ಆಸ್ಪತ್ರೆಯ ಆ ವಾರ್ಡಿನ
ಹೆಸರೇ ವಿಚಿತ್ರ, ನಿಜ.
ಪೊಲೀಸರ ಹಿಂಡು.
ಅವಳು ಬಾಯ್ತೆರೆದು
ನುಡಿಯಾಡುವುದನೆ
ಕಾದು ಕುಳಿತಿತ್ತು.
ಅದೊಂದು ಯಾತನೆಯ ಮೊತ್ತ
ಅತ್ತಿತ್ತ ಚಲಿಸಲಾರದು,
ಮಗ್ಗುಲು ಹೊರಳಲಾರದು,
ಮೂಗು-ಕಣ್ಣು ಗುರುತಿಸಲಾಗದ
ಕರಿ ನೆರಳು ; ಬರೀ ನರಳುವ ಕೊರಳು
‘ಹೂಂ ಹೇಳಮ್ಮಾ…. ಹೆದರಬೇಡ’
ಕೇಳಿದ ಖಾಕಿಧಾರಿ
ನಯವಿಲ್ಲದ ಆ ಮಾತಿಗಿಂತ
ಬೇಕೇನು ಹೆದರಿಸಲು?
ನನ್ನೆಲ್ಲಾ ಒತ್ತಾಯ ಕಣ್ಣಲ್ಲೇ ತುಂಬಿ
‘ಹೇಳೇ…. ಇನ್ನು ಸಿಗಲಿಕ್ಕಿಲ್ಲ
ನಿನಗಿಂತಹ ಅವಕಾಶ
ಎಲ್ಲಾ ಹೇಳಿಬಿಡೆ….’
ಅವಳತ್ತ ನೋಡಿದೆ.
ಹುಬ್ಬು, ರೆಪ್ಪೆಗಳಿಲ್ಲದ
ಕಣ್ಣಲ್ಲಿ ಭಾವನೆಯೂ ಬೋಳು!
‘ಹೂಂ ಹೇಳಮ್ಮಾ….’ ತಯಾರಾದ ಆತ
ಕಪ್ಪನೆ ಪೆನ್ನು
ಬಿಳಿಬಿಳಿ ಹಾಳೆಯ ಮೇಲೆ
ಕುಣಿದಾಡಲು ಅಣಿಯಾದಂತೆ
ನನ್ನ ಆತಂಕ ಮೇರೆ ಮೀರಿ
ಢವಗುಡುತ್ತಿರುವ ಎದೆಯೊತ್ತಿ ಹಿಡಿದು
ಮೈಯೆಲ್ಲಾ ಕಿವಿಯಾಗಿ ನಿಂತೆ…
ಅವಳ ಸೋತ ದನಿ
ಮೆಲ್ಲನೆ ಮೆಲ್ಲನೆ
ತೆವಳುವಂತೆ ಸರಿದುಬಂತು.
ಮಗುವಿಗೆ ಹಾಲು ಬೇಕಿತ್ತು
ಎದೆಯಲ್ಲಿ ಹಾಲಿರಲಿಲ್ಲವಾಗಿ
ಗ್ಯಾಸ್ ಸ್ಟವ್ವೇ ಬೇಕಾಯಿತು ನೋಡಿ,
ನೀರು ಬಿಸಿಗಿಡಲು;
ಹಾಳಾದ್ದು…. ಎಂದಿಲ್ಲದೇ
ಅಂದೇ ನೈಲೆಕ್ಸ್ ಸೀರೆ ಬೇರೆ….
ಆಹಾ! ಆಹಾ!
ಯಾರಿಗುಂಟು ಯಾರಿಗಿಲ್ಲ?
ಸತ್ಯದ ಸಮಾಧಿ ಮಹಲಿಗೆ
ಇಟ್ಟಿಗೆಯಾಗುವ ಯೋಗ!
ಇನ್ನು ಅಲ್ಲಿರಲಾರೆನೆಂದು
ಎದ್ದೋಡಲು ಬಾಗಿಲು ತೆರೆದರೆ
ಅಲ್ಲಿದ್ದ ಮೊಗಗಳ ಮೇಲೆ
ವಿಜಯದ ಬೆಳಕಿನ ದೀಪಾವಳಿ!
* * *
ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.
ಮನ ಮಿಡಿಯುವ ಕವನ, ವ್ಯಂಗ್ಯದ ಚೂರಿ!
ಕಾಕಾ, ಧನ್ಯವಾದಗಳು ಮತ್ತು ಗೌರಿ-ಗಣೇಶ ಹಬ್ಬದ ಶುಭಾಶಯಗಳು.