ಕವನ – ಶಬರಿ
ಕವಿ – ವಿ.ಸೀತಾರಾಮಯ್ಯ

ಕಾದಿರುವಳು ಶಬರಿ
ರಾಮ ಬರುವನೆಂದು
ತನ್ನ ಪೂಜೆಗೊಳುವನೆಂದು|

ವನವನವ ಸುತ್ತಿ ಸುಳಿದು
ತರುತರುವ ನಲೆದು ತಿರಿದು
ಬಿರಿ ಹೂಗಳಾಯ್ದು ತಂದು
ತನಿವಣ್ಗಣಾಯ್ದು ತಂದು |

ಕೊಳದಲ್ಲಿ ಮುಳುಗಿ ಮಿಂದು
ಬಿಳಿನಾರು ಮಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸಿತಿಲಲಿ ಕಾದು ನಿಂದು |

ಬಾ ರಾಮ ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸುತಿಹಳು
ಕಳೆದಿಹವು ವರುಷ ಹಲವು |

ಬಂದಾನೋ ಬಾರನೋ
ಕಂಡಾನೋ ಕಾಣನೋ
ಎಂದೆಂದು ತಪಿಸಿ ಜಪಿಸಿ
ಶಂಕಾತುರಂಗಳೂರಿ |

ಬಾ ರಾಮ ಬಾರ ಬಾರ
ಬಡವರನು ಕಾಯಿ ಬಾರ
ಕಂಗಾಣದಿವರ ಪ್ರೇಮ
ನುಡಿ ಸೋತ ಮೂಕ ಪ್ರೇಮ |

9 thoughts on “ಶಬರಿ”

  1. ಹ ಹ ಹ… 🙂

    ಕಾಯುವಿಕೆಗಾಗಿ ಕೊಡುವ ವಿಶ್ವವಿಖ್ಯಾತ ”’ಶಬರಿ ಪ್ರಶಸ್ತಿ”’ಯ ರೂವಾರಿಯಾದ ಶಬರಿಯ ಮೇಲಿನ ಕವನ ಕಾಯದೇ ಬಂದುಬಿಟ್ಟಿದೆ. 🙂

    ತನಿವಣ್ಗಣಾಯ್ದು -> ತನಿವಣ್ಣುಗಳನ್ನು ಆಯ್ದು ಎಂತಲೇ?

    ಯಾವ ಹಣ್ಣೋ…
    ಒಟ್ಟಿನಲ್ಲಿ ಆ ಹಣ್ಣನ್ನು ಆಯ್ದು ಆಯ್ದು
    ರಾಮನಿಗಾಗಿ ಕಾಯ್ದು ಕಾಯ್ದು
    ಆದಳು ಶಬರಿ ಹಣ್ಣು ಹಣ್ಣು ಮುದುಕಿ

  2. ಇಬ್ಬರು ಪುಟ್ಟ ಮಕ್ಕಳು (ಸುರಭಿ ಮತ್ತು ಸುವೃತ ಎಂದಿರಲಿ, ಅಂದರೆ ಅಕ್ಕ ಮತ್ತು ತಮ್ಮ ).

    ೩ನೇ ಕ್ಲಾಸಲ್ಲಿ ಓದುತ್ತಿರುವ ಅಕ್ಕ ತನ್ನ ಹೋಮ್‌ವರ್ಕ್ ಎಲ್ಲ ಮುಗಿಸಿ ಆಟಕ್ಕೆ ರೆಡಿಯಾಗಿದ್ದಾಳೆ.

    ತಮ್ಮ ಇನ್ನೂ ಅಕ್ಷರಮಾಲೆ ಕಲಿಯುತ್ತಿದ್ದಾನೆ, ಅಕ್ಕನ ಜತೆ ತಾನೂ ಹೋಮ್‌ವರ್ಕ್ ಮಾಡುತ್ತಾನೆ, ಆದರೆ ಅವನ ಬರವಣಿಗೆ ಸ್ವಲ್ಪ ನಿಧಾನ.

    ತಮ್ಮನಿಗೆ ಒಂದೊಂದೇ ಅಕ್ಷರಗಳನ್ನು ಸ್ಲೇಟಲ್ಲಿ ಬರೆದು ಮುಗಿಸಲು ಅಮ್ಮನ ಸಹಾಯ ಬೇಕಾಗುತ್ತದೆ. ಅಮ್ಮ ಒಂದೊಂದೇ ಅಕ್ಷರಗಳನ್ನು ಹೇಳಬೇಕು, ತಮ್ಮ ಅದನ್ನು ಬರೆಯಬೇಕು. ಈಮಧ್ಯೆ ಅಕ್ಕನ ತರಾತುರಿ, ‘ತಮ್ಮಾ ಬೇಗ ಬೇಗ ಹೋಮ್‌ವರ್ಕ್ ಮುಗಿಸಿ ನೀನೂ ಆಟಕ್ಕೆ ಬಾ…’ ಎಂದು.

    ಯ, ರ, ಲ, ವ ವರೆಗೆ ಬರೆದಾಗಿದೆ. ಸ್ವಲ್ಪ ಗದರಿಕೊಂಡೇ ಅಮ್ಮ ಹೇಳುತ್ತಾಳೆ:
    ” (ಅಕ್ಕ) ಕಾದಿರುವಳು, ‘ಶ’ ಬರಿ!

    ಹೀಗೊಂದು ಸಂದರ್ಭ, “ಕಾದಿರುವಳು ಶಬರಿ” ವಾಕ್ಯವನ್ನು ವಿವರಿಸಲು. 🙂

  3. @ ಎಸ್.ಜೆ: *ಚಿಂದಿ ಚಿತ್ರಾನ್ನ* 🙂

    ಶಬರಿ
    ಮುಡಿದಳು ಕನಕಾಂಬರಿ
    ಮಾಡಿದಳು ಕೋಸಂಬರಿ
    ಪೂರ್ತಿ ಒಂದು ದಬರಿ

    ಅದರಲ್ಲಿ ಮಿಶ್ರಣವಾಗಿತ್ತು ಕೊಬ್ಬರಿ
    ರಾಮನೆಂದ ಚಪ್ಪರಿಸುತ್ತ “ಬರೋಬ್ಬರಿ”
    ವರನೀಡುವೆ ಕೇಳೆಂದಾಗ, ಶಬರಿ
    ಆಗಲಿಲ್ಲ ಒಂಚೂರೂ ಗಾಬರಿ
    “ನನ್ ಹಣೆಯ ಮೇಲೆ ಆಶೀರ್ವಾದ ಬರಿ”

  4. ನೀವಿಬ್ಬರೂ ಶಬರಿಯನ್ನು ಹೀಗೇ ಪನ್ ಮಾಡಿ ರೇಗಿಸುತ್ತಿದ್ದರೆ, ಶಬರಿಗೆ ಕೋಪ ಬಂದು ಹೀಗೆ ಹೇಳುವುದು ಖಂಡಿತ – 🙂

    ನಿಮಗೇಕೆ ಬೇಕು ನನ್ನ ಉಸಾಬರಿ?
    ಇಲ್ಲವೇ ನಿಮಗೆ ರಾಬರಿ?

  5. ಕಾದಿರುವಳು ಶಬರಿ ಅಂತ ಯಾರೋ ಹೇಳಿದ ತಕ್ಷಣ ಮೇಷ್ಟ್ರು… ತಮ್ಮ ಶಾಲೆಯ ಮಕ್ಕಳಿಗೆ “ಮುದ್ದು ಮರಿ-ಚಿತ್ರ ಬರಿ” ಅಂತ ಹೇಳಿಟ್ಟು ಓಡಿಯೇ ಬಿಟ್ಟರಂತಲ್ಲಾ….?

  6. ಅಸತ್ಯಾನ್ವೇಷಿಗಳೇ,

    ಕಾಡಿನಲ್ಲಿದ್ದ ಶಬರಿಗೆ ಅಸುರರು ಅಪರಿಚಿತರೇನಲ್ಲ. ಆದರೆ ಈಗ ನಿಮ್ಮಂತಹ ಭಯಂಕರ ಬ್ಲಾಗಾಸುರನನ್ನು ಕಂಡು ಪಾಪದ ಮುದುಕಿ ಶಬರಿಗೆ ಗಾಬರಿ 🙂

  7. ಸುಂದರ ಕವನ, ಸಾಹಿತ್ಯ ಹಾಕಿದ್ದಕ್ಕೆ ಥ್ಯಾಂಕ್ಸ್, but icing on the cakeಉ ಅಂದರೆ ಎಸ್.ಜೆ ಯವರ “ಶ” ಕಾರ ಕಥೆ.. ಲೆವೆಲ್ಲು !

  8. ರಾಮನಿಗೆ ಕಾಯುತ್ತಿದ್ದ ಶಬರಿಗೆ ಕಂಪೆನಿ ನೀಡಿದ ಎಲ್ಲರಿಗೂ ಧನ್ಯವಾದಗಳು! 🙂

Leave a Reply to ಮನ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.