ಆ ಆಂಟಿ-ಅಂಕಲ್ಗೆ ಆದರ್ಶ ದಂಪತಿಗಳು ಅಂತಾನೇ ಅನ್ನೋದು ಎಲ್ಲಾರೂ. ಅಷ್ಟು ಹೊಂದಾಣಿಕೆ ಇಬ್ಬರಲ್ಲಿ. ಅವರ ಮುಖದಲ್ಲಿ ಸದಾ ನಗುವೇ. ಒಬ್ಬರ ಮೇಲೊಬ್ಬರು ಕೋಪಿಸಿಕೊಂಡಿದ್ದಾಗಲೀ, ಒಬ್ಬರನ್ನೊಬ್ಬರು ರೇಗಿಕೊಂಡಿದ್ದನ್ನಾಗಲೀ, ನೀನು-ತಾನು ಎಂದು ಜಗಳಾಡಿದ್ದನ್ನಾಗಲೀ ಕಂಡವರು ಇಲ್ಲವೇ ಇಲ್ಲ. ಆದರೂ ಇವಳಿಗೇಕೋ ಆ ಆದರ್ಶ ದಂಪತಿಗಳ ನಿಜ ತಿಳಿಯುವ ದುರ್ಬುದ್ಧಿ. ಇದು ದುಷ್ಟತನವೆಂದು ಗೊತ್ತಿದ್ದರೂ, ಆಂಟಿ ಮನೆ ಹೊಕ್ಕೇಬಿಟ್ಟಳು. ಆಂಟಿ ಬಿಡುವಾಗಿದ್ದರು. ಅಚ್ಚುಕಟ್ಟಾಗಿಯೇ ಇದ್ದ, ತಮ್ಮ ಸೀರೆಗಳಿಂದ ತುಂಬಿದ್ದ ಕಪಾಟನ್ನು ಸರಿಪಡಿಸುತ್ತಿದ್ದರು. ಆಂಟಿ ಸುಂದರಿ. ತಮ್ಮ ಕಾಲೇಜಿನ ದಿನಗಳಲ್ಲಿ ನಟಿಯೊಬ್ಬಳ ಗಾಢ ಅಭಿಮಾನಿಯಾಗಿದ್ದು, ಈಗ ಆ ನಟಿ ದಿವಂಗತೆಯಾಗಿದ್ದರೂ ಇವರು ಮಾತ್ರ ನಡೆ-ನುಡಿಯಲ್ಲಿ ಆಕೆಯನ್ನೇ ಅನುಕರಿಸುತ್ತಿದ್ದರು. ಈಗಲೂ ಆ ನಟಿಯ ಭಂಗಿಯಲ್ಲಿಯೇ ನಿಂತು, ನಗುತ್ತಾ ಇವಳನ್ನು ಸ್ವಾಗತಿಸಿದರು. ಅವರು ಉಟ್ಟ ಸೀರೆಯ ಗರಿಮುರಿ ನಿರಿಗೆಗಳನ್ನೇ ದಿಟ್ಟಿಸುತ್ತಾ ಆಂಟಿಯನ್ನು ಮಾತಿಗೆಳೆದಳು.
ಇವಳೋ ಮಾತಿನಲ್ಲಿ ಮಹಾಜಾಣೆ. ಯಾರನ್ನು ಹೇಗೆ ಮಾತಿನಲ್ಲಿ ಸೆರೆಹಿಡಿಯಬಹುದೆಂದು ಚೆನ್ನಾಗಿ ಬಲ್ಲವಳು. ಆಂಟಿಯನ್ನು ‘ಆಂಟಿ’ ಎಂಬ ಕೃತಕ ಪದದಿಂದ ಕರೆಯದೆ ‘ಅಮ್ಮಾ, ನಿಮ್ಮನ್ನೊಂದು ಮಾತು ಕೇಳಲೇ?’ ಎಂದು ಮಾತಿಗೆಳೆದಳು. ಆಂಟಿಗೆ ವಿದೇಶಗಳಲ್ಲಿ ಹಂಚಿಹೋಗಿರುವ ಮಕ್ಕಳ ನೆನಪು. ಆಂಟಿ ಮೃದುವಾಗಿ, ಅದೇ ಆಕರ್ಷಕ ನಗೆ ನಗುತ್ತಾ- ‘ಕೇಳು ಮಗಳೇ’ ಎಂದರು. ಇವಳು ಕೇಳಿಯೇಬಿಟ್ಟಳು- ‘ಅಮ್ಮಾ, ನಟನೆ ಬೇಡ, ನಿಜ ಹೇಳಮ್ಮಾ, ನಿಮ್ಮ ಆದರ್ಶ ದಾಂಪತ್ಯಕ್ಕೆ ನೀವು ಕೊಟ್ಟ ಬೆಲೆಯೇನು?’ ಆಂಟಿಯ ಮುಖದಲ್ಲಿ ಅರ್ಥವಾಗದ ಗಲಿಬಿಲಿ. ಹೊಳೆಯುತ್ತಿದ್ದ ಮುಖ ಕರೆಂಟು ಹೋದಂತೆ ಮಂಕಾಯಿತು. ‘ಏನು ಹಾಗೆಂದರೆ?’ ಮಾತಿಗೆ ತಡವರಿಸಿದರು. ಇವಳ ಮುಖದಲ್ಲಿ ಗುಟ್ಟು ಹೊರಗೆಳೆದ ತುಂಟ ನಗು.
‘ಅಯ್ಯೋ, ಹಾಗೇನಿಲ್ಲಮ್ಮಾ… ನನಗೆ ನಿಮ್ಮ ಮೇಲೇನೂ ಅನುಮಾನವಿಲ್ಲ. ನಿಮ್ಮ ಆದರ್ಶ ದಾಂಪತ್ಯ ಹೇಗೆ ಸಾಧಿಸಿದಿರಿ ಅಂತ ನನಗೂ ಹೇಳಿದರೆ, ನಾನೂ ಕಲಿಯಬಹುದಲ್ಲವೇ?’ ಎಂದಳು ಮಳ್ಳಿಯಂತೆ. ಆಂಟಿ ನಿರಾಳವಾದರು.
‘ಅದಾ… ಕಷ್ಟವೇನಿಲ್ಲ. ಒಂದಿಷ್ಟು ತ್ಯಾಗ, ಒಂದಿಷ್ಟು ಹೊಂದಾಣಿಕೆ, ಸ್ವಲ್ಪ ತಾಳ್ಮೆ…. ಅಷ್ಟೆ… ಇಷ್ಟಿದ್ದರೆ ಸಾಕೇ ಸಾಕು.’ ಎಂದರು ; ಗಿಣಿಮೂತಿ ಮಾವಿನಕಾಯಿ ಹಸಿ ಗೊಜ್ಜಿಗೆ ಎಂಟು ಬ್ಯಾಡಗಿ, ಕಾಲು ಚಮಚ ಮೆಂತ್ಯ, ಸಾಸುವೆ, ರುಚಿಗೆ ತಕ್ಕಷ್ಟು ಉಪ್ಪು, ಸಿಹಿ, ಚಿಟಿಕೆ ಇಂಗು… ಎಂದು ರೆಸಿಪಿ ಕೊಡುವಷ್ಟೇ ಸುಲಭವಾಗಿ.
ಅಲ್ಲಿಗೇ ಸುಮ್ಮನಿದ್ದರಾಗಿತ್ತು. ಇವಳೋ ಕುತೂಹಲದ ಶನಿ, ಬಿಡಬೇಕಲ್ಲ – ‘ಅದೇ ಆಂಟಿ, ಎಷ್ಟು ತ್ಯಾಗ, ಎಷ್ಟು ಹೊಂದಾಣಿಕೆ… ಅಂತಾನು ಸರಿಯಾಗಿ ಹೇಳಿ ಮತ್ತೆ. ಆಮೇಲೆ ಪಾಕ ಕೆಡಬಾರದು ನೋಡಿ. ಒಂದಿನ? ಒಂದು ವಾರ? ಒಂದು ವರ್ಷ? ಘಟ್ಟಿಸಿ ಕೇಳಿದಳು. ಆಂಟಿ ಇವಳ ಮಾತನ್ನು ಕೊಡವಿಹಾಕುವಂತೆ ಎದ್ದು ನಿಂತು ನಗುತ್ತಾ ಇವಳತ್ತ ನೋಡಿದರು. ಆ ಮುಖದಲ್ಲಿ ಅದೆಂತಹ ಸುಂದರ ನಗು ಹರಡಿತೆಂದರೆ, ಕೆಲವೇ ಕ್ಷಣಗಳ ಹಿಂದೆ ಅದೇ ಮುಖದ ಮೇಲಿದ್ದ ವಿಷಾದದ ಗೆರೆಗಳು ಇವಳ ನೆನಪಿನಿಂದ ಅಳಿಸೇಹೋದವು.
ಶಾಂತಲಾ, ನಿನಗೆ ಇಷ್ಟವಾಗಿದ್ದಕ್ಕೆ ನನಗೆ ಖುಷಿ 🙂
ತ್ರಿವೇಣಿಅಕ್ಕಾ…
ಒಬ್ಬೊಬ್ಬರದು ಒಂದೊಂದು ತೆರನಾದ ಸ್ವಭಾವದೊಂದಿಗೂ ಬದುಕನ್ನ ಆದರ್ಶವಾಗಿ ಕಟ್ಟಿಕೊಳ್ಳುವ ರೀತಿಯನ್ನು ಹೇಳುವ ಕತೆ ಇಷ್ಟವಾಯ್ತು.