‘ವಂಶವೃಕ್ಷ’ದಿಂದ ಕುಡಿಯೊಡೆಯಿತು
ವಿಷ್ಣು ಎಂಬ ಪ್ರತಿಭೆ
ಚಿತ್ರ ಪ್ರಪಂಚ ಪಾವನವಾಯಿತು
ಪ್ರತಿಫಲಿಸಿ ಅದರ ಪ್ರಭೆ

ಪುಟ್ಟಣ್ಣನವರ ದಕ್ಷ ನಿರ್ದೇಶನ
ಪುಟ ಪಡೆಯಿತು ಅಪ್ಪಟ ಚಿನ್ನ
‘ನಾಗರಹಾವಿನ’ ರಾಮಾಚಾರಿಯನ್ನ
ಎಂದಿಗಾದರೂ ಮರೆವುದುಂಟೇನಣ್ಣ?

ತುಂಟತನದಲಿ ಮಿನುಗುವ ಕಣ್ಣು
ಸಂಪಿಗೆ ಮೂಗು, ಕೆಂಪನೆ ಬಣ್ಣ
ಎಡಗೈ ಬೀಸುತ ನಡೆವುದೇ ಚೆನ್ನು
ಸಾಹಸಸಿಂಹನ ಬೆನ್ನ ಹಿಂದೆ ಅಭಿಮಾನಿ ಗಣ

ಮನೆಯೂ ಬೆಳಗಲು ಮನವೂ ಬೆಳಗಲು
ಕಾರಣಳಾದಳು ಚೆಲುವೆ ಸತಿ ಭಾರತಿ
‘ಹೃದಯ ಗೀತೆ’ಗೆ ಪಲ್ಲವಿ ಬರೆಯಲು
ನೆಪವಾದ ಚಿತ್ರವದು ‘ಭಾಗ್ಯಜ್ಯೋತಿ’

ನಿನ್ನದಲ್ಲದ ತಪ್ಪಿಗೆ ಹೊಗೆಯಾಡಿತು ವಿರಸ
‘ಗಂಧದಗುಡಿ’ಯ ವಿಷಮಯ ನಿಮಿಷ
ನಿರ್ಲಿಪ್ತತೆ ಧರಿಸಿ ಮರೆಸಿದೆ ರೋಷ
ವರುಷಗಳುರುಳಲು ಮಾಸಿತು ದ್ವೇಷ

ಹೊಂಬಿಸಿಲಿನ ಡಾ. ನಟರಾಜ
‘ಬಣ್ಣಾ ಬಣ್ಣಾ’ ಹಾಡಿದ ಪ್ರೇಮಿ ಹರೀಶ
ಸಿಂಗಾಪುರದಲಿ ಕುಳ್ಳನ ರಾಜ
ಆ ಪಾತ್ರಗಳ ನೆನೆವುದೇ ಬಲು ಹರುಷ

ಕನ್ನಡ ಚಿತ್ರರಂಗಕೆ ನೀ ‘ಯಜಮಾನ’
ಹೀರೊ ಎನ್ನಲು ನೀನೇ ಲಾಯಕ್ ‘ಸೂರಪ್ಪ’
ಕಣ್ಣೀರ್ ತರಿಸಿದ ನವಯುಗ ‘ಕರ್ಣ’
`ಕೋಟಿಗೊಬ್ಬ’, ನಿನಗೆ ಸರಿಸಮ ಯಾರಪ್ಪ?

ದುಗುಡವನೆಲ್ಲ ಎದೆಯಲೆ ಅಡಗಿಸಿ
ಕುಸಿಯಿತೇ ನಿನ್ನ ಮೆದು ಹೃದಯ?
ಆ ಯಮನೊಡನೆಯೂ ಹೋರಾಟಕಿಳಿಯದೆ
ಶರಣಾದೆಯೇಕೆ ಒಲವಿನ ಗೆಳೆಯ?

‘ಹೃದಯವಂತ’ನ ಹೃದಯವದೇಕೆ
ಮರೆಯಿತು ತನ್ನ ಮಿಡಿತವನು?
‘ಕಥಾನಾಯಕ’ನ ಕಥೆ ಮುಗಿಯಿತು ಏಕೆ?
ಮಗುಚಿದ ‘ದೇವ’ನು ಕಡತವನು

ನಿನ್ನ ಕಲೆಗೆ ನೀನೇ ಸಾಟಿ
ಮಾಡಿದೆ ಕನ್ನಡ ಜನಮನ ಲೂಟಿ
ಬರಲೇಬೇಕು ನೀ ಮತ್ತೊಮ್ಮೆ ಹುಟ್ಟಿ
ಕಾಯುತ್ತಿರುವುದು ಜನಕೋಟಿ

4 thoughts on “ಮರೆಯಾದ ಮಾಣಿಕ್ಯ”

  1. ತ್ರಿವೇಣಿ,
    ವಿಷ್ಣುವರ್ಧನರ ಯಶೋಗಾಥೆ ನಿಮ್ಮ ಕವನದಲ್ಲಿ ಮನ ಮಿಡಿಯುವಂತೆ ವರ್ಣಿತವಾಗಿದೆ. ನಿಮ್ಮ ಈ ಕವನ-ಕಂಬನಿಗೆ ನನ್ನದೂ ಒಂದು ಹನಿ ಜೊತೆಗೂಡಲಿ.

  2. ಅದ್ಭುತ!
    ಕರ್ಣ;ಮಲಯಮಾರುತ;ಒಲವಿನ ಆಸರೆ;ನೀನು ನಕ್ಕರೆ ಹಾಲು ಸಕ್ಕರೆ;ಗಲಾಟೆ ಸಂಸಾರ;ಮದುವೆ ಮಾಡಿ ನೋಡು;ಹರಕೆಯ ಕುರಿ;ಮಿಥಿಲೆಯ ಸೀತೆಯರು;ಕುಳ್ಳ ಸೀರೀಸ್;ನಿಷ್ಕರ್ಷ;ರಾಯರು ಬಂದರು ಮಾವನ ಮನೆಗೆ – ಅಬ್ಬಾ ಎಂಥೆಂಥ ಚಿತ್ರಗಳು…ಮರೆಯ(ಯಾ)ದ ಮಾಣಿಕ್ಯ ನಿಜಕ್ಕೂ ಃ(

Leave a Reply to Susankritha Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.