ಪುತ್ತೂರು ನರಸಿಂಹನಾಯಕರ ದನಿಯಲ್ಲಿ

ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ

ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ
ಕೊಳಲನೂದುವ ಚಂದ ನಮ್ಮ ಕುಂಡಲರಾಯ ಮುಕುಂದ

ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ
ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ

ಮೂಡಲಗಿರಿಯಲಿ ನಿಂದ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತ ಈರೇಳು ಲೋಕಕನಂತ

ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ

ಅಪ್ಪವು ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ

ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯನ್ನ
ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗುಮುಖದ ಸುಪ್ರಸನ್ನ

ಕಾಶಿ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದು ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೆ ಚೆಂದ

ಎಲ್ಲಾ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡ

ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪ ಸೆಟ್ಟಿ

ದಾಸರ ಕಂಡರೆ ಪ್ರಾಣ ತಾ ಧರೆಯೊಳಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯ ಕಲ್ಯಾಣ

ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕಯ್ಯ
ಏಸು ಮಹಿಮೆಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ

ಚಿತ್ತಾವಧಾನ ಪರಾಕು ನಿನ್ನ ಚಿತ್ತದ ದಯ ಒಂದೇ ಸಾಕು
ಸತ್ಯವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು

ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು

ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ

ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೆ ಪಾನ
ಕೋಪ ತಾಪಗಳ ನಿಧಾನ ನಮ್ಮ ಪುರಂದರ ವಿಠಲನ ಧ್ಯಾನ

ಪುತ್ತೂರು ನರಸಿಂಹನಾಯಕರ ದನಿಯಲ್ಲಿ

One thought on “ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?”

Leave a Reply to Sudhindra Deshpande Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.