‘ಪುಟ್ಟಣ್ಣಾ, ಇಲ್ಲೇ ಇರ್ತೀಯಾ? ಅಕ್ಕನ ಜೊತೆ ಹೋಗಿ, ಅಲ್ಲಿ…. ಕಾಣ್ತಾ ಇದೆ ನೋಡು. ಆ ಅಂಗಡಿಗೆ ಹೋಗಿ ಈಗ ಬಂದುಬಿಡ್ತೀವಿ. ಬರ್ತಾ ನಿಂಗೆ ಚಾಕಲೇಟ್ ತರ್ತೀವಿ. ಆಯ್ತಾ?’ ತಾಯಿ ನುಡಿದಾಗ ಗುಂಗುರುಗೂದಲ ಪುಟ್ಟನ ಕಣ್ಣುಗಳಲ್ಲಿ ಚಕ್ಕನೆ ಹರವಿಕೊಂಡ ಆಸೆಯ ಕಾಮನಬಿಲ್ಲು. ತನಗೆ ಸಿಗಲಿದ್ದ ಸಿಹಿತುಣುಕಿನ ಆಸೆಗೆ, ತಾಯಿ ಮತ್ತು ತನಗಿಂತ ಸ್ವಲ್ಪ ದೊಡ್ಡವಳಾದ ಅಕ್ಕನ ಜೊತೆ ಹೋಗದೆ, ತಾನು ಮನೆಯಲ್ಲೇ ಉಳಿಯಲು ಒಪ್ಪಿ ತಲೆಯಾಡಿಸಿದ ಪುಟ್ಟ. ಜೊತೆಗೆ, `ನೀನು ದೊಡ್ಡವನಲ್ವಾ? ಮನೆ ನೋಡಿಕೊಳ್ತಾ ಇರು’ ಎಂದು ಅಮ್ಮ ಹೊರಿಸಿದ್ದ ಹೊಣೆಗಾರಿಕೆಯೂ ಆ ಪುಟ್ಟ ಹೆಗಲ ಮೇಲಿತ್ತು.
ಮಗನ ಒಪ್ಪಿಗೆ ಸಿಕ್ಕಿದ್ದೇ ತಡ, ಮಲಗಿದ್ದ ಕಾಯಿಲೆ ಅತ್ತೆಗೆ ಕೂಗಿ ಹೇಳಿ, ಮಗಳ ಕಾಲಿಗೆ ಚಪ್ಪಲಿ ತೊಡಿಸಿ, ‘ಬೇಗ ನಡಿ. ಅವನು ಮನಸ್ಸು ಬದಲಿಸಿ, ನಾನು ಬರ್ತೀನಿ ಅಂತ ಹಟ ತೆಗೆದರೆ ಕಷ್ಟ.’ ಎಂದು ಬಾಗಿಲು ಮುಂದೆ ಹಾಕಿಕೊಂಡು, ಕಾಂಪೋಂಡಿನ ದೊಡ್ಡ ಗೇಟಿಗೂ ಚಿಲುಕ ಸಿಕ್ಕಿಸಿ ಸರಸರ ಹೆಜ್ಜೆ ಹಾಕಿದಳು. ಅವಳಿಗೆ ಪುಟ್ಟನನ್ನು ಜೊತೆ ಕರೆದೊಯ್ಯಬಾರದೆಂದೇನಿಲ್ಲ. ಆದರೆ, ದಷ್ಟಪುಷ್ಟವಾದ ಮಗುವನ್ನು ಸೊಂಟದಲ್ಲಿ ಹೊತ್ತು, ಇನ್ನೊಂದು ಕೈಯಲ್ಲಿ ದಿನಸಿ ತುಂಬಿದ್ದ ಭಾರದ ಚೀಲಗಳನ್ನು ಹೊತ್ತು ನಡೆಯುವುದು ಅವಳಿಗೆ ಕಷ್ಟವಾಗುತ್ತಿತ್ತು. ಅದಕ್ಕೆಂದು ಈ ಉಪಾಯ.
ತುಸುದೂರ ಹೋಗಿ ತಿರುಗಿನೋಡಿದ ಮಗಳು ‘ಅಮ್ಮಾ, ತಮ್ಮಣ್ಣನ್ನ ನೋಡು. ಹೇಗೆ ನಮ್ಮನ್ನೇ ನೋಡ್ತಾ ನಿಂತಿದ್ದಾನೆ. ಪಾಪ… ಅವನ್ನೂ ಕರೆದುಕೊಂಡುಬರಬೇಕಿತ್ತು’ ಎಂದಳು. ಅಮ್ಮ ತಿರುಗಿ ನೋಡಲಿಲ್ಲ. ಅವಳ ಗಮನವೆಲ್ಲ ಒಂಟಿ ಮನೆಯಲ್ಲಿ ಮಲಗಿರುವ ಅತ್ತೆ, ಗೇಟಿಗಾತು ನಿಂತು, ಆರ್ತನಂತೆ ತಮ್ಮ ಹಾದಿ ಕಾಯುತ್ತಿರುವ ಪುಟ್ಟ ಮಗನನ್ನು ಆದಷ್ಟು ಬೇಗ ಸೇರಿಕೊಳ್ಳುವ ತವಕ. ಅದಕ್ಕೆ ಮುಂಚೆ ಅಗತ್ಯ ಪದಾರ್ಥಗಳ ಖರೀದಿಯಾಗಬೇಕು. ಅದಿಲ್ಲದೆ ರಾತ್ರಿ ಅಡುಗೆಯಾಗದು. ಒಂದೇ ಉಸುರಿಗೆ ಬೇಕಾದ್ದನ್ನೆಲ್ಲಾ ಕೊಂಡು, ಮಗನಿಗೆಂದು ಮಾತುಕೊಟ್ಟಿದ್ದ ಚಾಕಲೇಟನ್ನೂ ಕೊಂಡು ಇತ್ತ ತಿರುಗಿದರೆ, ದೂರದಿಂದ ಮಸುಕು ಮಸುಕಾಗಿ ಕಾಣುತ್ತಿದ್ದ ಸ್ಥಿರ ಚಿತ್ರ.
ಎರಡೂ ಕೈಗಳನ್ನು ಗಟ್ಟಿಯಾಗಿ ಗೇಟಿಗಾನಿಸಿ… ಅದೇ ಭಂಗಿಯಲ್ಲಿ… ಕಣ್ಣುಗಳಲ್ಲಿ ಒಂಟಿತನದ ಭಯದ ಜೊತೆಗೆ ಬರಲಿರುವ ಅಮ್ಮ, ಅಕ್ಕನ ನಿರೀಕ್ಷೆ. ಅವರು ತರಲಿರುವ ಸಿಹಿಗಾಗಿ ಕಾಯುತ್ತಿರುವ ಮುಗ್ಧ ಕಣ್ಣುಗಳು. ಎಂದಿನದನ್ನೋ ಇಂದು ನೆನೆಯುತ್ತಿದ್ದರೂ ಅವಳ ಕಣ್ಣುಗಳಲ್ಲೇಕೋ ನೀರು.
ಪುಟ್ಟನ ಭಾವಪ್ರಪಂಚ, ಜೊತೆಗೇ ತಾಯಿಯ ಭಾವಪ್ರಪಂಚವನ್ನು ಸುಂದರವಾಗಿ ಮೇಳೈಸಿ ಬರೆದಿದ್ದೀರಿ. ಪುಟ್ಟದಾದರೂ ಭಾವಪೂರ್ಣವಾದ ಲೇಖನ.
ನಾನು ಕೆಲಸದಲ್ಲಿರಬೇಕಾದರೆ ಇಂಥ ಛಂದವಾದ ಲೇಖನ ಬರೆಯಬೇಡವೆ ಮಾರಾಯ್ತಿ! ಕಣ್ಣೆಲ್ಲಾ ಒದ್ದೆ 🙂
ವಂದನೆಗಳು ಕಾಕಾ! 🙂