗಿಲ್ಲದ ಕಾರಣ, ಭೋಜನ ವಿರಾಮಕ್ಕೆ ಹೋಗಿದ್ದ ಜನರೆಲ್ಲರು ಊಟ ಮುಗಿಸಿಕೊಂಡು ಬರುವ ಹೊತ್ತಿಗೆ ನಮ್ಮೆಲ್ಲಾ ತಯಾರಿ ಮುಗಿಯಬೇಕಾಗಿದ್ದರಿಂದ, “ಏನೂ ಬೇಡ, ಹೇಗೂ ತಿಕ್ಕಲು ಡಾಕ್ಟರ್ ತಾನೇ? ನಡೆಯತ್ತೆ ಬಿಡಿ.” ಎಂದು ಚೆನ್ನಾಗಿದ್ದ ಇನ್ನೊಂದು ಕೈಯನ್ನೂ ಹಿಂದೆ ಮಡಿಸಿ ಪಿನ್ ಹಾಕಿಸಿದೆ. ವೈದ್ಯಾಲಯಕ್ಕೆ ಸಂಬಂಧಿಸಿದ ಒಂದೆರಡು ಫಲಕಗಳನ್ನು ಅರುಣ್ ಅವರೇ ಬರೆದು ಅಂಟಿಸಿದ ಮೇಲೆ, ಸುಮಾರಾಗಿ ‘ಇದು ಕ್ಲಿನಿಕ್ ಇದ್ದರೂ ಇರಬಹುದು’ ಅನ್ನಿಸುವ ವಾತಾವರಣ ಮೂಡಿತು.
ಆದರೆ ನಮ್ಮ ಪಡಿಪಾಟಲು ಏನೇ ಇರಲಿ, ನಾಟಕ ಮಾತ್ರ ಅದ್ಭುತವಾಗಿ ಮೂಡಿ ಬಂದಿತು. ಇದರಲ್ಲಿಯ ನಗೆ ಸಂಭಾಷಣೆಗಳಿಗೆ ಸ್ಪಂದಿಸುವ ಮೂಲಕ ವಿದ್ಯಾರಣ್ಯದ ಸದಸ್ಯರು ಉತ್ತಮ ಪ್ರತಿಕ್ರಿಯೆ ನೀಡಿದರು. ನಾಟಕಕ್ಕೆ ಪ್ರೇಕ್ಷಕರು ನೀಡಿದ ಪ್ರೋತ್ಸಾಹದಿಂದ ನಟರು ಮೈದುಂಬಿ, ಮನದುಂಬಿ ನಟಿಸಿದರು. ಅಲ್ಲಿಗೆ ನಮ್ಮೆಲ್ಲರ ಪ್ರಯತ್ನಕ್ಕೆ ಪೂರ್ಣ ಪ್ರತಿಫಲ ಸಂದಾಯವಾಗಿತ್ತು. ಈವರೆಗೆ ಕೆಲವು ನಾಟಕಗಳಲ್ಲಿ ನಟಿಸಿದ ಅನುಭವವಿದ್ದ ನನಗೆ ನಿರ್ದೇಶಕಿಯಾಗಿ ಇದೇ ಮೊದಲ ತೊದಲು. ಆದರೆ, ನಮ್ಮ ತಂಡದಲ್ಲಿದ್ದ ಪ್ರತಿಭಾವಂತ ನಟ-ನಟಿಯರಿಗೆ ನಿರ್ದೇಶನದ ಅಗತ್ಯವೇ ಇರಲಿಲ್ಲವೆನ್ನಿ.
ಒಟ್ಟಿನಲ್ಲಿ, ಒಂದು ನಾಟಕ ಯಶಸ್ಸು ಗಳಿಸಿದರೆ ಅದು ಕೊಡುವ ಸಂತಸ, ಆತ್ಮವಿಶ್ವಾಸ ಬಹುಕಾಲ ಉಳಿಯುವಂತದ್ದು. ಈ ಸಾರ್ಥಕ ಕ್ಷಣಗಳನ್ನು ನನ್ನ ಬದುಕಿಗೆ ತಂದುಕೊಟ್ಟ ನಮ್ಮ ತಂಡದ ಎಲ್ಲಾ ಕಲಾವಿದರಿಗೂ (ಅರುಣ್, ಶ್ರೀನಿ, ಕಿರಣ್, ಗಿರೀಶ್, ಜಯಸಿಂಹ, ಆಶಾ, ಚಿತ್ರ, ಉಮಾ) ನಾನು ಋಣಿ. ನಮಗೆಲ್ಲರಿಗೂ ನಾಟಕದ ಹುಚ್ಚು ಹಚ್ಚಿಸಿ, ಆ ಕಿಚ್ಚು ಆರದಂತೆ ಆಗೀಗ ನಾಟಕಗಳನ್ನು ಆಡಿಸುತ್ತಾ ಬಂದಿರುವ, ಈವರೆಗೆ ಹಲವಾರು ಉತ್ತಮ ನಾಟಕಗಳನ್ನು ರಂಗಕ್ಕೆ ತಂದಿರುವ ವಿದ್ಯಾರಣ್ಯದ ಪ್ರಕಾಶ್ ಹೇಮಾವತಿಯವರೇ ಈ ನಾಟಕ ಆಡಿಸಲು ನನಗೆ ಸ್ಪೂರ್ತಿ. ತೆರೆಯ ಮುಂದೆ ಬರದೆ, ಹಿಂದೆಯೇ ಉಳಿಯಬಯಸುವ ಅವರ ಸೌಜನ್ಯಭರಿತ ವರ್ತನೆ ಬಹಳ ಕಡಿಮೆ ಜನರಲ್ಲಿ ಮಾತ್ರ ಕಂಡುಬರುವಂಥದ್ದು.
ಶ್ರೀನಾಥ್ ಭಲ್ಲೆಯವರೆ, ನಿಮಗೆ ಈ ಮೂಲಕ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದ. ನೀವು ಇನ್ನಷ್ಟು ಇಂತಹ ಭರಪೂರ ಕಾಮಿಡಿಗಳನ್ನು ಬರೆದುಕೊಡಿ. ಆಡಲು ನಮ್ಮ ವಿದ್ಯಾರಣ್ಯದ ಉತ್ಸಾಹಿ ತಂಡ ಸಿದ್ಧವಾಗಿದೆ. ಅದೇ ನಿಮ್ಮ ಸಂಭಾವನೆ…. ಕೋಡುಬಳೆ ತಾನೇ? ಕೊಡೋಣಂತೆ ಬಿಡಿ. ಯಾವಾಗ ಅಂತ ಕೇಳಬೇಡಿ ಅಷ್ಟೆ. 🙂
ಕೊನೆಯದಾಗಿ ಮತ್ತು ಮುಖ್ಯವಾಗಿ,
‘ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ’ –
ಎನ್ನುವ ಎಚ್ಚೆಸ್ವಿಯವರ ಕವನದಂತೆ, ನಮ್ಮೆಲ್ಲರ ಉತ್ಸಾಹ, ಆಸೆ, ಕನಸುಗಳನ್ನು ಸಾಕಾರಗೊಳಿಸಲು ಸುಂದರ ವೇದಿಕೆ ಒದಗಿಸಿಕೊಡುವ ನಮ್ಮ ವಿದ್ಯಾರಣ್ಯ ಕನ್ನಡ ಕೂಟಕ್ಕೆ ಜೈ ಹೋ!
sakkathagi enjoy madideera endu tiliyithu .hege namjothege nimma anubhavagalannu share madi.
ತ್ರಿವೇಣಿ,
ಲೇಖನ ಓದಿಯೇ ಸಾಕಷ್ಟು ಖುಶಿಯಾಯ್ತು.. ನೋಡಿದವರಂತೂ ತುಂಬಾ ಸಂತೋಷಪಟ್ಟಿರಬೇಕು. ನಿಮಗೆಲ್ಲರಿಗೂ ಅಭಿನಂದನೆಗಳು.
ಮನಸಿದ್ದರೇ ಮಾರ್ಗ ಏನ್ನುವುದಕ್ಕೆ ಈ ನಾಟಕದ ಯಶಸ್ಸೇ ಸಾಕ್ಷಿ….
ವೇಣಿ, ನಿನ್ನೀ ನಾಟಕ ತಯಾರಿಯಲ್ಲಿ ದೂ…ರವಾಣಿಯಿಂದ ಸದಾ ನಿಕಟವಾಗಿದ್ದ ನನಗೂ ಇದನ್ನೆಲ್ಲ ಓದಿ ನಗು ತಡೆಯಲಾಗಿಲ್ಲ. ಅದರಲ್ಲೂ ಶುಕ್ರವಾರ ರಾತ್ರಿಯ ವಾಲ್-ಮಾರ್ಟ್ ಅನುಭವ! ಚೆನ್ನಾಗಿತ್ತು ಅಂತ ಈಗನ್ನಿಸುತ್ತೆ. ಅಂದಿನ ನಿಮ್ಮ ಮನಃಸ್ಥಿತಿ ಹೇಗಿದ್ದಿರಬಹುದು? ಆ ಅಪರಾತ್ರಿಯಲ್ಲಿ ಪೋಲೀಸಪ್ಪನ ಮುಂದೆ ಹೆದರಿ ಬೆವರಿ ಒದ್ದೆಮುದ್ದೆಯಾಗಿ….!?!?
ವಿದ್ಯಾರಣ್ಯಕ್ಕೆ ಮಾತ್ರವಲ್ಲ, ಸಮಯದ ಪರೀಕ್ಷೆ ಗೆದ್ದು ಬಂದ ವೇಣಿ, ಶ್ರೀನಿ, ಮತ್ತು ತಂಡಕ್ಕೂ ಜೈ ಹೋ!
ಸಹನಾ, ನನ್ನದೊಂದು ಕಂಡಿಷನ್ ಇದೆ. ನನ್ನ ಅನುಭವಗಳನ್ನು ನಾನು ಶೇರ್ ಮಾಡಿಕೊಂಡಮೇಲೆ ನೀವು ಬೋರ್ ಅನ್ನಬಾರದು. 🙂
ಕಾಕಾ, ನೀವು ನನ್ನ ಲೇಖನ ಓದಿ ಖುಷಿಪಟ್ಟಿದ್ದಕ್ಕೆ ಸಂತೋಷವಾಯಿತು. ಅಭಿನಂದನೆಗೆ ಧನ್ಯವಾದಗಳು.
ಜಯಸಿಂಹ, ನನ್ನ ಬ್ಲಾಗ್ ಮನೆಗೆ ಸ್ವಾಗತ. 🙂 ಬರ್ತಾ ಇರಿ ಆಗಾಗ.
ಜ್ಯೋತಿ ,
ನಮ್ಮ ಖಜಾನೆಯಲ್ಲಿ ಇಂತಹ ಅನಿರೀಕ್ಷಿತ, ಅನಪೇಕ್ಷಿತ ಅನುಭವಗಳು ಸಾಕಷ್ಟು ಇರುವುದರಿಂದ ನೀನು ಹೇಳಿರುವ ಹಾಗೆ ಹೆದರಿ ಬೆವರಿ ಒದ್ದೆಮುದ್ದೆಯಾಗಿ… ಉಹು… ಏನೂ ಆಗಲಿಲ್ಲ. ಹೀಗೂ ಆಗಬಹುದೇ? ಹುಷಾರಾಗಿರಬೇಕು ಅನ್ನಿಸಿತು ಅಷ್ಟೆ.