ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣಸನ್ನೆಯ ಹೆಸರು ಪ್ರೇಮವೆಂದು
ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು
ಯಾವುದೋ ಕನಸಿನಲಿ ಯಾರೊ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು
ಬಳಿಗೆ ಬಾರೆನ್ನವಳೆ ಬಿಗಿದಪ್ಪಿ ಮಾತಾಡು
ನಾನದನೆ ಕರೆಯುವೆನು ಪ್ರೇಮವೆಂದು
ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಲೆರಡು ಜೀವ
ಬಾಳಿನೇರಿಳಿತಗಳ ಮುಗಿದಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ
*******
‘ಇರುವಂತಿಗೆ’ – ಕವನ ಸಂಕಲನದಿಂದ.
ತುಂಬಾ ಚೆನ್ನಾಗಿದೆ.